ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಗೋಮಾಳ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆ ಕುರಿತು ಅಡ್ವೋಕೇಟ್‌ ಜನರಲ್ ಅವರು ನೀಡಿರುವ ಅಭಿಪ್ರಾಯ ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ

ಮಹಾಂತೇಶ್ ಜಿ

ಅಂದಾಜು ೨೦.೫ ಕೋಟಿ ರುಪಾಯಿ ಬೆಲೆಬಾಳುವ ಸರ್ಕಾರಿ ಗೋಮಾಳ ಜಾಗಕ್ಕೆ, ಅಕ್ರಮವಾಗಿ ಕಂದಾಯ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯೊಬ್ಬರಿಗೆ ನಿಯಮಬಾಹಿರವಾಗಿ ಪೋಡಿ ಮತ್ತು ಖಾತೆ ಮಾಡಿರುವ ಪ್ರಕರಣ ಇದೀಗ ವಿವಾದ ಎಬ್ಬಿಸಿದೆ. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಚನ್ನಸಂದ್ರ ಗ್ರಾಮದ ಸರ್ವೆ ನಂಬರ್‌ ೧೧೫ರಲ್ಲಿನ ಸರ್ಕಾರಿ ಗೋಮಾಳ ಜಾಗ ಇದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭೂದಾಖಲೆಗಳ ಉಪನಿರ್ದೇಶಕರಾಗಿದ್ದ ಎಸ್ ರಾಜಾನಾಯಕ್‌ ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಭೂದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್‌ ಅವರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರೂ ಮುಂದಿನ ಕ್ರಮ ವರದಿಗೆ ವಿರುದ್ಧವಾಗಿರುವುದು ದಾಖಲೆಗಳಿಂದ ಬಯಲಾಗಿದೆ.

ವರದಿಯನ್ವಯ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ಪ್ರಕರಣ ಎಸಿಬಿಗೆ ಹಸ್ತಾಂತರವಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ್ದ ಎಸಿಬಿ, ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಅಭಿಪ್ರಾಯ ಕೋರಿ ಕಂದಾಯ ಇಲಾಖೆ ಅಡ್ವೋಕೇಟ್ ಜನರಲ್ ಅವರಿಗೆ ಕಡತ ಸಲ್ಲಿಸಿತ್ತು ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ, “ಹಿಂದಿನ ಉಪನಿರ್ದೇಶಕರನ್ನು ಗುರಿಯಾಗಿಸಿಕೊಂಡು ಭೂದಾಖಲೆಗಳ ಕಚೇರಿಯ ಜಂಟಿ ನಿರ್ದೇಶಕರು ವರದಿ ಮಾಡಿದ್ದಾರೆ,” ಎಂದು ಎ.ಜಿ.ಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಉಪನಿರ್ದೇಶಕರು ಮತ್ತು ತಹಶೀಲ್ದಾರ್‌ ಅವರು ಪೋಡಿ ದುರಸ್ತಿ ಮಾಡುವಾಗ ಸರ್ಕಾರದ ಎಲ್ಲ ಸುತ್ತೋಲೆಗಳನ್ನು ಪಾಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಕೋರಿರುವ ತನಿಖೆ ಮಂಜೂರಾತಿ ಅಗತ್ಯವಿಲ್ಲ,” ಎಂದು ಅಡ್ವೋಕೇಟ್‌ ಜನರಲ್‌ ಅವರು ನೀಡಿರುವ ಅಭಿಪ್ರಾಯ ವಿವಾದದ ಮುಖ್ಯಾಂಶ.

ಜಂಟಿ ನಿರ್ದೇಶಕರ ವರದಿ ಮತ್ತು ಅಡ್ವೋಕೇಟ್‌ ಜನರಲ್‌ ಅಭಿಪ್ರಾಯದ ಪ್ರತಿ

ಗೋಮಾಳ ಜಮೀನು ಅಕ್ರಮವಾಗಿ ಮಂಜೂರಾಗಿದೆ ಎಂದು ದೃಢಪಡಿಸುವ ಎಲ್ಲ ಬಗೆಯ ದಾಖಲಾತಿಗಳನ್ನು ಒದಗಿಸಿ, ಅಧಿಕಾರಿ ಮತ್ತು ಸಿಬ್ಬಂದಿ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಭೂದಾಖಲೆಗಳ ಜಂಟಿ ನಿರ್ದೇಶಕರು ಒಂದು ವರ್ಷದ ಹಿಂದೆಯೇ ವರದಿ ನೀಡಿದ್ದರು.

“ಮಂಜೂರಾತಿಯು ನೈಜವಾಗಿದೆ. ಕಂದಾಯ ಸಚಿವಾಲಯದ ಎಲ್ಲ ಅಧಿಕಾರಿಗಳು ಕೆಂಪಣ್ಣ ಮತ್ತು ಕೃಷ್ಣಮ್ಮ ಅವರಿಗೆ ೧೯೬೪ರಲ್ಲೇ ಜಮೀನು ಮಂಜೂರಾಗಿದೆ ಎಂದು ಒಪ್ಪಿದ್ದಾರೆ. ಇದನ್ನಾಧರಿಸಿ ಪೋಡಿ ದುರಸ್ತಿ ಮಾಡಿರುವುದು ಸರಿ ಇದೆ,” ಎಂದು ಎ.ಜಿ ಅವರು ತಮ್ಮ ಅಭಿಪ್ರಾಯದಲ್ಲಿ ದೃಢಪಡಿಸಿದ್ದಾರೆ.

“ಮಂಜೂರುದಾರರ ಹೆಸರುಗಳನ್ನು ಯಾವುದೇ ಕಾರಣವಿಲ್ಲದೆ ಕಂದಾಯ ದಾಖಲೆಗಳಲ್ಲಿ ಕೈಬಿಡಲಾಗಿದೆ. ಹೈಕೋರ್ಟ್ ಆದೇಶದಂತೆ ಅವರ ಹೆಸರುಗಳನ್ನು ದಾಖಲೆಗಳಲ್ಲಿ ಸೇರಿಸುವ ಬಗ್ಗೆ ವಿಶೇಷ ಜಿಲ್ಲಾಧಿಕಾರಿ ಅವರು ನೀಡಿದ್ದ ಸೂಚನೆಯನ್ನು ತಹಶೀಲ್ದಾರ್‌ ಪಾಲಿಸಿರಲಿಲ್ಲ. ಹೀಗಾಗಿ ಅರ್ಜಿದಾರರು (ರಿಟ್‌ ಪಿಟಿಷನ್ ನಂ:೧೦೧೧೩-೧೦೧೧೪/೨೦೧೧) ಹೈಕೋರ್ಟ್ ಮೊರೆಹೋಗಿದ್ದರು. ಈ ಬಗ್ಗೆ (ಪ್ರಕರಣ ಸಂಖ್ಯೆ: ೧೩೨೮/೨೦೧೧, ೧೩೩೩/೨೦೧೧) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಆಗ ತಹಶೀಲ್ದಾರ್‌ ಅವರು ಪಹಣಿಯಲ್ಲಿ ಮಂಜೂರುದಾರರ ಹೆಸರನ್ನು ಅಳವಡಿಸಿದ್ದಾರೆ,” ಎಂದು ಎ.ಜಿ ಅವರು ತಮ್ಮ ಅಭಿಪ್ರಾಯದಲ್ಲಿ ಉಲ್ಲೇಖಿಸಿದ್ದಾರೆ.

“ಪಹಣಿಯಲ್ಲಿ ಹೆಸರು ಸೇರಿಸಿದ ನಂತರ ೨೦೧೧ರಲ್ಲಿ ಪೋಡಿ ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿತ್ತು. ಆಗಲೂ ಪೋಡಿ ಮಾಡದೆ ಇದ್ದಾಗ ಪುನಃ (ರಿಟ್‌ ಪಿಟಿಷನ್: ೫೮೩೭/೫೮೩೮/೨೦೧೩) ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ,” ಎಂದು ಎ.ಜಿ ಅವರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಚನ್ನಸಂದ್ರ ಗ್ರಾಮದ ಸರ್ವೆ ನಂಬರ್‌ ೧೧೫ರಲ್ಲಿ ಗೋಮಾಳದ ಜಮೀನಿನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ, ತಲಾ ೪ ಎಕರೆಯಂತೆ ಒಟ್ಟು ೮ ಎಕರೆಯನ್ನು ಕೃಷ್ಣಮ್ಮ ಮತ್ತು ಕೆಂಪಣ್ಣ ಎಂಬುವರ ಹೆಸರಿಗೆ ಮಂಜೂರಾಗಿರುವುದು ಭೂದಾಖಲೆಗಳ ಜಂಟಿ ನಿರ್ದೇಶಕರ ತನಿಖೆಯಿಂದ ಬಹಿರಂಗಗೊಂಡಿತ್ತು.

‘‘ದರಖಾಸ್ತು ಮೂಲಕ ಕೃಷ್ಣಮ್ಮ ಮತ್ತು ಕೆಂಪಣ್ಣ ಎಂಬುವರಿಗೆ ಮಂಜೂರಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಖಾಸಗಿಯವರಿಗೆ ಭೂದಾಖಲೆಗಳ ಉಪನಿರ್ದೇಶಕರಾಗಿದ್ದ ರಾಜಾನಾಯಕ್ ಮತ್ತು ಸಿಬ್ಬಂದಿ ಪೋಡಿ ಖಾತೆ ಮಾಡಿಕೊಟ್ಟಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ೨೦.೫ ಕೋಟಿ ರುಪಾಯಿ ನಷ್ಟವಾಗಿದೆ,’’ ಎಂದು ಭೂದಾಖಲೆಗಳ ಜಂಟಿ ನಿರ್ದೇಶಕ ಕೆ ಜಯಪ್ರಕಾಶ್‌ ಅವರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.

೨೦೧೦-೧೧ರವರೆಗೂ ಮಂಜೂರಿದಾರರ ಹೆಸರಿಗೆ ಹಕ್ಕು ದಾಖಲೆಗಳು ಇರಲಿಲ್ಲ. ಪೋಡಿ ದುರಸ್ತಿ ಮಾಡುವ ಹಂತದಲ್ಲಿ ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅದರ ಹಿಂದಿನ ದಿನಾಂಕಕ್ಕೆ ಎಲ್ಲ ಪೋಡಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ತನಿಖಾ ವರದಿ ದೃಢಪಡಿಸಿತ್ತು.

“ಬೇರೆಯವರ ಸ್ವಾಧೀನದಲ್ಲಿದ್ದ ಪ್ರದೇಶವನ್ನು ನಿಯಮಬಾಹಿರವಾಗಿ ಸೇರಿಸಿ ಅಕ್ರಮವಾಗಿ ಪೋಡಿ ದುರಸ್ತಿ ಮಾಡಲಾಗಿದೆ. ಪೋಡಿ ದುರಸ್ತಿ ಬಗ್ಗೆ ಇಲಾಖೆಯಿಂದ ಹೊರಡಿಸಲಾಗಿದ್ದ ಸುತ್ತೋಲೆಗಳ ಸೂಚನೆಗಳನ್ನು ಉಲ್ಲಂಘಿಸಿ ಪೋಡಿ ಮಾಡಲಾಗಿದೆ,” ಎಂದು ಜಂಟಿ ನಿರ್ದೇಶಕರು ತನಿಖಾ ವರದಿಯಲ್ಲಿ ವಿವರಿಸಿದ್ದರು.

“ಅಕ್ರಮವಾಗಿ ಸೃಷ್ಟಿಸಿರುವ ದಾಖಲೆಗಳಲ್ಲಿದ್ದ ಮಂಜೂರುದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಮುಂದುವರಿಸಲು ಅಂದಿನ ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ ಅವರು ಆದೇಶ ನೀಡಿರುವುದು ಅಕ್ರಮವಾಗಿದೆ. ಈ ಅಕ್ರಮ ಆದೇಶದಿಂದ ಅಂದಿನ ವಿಶೇಷ ತಹಶೀಲ್ದಾರ್ ಖಾತೆ ಮಾಡಿದ್ದಾರೆ,” ಎಂದು ಜಂಟಿ ನಿರ್ದೇಶಕರು ವರದಿಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : ಸಿಸಿಬಿ ಖಜಾನೆಗೇ ಕನ್ನ ಹಾಕಿದ ಎಸಿಪಿ? ಇದು ಬೇಲಿಯೇ ಹೊಲ ಮೇಯ್ದ ಕತೆ

"ಈ ಪ್ರಕರಣಕ್ಕೆ ಸಹಕರಿಸಿರುವ ಕಂದಾಯ ಇಲಾಖೆಯ ಅಧಿಕಾರಿ, ನೌಕರರು, ಭೂಮಾಪನ ಇಲಾಖೆ ಅಧಿಕಾರಿ, ನೌಕರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಅಗತ್ಯವಿದೆ,” ಎಂದು ಜಂಟಿ ನಿರ್ದೇಶಕರು ವರದಿಯಲ್ಲಿ ಶಿಫಾರಸು ಮಾಡಿದ್ದರು.

“ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಶಿಸ್ತು ಕ್ರಮ ಜರುಗಿಸಬೇಕು. ಈಗಾಗಲೇ ಇವರು ಪ್ರಭಾವವನ್ನು ಬೀರಿ ಒತ್ತಡ ತರುತ್ತಿದ್ದು, ದಾಖಲೆಗಳನ್ನು ತಿರುಚುವ, ನಾಶಪಡಿಸುವ ಎಲ್ಲ ಸಾಧ್ಯತೆಗಳಿವೆ,” ಎಂದು ಜಂಟಿ ನಿರ್ದೇಶಕರು ವರದಿಯಲ್ಲಿ ಹೇಳಿದ್ದಾರೆ.

ಈ ಜಮೀನು ಸದ್ಯ ಮುಂಬೈ ಮೂಲದ ನಿವಾಸಿಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಗೊತ್ತಾಗಿದೆ.

ACB Probe Advocate General Special DC JDLR Land Records Deputy Director ಎಸಿಬಿ ತನಿಖೆ ಅಡ್ವೊಕೇಟ್ ಜನರಲ್ ವಿಶೇಷ ಜಿಲ್ಲಾಧಿಕಾರಿ ಕಂದಾಯ ಇಲಾಖೆ ಭೂದಾಖಲೆ ಮತ್ತು ಭೂಮಾಪನ ಇಲಾಖೆ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು