ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಕೆಟಿಪಿಪಿ ಕಾಯ್ದೆ ಪಾಲಿಸಬೇಕಿದ್ದ ರಾಜಭವನ ಅಧಿಕಾರಿಗಳಿಂದಲೇ ತುಂಡು ಗುತ್ತಿಗೆ

ರಾಜಭವನ ಅಧಿಕಾರಿಗಳು ಕರ್ನಾಟಕ ಪಾರದರ್ಶಕ ಕಾಯ್ದೆ ಪಾಲಿಸದ ಆರೋಪಕ್ಕೆ ಗುರಿಯಾಗಿದ್ದಾರೆ. ಟೆಂಡರ್‌ ಇಲ್ಲದೆಯೇ ರಾಜ್ಯಪಾಲರ ಫೋಟೋ ಆಲ್ಬಂ ಪುಸ್ತಕ ಮುದ್ರಿಸಲು ಅಧಿಕಾರಿಗಳು ಕಂಡುಕೊಂಡಿರುವ ಒಳದಾರಿ ಈಗ ಬಯಲಾಗಿದೆ. ಆ ದಾರಿ ಏನು? ಇಲ್ಲಿದೆ ವಿವರ.

ಮಹಾಂತೇಶ್ ಜಿ

ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳಲ್ಲಿ ನಡೆಯುತ್ತಿರುವ ‘ತುಂಡು ಗುತ್ತಿಗೆ’ ವ್ಯವಹಾರಗಳು ಈಗ ರಾಜಭವನದಲ್ಲೂ ನಡೆದಿರುವುದು ಬಹಿರಂಗವಾಗಿದೆ. ರಾಜ್ಯಪಾಲ ವಜುಭಾಯ್‌ ವಾಲಾ ಅವರ ಫೋಟೋ ಆಲ್ಬಂ ಒಳಗೊಂಡಿರುವ ಪುಸ್ತಕವನ್ನು ಬಹು ವರ್ಣದಲ್ಲಿ ಮುದ್ರಿಸಿ ಮತ್ತು ವಿತರಿಸುವ ಕೆಲಸಕ್ಕೆ ಆಗುವ ವೆಚ್ಚ ಲಕ್ಷಾಂತರ ರೂಪಾಯಿ ಮೀರಿದ್ದರೂ ನಿಯಮಗಳ ಪ್ರಕಾರ ರಾಜಭವನ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಖರೀದಿ, ಕಾಮಗಾರಿ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ತಗಲುವ ಮೊತ್ತ ಒಂದು ಲಕ್ಷ ರೂಪಾಯಿಗೂ ಅಧಿಕವಾಗಿದ್ದರೆ ಕರ್ನಾಟಕ ಪಾರದರ್ಶಕ ಕಾಯ್ದೆ ಪ್ರಕಾರ ಟೆಂಡರ್‌ ಆಹ್ವಾನಿಸಬೇಕು. ಆದರಿಲ್ಲಿ ರಾಜಭವನ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆಗೆ ಒಳಗೊಳ್ಳದೇ ಒಳ ದಾರಿಯನ್ನು ಬಳಸಿರುವುದು ಗೊತ್ತಾಗಿದೆ. ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತ ಅಂದರೆ ತಲಾ 99,600 ರೂ.(16 ಬಿಲ್) ಮತ್ತು 83,000 ರೂ.(3 ಬಿಲ್)ವಿಭಜಿಸಿ ಒಟ್ಟು 19 ಬಿಲ್‌ಗಳನ್ನು ಲೆಕ್ಕಪತ್ರ ಶಾಖೆಗೆ ಸಲ್ಲಿಸಿದ್ದಾರೆ. ಪುಸ್ತಕದ ಪ್ರತಿಗೆ ತಲಾ 830.೦೦ ರೂ.ಎಂದು ದರ ನಿಗದಿ ಮಾಡಿರುವ ಅಧಿಕಾರಿಗಳು, ಪ್ರತಿ ಬಿಲ್‌ಗೂ ಪ್ರತ್ಯೇಕ ಕಡತ ಸೃಜಿಸಲಾಗಿದೆ. ಪುಸ್ತಕ ಮುದ್ರಿಸಿರುವ ಕಾಮನಾಥ್‌ ಮುದ್ರಣಾಲಯಕ್ಕೆ ಒಟ್ಟು 20,41,800 ರೂ.ಪಾವತಿಯಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಒಟ್ಟು 12 ಬಿಲ್‌ಗಳನ್ನು 2016 ರಲ್ಲಿ ಮತ್ತು ಉಳಿದ ಬಿಲ್‌ಗಳಲ್ಲಿ 2015 ರ ವಿವಿಧ ತಿಂಗಳುಗಳ ಬೇರೆ ಬೇರೆ ದಿನಾಂಕವನ್ನು ನಮೂದಿಸಿರುವುದು ಲಭ್ಯ ಇರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಪುಸ್ತಕಗಳನ್ನು ಮುದ್ರಿಸುವ ಪೂರ್ವದಲ್ಲಿ ರಾಜಭವನದ ಅಧಿಕಾರಿಗಳು ರಾಜ್ಯಪಾಲರಿಂದ ಅನುಮೋದನೆ ಪಡೆದಿಲ್ಲ ಎಂದು ಗೊತ್ತಾಗಿದೆ. ಮುದ್ರಣವಾದ ನಂತರ ಒಂದೊಂದು ಕಡತದಲ್ಲಿ ಒಂದೊಂದೇ ಬಿಲ್‌ ಲಗತ್ತಿಸಿ ಒಮ್ಮೆಲೆ ಎಲ್ಲಾ ಕಡತಗಳಿಗೂ ರಾಜ್ಯಪಾಲರಿಂದ ಘಟನೋತ್ತರ ಅನುಮೋದನೆ ಪಡೆದಿರುವುದು ಗೊತ್ತಾಗಿದೆ.

ಮುದ್ರಣವಾದ ನಂತರ ಒಂದು ವರ್ಷದೊಳಗೇ ಬಿಲ್-ವೋಚರ್ಸ್‌ಗಳನ್ನು ಸಲ್ಲಿಸಿಲ್ಲ. ವಿಳಂಬವಾಗಿಯಾದರೂ ಬಿಲ್‌ಗಳನ್ನು ಆರ್ಥಿಕ ಇಲಾಖೆಗಾದರೂ ಸಲ್ಲಿಸಬೇಕಿತ್ತು. ಆದರೆ ಈ ಪ್ರಕ್ರಿಯೆ ನಡೆದಿಲ್ಲ ಎಂದು ರಾಜಭವನದ ವಿಶ್ವಸನೀಯ ಮೂಲಗಳು ತಿಳಿಸಿವೆ. ಟೆಂಡರ್‌ ಪ್ರಕ್ರಿಯೆಯಿಂದ ದೂರ ಸರಿದಿರುವ ಅಧಿಕಾರಿಗಳು ಮ್ಯಾನುಯಲ್‌ ಟೆಂಡರ್‌ ನಡೆಸುವ ಮೂಲಕ ಒಟ್ಟು ಮೊತ್ತದ ಬಿಲ್‌ಗಳನ್ನು ವಿಭಜಸಿರುವುದು ಲಭ್ಯ ಇರುವ ದಾಖಲೆ‌ಗಳಿಂದ ಗೊತ್ತಾಗಿದೆ. ಇದು ತುಂಡು ಗುತ್ತಿಗೆಯಲ್ಲದೆ ಬೇರೇನೂ ಅಲ್ಲ ಎಂಬ ಅಭಿಪ್ರಾಯ ರಾಜಭವನದೊಳಗಿನಿಂದಲೇ ವ್ಯಕ್ತವಾಗಿದೆ.

ಹೀಗಾಗಿ ಬಿಲ್‌ ಪಾವತಿಸುವ ಸಂಬಂಧ ರಾಜಭವನ ಲೆಕ್ಕ ಶಾಖೆ ಅಧಿಕಾರಿಗಳು ಕಡತವನ್ನು ಡಿಪಿಎಆರ್(ರಾಜಕೀಯ) ಇಲಾಖೆ ಮೂಲಕ ಆರ್ಥಿಕ ಇಲಾಖೆಯ ಪರಿಶೀಲನೆಗೆ ಕಳಿಸಿದ್ದರು. ‘ಬಿ‌ಲ್‌ನಲ್ಲಿ ಒಂದು ಲಕ್ಷಕ್ಕಿಂತಲೂ ಕಡಿಮೆ ಮೊತ್ತ ಇರುವ ಕಾರಣ 1998-99ರ ಕರ್ನಾಟಕ ಪಾರದರ್ಶಕ ಕಾಯ್ದೆ ೪(ಜಿ)ಯಿಂದ ವಿನಾಯಿತಿ ಪಡೆಯಬೇಕೇ ಎಂಬ ಸಲಹೆಯನ್ನು ಕೇಳಿದ್ದರು. ಆದರೆ ಇದಕ್ಕೂ ಅವಕಾಶಗಳಿರಲಿಲ್ಲ. ಅಲ್ಲದೆ, ಕಾಮನಾಥ್‌ ಮುದ್ರಣಾಲಯ ಒಂದೇ ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿ ಮೊತ್ತದ ಬಿಲ್‌ಗಳನ್ನು ಸಲ್ಲಿಸಿದ್ದರು. ಬಿಲ್‌ಗಳಲ್ಲಿ ನಮೂದಿಸಿದ್ದ ಒಟ್ಟು ಮೊತ್ತ ಕೆಟಿಪಿಪಿ ಕಾಯ್ದೆ ಪ್ರಕಾರ ೧.೦೦ ಲಕ್ಷ ರೂ. ಮೀರಿತ್ತು’ ಎಂಬುದನ್ನು ರಾಜಭವನ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದರು ಎಂದು ಗೊತ್ತಾಗಿದೆ.

ಇದನ್ನೂ ಓದಿ : ಸಚಿವ ರಮೇಶ್‌ಕುಮಾರ್‌ ಅವರನ್ನು ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆಯೇ?

ಪುಸ್ತಕ ಮುದ್ರಿಸುವ ಮುನ್ನ ಮುದ್ರಣಕಾರರಿಂದ ಯಾವುದೇ ಸ್ಪರ್ಧಾತ್ಮಕ ದರಗಳನ್ನು ಆಹ್ವಾನಿಸದೇ ನೇರವಾಗಿ ಕಾಮನಾಥ್‌ ಮುದ್ರಣಾಲಯದಿಂದಲೇ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗಿದೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ‘ಕರ್ನಾಟಕದಲ್ಲಿ ಆಡಳಿತ’ (Governance Around Karnataka)ಶೀರ್ಷಿಕೆ ಹೊತ್ತಿರುವ 164 ಪುಟ ಹೊಂದಿರುವ ಪುಸ್ತಕದ ಒಟ್ಟು 2,460 ಪ್ರತಿಗಳನ್ನು ಗುಜರಾತ್‌ ಮೂಲದ ಕಾಮನಾಥ್ ಮುದ್ರಣಾಲಯದಿಂದ ಇಂಗ್ಲೀಷ್‌ ಮತ್ತು ಹಿಂದಿ ಭಾಷೆಯಲ್ಲಿ ಮುದ್ರಿಸಲಾಗಿದೆ.

ಪುಸ್ತಕದಲ್ಲೇನಿದೆ? : 164 ಪುಟಗಳಿರುವ ಈ ಪುಸ್ತಕದಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ಅವರು ರಾಜ್ಯದ ವಿವಿಧೆಡೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಮತ್ತು ರಾಜಭವನಕ್ಕೆ ಆಗಮಿಸಿದ್ದ ಗಣ್ಯರ ಜತೆ ಸಮಾಲೋಚಿಸುತ್ತಿರುವ ಛಾಯಾಚಿತ್ರಗಳಿವೆ. ರಾಜಭವನಕ್ಕೆ ಆಗಮಿಸುವ ಗಣ್ಯಾತಿಗಣ್ಯರಿಗೆ ಈ ಪುಸ್ತಕದ ಪ್ರತಿಯನ್ನು ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಮನಾಥ್‌ ಮುದ್ರಣಾಲಯ ಬೆಂಗಳೂರಿನ ರಾಜಾಜಿನಗರದಲ್ಲಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ತಮ್ಮ ಟಿಪ್ಪಣಿಯಲ್ಲಿ ನಮೂದಿಸಿದ್ದರು. ಅವರ ವೆಬ್‌ಸೈಟ್‌ನಲ್ಲಿ ಬೆಂಗಳೂರಿನ ರಾಜಾಜಿನಗರದ ವಿಳಾಸ ಎಂದು ನಮೂದಾಗಿದೆ. ಆದರೆ ಮುದ್ರಣಾಲಯದ ಕಚೇರಿ ವಿಳಾಸವೇ ಅಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ವೆಬ್‌ಸೈಟ್‌ನಲ್ಲಿ ನಮೂದಿಸಿದ್ದ ಈ ಮೈಲ್‌ ಗೆ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೋರಿ ‘ದಿ ಸ್ಟೇಟ್‌’ ಸಂದೇಶ ಕಳಿಸಿತ್ತು. ಆದರೆ ಇದುವರೆಗೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Governor ರಾಜ್ಯಪಾಲ ತುಂಡು ಗುತ್ತಿಗೆ ಅಕ್ರಮ ವಜುಭಾಯಿ ವಾಲ Vajubhai Vala Piece Work Illegal
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು