ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಸಚಿವ ರಮೇಶ್‌ಕುಮಾರ್‌ ಅವರನ್ನು ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆಯೇ?

ಆಂತರಿಕ ಅಂಕಗಳನ್ನು ಸೃಷ್ಟಿಸಿ ಅಕ್ರಮವಾಗಿ ಯುನಾನಿ ಸೀಟು ನೀಡಿರುವ ಕ್ರಿಮಿನಲ್‌ ಪ್ರಕರಣ ಕುರಿತು ನಡೆಯುತ್ತಿರುವ ಸಿಐಡಿ ತನಿಖೆಗೆ ಈಗ ವಿಘ್ನ ಎದುರಾಗಿದೆ. ಈಗಾಗಲೇ ಶೇ.50 ರಷ್ಟು ಪ್ರಗತಿ ಸಾಧಿಸಿರುವ ತನಿಖೆಯನ್ನು ಮುಂದುವರೆಸುವುದು ಬೇಡ ಎನ್ನುತ್ತಿದೆ ಆರೋಗ್ಯ ಇಲಾಖೆ. 

ಮಹಾಂತೇಶ್ ಜಿ

ನಕಲಿ ಆಯ್ಕೆ ಪಟ್ಟಿ ಸೃಷ್ಟಿಸಿ ಬಿಯುಎಂಎಸ್‌(ಯುನಾನಿ)ಪದವಿಗೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ನೀಡಿರುವುದು ಸೇರಿದಂತೆ ಒಟ್ಟು ೨೪ ಅಕ್ರಮ ನಡೆದಿವೆ ಎನ್ನಲಾದ ಆರೋಪಗಳು ೨ ತನಿಖೆಯಲ್ಲಿ ಸಾಬೀತಾಗಿದ್ದರೂ ಜಂಟಿ ಇಲಾಖೆಯ ವಿಚಾರಣೆಯಲ್ಲಿ ಅಕ್ರಮಗಳು ನಡೆದಿಲ್ಲ ಎಂದು ನಿರ್ಣಯಿಸಿರುವ ವಿಚಾರ ಹೊರಬಿದ್ದಿದೆ.

ವಿಚಾರಣೆ ವರದಿ ಆಧರಿಸಿ ಆಪಾದಿತರ ವಿರುದ್ಧದ ಆರೋಪಗಳನ್ನು ಕೈ ಬಿಟ್ಟು ದೋಷಮುಕ್ತಗೊಳಿಸಿರುವುದಲ್ಲದೆ, ಇದೇ ಪ್ರಕರಣ ಕುರಿತು ಈಗಾಗಲೇ ಅರ್ಧದಷ್ಟು ಪೂರ್ಣಗೊಂಡಿರುವ ಸಿಐಡಿ ತನಿಖೆಯನ್ನೇ ಕೈ ಬಿಡಲು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಒಳಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.

ಪ್ರಕರಣ ಕುರಿತು ಮೊದಲು ತನಿಖೆ ನಡೆಸಿದ್ದ ಆಯುಷ್‌ ಇಲಾಖೆಯ ನಿರ್ದೇಶಕರು ಜಂಟಿ ಇಲಾಖೆ ವಿಚಾರಣೆ ನಡೆಸಲು ಸೂಚಿಸಿದ್ದರ ಹಿನ್ನೆಲೆಯಲ್ಲಿ ಏಪ್ರಿಲ್‌ ೨೨, ೨೦೧೫ರಂದು ಆದೇಶ ಹೊರಡಿಸಲಾಗಿತ್ತು. ಈ ಪ್ರಕರಣದಲ್ಲಿ ಕ್ರಿಮಿನಲ್‌ ಅಪರಾಧಗಳು ಇದ್ದುದರಿಂದ ಆಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಸೂಚನೆಯಂತೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿ ಅಕ್ಟೋಬರ್ ೧೬,೨೦೧೫ರಂದು ಆದೇಶಿಸಲಾಗಿತ್ತು. ಸಿಐಡಿ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖೆ ವಿಚಾರಣೆಯನ್ನು ಒಂದೇ ಅಪರಾಧಕ್ಕೆ ನಡೆಸಿರುವುದು ಸಮಂಜಸವಲ್ಲ ಎಂಬ ಆಕ್ಷೇಪಗಳು ಇಲಾಖೆಯೊಳಗಿನಿಂದಲೇ ವ್ಯಕ್ತವಾಗಿದ್ದವು.

ಇದೇ ಪ್ರಕರಣ ಕುರಿತು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಆಯುಷ್‌ ನಿರ್ದೇಶನಾಲಯ ನಡೆಸಿದ್ದ ತನಿಖೆಯಲ್ಲಿ ಅಕ್ರಮಗಳು ಸಾಬೀತಾಗಿದ್ದವು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಿದ್ದ ಪದವಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯ ಹಿಂಪಡೆದುಕೊಂಡಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ. ‘ಕ್ರಿಮಿನಲ್ ‌ಅಪರಾಧಗಳು ನಡೆದಿದೆ ಎನ್ನಲಾಗಿರುವ ಈ ಪ್ರಕರಣದ ವಾಸ್ತವಾಂಶಗಳನ್ನು ಮರೆ ಮಾಚಿ ಸಚಿವರ ಅನುಮೋದನೆ ಪಡೆದು ಒಳಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಆಘಾತಕಾರಿ’ ಎಂದು ಅಧಿಕಾರಿಯೊಬ್ಬರು ‘ದಿ ಸ್ಟೇಟ್’‌ಗೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಪ್ರಸ್ತಾವನೆ ಆಧರಿಸಿ ಸಿಐಡಿ ತನಿಖೆ ಮುಂದುವರೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಒಳಾಡಳಿತ ಇಲಾಖೆ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರಕರಣ ಸಂಬಂಧದ ಕಡತವನ್ನು ಪಡೆದಿರುವ ಒಳಾಡಳಿತ ಇಲಾಖೆ, ಅದನ್ನು ಪರಿಶೀಲಿಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಪ್ರಕರಣ ಹಿನ್ನಲೆ: ಬೆಂಗಳೂರಿನ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೊದಲನೇ ವರ್ಷದ ಬಿಯುಎಂಎಸ್‌(೨೦೧೩-೧೪ನೇ ಸಾಲಿನ) ಪದವಿ ಪ್ರವೇಶಕ್ಕೆ ಸಿ.ಇ.ಟಿ.ಪ್ರಕ್ರಿಯೆ ಮುಗಿದ ನಂತರ ಉಳಿದ ಸೀಟುಗಳಿಗೆ ನಿರ್ದೇಶನಾಲಯದ ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಸಿ.ಇ.ಟಿ.ಯಿಂದ ಆಯ್ಕೆಯಾಗಿ ಪ್ರವೇಶ ಪಡೆದಿದ್ದ ೩ ವಿದ್ಯಾರ್ಥಿಗಳು ಕೋರ್ಸ್‌ನ್ನು ತೊರೆದಿದ್ದರು. ಈ ವಿದ್ಯಾರ್ಥಿಗಳ ಸೀಟುಗಳು ಖಾಲಿ ಆಗಿರುವ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ದೇಶನಾಲಯಕ್ಕೆ ನೀಡಿರಲಿಲ್ಲ. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಪ್ರವೇಶಕ್ಕೆ ಕೊನೆ ದಿನಾಂಕವೂ ಮುಗಿದಿದೆ ಎಂದು ಘೋಷಿಸಿದ ನಂತರ ಈ ಸೀಟುಗಳಿಗೆ ವೈದ್ಯಕೀಯ ಶಿಕ್ಷಣದ ಜಂಟಿ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳು ಸೇರಿ ನಿರ್ದೇಶನಾಲಯದ ಅಧಿಕೃತ ಆದೇಶ ಹೊರಡಿಸಿದಂತೆ ಸಹಿ ಮಾಡಿ ಆಯ್ಕೆ ಪತ್ರ ಸೃಷ್ಟಿಸಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು.

ಸಿಐಡಿಗೆ ವಹಿಸುವ ಮುನ್ನವೇ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ ೪೨೦,೪೬೫,೪೭೧, ೪೦೬ರ ಅಡಿಯಲ್ಲಿ(ಮೊ.ಸಂ:೬೫೯/೨೦೧೬) ಮೊಕದ್ದಮೆಯೂ ದಾಖಲಾಗಿತ್ತು ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಜಯಚಾಮರಾಜೇಂದ್ರ ಭಾರತೀಯ ವೈದ್ಯಕೀಯ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಯಾಗಿದ್ದ ಎಲ್‌.ಎ.ಜಯರಾಮು, ಆಯುಷ್‌ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ಡಾ.ಹಸೀಬುನ್ನಿಸಾ, ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಇಫ್ತಿಕಾರುದ್ದೀನ್‌ ಸೇರಿದಂತೆ ಒಟ್ಟು ೫ ಮಂದಿ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

‘ವಿಚಾರಣಾಧಿಕಾರಿಗಳು ನೀಡಿರುವ ಅಂತಿಮ ಇಲಾಖಾ ವಿಚಾರಣೆ ವರದಿಯಲ್ಲಿ ಆಪಾದಿತರ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿಲ್ಲ ಎಂದು ದೃಢಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆ ವರದಿಯನ್ನು ಸರ್ಕಾರ ಅಂಗೀಕರಿಸಿ ಆಪಾದಿತರ ವಿರುದ್ಧ ಆರೋಪಗಳನ್ನು ಕೈ ಬಿಟ್ಟು ದೋಷಮುಕ್ತರನ್ನಾಗಿಸಿ ಸರ್ಕಾರಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗಾಗಿ ವಹಿಸಿರುವ ಪ್ರಕರಣವನ್ನು ಕೈಬಿಡಬೇಕು. ಹಾಗೆಯೇ ಕಾಮಾಕ್ಷಿಪಾಳ್ಯ ಪೊಲೀಸರು ನಡೆಸುತ್ತಿರುವ ತನಿಖೆಯನ್ನೂ ಹಿಂಪಡೆಯಬೇಕು’ ಎಂದು ಆರೋಗ್ಯ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ.ಶಾಲಿನಿ ರಜನೀಶ್‌ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಜುಲೈ ೧೧,೨೦೧೭)ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಅದೇ ರೀತಿ ‘ನಾಲ್ವರು ಆಪಾದಿತರ ವಿರುದ್ಧ ಮಾಡಿರುವ ಆರೋಪಗಳು ತನಿಖಾ ವರದಿ ಆಧಾರಿತವಾಗಿವೆ. ಬೋಧಕರು ವಿಚಾರಣೆ ವೇಳೆಯಲ್ಲಿ ಸಾಕ್ಷಿ ನುಡಿಯುವಾಗ ಆರೋಪಗಳ ಬಗ್ಗೆ ಸಾಕ್ಷಿ ನುಡಿದಿರುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ ಆಪಾದಿತರ ವಿರುದ್ಧ ಮಾಡಿರುವ ೨೦ ಆರೋಪಗಳು ಮತ್ತು ೨ನೇ ಆಪಾದಿತರ ವಿರುದ್ಧ ಮಾಡಿರುವ ೨೧ ಆರೋಪಗಳು ಸಾಬೀತಾಗಿಲ್ಲ ಎಂದು ನಿರ್ಣಯಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ನಿರ್ಣಯಗಳನ್ನು ಒಪ್ಪಿಕೊಳ್ಳಲಾಗಿದೆ. ಒಳಾಡಳಿತ ಇಲಾಖೆಯು ಪ್ರಕರಣವನ್ನು ಸಿ.ಐ.ಡಿ.ಗೆ ವಹಿಸಿ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಯನ್ನು ಕೈ ಬಿಡಲು ಆದೇಶಿಸಿದೆ’ ಎಂದು ಇಲಾಖೆಯ ಅಧೀನ ಕಾರ್ಯದರ್ಶಿ ಕಮಲಮ್ಮ ಅವರು ಸರ್ಕಾರದ ಉಪ ಕಾರ್ಯದರ್ಶಿಗೆ ಸೆಪ್ಟಂಬರ್‌ ೯,೨೦೧೭ರಂದು ಬರೆದಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

ಇದೇ ಟಿಪ್ಪಣಿಯಲ್ಲಿ ಆರೋಗ್ಯ ಸಚಿವ ಆರ್‌.ರಮೇಶ್‌ ಕುಮಾರ್‌ ಅವರ ಸಹಿ ಇರುವುದನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರದ ಆದೇಶದಂತೆ ಕ್ರಿಮಿನಲ್‌ ವಿಷಯಗಳನ್ನು ಹೊರತುಪಡಿಸಿ ಆಡಳಿತಾತ್ಮಕ ಮತ್ತು ಆರ್ಥಿಕ ವಿಷಯಗಳ ಕುರಿತಷ್ಟೇ ಆರೋಪಿತರ ವಿರುದ್ಧ ಇಲಾಖೆ ವಿಚಾರಣೆ ನಡೆಸಲಾಗಿದೆ.ವಿಚಾರಣಾಧಿಕಾರಿಗಳು ಆರೋಪಿತರೊಂದಿಗೆ ಶಾಮೀಲಾಗಿ ಆರೋಪಿತರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಬೀತುಪಡಿಸಬಲ್ಲ ದಾಖಲೆಗಳನ್ನು ಒದಗಿಸಿಲ್ಲ. ಅಕ್ರಮ ದಾಖಲಾತಿ ಸೃಷ್ಟಿ, ನಕಲಿ ಹಾಜರಾತಿ ಮತ್ತು ನಕಲಿ ಅಂಕಪಟ್ಟಿ ಸೃಷ್ಟಿಯಂತಹ ಕ್ರಿಮಿನಲ್‌ ಅಂಶಗಳ ಕುರಿತು ತನಿಖೆ ನಡೆಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಆರೋಗ್ಯ ಇಲಾಖೆ Health Department Ramesh Kumar ರಮೇಶ್‌ ಕುಮಾರ್‌ ಯುನಾನಿ ಸೀಟು ತನಿಖೆ Unani Seats Investing
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು