ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಎಸಿಬಿಗೆ ಕನಿಷ್ಠ ನಿಯಮಾವಳಿ ಬೇಡವೇ?

ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯನಿರ್ವಹಣೆಗೆ ಕೈಪಿಡಿ ಅವಶ್ಯಕತೆಯೇ ಇಲ್ಲದ ಕಾರಣ ಆ ಪ್ರಸ್ತಾವನೆಯನ್ನು ಕೈಬಿಡಿ ಎಂಬ, ಈ ಹಿಂದಿನ ಎಡಿಜಿಪಿ ಮೇಘರಿಖ್ ಅವರ ಕೋರಿಕೆಯನ್ನು ಡಿಪಿಎಆರ್‌ ತಳ್ಳಿಹಾಕಿದೆ. ಸದ್ಯ ಪರಿಷ್ಕೃತ ಪ್ರಸ್ತಾವನೆಯೊಂದಿಗೆ ಕೈಪಿಡಿಯನ್ನು ಮರುಸಲ್ಲಿಸಿ ಎಂದೂ ಸೂಚಿಸಿದೆ

ಮಹಾಂತೇಶ್ ಜಿ

ಕರ್ನಾಟಕ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೀಗ ಹತ್ತಿರತ್ತಿರ ಎರಡು ವರ್ಷ. ವಿಪರ್ಯಾಸ ಎಂದರೆ, ಸ್ಥಾಪನೆಯಾದ ದಿನದಿಂದ ಈವರೆಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಕನಿಷ್ಠ ನಿಯಮಾವಳಿಗಳನ್ನು ಒಳಗೊಂಡ ಪ್ರತ್ಯೇಕವಾದ ಕೈಪಿಡಿಯೂ ಇಲ್ಲ.

ನಿಯಮಾವಳಿಗಳನ್ನು ರೂಪಿಸಲು ಎಸಿಬಿಯ ಎಡಿಜಿಪಿ ಆಗಿದ್ದ ಗಗನ್‌ದೀಪ್‌ ಮುಂದಾಗಿದ್ದರು. ಅವರ ವರ್ಗಾವಣೆ ನಂತರ ಕಾರ್ಯಭಾರ ವಹಿಸಿಕೊಂಡಿದ್ದ ಎಡಿಜಿಪಿ ಮೇಘರಿಖ್ ಅದಕ್ಕೆ ಅಡ್ಡಗಾಲು ಹಾಕಿದ್ದ ವಿಚಾರವೂ ಈಗ ಬಯಲಾಗಿದೆ. ಈ ಬಗ್ಗೆ 'ದಿ ಸ್ಟೇಟ್‌' ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲಾತಿ, ಪತ್ರಗಳನ್ನು ಪಡೆದುಕೊಂಡಿದೆ.

ನಿಯಾಮಾವಳಿಗಳನ್ನು ಒಳಗೊಂಡ ಕೈಪಿಡಿಯನ್ನು ವರ್ಷದ ಹಿಂದೆಯೇ ಆಗಿನ ಎಡಿಜಿಪಿ ಗಗನ್‌ದೀಪ್‌ ಅವರು ರೂಪಿಸಿದ್ದರು. ಅದಕ್ಕೆ ಅನುಮೋದನೆ ಕೋರಿ ಸರ್ಕಾರಕ್ಕೂ ಕಳಿಸಿದ್ದರು. ಕಾನೂನು ಇಲಾಖೆಯೂ ಅದಕ್ಕೆ ಒಪ್ಪಿಗೆ ನೀಡಿತ್ತು. ಅಲ್ಲದೆ, ಅಂದಿನ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್‌ ಅವರು ಕೈಪಿಡಿಯಲ್ಲಿದ್ದ ಕೆಲ ಅಂಶಗಳನ್ನು ಮಾರ್ಪಡಿಸಿ ಒಪ್ಪಿಗೆ ಸೂಚಿಸಿದ್ದರು. ಇನ್ನೇನು ಅದು ಕಾರ್ಯರೂಪಕ್ಕೆ ಬರುತ್ತದೆ ಎಂದು ನಿರೀಕ್ಷಿಸಿದ್ದ ಹೊತ್ತಿನಲ್ಲೇ ಗಗನ್‌ದೀಪ್‌ ಅವರನ್ನು ವರ್ಗಾಯಿಸಲಾಗಿತ್ತು.

ಎಸಿಬಿಯ ತನಿಖೆ ಸೇರಿದಂತೆ ದೈನಂದಿನ ಆಡಳಿತದಲ್ಲಿ ಅನುಸರಿಸಬೇಕಾದ ಕ್ರಮಗಳ ವಿವರ ಮತ್ತು ಮಾರ್ಗಸೂಚಿಗಳನ್ನು ಒಳಗೊಂಡ ಕೈಪಿಡಿ ರೂಪಿಸಲಾಗಿತ್ತು. ಅದನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲು ಸರ್ಕಾರದಿಂದ ಅನುಮೋದನೆ ದೊರಕಿಸುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2016ರ ಜು.5ರಂದು ಕೈಪಿಡಿ ಸಲ್ಲಿಕೆ ಆಗಿತ್ತು.

ಕೈಪಿಡಿಯಲ್ಲಿ ಏನಿತ್ತು?: ಎಸಿಬಿ ಈ ಮೊದಲು ಅನುಮೋದನೆಗೆ ಸಲ್ಲಿಸಿದ್ದ ಕೈಪಿಡಿಯು ಒಟ್ಟು 16 ಅಧ್ಯಾಯಗಳನ್ನು ಒಳಗೊಂಡಿದ್ದು, 179 ಪುಟಗಳಿವೆ. ಅಧಿಕಾರಿಗಳು, ಕಾನೂನು ವಿಭಾಗದ ಕರ್ತವ್ಯ ಮತ್ತು ಜವಾಬ್ಧಾರಿಗಳನ್ನು ಈ ಅಧ್ಯಾಯಗಳು ಒಳಗೊಂಡಿವೆ. ದೂರು, ಮಾಹಿತಿಗಳ ಪರಿಶೀಲನೆ, ಪ್ರಾಥಮಿಕ ತನಿಖೆ, ಪರಾಮರ್ಶೆ, ಪ್ರಕರಣಗಳ ದಾಖಲಾತಿ, ತನಿಖೆ, ತನಿಖೆಯ ಮೇಲ್ವಿಚಾರಣೆ, ದಸ್ತಗಿರಿ, ಕಸ್ಟಡಿ, ಜಾಮೀನು, ರಿಮ್ಯಾಂಡ್‌ ವಿಧಾನ, ಶೋಧನೆ, ವಶ, ವಶಪಡಿಸಿಕೊಂಡ ದಾಖಲಾತಿ, ಆಸ್ತಿಗಳ ನಿರ್ವಹಣೆ, ನ್ಯಾಯಾಲಯ ಪ್ರಗತಿ, ಸಿಬ್ಬಂದಿ ನೀತಿ, ನಿರ್ವಹಣೆ, ಎಸಿಬಿಯ ಮಾಧ್ಯಮ ನೀತಿ ಸೇರಿದಂತೆ ವಿವಿಧ ಅಂಶಗಳು ಕೈಪಿಡಿಯಲ್ಲಿ ಇರುವುದು ತಿಳಿದುಬಂದಿದೆ.

ಇದನ್ನು ಕಾನೂನು ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ ಅನುಮೋದಿಸಿತ್ತು. "ಈ ಹಿಂದೆ ಭ್ರಷ್ಟಾಚಾರ ತಡೆ ನಿಯಮದಡಿಯ ತನಿಖೆಯೂ ಸೇರಿದಂತೆ ಪ್ರಕರಣಗಳನ್ನು ನಿರ್ವಹಿಸುತ್ತಿದ್ದ ಲೋಕಾಯುಕ್ತ ಪೊಲೀಸ್‌ ಕಾರ್ಯವಿಧಾನ ಮತ್ತು ಮಾರ್ಗದರ್ಶಿ ಕೈಪಿಡಿಯಲ್ಲಿ ಒಳಗೊಂಡಿದ್ದಂಥ ಎಲ್ಲ ಅಂಶಗಳು ಪ್ರಸ್ತುತ ಕರಡು ಕೈಪಿಡಿಯಲ್ಲಿ ಕಂಡುಬರುತ್ತಿವೆ. ಈ ಕೈಪಿಡಿಯು ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯಕಲಾಪಗಳಿಗೆ ಪೂರಕವಾಗಿವೆ. ಇದನ್ನು ಅನುಮೋದಿಸಬಹುದು," ಎಂದು ಕಾನೂನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹಮ್ಮದ್‌ ಇಸ್ಮಾಯಿಲ್ (ಪುಟ ಸಂಖ್ಯೆ:5)‌ ಅವರು ಅಭಿಪ್ರಾಯಪಟ್ಟಿದ್ದರು.

ಗಗನ್‌ದೀಪ್‌ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಬಂದಿದ್ದ ಮತ್ತೊಬ್ಬ ಎಡಿಜಿಪಿ ಮೇಘರಿಖ್‌ ಅವರು, "ಕೈಪಿಡಿ ಅವಶ್ಯಕತೆಯೇ ಇಲ್ಲ. ಹೀಗಾಗಿ ಕೈಪಿಡಿ ಪ್ರಸ್ತಾವನೆಯನ್ನು ಸ್ಥಗಿತಗೊಳಿಸಬೇಕು," ಎಂದು ಸರ್ಕಾರವನ್ನು ಕೋರಿದ್ದರು. ಆನಂತರ ಅವರನ್ನೂ ವರ್ಗಾವಣೆ ಮಾಡಲಾಗಿತ್ತು.

"ಭ್ರಷ್ಟಾಚಾರ ನಿಗ್ರಹ ದಳ ಕೈಪಿಡಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯಿಂದ ಸ್ಪಷ್ಟ ಮಾಹಿತಿ ಕೋರಲಾಗಿತ್ತು. ಆದರೆ ಈ ಕೈಪಿಡಿಯ ಅವಶ್ಯಕತೆಯೇ ಎಸಿಬಿಗೆ ಕಂಡುಬಂದಿರುವುದಿಲ್ಲ. ಆದ್ದರಿಂದ ಕೈಪಿಡಿಯ ಪ್ರಸ್ತಾವನೆಯನ್ನು ಸ್ಥಗಿತಗೊಳಿಸಬೇಕು,” ಎಂದು‌, 2017ರ ಜು.7ರಂದು ಡಿಪಿಎಆರ್‌ನ ಸರ್ಕಾರದ ಕಾರ್ಯದರ್ಶಿಗೆ ಮೇಘರಿಖ್‌ ಪತ್ರ ಬರೆದಿದ್ದರು. ಪ್ರಸ್ತಾವನೆಯನ್ನು ಹಿಂಪಡೆಯುವ ಬಗ್ಗೆ ಅವರು ಯಾವುದೇ ಸಮರ್ಥನೆಗಳನ್ನು ಉಲ್ಲೇಖಿಸದೆ ಇರುವುದು ಅವರ ಪತ್ರದಿಂದ ಗೊತ್ತಾಗಿದೆ.

ಒಂದು ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಯಮಾವಳಿಗಳನ್ನೊಳಗೊಂಡ ಪ್ರತ್ಯೇಕ ಮ್ಯಾನುಯಲ್‌ ಬೇಕು.ಪೊಲೀಸ್‌ನ ಎಲ್ಲಾ ವಿಭಾಗಗಳಿಗೂ ಸಂಬಂಧಿಸಿರುವ ಸಿಆರ್‌ಪಿಸಿಯಲ್ಲಿ ಸ್ಪಷ್ಟ ನಿರ್ದೇಶನಗಳಿಲ್ಲ. ಎಸಿಬಿ ಕಾರ್ಯನಿರ್ವಹಿಸಲು ಖಚಿತತೆ ಮತ್ತು ಸ್ಪಷ್ಟತೆ ಇರಬೇಕೆಂದರೆ ಪ್ರತ್ಯೇಕವಾದ ಮ್ಯಾನುಯಲ್‌ ಅಗತ್ಯವಿದೆ.
ಓಂಪ್ರಕಾಶ್‌, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ

ಮೇಘರಿಖ್‌ ಅವರ ಕೋರಿಕೆಯನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಜಾಗೃತ ವಿಭಾಗ) ಇದೀಗ ಸಾರಾಸಗಟಾಗಿ ತಳ್ಳಿಹಾಕಿದೆ. ಕೈಪಿಡಿ ಹೊರಡಿಸುವ ಬಗ್ಗೆ ಪ್ರಸ್ತಾವನೆಯನ್ನು ಪರಿಷ್ಕೃತಗೊಳಿಸಿ ಮತ್ತೊಮ್ಮೆ ಸಲ್ಲಿಸಿ ಎಂದು 2017ರ ನ.10ರಂದು ಎಸಿಬಿಗೆ ಸೂಚಿಸಿರುವ ವಿಚಾರ (ಪುಟ ಸಂಖ್ಯೆ:15) ಗೊತ್ತಾಗಿದೆ.

ಎಸಿಬಿಗೆ ಈವರೆಗೂ ಪೂರ್ಣಪ್ರಮಾಣದ ಎಡಿಜಿಪಿ ನೇಮಕವಾಗದ ಕಾರಣ ಪರಿಷ್ರ್ಕತಗೊಂಡಿರುವ ಪ್ರಸ್ತಾವನೆ ಮತ್ತು ಕೈಪಿಡಿ ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಸ್ವತಂತ್ರ ತನಿಖಾ ಸಂಸ್ಥೆಯಾಗಿರುವ ಎಸಿಬಿಗೆ ಪ್ರತ್ಯೇಕವಾದ ಕಾರ್ಯನಿರ್ವಹಣಾ ಕೈಪಿಡಿ ಇಲ್ಲದ ಕಾರಣ, ಸಿಆರ್‌ಪಿಸಿ ನಿಯಮಾವಳಿಗಳ ಪ್ರಕಾರವೇ ಈಗಲೂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಡಿಪಿಎಆರ್‌ನ (ಜಾಗೃತ ವಿಭಾಗ) ಉಪಕಾರ್ಯದರ್ಶಿ ಪಲ್ಲವಿ ಅಕುರಾತಿ ಅವರು, "ರಾಜ್ಯದಲ್ಲಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೈಪಿಡಿ ಇಲ್ಲ. ಇದರಿಂದ ಭ್ರಷ್ಟಾಚಾರ ತಡೆ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇಲ್ಲದ ಬಗ್ಗೆ ಸಾರ್ವಜನಿಕರಿಂದ ಟೀಕೆ ಎದುರಿಸಬಹುದಾದ ಸಂಭವವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪರಿಷ್ಕೃತಗೊಳಿಸಿ ಕೈಪಿಡಿಯೊಂದಿಗೆ ಮರುಸಲ್ಲಿಸಲು ಕೋರಬಹುದು," ಎಂದು (ಪುಟ ಸಂಖ್ಯೆ:15) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, "ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ನೆರೆಹೊರೆ ರಾಜ್ಯಗಳಲ್ಲಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೈಪಿಡಿ ಇದೆ. ಇದರಿಂದಾಗಿ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ, ಕಾರ್ಯಕಲಾಪಗಳಿಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳೂ ಲಭ್ಯವಿದೆ. ಇದರಿಂದ ಸಾರ್ವಜನಿಕರಿಗೆ ಪಾರದರ್ಶಕತೆ ಗೋಚರವಾಗುತ್ತದೆ,” ಎಂದು ಹೇಳಿದ್ದಾರೆ (ಪುಟ ಸಂಖ್ಯೆ:15).

karnataka ಕರ್ನಾಟಕ Anti Corruption Bureau ACB Manual ADGP Megharikh Om Prakash ಭ್ರಷ್ಟಾಚಾರ ನಿಗ್ರಹ ದಳ ಕೈಪಿಡಿ ಎಡಿಜಿಪಿ ಮೇಘರಿಖ್ ಓಂಪ್ರಕಾಶ್
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು