ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಲೋಕಾಯುಕ್ತ ಭದ್ರತಾ ವೈಫಲ್ಯ; ಗುಪ್ತಚರ ವರದಿ ನಿರ್ಲಕ್ಷಿಸಿದ್ದ ಗೃಹ ಇಲಾಖೆ!

ಲೋಕಾಯುಕ್ತ ಸಂಸ್ಥೆಯ ಭದ್ರತಾ ವೈಫಲ್ಯಕ್ಕೆ ಆ ಸಂಸ್ಥೆ ಹೊಣೆ ಹೊರಲು ಸಿದ್ಧವಿಲ್ಲ. ಬದಲಿಗೆ, ಭದ್ರತೆ ಒದಗಿಸುವ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದು ಎಂದು ಹೇಳುತ್ತಿದೆ. ಆದರೆ, ಲೋಕಾಯುಕ್ತ ಸಂಸ್ಥೆಯೂ ನೆನಪೋಲೆ ಬರೆಯವುದರಲ್ಲೇ ಕಾಲಹರಣ ಮಾಡಿರುವುದು ಬಯಲಿಗೆ ಬಂದಿದೆ

ಮಹಾಂತೇಶ್ ಜಿ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪ್ರಧಾನ ಕಚೇರಿ ಮತ್ತು ಸಂಸ್ಥೆಯ ಇತರ ವಿಭಾಗಗಳಿಗೆ ಭದ್ರತಾ ವ್ಯವಸ್ಥೆಯ ಕುರಿತು ರಾಜ್ಯ ಗುಪ್ತಚರ ವಿಭಾಗ ತಪಾಸಣೆ ವರದಿ ಸಲ್ಲಿಸಿತ್ತು ಎಂಬ ಹೊಸ ಅಂಶ ಇದೀಗ ಬಹಿರಂಗವಾಗಿದೆ. ಆದರೆ, ವರದಿಯಲ್ಲಿ ಮಾಡಿದ್ದ ಶಿಫಾರಸುಗಳನ್ನು ಪೊಲೀಸ್‌ ಇಲಾಖೆ ಇದುವರೆಗೂ ಅನುಷ್ಠಾನ ಮಾಡದಿರುವುದು ಕೂಡ ಬೆಳಕಿಗೆ ಬಂದಿದೆ.

ಈ ಸಂಬಂಧ ಪೊಲೀಸ್‌ ಇಲಾಖೆ ವಹಿಸಿದ್ದ ನಿರ್ಲಕ್ಷ್ಯದ ಕುರಿತು ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್‌, ಪೊಲೀಸ್‌ ಇಲಾಖೆಯ ಮಹಾನಿರ್ದೇಶಕರು, ಆಯುಕ್ತರಿಗೆ ಪತ್ರ, ನೆನಪೋಲೆಗಳನ್ನು ಬರೆಯುವುದರಲ್ಲೇ ಕಾಲಹರಣ ಮಾಡಿದ್ದಾರೆಯೇ ವಿನಾ ಭದ್ರತೆ, ರಕ್ಷಣೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಲಾಖೆಯ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಲಾಖೆಯ ಉನ್ನತ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಭದ್ರತೆ, ರಕ್ಷಣೆ ಸಂಬಂಧ ಕನಿಷ್ಠ ಕ್ರಮಗಳನ್ನು ಕೈಗೊಳ್ಳುವ ಪರಿಣಾಮಕಾರಿ ಯತ್ನ ನಡೆಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಗೆಯೇ, ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಸಂಸ್ಥೆಯ ಪ್ರಧಾನ ಕಚೇರಿಯೂ ಸೇರಿದಂತೆ ಒಟ್ಟು ಐದು ಬ್ಲಾಕ್‌ಗಳಿಗೂ ಪ್ರತ್ಯೇಕವಾಗಿ ಭದ್ರತೆ, ರಕ್ಷಣೆ ಒದಗಿಸುವ ಸಂಬಂಧ ಪೂರಕ ಸಿಬ್ಬಂದಿ ಸೃಜಿಸಬೇಕು ಎಂಬ ಪ್ರಸ್ತಾವನೆ ಗೃಹ ಇಲಾಖೆ ಮುಂದಿತ್ತು. ಇದನ್ನು ಆಧರಿಸಿ ವಿಧಾನಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನಕ್ಕಷ್ಟೇ ಭದ್ರತೆ, ರಕ್ಷಣೆ ಒದಗಿಸುವ ಸಲುವಾಗಿ ಪೂರಕ ಸಿಬ್ಬಂದಿ ಸೃಜಿಸುವ ಸಂಬಂಧ ೨೦೦೬ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಯಲ್ಲಿ ಬಹುಮಹಡಿ ಕಟ್ಟಡವನ್ನು ಹೊರಗಿಡಲಾಗಿತ್ತು. ಈಗಲೂ ಅದೇ ಅಧಿಸೂಚನೆ ಚಾಲ್ತಿಯಲ್ಲಿದೆ. ಹೀಗಾಗಿ, ಬಹುಮಹಡಿ ಕಟ್ಟಡದಲ್ಲೇ ಇರುವ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರತ್ಯೇಕ ಭದ್ರತಾ ಸಿಬ್ಬಂದಿ ನಿಯೋಜಿತವಾಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ.

ಲೋಕಾಯುಕ್ತ ಕಚೇರಿಯಲ್ಲಿ ನೆಪಮಾತ್ರಕ್ಕೆ ಇರುವ ಮೆಟಲ್ ಡಿಟೆಕ್ಟರ್

ಕಳೆದ ೩ ವರ್ಷಗಳ ಹಿಂದೆಯೇ (೨೦೧೫) ಗುಪ್ತಚರ ವಿಭಾಗವು ಲೋಕಾಯುಕ್ತ ಸಂಸ್ಥೆಯಲ್ಲಿರುವ ಭದ್ರತೆ ಮತ್ತು ಲೋಪಗಳ ಕುರಿತು ತಪಾಸಣೆ ನಡೆಸಿ ವರದಿ ಸಲ್ಲಿಸಿತ್ತು. ಪೊಲೀಸ್ ಇಲಾಖೆಯ ಈ ದಿವ್ಯನಿರ್ಲಕ್ಷ್ಯದ ಪರಿಣಾಮವೇ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿತದಂತಹ ಘಟನೆ ನಡೆದಿದೆ ಎನ್ನುವ ಆರೋಪಕ್ಕೆ ಪುಷ್ಟಿ ದೊರೆತಿದೆ.

‘ದಿ ಸ್ಟೇಟ್‌’ ಜೊತೆ ಮಾತನಾಡಿದ ಲೋಕಾಯುಕ್ತ ಸಂಸ್ಥೆಯ ಆಡಳಿತ ವಿಭಾಗದ ಉನ್ನತ ಅಧಿಕಾರಿಯೊಬ್ಬರು, “ಸಂಸ್ಥೆಯಲ್ಲಿನ ಭದ್ರತಾ ವೈಫಲ್ಯಕ್ಕೆ ಪೊಲೀಸ್‌ ಇಲಾಖೆಯೇ ಹೊಣೆ ಹೊರಬೇಕು,” ಎಂದು ಹೇಳಿದ್ದಾರೆ. “ಮೂರು ವರ್ಷಗಳ ಹಿಂದೆ ಗುಪ್ತಚರ ವಿಭಾಗ ಸಲ್ಲಿಸಿದ್ದ ವರದಿಯ ಶಿಫಾರಸುಗಳನ್ನು ಅನುಷ್ಠಾನ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಭದ್ರತಾ ವೈಫಲ್ಯಕ್ಕೆ ಲೋಕಾಯುಕ್ತ ಸಂಸ್ಥೆಯ ಆಡಳಿತ ವಿಭಾಗವಾಗಲೀ, ಇಲ್ಲಿನ ಪೊಲೀಸ್‌ ವಿಭಾಗವಾಗಲೀ ಕಾರಣವಲ್ಲ,” ಎಂದು ಸ್ಪಷ್ಟವಾಗಿ ಹೇಳಿದರು.

ಸಂಸ್ಥೆಗೆ ಭದ್ರತೆ ಒದಗಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸ್ಥೆಯ ರಿಜಿಸ್ಟ್ರಾರ್‌ ಅವರು ೨೦೧೮ರ ಜ.೨೪ರಂದೇ ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರ ಬರೆದಿದ್ದರು ಎಂದು ಗೊತ್ತಾಗಿದೆ. ಆದರೆ, ಆ ಪತ್ರ ಆಧರಿಸಿ ಪೊಲೀಸ್‌ ಕಮಿಷನರ್‌ ಅವರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ : ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿತ; ಭದ್ರತಾ ವೈಫಲ್ಯವೇ ಕಾರಣ?

ಅಲ್ಲದೆ, ಲೋಹ ಪರಿಶೋಧಕ (ಮೆಟಲ್ ಡಿಟೆಕ್ಟರ್‌) ಯಂತ್ರವನ್ನು ಒದಗಿಸಬೇಕು ಎಂದು ನಿರ್ದಿಷ್ಟವಾಗಿ ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ೨೦೧೭ರ ಮೇ, ಸೆಪ್ಟೆಂಬರ್ ಮತ್ತು ಡಿ.೧ರಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರದ ಮುಂದುವರಿಕೆಯಾಗಿ ಹಲವು ಬಾರಿ ನೆನಪೋಲೆಗಳನ್ನೂ ಬರೆದಿದ್ದರು. ಆದರೆ, ಯಾವ ಪತ್ರಕ್ಕೂ, ನೆನಪೋಲೆಗಳಿಗೂ ಪೊಲೀಸ್‌ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಖಚಿತಪಡಿಸಿದರು.

ಇನ್ನು, ಲೋಕಾಯುಕ್ತ, ಉಪ ಲೋಕಾಯುಕ್ತರು, ಸಂಸ್ಥೆಯ ಸಿಬ್ಬಂದಿಯ ವೇತನ, ಕಟ್ಟಡ ನಿರ್ವಹಣೆ, ಪ್ರಯಾಣ ವೆಚ್ಚ, ಸಿಬ್ಬಂದಿ ವೈದ್ಯಕೀಯ ವೆಚ್ಚ, ಜೆರಾಕ್ಸ್‌ ಸೇರಿದಂತೆ ಮತ್ತಿತರ ಯಂತ್ರಗಳ ನಿರ್ವಹಣೆ ಸೇರಿ ಬೇರೆ ಕೆಲಸಗಳಿಗೆ ರಾಜ್ಯ ಸರ್ಕಾರ ಕಳೆದ ವರ್ಷ ೫೫ ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿದೆ. ಇದರಲ್ಲಿ ಯಂತ್ರೋಪಕರಣ, ಸಾಧನಗಳಿಗೆಂದು ೦.೦೪ ಲಕ್ಷ ರು., ಕಟ್ಟಡ ವೆಚ್ಚವೆಂದು ೪.೦೩ ಲಕ್ಷ ರು.ಗಳನ್ನು ಒದಗಿಸಿದೆ. ಈ ಪೈಕಿ, ಬಹುತೇಕ ಹಣ ಬಿಡುಗಡೆಯೂ ಆಗಿದೆ. ಆದರೆ, ಈ ಹಣವನ್ನು ಭದ್ರತೆ, ರಕ್ಷಣೆಗೆಂದು ಕಾಯ್ದಿರಿಸಿಲ್ಲ ಎಂಬ ವಿಚಾರ ಗೊತ್ತಾಗಿದೆ.

ಕಳೆದೆರಡು ವರ್ಷಗಳಿಂದಲೂ ಲೋಕಾಯುಕ್ತ ಸಂಸ್ಥೆಯಲ್ಲಿ ಲೋಹ ಪರಿಶೋಧಕ ಸಾಧನ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ವಿಚಾರ ಲೋಕಾಯುಕ್ತ ಪೊಲೀಸ್‌ ವಿಭಾಗದ ಎಡಿಜಿಪಿ ಅವರ ಗಮನದಲ್ಲಿದೆ. ಆದರೂ ಈ ಬಗ್ಗೆ ಕ್ರಮ ವಹಿಸದಿರುವುದು ವಿಪರ್ಯಾಸ. “ಪ್ರತಿನಿತ್ಯ ಕಚೇರಿಗೆ ಬಂದಾಗಲೂ ಲೋಹ ಪರಿಶೋಧಕ ಸಾಧನ ಕಾರ್ಯನಿರ್ವಹಿಸದ ಕುರಿತು ಕ್ರಮ ಕೈಗೊಳ್ಳಲೇ ಇಲ್ಲ. ಲೋಕಾಯುಕ್ತ ಪೊಲೀಸ್‌ ವಿಭಾಗದ ಸಿಬ್ಬಂದಿ ಏನಿದ್ದರೂ ತನಿಖಾ ವಿಭಾಗಕ್ಕಷ್ಟೇ ನಿಯೋಜನೆ ಆಗಿರುತ್ತಾರೆ. ಹೀಗಾಗಿ ಭದ್ರತೆ, ರಕ್ಷಣೆ ಸಂಬಂಧ ಗಮನ ಹರಿಸುವುದಿಲ್ಲ ಎನ್ನುತ್ತಾರೆ,” ಸಂಸ್ಥೆಯ ಮತ್ತೊಬ್ಬ ಹಿರಿಯ ಅಧಿಕಾರಿ.

ಸಿಎಂ ಸಿದ್ದರಾಮಯ್ಯ CM Siddaramaiah ಕರ್ನಾಟಕ ಪೊಲೀಸ್ ಇಲಾಖೆ Karnataka Police Department Security Lokayukta Justice Vishwanath Shetty ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ Karnataka Lokayukta ಕರ್ನಾಟಕ ಲೋಕಾಯುಕ್ತ ಚೂರಿ ಇರಿತ ಪ್ರಕರಣ ಭದ್ರತಾ ವೈಫಲ್ಯ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು