ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಶಶಿಕಲಾ ಅಕ್ರಮ ಸಂಭಾವನೆ ಪ್ರಕರಣ; ವಿನಯಕುಮಾರ್‌ ವಿಚಾರಣೆ ಹೇಳಿದ್ದೇನು?

ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದ ಜೈಲು ಅಕ್ರಮ ಪ್ರಕರಣ ಕುರಿತು ಸಲ್ಲಿಕೆಯಾಗಿದ್ದ ವಿಚಾರಣೆ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಪರಸ್ಪರ ಆರೋಪ ಮಾಡಿದ್ದ ನಿವೃತ್ತ ಎಡಿಜಿಪಿ ಸತ್ಯನಾರಾಯಣ ರಾವ್‌ ಮತ್ತು ಡಿಐಜಿ ಡಿ ರೂಪಾ ಇಬ್ಬರ ವಿರುದ್ಧವೂ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ

ಮಹಾಂತೇಶ್ ಜಿ

ಕರ್ನಾಟಕ ಕಾರಾಗೃಹಗಳ ಎಡಿಜಿಪಿಯಾಗಿದ್ದ ಸತ್ಯನಾರಾಯಣ ರಾವ್‌ ಅವರು ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಂದ ೨ ಕೋಟಿ ರು. ಅಕ್ರಮ ಸಂಭಾವನೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರಕರಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹಸ್ತಾಂತರವಾಗಿದೆ.

ವಿಶೇಷ ಎಂದರೆ, ಈ ಆರೋಪದ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯಕುಮಾರ್‌ ಅವರ ನೇತೃತ್ವದ ವಿಚಾರಣಾ ತಂಡ ತನಿಖೆಯನ್ನೇ ಮಾಡಿಲ್ಲ. ವಿಚಾರಣೆ ತಂಡ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಿಂದ ಈ ವಿಚಾರ ತಿಳಿದುಬಂದಿದೆ.

ವರದಿ ಆಧರಿಸಿ ಆರೋಪದ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿ ಆದೇಶಿಸಿದೆ. ವಿಚಾರಣೆ ವರದಿ ಮತ್ತು ಶಿಫಾರಸುಗಳನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ನಾಲ್ಕು ಆದೇಶಗಳನ್ನು ಹೊರಡಿಸಿದೆ. ಈ ಆದೇಶಗಳ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿವೆ.

ಎಸಿಬಿಗೆ ಹಸ್ತಾಂತರವಾಗಿರುವ ಆದೇಶದ ಪ್ರತಿ

ಅಲ್ಲದೆ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ೧೯೮೮ರ ಕಲಂ ೧೩(೧)(ಸಿ) ಹಾಗೂ ೧೩(೨)ರ ಅನ್ವಯ, ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲು ರಾಜ್ಯ ಸರ್ಕಾರ ಫೆ.೨೬ರಂದು ಆದೇಶಿಸಿದೆ. ‘ಈ ಪ್ರಕರಣವನ್ನು ತನಿಖೆ ನಡೆಸಿ ೩ ತಿಂಗಳಗೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಈ ಪ್ರಕರಣ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯಕುಮಾರ್‌ ಅವರ ನೇತೃತ್ವದ ವಿಚಾರಣಾ ತಂಡ ಕಳೆದ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿತ್ತು. ವರದಿಯನ್ನು ಅಂಗೀಕರಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸಿತ್ತು. ಸರ್ಕಾರದ ವಿಳಂಬ ಧೋರಣೆ ಕುರಿತು ‘ದಿ ಸ್ಟೇಟ್‌’ ವರದಿ ಪ್ರಕಟಿಸಿತ್ತು. ವರದಿ ಪ್ರಕಟಿಸಿದ ೨ ತಿಂಗಳ ನಂತರ ರಾಜ್ಯ ಸರ್ಕಾರ ವರದಿಯನ್ನು ಅಂಗೀಕರಿಸಿದೆ.

ಇದನ್ನೂ ಓದಿ : ಜೈಲು ಅಕ್ರಮ; ವರದಿ ಸಲ್ಲಿಸಿ ತಿಂಗಳಾದರೂ ದೊರೆಯದ ಅನುಮೋದನೆ

"ವಿಚಾರಣೆಯಲ್ಲಿ ಭ್ರಷ್ಟಾಚಾರದ ಆರೋಪ ಮತ್ತು ಯಾವುದಾದರೂ ಹಣ ವರ್ಗಾವಣೆ ಜಾಡು ಹಿಡಿಯುವ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅಕ್ರಮ ಸಂಭಾವನೆ ಪಡೆದಿದ್ದಾರೆಂಬ ಬಗ್ಗೆ ತನಿಖೆ ನಡೆಸಿರುವುದಿಲ್ಲ ಎಂದು ವಿಚಾರಣೆ ತಂಡ ವರದಿ ಸಲ್ಲಿಸಿದೆ,’’ ಎಂಬ ವಿಚಾರ ಸರ್ಕಾರ ಹೊರಡಿಸಿರುವ ಆದೇಶದಿಂದ ತಿಳಿದುಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಕಾರಾಗೃಹದ ಹಿಂದಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌, ಅಧೀಕ್ಷಕಿ ಅನಿತಾ ಅವರ ವಿರುದ್ಧ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಇಬ್ಬರೂ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಕಾರಾಗೃಹಗಳ ಎಡಿಜಿಪಿ ಮೇಘರಿಖ್‌ ಅವರಿಗೆ ಸರ್ಕಾರ ಸೂಚಿಸಿದೆ.

ಅದೇ ರೀತಿ, ಎಚ್‌ ಎನ್‌ ಸತ್ಯನಾರಾಯಣ ರಾವ್‌ ಮತ್ತು ಡಿ ರೂಪಾ ಇವರು ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕುರಿತಂತೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

ಸತ್ಯನಾರಾಯಣರಾವ್‌ ಮತ್ತು ಡಿ ರೂಪಾ ವಿರುದ್ಧ ವಿಚಾರಣೆ ಆದೇಶದ ಪ್ರತಿ

ಕೇಂದ್ರ ಗೃಹ ಸಚಿವಾಲಯದ ೨೦೧೬ರ ‘ಮಾಡಲ್ ಪ್ರಿಸನ್ ಮ್ಯಾನ್ಯುಯಲ್’ ಪ್ರಕಾರ, ಪರಿಷ್ಕೃತ ಕಾರಾಗೃಹ ಕೈಪಿಡಿಯನ್ನು ೩ ತಿಂಗಳೊಳಗಾಗಿ ಸಲ್ಲಿಸಬೇಕು. ಬೆಂಗಳೂರು ಕೇಂದ್ರ ಕಾರಾಗೃಹವನ್ನೂ ಒಳಗೊಂಡಂತೆ ರಾಜ್ಯದ ಎಲ್ಲ ಜೈಲುಗಳಲ್ಲಿನ ಸಿಸಿ ಟಿವಿ ಕ್ಯಾಮೆರಾ, ಮೊಬೈಲ್‌ ಜಾಮರ್ಸ್‌ಗಳು ಚಾಲನೆಯಲ್ಲಿ ಇವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ಕಾಲಕಾಲಕ್ಕೆ ವರದಿ ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಸತ್ಯನಾರಾಯಣ ರಾವ್‌ ಅವರು ೨ ಕೋಟಿ ರುಪಾಯಿ ಪಡೆದಿದ್ದಾರೆ ಎಂದು ಕಾರಾಗೃಹಗಳ ಡಿಐಜಿ ಡಿ ರೂಪಾ ಅವರು ಮಾಡಿದ್ದ ಆರೋಪ ಭಾರಿ ವಿವಾದ ಎಬ್ಬಿಸಿತ್ತು. ಸದನದಲ್ಲಿಯೂ ಇದು ಪ್ರತಿಧ್ವನಿಸಿತ್ತು. ಹೀಗಾಗಿ, ತನಿಖೆ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ವಿನಯಕುಮಾರ್‌ ಅವರ ನೇತೃತ್ವದಲ್ಲಿ ವಿಚಾರಣೆ ತಂಡ ನೇಮಿಸಿತ್ತು.

ವಿಪರ್ಯಾಸ ಎಂದರೆ, ಅಕ್ರಮ ಸಂಭಾವನೆ ಪಡೆದಿದ್ದಾರೆ ಎಂಬ ಆರೋಪದ ಕುರಿತು ವಿಚಾರಣೆ ತಂಡ ತನಿಖೆಯನ್ನೇ ನಡೆಸಿಲ್ಲ. ಆರೋಪಿತ ಅಧಿಕಾರಿ ಮತ್ತು ಆರೋಪಿಸಿದ್ದ ಅಧಿಕಾರಿಯಿಂದ ಸಮಜಾಯಿಷಿ ಹೇಳಿಕೆಗಳನ್ನು ಪಡೆದಿದೆ. ಅಲ್ಲದೆ, ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನಷ್ಟೇ ಉಲ್ಲೇಖಿಸಿ ತನ್ನ ವರದಿ ನೀಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪರಪ್ಪನ ಅಗ್ರಹಾರ Parappana Agrahara ಸಿಎಂ ಸಿದ್ದರಾಮಯ್ಯ ಜಯಲಲಿತಾ Jayalalitha CM Siddaramaiah D Roopa ಡಿ ರೂಪಾ K Shashikala H N Satyanarayana Rao ಎಚ್ ಎನ್ ಸತ್ಯನಾರಾಯಣ ರಾವ್ ಕೆ ಶಶಿಕಲಾ Bribery Case ಭ್ರಷ್ಟಾಚಾರ ಪ್ರಕರಣ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು