ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಕೇರಳದ ವಿವಾದಿತ ಕಂಪನಿ ತೆಕ್ಕೆಗೆ ರಾಜೀವ್ ಆರೋಗ್ಯ ವಿವಿ ಗಣಕೀಕರಣ ಯೋಜನೆ

ಬೆಂಗಳೂರಿನಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಸಿಎಜಿಯಿಂದ ಹಲವು ಆಕ್ಷೇಪಣೆಗಳಿಗೆ ಒಳಗಾಗಿರುವ ಕೇರಳದ ಕೆಲ್ಟ್ರಾನ್‌ ಕಂಪನಿಯಿಂದ ಹಾರ್ಡ್‌ವೇರ್‌ ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ

ಮಹಾಂತೇಶ್ ಜಿ

ಕೇರಳ ಸರ್ಕಾರ ಸ್ವಾಮ್ಯದ ಕೆಲ್ಟ್ರಾನ್‌ (ಕೇರಳ ಸ್ಟೇಟ್‌ ಎಲೆಕ್ಟ್ರಾನಿಕ್ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌) ಸಂಸ್ಥೆಗೆ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಎಂಡ್‌-ಟು-ಎಂಡ್‌ ಕಂಪ್ಯೂಟರೀಕರಣಗೊಳಿಸುವ ಭಾಗವಾಗಿ ಹಾರ್ಡ್‌ವೇರ್‌‌ ಖರೀದಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲ್ಟ್ರಾನ್‌, ಸಿಎಜಿ ವರದಿಯಲ್ಲಿ ತೀವ್ರ ಆಕ್ಷೇಪಣೆಗಳಿಗೆ ಗುರಿಯಾಗಿರುವುದು ಇದಕ್ಕೆ ಕಾರಣ.

ಹಾರ್ಡ್‌ವೇರ್‌ ಖರೀದಿ ಮೊತ್ತ ೫೧.೩೪ ಕೋಟಿ ರು.ಗಳದ್ದಾಗಿದೆ. ಈ ಮೊದಲು ಎಂಡ್‌-ಟು-ಎಂಡ್‌ ಕಂಪ್ಯೂಟರೀಕರಣದ ಇಡೀ ಯೋಜನೆಗೆ ಅಂದಾಜಿಸಿದ್ದ ೧೦ ಕೋಟಿ ರು. ಮೊತ್ತಕ್ಕೆ ಸಿಂಡಿಕೇಟ್ ಒಪ್ಪಿಗೆ ನೀಡಿತ್ತು. ಆದರೆ, ೪೧.೩೪ ಕೋಟಿ ರು.ಹೆಚ್ಚಳ ಮಾಡಿ, ಒಟ್ಟು ೫೧.೩೪ ಕೋಟಿ ರು.ಮೊತ್ತಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಗಣಕೀಕರಣ ಯೋಜನೆ ಕುರಿತ ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ನಡಾವಳಿಯ ಪ್ರತಿ

ಅಲ್ಲದೆ, ಸಾಫ್ಟ್‌ವೇರ್ ‌ಅಭಿವೃದ್ಧಿಪಡಿಸದೆ ಹಾರ್ಡ್‌ವೇರ್‌ ಖರೀದಿಗೆ ವಿಶ್ವವಿದ್ಯಾಲಯ ಈ ಹಿಂದೆ ಮುಂದಾಗಿತ್ತು. ವಿವಿ ಕೈಗೊಂಡಿದ್ದ ನಿರ್ಧಾರವನ್ನು ಸಿಂಡಿಕೇಟ್‌ ಸತತವಾಗಿ ವಿರೋಧಿಸುತ್ತಲೇ ಬಂದಿದೆ. ಆದರೂ ರಾಜ್ಯ ಸರ್ಕಾರ ಅದೇ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇರಳ ಸರ್ಕಾರ ಸ್ವಾಮ್ಯದ ಕೆಲ್ಟ್ರಾನ್‌ ಕಂಪನಿಗೆ ನೀಡುವ ಮೂಲಕ ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಇದೇ ಯೋಜನೆಗೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ರಾಜ್ಯದ ಕಿಯೋನಿಕ್ಸ್‌ ಕೂಡ ಭಾಗವಹಿಸಿತ್ತಾದರೂ ಅದನ್ನು ವಿಶ್ವವಿದ್ಯಾಲಯ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ವಿಪರ್ಯಾಸ ಎಂದರೆ, ಕೆಲ್ಟ್ರಾನ್‌ ಕಂಪನಿ ಬಗ್ಗೆ ಪ್ರಧಾನ ಮಹಾಲೇಖಪಾಲರು (ಸಿಎಜಿ) ೨೦೧೬ರಲ್ಲಿ ಹಲವು ಆಕ್ಷೇಪಣೆಗಳನ್ನು ಎತ್ತಿರುವುದು ತಿಳಿದುಬಂದಿದೆ. ಬಹುಮುಖ್ಯವಾಗಿ, ಕೇರಳ ರಾಜ್ಯದ ಆರ್ಥಿಕ ಸಂಹಿತೆ, ಪಾರದರ್ಶಕ ಕಾಯ್ದೆ, ಕೇಂದ್ರ ವಿಚಕ್ಷಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆ, ಟೆಂಡರ್‌ ನಡೆಸದೆ ಖಾಸಗಿ ಏಜೆನ್ಸಿಗಳ ಜೊತೆ ಕೋಟ್ಯಂತರ ರುಪಾಯಿ ಮೊತ್ತದ ಯೋಜನೆಗಳಿಗೆ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡಿರುವುದರ ಬಗ್ಗೆ ವರದಿಯಲ್ಲಿ ಆಕ್ಷೇಪಿಸಿತ್ತು. ಹಾಗೆಯೇ, ಕೆಲ್ಟ್ರಾನ್‌ ಕಂಪನಿಯಿಂದಾಗಿ ಕೇರಳ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬುದನ್ನೂ ವರದಿ ಬೆಳಕಿಗೆ ತಂದಿತ್ತು. ಸಿಎಜಿ ವರದಿಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಕೆಲ್ಟ್ರಾನ್ ಕಂಪನಿ ಕುರಿತ ಸಿಎಜಿ ವರದಿಯ ಪ್ರತಿ

ಈ ಕಂಪನಿಯಿಂದ ಹಾರ್ಡ್‌ವೇರ್‌ ಖರೀದಿಸಲು ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆಯುವ ಮುನ್ನ ಕೆಲ್ಟ್ರಾನ್‌ ಕಂಪನಿ ಬಗ್ಗೆ ಸಿಎಜಿ ಆಕ್ಷೇಪಿಸಿರುವುದನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಗಮನಿಸಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ಸಾಫ್ಟ್‌ವೇರ್‌ ಅಭಿವೃದ್ಧಿಯಾಗದೆ ಇದ್ದರೂ ಹಾರ್ಡ್‌ವೇರ್‌ ಖರೀದಿಸಲು ಮುಂದಾಗಿದ್ದ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಸಿಂಡಿಕೇಟ್‌ ಸಭೆ (೨೦೧೭ರ ಡಿ.೨೧) ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ವಿಚಾರ ಸಭೆಯ ನಡಾವಳಿಯಿಂದ ಗೊತ್ತಾಗಿದೆ.

ಎಂಡ್‌-ಟು-ಎಂಡ್‌ ಆಟೋಮೇಷನ್‌ (ಗಣಕೀಕರಣ) ಅಳವಡಿಸುವ ಸಂಬಂಧ ಹಾರ್ಡ್‌ವೇರ್‌ (ಸಿಸ್ಟಂ ಇಂಟಿಗ್ರೇಷನ್‌) ಖರೀದಿಸಲು ತಾಂತ್ರಿಕ ಪರಿಣಿತರ ಸಮಿತಿ ನಿರ್ಧರಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ, ಆ ಸಮಿತಿ ಇನ್ನೂ ರಚನೆಯಾಗಿಲ್ಲ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ಕೆಲಸವನ್ನು ಎನ್‌ಐಸಿಗೆ ವಹಿಸಿತ್ತು. ಆದರೆ, ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವುದಿಲ್ಲ ಎಂದು ಎನ್‌ಐಸಿ ಈ ಹಿಂದೆಯೇ ವಿಶ್ವವಿದ್ಯಾಲಯಕ್ಕೆ ಲಿಖಿತವಾಗಿ ತಿಳಿಸಿತ್ತು ಎಂದು ವಿವಿಯ ಉನ್ನತ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ. ಈ ಮಧ್ಯೆ, ಕೆಲ್ಟ್ರಾನ್‌ ಕಂಪನಿಯಿಂದ ೫೧.೩೪ ಕೋಟಿ ಮೊತ್ತದಲ್ಲಿ ಹಾರ್ಡ್‌ವೇರ್‌ ಖರೀದಿಸಲು ಸಚಿವ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆ ಪಡೆಯುವಲ್ಲಿ ವಿಶ್ವವಿದ್ಯಾಲಯದ ಆಡಳಿತ ವರ್ಗ ಯಶಸ್ವಿಯಾಗಿದೆ.

ಹಾಗೆಯೇ, ಪದ್ಮನಾಭಸ್ವಾಮಿ ದೇಗುಲದ ಆಂತರಿಕ ಭದ್ರತೆಯ ವ್ಯವಸ್ಥೆಗಾಗಿ ೨೫ ಲಕ್ಷ ರು. ಅಧಿಕ ಮೊತ್ತದ ಉಪಕರಣಗಳನ್ನು ಖರೀದಿಸಿತ್ತು ಎಂಬುದನ್ನು ವರದಿ ಪತ್ತೆಹಚ್ಚಿತ್ತು. "ಕೆಲ್ಟ್ರಾನ್‌ ನೇರವಾಗಿ ಮತ್ತು ತನ್ನ ವ್ಯವಹಾರ ಪಾಲುದಾರ ಕಂಪನಿಯಾಗಿರುವ ಸಿಡ್ಕೋ ಟೆಂಡರ್‌ ಆಹ್ವಾನಿಸದೆ ೫೧.೯೦ ಕೋಟಿ ರು.ಮೊತ್ತದ ೧೨ ಕಾರ್ಯಕಾರಿ ಆದೇಶ ಮತ್ತು ಎಂಟು ಕೋಟಿ ರು.ಮೊತ್ತದ ನಾಲ್ಕು ಕಾರ್ಯಕಾರಿ ಆದೇಶಗಳನ್ನು ಏಜೆನ್ಸಿಗಳಿಗೆ ನೀಡಿದೆ," ಎಂದು ಸಿಎಜಿ ಆಕ್ಷೇಪಿಸಿದೆ.

ಸಿಎಜಿ ಆಕ್ಷೇಪಣೆಗಳೇನು?: ಕೇರಳ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಪಡೆದಿರುವ ಕೆಲ್ಟ್ರಾನ್‌ ಕಂಪನಿ, ಕ್ರಮಬದ್ಧವಾಗಿ ಟೆಂಡರ್‌ ಪ್ರಕ್ರಿಯೆಗಳನ್ನು ನಡೆಸಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ. ಪದ್ಮನಾಭಸ್ವಾಮಿ ದೇಗುಲಕ್ಕೆ ಇಂಟಿಗ್ರೇಟೆಡ್‌ ಸೆಕ್ಯುರಿಟಿ ವ್ಯವಸ್ಥೆಗೊಳಿಸಲು ಕೆಲ್ಟ್ರಾನ್‌ ಮುಂಗಡವಾಗಿ ೯.೫೪ ಕೋಟಿ ರು. ಪಡೆದಿತ್ತು. ಇದರಲ್ಲಿ ವೇಗವಾಗಿ ಮುಚ್ಚಿಕೊಳ್ಳುವ ಬಾಗಿಲುಗಳನ್ನು ಅಳವಡಿಸಲು ೧.೬೧ ಕೋಟಿ ರು.ತಗುಲಿತ್ತು. ಆದರೆ, ಇದಕ್ಕೆ ದೇಗುಲದ ಕಾರ್ಯಕಾರಿ ಸಮಿತಿ ಅನುಮತಿ ನೀಡಿರಲಿಲ್ಲ.

ಇದನ್ನೂ ಓದಿ : ಶೋಧನಾ ಸಮಿತಿಗಳೇ ಅಕ್ರಮವಾಗಿರುವಾಗ ಅರ್ಹ ಕುಲಪತಿ ನೇಮಕ ಹೇಗೆ ಸಾಧ್ಯ?

ಅದೇ ರೀತಿ, ಸೌರಶಕ್ತಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಕೆಲ್ಟ್ರಾನ್‌ಗೆ ಯಾವುದೇ ಪೂರ್ವಾನುಭವ ಇರದಿದ್ದರೂ ‌ಕೇರಳದ ಕೇಂದ್ರ ಕಾರಾಗೃಹಕ್ಕೆ ೭.೨೭ ಕೋಟಿ ರು. ಮೊತ್ತದಲ್ಲಿ ಸೌರವಿದ್ಯುತ್‌ ಫಲಕಗಳನ್ನು ಅನುಷ್ಠಾನಗೊಳಿಸಲು ಪ್ರಸ್ತಾವನೆ ಸಲ್ಲಿಸಿತ್ತು. ನಂತರ ಈ ಯೋಜನೆ ಅನುಷ್ಠಾನಗೊಳಿಸಲು ರಾಜಸ್ಥಾನದ ಎಲೆಕ್ಟ್ರಾನಿಕ್ಸ್‌ ಇನ್ಸುಟ್ರುಮೇಷನ್‌ ಲಿಮಿಟೆಡ್‌ ಮತ್ತು ಎಸ್‌ಜಿಪಿಎಲ್‌ಗೆ ಟೆಂಡರ್‌ ನಡೆಸದೆಯೇ ಉಪಗುತ್ತಿಗೆ ನೀಡಿತ್ತು . ಆದರೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಎಸ್‌ಜಿಪಿಎಲ್‌ ಅಸಾಮರ್ಥ್ಯ ಹೊಂದಿತ್ತು. ಹೀಗಾಗಿ, ಕೆಲ್ಟ್ರಾನ್‌ ಮೆಗಾಟೆಕ್‌ ಪವರ್‌ ಎಕ್ವಿಪ್‌ಮೆಂಟ್ಸ್‌ಗೆ ಕಾರ್ಯಕಾರಿ ಅದೇಶ ನೀಡಿತ್ತಾದರೂ ದರ ವ್ಯತ್ಯಾಸದಿಂದಾಗಿ ೦.೫೫ ಕೋಟಿ ರು. ನಷ್ಟಕ್ಕೆ ಕಾರಣವಾಗಿತ್ತು ಎಂಬ ವಿಚಾರ ವರದಿಯಿಂದ ತಿಳಿದುಬಂದಿದೆ.

ಕೇರಳ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಹಲವು ಯೋಜನೆಗಳನ್ನು ಪಡೆದಿದ್ದ ಕೆಲ್ಟ್ರಾನ್‌ ಕಂಪನಿ, ಯೋಜನೆಗಳ ಅನುಷ್ಠಾನಗೊಳಿಸಲು ಅಲ್ಪಾವಧಿ ಟೆಂಡರ್‌ಗಳನ್ನೂ ಕರೆದಿರಲಿಲ್ಲ. ಕೆಲವು ಯೋಜನೆಗಳಿಗೆ ಟೆಂಡರ್‌ ಕರೆದಿದ್ದರೂ ಸೂಕ್ತವಾಗಿ ಪ್ರಚಾರ ಮಾಡಿರಲಿಲ್ಲ. ಟೆಂಡರ್‌ ಸಲ್ಲಿಸಲು ಕಾಲಾವಕಾಶವನ್ನೂ ನೀಡಿರಲಿಲ್ಲ. ಇದರಿಂದ ಸ್ಪರ್ಧಾತ್ಮಕ ದರದ ಬಿಡ್‌ಗಳ ಸಂಖ್ಯೆ ಇಳಿಕೆಯಾಗಿತ್ತು ಎಂಬ ವಿಚಾರ ಗೊತ್ತಾಗಿದೆ.

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಲ ಅವರ ಪ್ರತಿಕ್ರಿಯೆ ಪಡೆಯಲು ‘ದಿ ಸ್ಟೇಟ್‌’ ಪ್ರಯತ್ನಿಸಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಕರ್ನಾಟಕ ಸರ್ಕಾರ Bangalore Karnataka Government ಸಿಎಂ ಸಿದ್ದರಾಮಯ್ಯ CM Siddaramaiah ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಡಳಿತಾತ್ಮಕ ಅನುಮೋದನೆ ಸಿಂಡಿಕೇಟ್ ಗಣಕೀಕರಣ ಯೋಜನೆ ಸಚಿವ ಸಂಪುಟ ಅನುಮೋದನೆ ಕೆಲ್ಟ್ರಾನ್‌ ಸಚಿವ ಶರಣಪ್ರಕಾಶ್ ಪಾಟೀಲ್ KELTRON Rajiv Gandhi University of Health Sciences Cabinet Approval Minister Sharan Prakash Patil
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು