ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಬಿಎಸ್‌ವೈ ಕೇಸಿನಲ್ಲಿ ವಕೀಲರಿಗೆ ಸರ್ಕಾರ ಪಾವತಿಸಿದ ಶುಲ್ಕವೆಷ್ಟು ಗೊತ್ತೇ?

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಬಿಎಸ್‌ವೈತಡೆಯಾಜ್ಞೆ ಪಡೆದು ಬೀಸುವ ದೊಣ್ಣೆಯಿಂದ ಪಾರಾಗಿದ್ದರೂ ಈಗದು ಸುಪ್ರೀಂ ಕೋರ್ಟ್‌ ಕಟಕಟೆ ಏರಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ವಕೀಲರು ಸಲ್ಲಿಸಿದ್ದ ಬಿಲ್‌ ಟಿಪ್ಪಣಿಗಳು ಕುತೂಹಲ ಕೆರಳಿಸಿವೆ

ಮಹಾಂತೇಶ್ ಜಿ

ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪರ ವಿರುದ್ಧ ಎಸಿಬಿ ತನಿಖೆ ನಡೆಸಬೇಕೆ ಬೇಡವೇ ಎಂಬ ವಿಚಾರ ಈಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿದೆ.

ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ನ್ನು ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್‌, ತನಿಖೆಗೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಈಗ ಕೈಗೆತ್ತುಕೊಂಡಿದೆ.

ಈ ಪ್ರಕರಣವನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯನ್ನಾಗಿಸಿಕೊಂಡಿತ್ತು. ಹಾಗಾಗಿ ಹೈಕೋರ್ಟ್‌ನಲ್ಲಿ ಎಸಿಬಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ರಾಜ್ಯದ ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌ ಅವರನ್ನು ನೇಮಿಸಲಾಗಿತ್ತು.

ಸ್ವಾರಸ್ಯಕರ ವಿಷಯ ಏನಂದರೆ, ಈ ಪ್ರಕರಣದ ವಿಚಾರಣೆಗಾಗಿ ಹೈಕೋರ್ಟ್‌ಗೆ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರು ಸರ್ಕಾರಕ್ಕೆ ಸಲ್ಲಿಸಿದ್ದ ಬಿಲ್‌ನಲ್ಲಿ ನಮೂದಿಸಿದ್ದ ಮೊತ್ತ ಹೆಚ್ಚಾಗಿವೆ ಎಂದು ಡಿಪಿಎಆರ್‌ನ (ಜಾಗೃತ ವಿಭಾಗ) ಸರ್ಕಾರದ ಉಪ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು “ದಿ ಸ್ಟೇಟ್” ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿದೆ.

ಇನ್ನು, ಈ ಆಕ್ಷೇಪದ ನಡುವೆಯೂ ಕಾನೂನು ಇಲಾಖೆ ‘ಗಹನತೆ’ ಮತ್ತು ‘ಪ್ರಾಮುಖ್ಯತೆ’ಯನ್ನು ಪರಿಗಣಿಸಿ ನೀಡಿದ್ದ ಅಭಿಪ್ರಾಯದಂತೆ ಬಿಲ್‌ನಲ್ಲಿ ನಮೂದಿಸಿದ್ದ ಮೊತ್ತವನ್ನೇ ಪಾವತಿಸಲು ಆರ್ಥಿಕ ಇಲಾಖೆ ಸಹಮತಿಸಿರುವುದು ದಾಖಲೆಗಳಿಂದ(ಪುಟ ಸಂಖ್ಯೆ-೨೨) ತಿಳಿದು ಬಂದಿದೆ.

ಈ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರಿಗೆ ದುಬಾರಿ ಮೊತ್ತವನ್ನು ಉಪ ಕಾರ್ಯದರ್ಶಿಯವರ ಅಸಮ್ಮತಿ ನಡುವೆಯೂ ಎಸಿಬಿ ಪಾವತಿಸಿತ್ತಾದರೂ ಪ್ರಕರಣ ಹೈಕೋರ್ಟ್‌ನಲ್ಲಿಯೇ ಇತ್ಯರ್ಥಗೊಳ್ಳದೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ವಿಶೇಷ.

ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಎಸಿಬಿ ಪರ ಎರಡು ಪ್ರಕರಣಗಳಲ್ಲಿ (ರಿಟ್‌ ಅರ್ಜಿ:೩೭೫೪೪/೨೦೧೭ ಮತ್ತು ೩೭೭೦೨/೨೦೧೭) ಹಾಜರಾದ ನಂತರ ರವಿವರ್ಮಕುಮಾರ್‌ ಅವರು ತಲಾ ೮,೮೦,೦೦೦ ರೂ.ನಂತೆ ೧೭,೬೦,೦೦೦ ರೂ.ಗಳ ಬಿಲ್‌ ಪಾವತಿಸಲು (ಜಾಗೃತ ವಿಭಾಗದ ಕಡತ ಪುಟ ಸಂಖ್ಯೆ ೭೩) ಕೋರಿದ್ದರು.

ಆದರೆ ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವ ಪೂರ್ವದಲ್ಲಿ ಪ್ರೊ.ರವಿವರ್ಮಕುಮಾರ್ ಅವರಿಗೆ ಸಂಭಾವನೆಯನ್ನು ನಿಗದಿಪಡಿಸಿರಲಿಲ್ಲ ಎಂಬ ವಿಚಾರ ಕಾನೂನು ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯ ಟಿಪ್ಪಣಿ ದಾಖಲೆಗಳಿಂದ ತಿಳಿದು ಬಂದಿದೆ. ಅವರು ಸಲ್ಲಿಸಿದ್ದ ಬಿಲ್‌ಗಳ ಬಗ್ಗೆ ಡಿಪಿಎಆರ್‌ನ ಜಾಗೃತ ವಿಭಾಗದ ಉಪ ಕಾರ್ಯದರ್ಶಿ ಪಲ್ಲವಿ ಅಕುರಾತಿ ಅವರು ಸಹಮತಿ ವ್ಯಕ್ತಪಡಿಸಿರಲಿಲ್ಲ ಎಂಬುದು(ಪುಟ ಸಂಖ್ಯೆ ೧೦) ದಾಖಲೆಗಳಿಂದ ಗೊತ್ತಾಗಿದೆ.

“ರವಿವರ್ಮಕುಮಾರ್ ಅವರು ಕ್ಲೈಮ್‌ ಮಾಡುತ್ತಿರುವ ಬಿಲ್‌ಗಳು ತೀರಾ ಹೆಚ್ಚಾಗಿರುವುದರಿಂದ ಹಾಗೂ ಈ ಪ್ರಕರಣಗಳಲ್ಲಿ ಹಲವಾರು ಬಾರಿ ವಿಚಾರಣೆಗಳು ನಡೆಯುವ ಅವಕಾಶವಿರುವುದರಿಂದ ಪ್ರತಿ ಬಾರಿ ಹೆಚ್ಚಿನ ಪ್ರಮಾಣದ ಬಿಲ್‌ ಪಾವತಿ ಮಾಡುವುದರಿಂದ ಈ ರಿಟ್‌ ಅರ್ಜಿಗಳ ವಿಷಯದ ಸೂಕ್ಷ್ಮತೆಯ ದೃಷ್ಟಿಯಿಂದ ಸರ್ಕಾರವು ಸಾರ್ವಜನಿಕ ನಿಧಿಯನ್ನು ದುರ್ಬಳಕೆ ಮಾಡುತ್ತಿದೆ ಎಂಬ ಟೀಕೆ ಎದುರಿಸಬಹುದಾದ ಸಂಧರ್ಭ ಸಂಭವಿಸಬಹುದು,” ಎಂದು ಪಲ್ಲವಿ ಅಕುರಾತಿ ಅವರು ಟಿಪ್ಪಣಿಯಲ್ಲಿ ದಾಖಲಿಸಿದ್ದರು.

ಅಲ್ಲದೆ, “ ಈ ರಿಟ್‌ ಅರ್ಜಿಗಳ ಪ್ರತಿಯೊಂದು ವಿಚಾರಣೆಗೆ ಬದಲಾಗಿ ಪ್ರಾಮುಖ್ಯವಾದ ವಿಚಾರಣೆಗಳಿಗೆ ಮಾತ್ರ ರವಿವರ್ಮಕುಮಾರ್‌ ಅವರ ಸೇವೆಯನ್ನು ಬಳಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶಿಸುವುದು ಸೂಕ್ತ” ಎಂದು(ಪುಟ ಸಂಖ್ಯೆ ೧೦) ಪಲ್ಲವಿ ಅಕುರಾತಿ ಅವರು ಅಭಿಪ್ರಾಯ ವ್ಯಕ್ತಪಡಿಸಿ ಅಭಿಪ್ರಾಯಕ್ಕಾಗಿ ಕಡತವನ್ನು ಕಾನೂನು ಇಲಾಖೆಗೆ ಕಳಿಸಲಾಗಿತ್ತು ಎಂಬುದು ಗೊತ್ತಾಗಿದೆ.

ಕಡತವನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮಹ್ಮದ್ ಇಸ್ಮಾಯಿಲ್ ಅವರು “ಪ್ರಕರಣಗಳ ಗಹನತೆ ಮತ್ತು ಪ್ರಾಮುಖ್ಯತೆ ಪರಿಗಣಿಸಿ ರವಿವರ್ಮಕುಮಾರ್ ಅವರು ಕೋರಿದ್ದ ಸಂಭಾವನೆ ಪಾವತಿಸುವುದು ಅಗತ್ಯ. ಈಗಾಗಲೇ ರವಿವರ್ಮಕುಮಾರ್‌ ಅವರ ಸೇವೆಯನ್ನು (ರಿಟ್‌ ಅರ್ಜಿ ಸಂಖ್ಯೆ ೩೭೫೪೪/೧೭)ರಲ್ಲಿ ಪಡೆದುಕೊಳ್ಳುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಹಮತಿಸಿರುವುದರಿಂದ ರಿಟ್‌ ಅರ್ಜಿ ಸಂಖ್ಯೆ ೩೭೫೧೭/೧೭ ಇಂತಹದೇ ಇನ್ನೊಂದು ಪ್ರಕರಣವಾಗಿರುವುದರಿಂದ ಒಟ್ಟು ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆದು ವೆಚ್ಚಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಬಿಲ್‌ಗಳನ್ನು ಪಾವತಿಸಲು ಎಸಿಬಿಯ ಮುಖ್ಯಸ್ಥರಿಗೆ ಆರ್ಥಿಕ ವಿತ್ತಾಧಿಕಾರ ನೀಡಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು (ಪುಟ ಸಂಖ್ಯೆ ೧೬-೧೭) ತಿಳಿದು ಬಂದಿದೆ.

ಎರಡೂ ಪ್ರಕರಣಗಳ ಸಂಬಂಧ 2017ರ ಆಗಸ್ಟ್ ೨೧ ಮತ್ತು ೨೨ರಂದು ಹಾಜರಾಗಿರುವ ಅವರು ಪ್ರಕರಣದಲ್ಲಿ ಸಮಾಲೋಚನೆಗೆ ತಲಾ ಒಂದು ಲಕ್ಷ ರೂಪಾಯಿನಂತೆ ಒಟ್ಟು 2 ಲಕ್ಷ ರೂ, ವಿಚಾರಣೆಗೆ ಹಾಜರಾಗಲು ತಲಾ 3 ಲಕ್ಷ ರೂ.ನಂತೆ ಒಟ್ಟು 6 ಲಕ್ಷ ರೂ., ಇತರೆ ಕೆಲಸಗಳಿಗೆ ಒಟ್ಟು 80 ಸಾವಿರ ರೂಪಾಯಿ ಸೇರಿ ಒಟ್ಟು ೧೭,೬೦,೦೦೦ ರೂ.ಗಳನ್ನು ಬಿಲ್‌ನಲ್ಲಿ ನಮೂದಿಸಿರುವುದು (ಪುಟ ಸಂಖ್ಯೆ ೧೦,೭೩) ಗೊತ್ತಾಗಿದೆ.

ಇದೇ ಪ್ರಕರಣಗಳಲ್ಲಿ 2ನೇ ಬಿಲ್ ಕೂಡ ಸಲ್ಲಿಕೆಯಾಗಿದ್ದು, 13 ಲಕ್ಷ ರೂ.ನಂತೆ ಒಟ್ಟು 26,40,000 ರೂ.ಗಳನ್ನು ಮುಂದುವರೆದ ವೆಚ್ಚದ ರೂಪದಲ್ಲಿ ಪಾವತಿಸಬೇಕು ಎಂದು ಎಸಿಬಿ ಎಡಿಜಿಪಿ ಆಗಿದ್ದ ಎಂ.ಎನ್.ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೆಪ್ಟಂಬರ್‌ ೧೩,೨೦೧೭ರಂದು ಪತ್ರ ಬರೆದಿರುವುದು (ಪುಟ ಸಂಖ್ಯೆ ೭೩,೭೫) ಗೊತ್ತಾಗಿದೆ.

B S Yeddyurappa ವಕೀಲರು ಬಿ ಎಸ್‌ ಯಡಿಯೂರಪ್ಪ ಡಿನೋಟಿಫಿಕೇಷನ್‌ ಪ್ರಕರಣ ಶುಲ್ಕ ರವಿವರ್ಮ ಕುಮಾರ್‌ Denotification fee Advocate Ravi Varma Kumar
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು