ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ

38,000 ಗಡಿ ದಾಟಿ ದಾಖಲೆ ಮಾಡಿದ ಸೆನ್ಸೆಕ್ಸ್; 11,500ರ ಸಮೀಪ ಬಂದ ನಿಫ್ಟಿ

ಚೀನಾ-ಅಮೆರಿಕ ವ್ಯಾಪಾರ ಸಮರ, ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಮತ್ತಿತರ ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ದೇಶಿಯ ಷೇರುಪೇಟೆ ಏರುಹಾದಿಯಲ್ಲಿ ಸಾಗಿದೆ. ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 38000 ಅಂಶಗಳ ಗಡಿದಾಟಿದಾಟಿದೆ. ನಿಫ್ಟಿ ಸಹ 11500 ಅಂಶಗಳ ಸಮೀಪದಲ್ಲಿದೆ

ರೇಣುಕಾಪ್ರಸಾದ್ ಹಾಡ್ಯ

ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ದೇಶಿಯ ಷೇರುಪೇಟೆ ಏರುಹಾದಿಯಲ್ಲಿ ಸಾಗಿದ್ದು, ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 38,000 ಅಂಶಗಳ ಗಡಿ ದಾಟಿದೆ. ನಿಫ್ಟಿ ಸಹ ಸಾರ್ವಕಾಲಿಕ ದಾಖಲೆ ಮಟ್ಟವಾದ 11,500 ಅಂಶಗಳ ಸಮೀಪದಲ್ಲಿದೆ. ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ ಈ ದಾಖಲೆ ಮಾಡಬಹುದು.

ಉಭಯ ಸೂಚ್ಯಂಕಗಳು ವಾರದಿಂದೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದು, ನಿತ್ಯವೂ ಹೊಸ-ಹೊಸ ದಾಖಲೆಯೊಂದಿಗೆ ವಹಿವಾಟಾಗುತ್ತಿವೆ. ಗುರುವಾರ ಸೆನ್ಸೆಕ್ಸ್ 138 ಅಂಶ ಏರಿ 38,024ಕ್ಕೆ, ನಿಫ್ಟಿ 20 ಅಂಶ ಏರಿ 11,470ಕ್ಕೆ ವಹಿವಾಟು ಅಂತ್ಯಗೊಳಿಸಿವೆ. ನಿಫ್ಟಿ ಬ್ಯಾಂಕ್ 28,320 ಅಂಶಕ್ಕೇರಿ ದಾಖಲೆ ಮಾಡಿದೆ.

ಸೆನ್ಸೆಕ್ಸ್ 37,000ದಿಂದ 38000 ಮಟ್ಟವನ್ನು 10 ವಹಿವಾಟು ದಿನಗಳಲ್ಲಿ ಮುಟ್ಟಿದೆ. ಈ ಅವಧಿಯಲ್ಲಿ ಕ್ವಾಲಿಟಿ, 8ಕೆ ಮೈಲ್ಸ್ ಸಾಫ್ಟ್ವೇರ್, ರಿಲಯನ್ಸ್ ನವಲ್, ವೆಂಕಿಸ್, ಮನ್ ಪಸಂದ್ ಬೆವರೆಜಸ್, ರಿಲಯನ್ಸ್ ಕಮ್ಯುನಿಕೇಶನ್ಸ್, ವಿನತಿ ಆರ್ಗ್ಯಾನಿಕ್ಸ್, ಆದಿತ್ಯ ಬಿರ್ಲಾ ಫ್ಯಾಶನ್, ಇಕ್ರಾ ಈ ಹತ್ತು ಷೇರುಗಳು ಶೇ.22ರಿಂದ 53ರಷ್ಟು ಏರಿಕೆ ಕಂಡಿವೆ.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ವಹಿವಾಟಾಗುತ್ತಿರುವ ಪ್ರಮುಖ ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸಿವೆ. ಹೀಗಾಗಿ ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕೆಕ್ಸ್ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ವಹಿವಾಟಾಗುತ್ತಿವೆ. ಒಟ್ಟಾರೆ, ವಿಸ್ತೃತ ಮಾರುಕಟ್ಟೆ ಇನ್ನೂ ಗರಿಷ್ಠ ಮಟ್ಟಕ್ಕೆ ಏರಿಲ್ಲ. ಕಳೆದೆರಡು ವರ್ಷಗಳಿಂದ ತ್ವರಿತವಾಗಿ ಜಿಗಿದಿದ್ದ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ.30-40ರಷ್ಟು ಕುಸಿದಿದ್ದು, ಇದೀಗ ಚೇತರಿಸಿಕೊಳ್ಳುತ್ತಿವೆ.

ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ವಹಿವಾಟಾಗುತ್ತಿರುವ ಶೇ.50ಕ್ಕೂ ಹೆಚ್ಚು ಷೇರುಗಳು ವರ್ಷದ ಗರಿಷ್ಠ ಮಟ್ಟದಿಂದ ಶೇ.30-60ರಷ್ಟು ಕುಸಿದು ವಹಿವಾಟಾಗುತ್ತಿವೆ. ಇತ್ತೀಚೆಗೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಗರಿಷ್ಠ ಮಟ್ಟಕ್ಕೆ ಏರಿರುವುದು ಆಯ್ದ ಪ್ರಮುಖ ಷೇರುಗಳ ಉತ್ತಮ ಫಲಿತಾಂಶ ಪ್ರಕಟಿಸಿರುವ ಪರಿಣಾಮ, ಬಹುತೇಕ ಹೂಡಿಕೆದಾರರು ಈ ಷೇರುಗಳನ್ನು ಮುಗಿಬಿದ್ದು ಖರೀದಿಸಿದ್ದಾರೆ. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಹೆಚ್ಚಿನ ವೇಯ್ಟೇಜ್ ಇರುವ ಕಂಪನಿಗಳು ಬಹುತೇಕ ವರ್ಷದ ಗರಿಷ್ಠ ಮಟ್ಟ ಅಥವಾ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟಾಗುತ್ತಿವೆ.

ಜಾಗತಿಕ ಮಟ್ಟದಲ್ಲಿನ ಅಸ್ಥಿರತೆಗಳ ನಡುವೆಯೂ ನಮ್ಮ ಷೇರುಪೇಟೆ ಏರುಹಾದಿಯಲ್ಲಿ ಸಾಗಿರುವುದಕ್ಕೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್ ಹೌಸ್‌ಗಳು ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದೇ ಕಾರಣ. ಇತ್ತೀಚಿಗೆ ಲಿಸ್ಟಾದ ಎಚ್ಡಿಎಪ್ಸಿ ಎಎಂಸಿ ಷೇರಿಗೆ ಒಟ್ಟಾರೆ 88 ಪಟ್ಟು ಬೇಡಿಕೆ ಬಂದಿದ್ದು, ಪೇಟೆಯತ್ತ ಜನರು ಒಲವು ತೋರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಹೂಡಿಕೆದಾರರಿಗೆ ಎಚ್ಡಿಎಫ್ಸಿ ಎಎಂಸಿ ಮೊದಲ ದಿನವೇ ಶೇ.65ರಷ್ಟು ಲಾಭ ತಂದುಕೊಟ್ಟಿದೆ.

ಸೆನ್ಸೆಕ್ಸ್ ಜಿಗಿಯುತ್ತಿರುವ ವೇಗ ಗಮನಿಸಿದರೆ, ಈ ವರ್ಷಾಂತ್ಯದೊಳಗೆ 40,000 ಅಂಶಗಳ ಗಡಿ ದಾಟುವ ಸಾಧ್ಯತೆ ಇದೆ. ನಿಪ್ಟಿ ಸಹ 12,500ರಿಂದ 13,000 ಅಂಶಗಳಷ್ಟು ಏರಲೂಬಹುದು ಅಥವಾ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಮತ್ತೆ ನಿಫ್ಟಿ ನಾಲ್ಕಂಕಿಗೆ ಅಂದರೆ, 10,000 ಅಂಶಗಳಿಗಿಂತ ಕೆಳಕ್ಕೆ ಇಳಿಯಬಹುದು. ಸೆನ್ಸೆಕ್ಸ್ 30,000ದಿಂದ 32,000 ಮಟ್ಟಕ್ಕೆ ಇಳಿಯಬಹುದು.

ಹೂಡಿಕೆದಾರರು ಏನು ಮಾಡಬೇಕು?: ದೀರ್ಘಕಾಲಿನ ಹೂಡಿಕೆ ಮಾಡುವವರು ಪೇಟೆ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ಇರುವ ಹಂತದಲ್ಲೂ ಹೂಡಿಕೆ ಮಾಡಬಹುದು. ಆದರೆ, ಹೂಡಿಕೆಗೆ ಷೇರುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಉತ್ತಮ ಫಲಿತಾಂಶ ಪ್ರಕಟಿಸಿಯೂ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಾಣದ ಉತ್ತಮ ಕಂಪನಿಗಳನ್ನು ಗುರುತಿಸಿ ಹೂಡಿಕೆ ಮಾಡುವುದು ಒಳಿತು.

ಈಗಾಗಲೇ ಗರಿಷ್ಠ ಮಟ್ಟಕ್ಕೆ ಏರಿರುವ ಪ್ರಮುಖ ಷೇರುಗಳ ಮೇಲೆ ಹೂಡಿಕೆ ಮಾಡಬೇಕೇ, ಬೇಡವೇ ಎಂಬ ಪ್ರಶ್ನೆ ಇದೆ. ಈಗ ಗರಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿಯಲ್ಲಿ ವಹಿವಾಟಾಗುತ್ತಿರುವ ಬಹುತೇಕ ಕಂಪನಿಗಳ ಷೇರುಗಳು ಆಯಾ ವಲಯದಲ್ಲಿ ಅಗ್ರಸ್ಥಾನ ಪಡೆದಿವೆ. ಐಟಿ ಕ್ಷೇತ್ರದಲ್ಲಿ ಟಿಸಿಎಸ್, ಇನ್ಫಿ, ಎಫ್ಎಂಸಿಜಿಯಲ್ಲಿ ಎಚ್‌ಯುಎಲ್, ಐಟಿಸಿ, ನಿರ್ಮಾಣ ವಲಯದಲ್ಲಿ ಎಲ್ ಅಂಡ್ ಟಿ, ಬ್ಯಾಂಕಿಂಗ್ ವಲಯದಲ್ಲಿ ಎಚ್ಡಿಎಫ್ಸಿ, ಕೊಟಕ್ ಮಹಿಂದ್ರ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಎಸ್ಬಿಐ- ಹೀಗೆ ಆಯಾ ವಲಯದ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದ ಕಂಪನಿಗಳ ಮೇಲೆ ಹೂಡಿಕೆ ಮಾಡುವುದು ಜಾಣತನ. ಮ್ಯೂಚುವಲ್ ಫಂಡ್ ಮ್ಯಾನೇಜರ್‌ಗಳೂ ಇದೇ ತಂತ್ರ ಅನುಸರಿಸುತ್ತಾರೆ. ಏಕೆಂದರೆ, ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದ ಕಂಪನಿಗಳು ಭವಿಷ್ಯದಲ್ಲೂ ಉತ್ತಮ ಫಲಿತಾಂಶ ನೀಡುವ ಸಾಧ್ಯತೆ ಹೆಚ್ಚಿರುತ್ತದೆ.

ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾದವರು ಈಗಲೂ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ ವಹಿವಾಟಾಗುವ ಆಯ್ದ ಷೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡಬಹುದು. ಇಲ್ಲೂ ವರ್ಷದ ಗರಿಷ್ಠ ಮಟ್ಟದಿಂದ ಶೇ.30ರಿಂದ 60ರಷ್ಟು ಕುಸಿದಿರುವ ಜೊತೆಗೆ, ಉತ್ತಮ ಫಲಿತಾಂಶ ಪ್ರಕಟಿಸಿರುವ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡುವದು ಉತ್ತಮ. ಪ್ರತಿಯೊಂದು ಷೇರು ವರ್ಷದ ಗರಿಷ್ಠ ಮಟ್ಟ-ಕನಿಷ್ಠ ಮಟ್ಟ ಮುಟ್ಟುತ್ತಲೇ ಇರುತ್ತದೆ. ಈ ಹಂತದಲ್ಲೇ ಮೇಲೇರುತ್ತಲೇ ಇರುತ್ತದೆ. ಗರಿಷ್ಠ ಮೇಲೇರಿದ ನಂತರ ಲಾಭ ನಗದೀಕರಣದಿಂದಾಗಿ ಇಳಿಜಾರಿಗೆ ಸರಿಯುತ್ತದೆ.

ಇದನ್ನೂ ಓದಿ : ಸೆನ್ಸೆಕ್ಸ್ 35118, ನಿಫ್ಟಿ 10803; ಸರ್ವಕಾಲಿಕ ದಾಖಲೆ ಮಾಡಿದ ಸೂಚ್ಯಂಕಗಳು

ಹೂಡಿಕೆ ಮಾಡುವಾಗ ಷೇರುಗಳ ಆಯ್ಕೆ ಮಾಡುವ ಜೊತೆಗೆ ಯಾವ ಹಂತದಲ್ಲಿ ಹೂಡಿಕೆ ಮಾಡಬೇಕು ಎಂಬುದರತ್ತ ಗಮನ ಹರಿಸಬೇಕು. ಆ ಷೇರು ಗರಿಷ್ಠ ಮಟ್ಟಿದ ನಂತರ ಒಂದು ಹಂತದಲ್ಲಿ ಇಳಿಜಾರಿಗೆ ಬರುತ್ತವೆ. ಈ ಹಂತದಲ್ಲಿ ಹೂಡಿಕೆ ಮಾಡುವುದು ಉತ್ತಮ. ದೀರ್ಘಕಾಲೀನ ಹೂಡಿಕೆದಾರರು ಹಂತಹಂತವಾಗಿ ಹೂಡಿಕೆ ಮಾಡುತ್ತಲೇ ಇದ್ದರೆ ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ.

ನಿಷ್ಕ್ರಿಯ ಸಾಲ ಮತ್ತಿತರ ಕಾರಣಗಳಿಂದ ಕುಸಿದಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳು ಈಗ ಚೇತರಿಕೆ ಹಾದಿಯಲ್ಲಿವೆ. ಮೂರು ತಿಂಗಳ ಹಿಂದೆ 240ರ ಆಜುಬಾಜಿನಲ್ಲಿದ್ದ ಸ್ಟೇಟ್ ಬ್ಯಾಂಕ್ ಇಂಡಿಯಾ, 230ಕ್ಕೆ ಇಳಿದಿದ್ದ ಐಸಿಐಸಿಐ ಬ್ಯಾಂಕ್ ಷೇರುಗಳೀಗ 320-330ರ ಆಜುಬಾಜಿನಲ್ಲಿ ವಹಿವಾಟಾಗುತ್ತಿವೆ. ಅಂದರೆ, ಕಾರಣ ಯಾವುದೇ ಇರಲಿ, ಉತ್ತಮ ಷೇರುಗಳು ಕುಸಿದಾಗ ಖರೀದಿಸಿಟ್ಟುಕೊಳ್ಳಬೇಕು. ಉತ್ತಮ ಕಾಲ ಬಂದೇ ಬರುತ್ತದೆ, ಲಾಭ ಕೂಡ!

Share Market Sensex Nifty ಸೆನ್ಸೆಕ್ಸ್ ನಿಫ್ಟಿ SBI ಎಸ್ಬಿಐ Bankex ಬ್ಯಾಂಕೆಕ್ಸ್ ಷೇರು ಮಾರುಕಟ್ಟೆ Alltime High ಸರ್ವಕಾಲಿಕ ದಾಖಲೆ
ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?