ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಮುಖ್ಯಮಂತ್ರಿಗಳ ಜೀವವೆಂದರೆ ಅವರದೇ ಸರ್ಕಾರಕ್ಕೆ ಇಷ್ಟೊಂದು ತಾತ್ಸಾರವೇ?

ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಗೆ ತೆರಳುತ್ತಿದ್ದ ಸಂದರ್ಭ ಹೆಲಿಕಾಪ್ಟರ್‌ನಲ್ಲಿ ಇಂಧನ ಕೊರತೆ ಕಾಣಿಸಿಕೊಂಡಿತ್ತು. ಇಂಥ ದೋಷ ಮರುಕಳಿಸುತ್ತಿದ್ದರೂ ಮುಖ್ಯಮಂತ್ರಿಗಳ ಸಚಿವಾಲಯ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂಬುದು ವಿಪರ್ಯಾಸ

ಮಹಾಂತೇಶ್ ಜಿ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿನಿಂದ ಈವರೆಗೆ ಅವರು ಪ್ರಯಾಣಿಸಿರುವ ಹೆಲಿಕಾಪ್ಟರ್‌ಗಳಲ್ಲಿ ಐದು ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಲಘು ತಾಂತ್ರಿಕ ಸಮಸ್ಯೆಗಳಿಂದ ಹಿಡಿದು ಅಧಿಕಾರಶಾಹಿಯ ಹೊಣೆಗೇಡಿತನದ ನಿರ್ಲಕ್ಷ್ಯದವರೆಗೆ ಕಾರಣಗಳನ್ನು ಪಟ್ಟಿ ಮಾಡಬಹುದು. ಗಾಬರಿ ಹುಟ್ಟಿಸುವ ಸಂಗತಿ ಎಂದರೆ ಈ ನಿರ್ಲಕ್ಷ್ಯಕ್ಕೆ ಯಾರನ್ನು ಹೊಣೆ ಮಾಡಿ ನೊಟಿಸ್ ನೀಡಬೇಕು ಎನ್ನುವುದೇ ಉನ್ನತ ಹುದ್ದೆಯಲ್ಲಿರುವವರಿಗೆ ಗೊತ್ತಿಲ್ಲ! ಮುಖ್ಯಮಂತ್ರಿಯವರ ರಕ್ಷಣೆ ಎನ್ನುವುದು ಅಧಿಕಾರಿಗಳ ಪಾಲಿಗೆ ಇಷ್ಟು ತಾತ್ಸಾರವಾಯಿತೇ?

ಕಲ್ಬುರ್ಗಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಹೆಲಿಕಾಪ್ಟರ್‌ಗೆ ಇಂಧನ ಕೊರತೆಯಾಗಿತ್ತು. ಇದರಿಂದಾಗಿ ಅವರು ಒಂದೂವರೆ ಗಂಟೆ ಕಾದಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. “ ಕಲ್ಬುರ್ಗಿಯಲ್ಲಿ ಆಯೋಜಿಸಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಎಂಪಿ ಏರ್‌ ಚಾರ್ಟರ್‌ ಏಜೆನ್ಸಿ ಟೈಟನ್‌ ಏವಿಯೇಷನ್‌ ಕಂಪನಿ ಹೆಲಿಕಾಪ್ಟರ್‌ನ್ನು ಒದಗಿಸಿತ್ತು. ತಾಂತ್ರಿಕ ದೋಷ ತಮ್ಮ ಗಮನಕ್ಕೆ ಬಂದಿತ್ತು. ಅದನ್ನು ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸಲಾಗಿದೆ” ಎಂದು ಏಜೆನ್ಸಿಯ ಅಧಿಕಾರಿ ಅಮರೇಶ್ ಅವರು ‘ದಿ ಸ್ಟೇಟ್’ಗೆ ಮಾಹಿತಿ ನೀಡಿದರು.

ವಿಪರ್ಯಾಸವೆಂದರೆ ತಾಂತ್ರಿಕ ದೋಷದಂತಹ ಘಟನೆಗಳು ಮರುಕಳಿಸುತ್ತಿದ್ದರೂ ಮುಖ್ಯಮಂತ್ರಿಗಳ ಸಚಿವಾಲಯ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. “ಹೆಲಿಕಾಪ್ಟರ್‌ ಪ್ರವಾಸ ಕಾರ್ಯಕ್ರಮಗಳ ಸಮನ್ವಯ ಹೊಣೆಗಾರಿಕೆಯನ್ನಷ್ಟೇ ಈ ಸಚಿವಾಲಯ ನಿಭಾಯಿಸುತ್ತಿದೆ. ಯಾವ ಕಂಪನಿಯ ಹೆಲಿಕಾಪ್ಟರ್‌ ಒದಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಈ ಸಚಿವಾಲಯಕ್ಕೆ ಇರುವುದಿಲ್ಲ. ಅದೇನಿದ್ದರೂ ಏಜೆನ್ಸಿಗೆ ಸಂಬಂಧಿಸಿದ್ದು” ಎಂದು ‘ದಿ ಸ್ಟೇಟ್’ಗೆ ಮುಖ್ಯಮಂತ್ರಿಗಳ ಸಚಿವಾಲಯದ ವಿಶೇಷ ಕರ್ತವ್ಯವಾಧಿಕಾರಿ ಚನ್ನಬಸವೇಶ್‌ ತಿಳಿಸಿದರು.

ಕಲ್ಬುರ್ಗಿ ಘಟನೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ವರದಿಯನ್ನೂ ಪಡೆದಿಲ್ಲ. ಹಾಗೆಯೇ ಯಾವ ಅಧಿಕಾರಿಗೂ ನೋಟೀಸ್‌ ಕೂಡ ನೀಡಿಲ್ಲ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ನೋಟೀಸ್‌ ನೀಡಲು ಮುಂದಾಗಿದ್ದರು. ಆದರೆ ಯಾರಿಗೆ ನೋಟೀಸ್‌ ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆಯೇ ಇರದ ಕಾರಣ ನೋಟೀಸ್‌ ನೀಡುವ ವಿಚಾರದಿಂದ ಹಿಂದೆ ಸರಿದಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಕಚೇರಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಈ ಬೆಳವಣಿಗೆಗಳ ನಡುವೆಯೇ ಕಲ್ಬುರ್ಗಿ ಘಟನೆಯನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌ ಝಾ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಡಿಸೆಂಬರ್‌ 19,2017 ರಂದು ಪತ್ರ ಬರೆದು ವರದಿ ಕೇಳಿದ್ದಾರೆ ಎಂದು ಗೊತ್ತಾಗಿದೆ.

“ಕಲಬುರ್ಗಿ ಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಸೂಕ್ತ ಸಮಯದಲ್ಲಿ ಇಂಧನ ವ್ಯವಸ್ಥೆ ಆಗದ ಇರುವ ಕಾರಣ ಉಂಟಾಗಿರುವ ಪರಿಸ್ಥಿತಿ ಮತ್ತು ಭದ್ರತೆ ಇವುಗಳನ್ನು ಪರಿಶೀಲಿಸಿ 3 ದಿನದಲ್ಲಿ ವರದಿ ನೀಡಬೇಕು” ಎಂದು ಅನಿಲ್‌ ಕುಮಾರ್‌ ಝಾ ಅವರು ಪತ್ರ ಬರೆದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ. ಗಡುವು ಮೀರಿದರೂ ವರದಿ ಇನ್ನೂ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

ಅನನುಭವಿ ಪೈಲಟ್‌ಗಳು ಹೆಲಿಕಾಪ್ಟರ್‌ನ್ನು ಚಲಾಯಿಸುತ್ತಿರುವ ಬಗ್ಗೆ ರಾಜ್ಯ ಗುಪ್ತಚರ ದಳದ ಹೆಚ್ಚುವರಿ ನಿರ್ದೇಶಕ ಎ.ಎಂ.ಪ್ರಸಾದ್‌ ಅವರು ಲೋಕೋಪಯೋಗಿ ಇಲಾಖೆಯ ಪ್ರ.ಕಾರ್ಯದರ್ಶಿಗೆ 2015 ರ ಜುಲೈ 20ರಂದು ‘ಗೌಪ್ಯ’ಪತ್ರದಲ್ಲಿ ಎಚ್ಚರಿಸಿದ್ದರು.

ಕಳೆದ 4 ವರ್ಷಗಳಲ್ಲಿ ತಾಂತ್ರಿಕ ದೋಷ ಸೇರಿದಂತೆ ಇನ್ನಿತರೆ ಅವಘಡಗಳು 5 ಬಾರಿ ಸಂಭವಿಸಿವೆ. ತಾಂತ್ರಿಕ ದೋಷದಿಂದಾಗಿ ಬೆಂಕಿ, ಹದ್ದು ಡಿಕ್ಕಿ ಹೊಡೆದಿರುವುದು,ಕಾಪ್ಟರ್‌ ಲ್ಯಾಂಡ್‌ ಆಗುವ ವೇಳೆ ಟೈರ್‌ಗಳು ಬಿಚ್ಚಿಕೊಳ್ಳದೇ ಇರುವುದು, ಇಂಡಿಕೇಟರ್‌ನಲ್ಲಿ ಸಿಗ್ನಲ್‌ ಲೈಟ್‌ ಬಾರದಿರುವುದು ಸೇರಿದಂತೆ ಹಲವು ರೀತಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಸಚಿವ ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್‌, ಎಚ್‌.ಆಂಜನೇಯ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದ್ದವು.

ತಾಂತ್ರಿಕ ದೋಷ ಘಟನಾವಳಿಗಳು

  • ಮಾರ್ಚ್ 15,2014: ಕುಮಾರ ಪಟ್ಟಣಂ ಹೆಲಿಪ್ಯಾಡ್‌ನಲ್ಲಿ ತಾಂತ್ರಿಕ ಕಾರಣದಿಂದ ಕೆಳಗಿಳಿದಿತ್ತು.
  • ನವೆಂಬರ್‌ 19,2014: ಎಚ್‌ಎಎಲ್ ವಿಮಾನನಿಲ್ದಾಣದಿಂದ ಹೊಳಲ್ಕೆರೆಗೆ ಹೊರಡುತ್ತಿದ್ದ ವೇಳೆ ತಾಂತ್ರಿಕ ದೋಷ
  • ಜನವರಿ 10,2015: ಮೈಸೂರಿಗೆ ತೆರಳಲು ನಿಗದಿಯಾಗಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ
  • ಫೆಬ್ರುವರಿ 2,2015:ಚನ್ನರಾಯಪಟ್ಟಣ ತಾಲೂಕಿನ ದಮ್ಮನಿಂಗಲದ ಹೆಲಿಪ್ಯಾಡ್‌ನಲ್ಲಿ ಟೈರ್‌ ಬಿಚ್ಚಿಕೊಂಡಿರಲಿಲ್ಲ
  • ಏಪ್ರಿಲ್‌ 24,2017:ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್‌ ಅವರಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ
ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

‘ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ವಿಐಪಿ, ವಿಐಐಪಿಗಳಿಗೆ ಒದಗಿಸುವ ಹೆಲಿಕಾಪ್ಟರ್‌ನ್ನು ಚಲಾಯಿಸುವ ಪೈಲಟ್‌ಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅರ್ಹತೆ ಮತ್ತು ಅನುಭವವನ್ನು ನಿಗದಿಪಡಿಸಿವೆ. ಹೆಲಿಕಾಪ್ಟರ್‌ನ್ನು ಇಂತಿಷ್ಟು ಗಂಟೆಗಳವರೆಗೆ ಚಲಾಯಿಸಿ ಅನುಭವ ಹೊಂದಿರುವ ಪೈಲಟ್‌ಗಳನ್ನೇ ವಿಐಪಿ, ವಿವಿಐಪಿಗಳಿಗೆ ನೇಮಿಸಬೇಕು’ ಎಂದು ಎ.ಎಂ.ಪ್ರಸಾದ್‌ ಅವರು ಪತ್ರದಲ್ಲಿ ಸೂಚಿಸಿದ್ದರೂ ಮುಖ್ಯಮಂತ್ರಿಗಳ ಸಚಿವಾಲಯ ಈವರೆಗೂ ಪಾಲಿಸಿಲ್ಲ ಎಂದು ಗೊತ್ತಾಗಿದೆ.

‘2016 ಮೇ 6 ಮತ್ತು ಜೂನ್‌ 27ರಂದು ಚಿತ್ರದುರ್ಗ ಮತ್ತು ಮೈಸೂರು ಪ್ರವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌(ಇಸಿ 135 ಮತ್ತು ಫಿನಾಮ್‌ 100 ವಿಟಿ ಎವಿಎಸ್‌) ಬಳಸಿದ್ದರು. ಈ ಎರಡೂ ದಿನದಂದು ಮುಖ್ಯಮಂತ್ರಿಗಳಿದ್ದ ಹೆಲಿಕಾಪ್ಟರ್‌ನ್ನು ಅನನುಭವಿ ಪೈಲಟ್‌ಗಳು ಎಂದು ಹೇಳಲಾಗಿರುವ ಅರ್ಜುನ್‌, ಶಿಲ್ಪಿ ಬಿಸ್ನಾಯ್‌, ದಿಲೀಪ್‌ ಗ್ರೇವಾಲ್‌, ಸಂಜಯಕುಮಾರ್‌ ಎಂಬುವರು ಚಲಾಯಿಸಿದ್ದರು. ಡಿಜಿಸಿಎ ನಿಗದಿಪಡಿಸಿದ್ದ ಅನುಭವ ಮತ್ತು ಅರ್ಹತೆ ಈ ಪೈಲಟ್‌ಗಳಿಗೆ ಇರಲಿಲ್ಲ. ಆದರೂ ಅವರು ಹೆಲಿಕಾಪ್ಟರ್‌ನ್ನು ಚಲಾಯಿಸಿದ್ದರು’ ಎಂಬ ಆಘಾತಕಾರಿ ಮಾಹಿತಿಯನ್ನು ಎ.ಎಂ.ಪ್ರಸಾದ್‌ ಅವರು ಗೌಪ್ಯ ಪತ್ರದಲ್ಲಿ ಹೊರಗೆಡವಿದ್ದರು.

ಹಾಗೆಯೇ ‘ ವೈಮಾನಿಕ ಪರಿಣಿತರನ್ನೊಳಗೊಂಡ ಪ್ರತ್ಯೇಕ ವಿಭಾಗ ತೆರೆದು ಮುಖ್ಯಮಂತ್ರಿ, ರಾಜ್ಯಪಾಲರ ಹೆಲಿಕಾಪ್ಟರ್‌ ಪ್ರಯಾಣ ಕುರಿತು ನಿರ್ವಹಣೆ ಮಾಡುವುದು ಅತ್ಯಗತ್ಯ. ವಿವಿಐಪಿಗಳ ಭದ್ರೆ ದೃಷ್ಟಿಯಿಂದ ತಕ್ಷಣವೇ ಪ್ರತ್ಯೇಕ ವಿಭಾಗ ತೆರೆಯಬೇಕು’ ಎಂದು ನಾಗರೀಕ ವಿಮಾನಯಾನ ವಿಭಾಗದ ಕೇಂದ್ರ ನಿರ್ದೇಶಕರು(ಡಿಜಿಸಿಎ) ನೀಡಿದ್ದ ಸಲಹೆಯನ್ನು ರಾಜ್ಯ ಸರ್ಕಾರ ಇದುವರೆಗೂ ಪಾಲಿಸಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದರು.

ಹೆಲಿಕಾಪ್ಟರ್‌ಗಳ ಕುರಿತು ತಾಂತ್ರಿಕವಾಗಿ ಪರಿಣಿತರಲ್ಲದ ಕಾರಣ ಟೆಂಡರ್‌ ಸೇರಿದಂತೆ ಇನ್ನಿತರೆ ಕಾರ್ಯನಿರ್ವಹಿಸಲು ಆಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟವಾಗಿ ಹಲವು ಬಾರಿ ಸರ್ಕಾರಕ್ಕೆ ತಿಳಿಸಿತ್ತು.

‘ಜಾರ್ಖಂಡ್‌ನಂತಹ ಚಿಕ್ಕ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಗಣ್ಯರ ಉಪಯೋಗಕ್ಕೆ ಹೆಲಿಕಾಪ್ಟರ್‌ ಪಡೆಯಲು ಪ್ರತ್ಯೇಕವಾದ ವಿಭಾಗ ಹೊಂದಿದೆ.ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಪ್ರತ್ಯೇಕ ವಿಭಾಗ ತೆರೆಯಬೇಕು’ ಎಂದು ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಸರ್ಕಾರ ಮಾತ್ರ ಇದುವರೆಗೂ ಪ್ರತ್ಯೇಕ ವಿಭಾಗ ತೆರೆಯುವ ಬಗ್ಗೆ ತೀರ್ಮಾನಿಸಿಲ್ಲ ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ CM Siddaramaiah Helicopter DPAR Technical Lapse Diesel Scarcity ಹೆಲಿಕಾಪ್ಟರ್‌ ಡಿಪಿಎಆರ್‌ ತಾಂತ್ರಿಕ ದೋಷ ಡೀಸೆಲ್‌ ಕೊರತೆ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು