ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ದೂರು ಮುಕ್ತಾಯಗೊಳಿಸಲು ಲೋಕಾ ಸಂಸ್ಥೆಯಿಂದಲೇ ದೂರುದಾರನಿಗೆ ಕರೆ!

ಖಾಸಗಿ ವ್ಯಕ್ತಿಗಳ ಜಾಲವೊಂದು ಲೋಕಾಯುಕ್ತರ ಹೆಸರು ಹೇಳಿಕೊಂಡು ೨ ವರ್ಷದ ಹಿಂದೆ ಹಣ ವಸೂಲಿಗಿಳಿದಿತ್ತು. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಇದರ ಬೆನ್ನಲ್ಲೇ ಬೇರೊಂದು ದೂರಿನ ವಿಚಾರಣೆ ಪ್ರಗತಿಯಲ್ಲಿರುವಾಗ ದೂರುದಾರನಿಗೆ ಕರೆ ಮಾಡಿರುವ ಪ್ರಕರಣವೊಂದು ಬಹಿರಂಗಗೊಂಡಿದೆ. ಹಾಗಾದರೆ ಕರೆ ಮಾಡಿದವರು ಯಾರು?

ಮಹಾಂತೇಶ್ ಜಿ

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಕುರಿತು ವಿಚಾರಣೆ ಪ್ರಗತಿಯಲ್ಲಿರುವಾಗಲೇ ಅದನ್ನು ಮುಕ್ತಾಯಗೊಳಿಸಲು ಖುದ್ದು ಸಂಸ್ಥೆಯ ಸ್ಥಿರ ದೂರವಾಣಿಯಿಂದಲೇ ದೂರುದಾರನಿಗೆ ಕರೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಲೋಕಾಯುಕ್ತರ ಪರಿಧಿಯಲ್ಲಿ ಒಟ್ಟು ೩೧೦ ದೂರುಗಳು ಮುಕ್ತಾಯಗೊಂಡಿದೆ ಎಂದು ‘ದಿ ಸ್ಟೇಟ್‌’ ನಿನ್ನೆಯಷ್ಟೇ ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಉಪ ವಿಚಾರಣಾಧಿಕಾರಿ ಹೆಸರಿನಲ್ಲಿ ದೂರುದಾರನಿಗೆ ಕರೆ ಮಾಡಿರುವ ಪ್ರಕರಣ ಬಯಲಾಗಿದೆ. ದೂರು ಮುಕ್ತಾಯಗೊಳಿಸುವ ಬಗ್ಗೆ ವಿಚಾರಣಾಧಿಕಾರಿಗಳು ದೂರುದಾರರಿಗೆ ಕರೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದಲೂ ನಡೆಯುತ್ತಿದೆ ಎಂದು ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾಗಿದ್ದ ಲಂಚ ಪ್ರಕರಣ ಕುರಿತು ತನಿಖೆ ಮುಂದುವರೆದಿದೆ. ಈ ಸಂದರ್ಭದಲ್ಲೇ ಸಂಸ್ಥೆಯ ಸ್ಥಿರ ದೂರವಾಣಿಯಿಂದಲೇ ದೂರುದಾರನಿಗೆ ಕರೆ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಲೋಕಾಯುಕ್ತ ಸಂಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಉಪ ವಿಚಾರಣಾಧಿಕಾರಿ (೩)ಹೆಸರಿನಲ್ಲಿ ಸಂಸ್ಥೆಯ ಸ್ಥಿರ ದೂರವಾಣಿ (೦೮೦-೨೨೦೧೧೦೧೬)ಯಿಂದ ಕರೆ ಮಾಡಿರುವ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ದೂರುದಾರ ಪ್ರಕಾಶ್‌ಬಾಬು ಎಂಬುವರು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಧ್ವನಿಮುದ್ರಣ ಸಮೇತ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಇದನ್ನು ಲೋಕಾಯುಕ್ತ ರಿಜಿಸ್ಟ್ರಾರ್‌ ಖಚಿತಪಡಿಸಿದ್ದಾರೆ. ದೂರಿನ ಪ್ರತಿ ಮತ್ತು ಧ್ವನಿಮುದ್ರಣ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಡಿಆರ್‌ಇ (೩) ಹೆಸರಿನಲ್ಲಿ ಕರೆ ಬಂದಿರುವುದು ನಿಜ. ದೂರುದಾರನೊಂದಿಗೆ ಮಾತನಾಡಬಹುದು. ದೂರಿನಲ್ಲಿ ಆರೋಪಿಸಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೇ ದೂರನ್ನು ಮುಕ್ತಾಯಗೊಳಿಸುತ್ತೇನೆ ಎಂದು ಹೇಳುವುದು ಎಷ್ಟು ಸರಿ? ದೂರು ಸಲ್ಲಿಸಿದ ಮೇಲೆ ಖಾತೆ ಮಾಡಿಕೊಟ್ಟಿದ್ದಾರೆ. ಆದರೆ ವಿಳಂಬ ಮಾಡಿರುವ ಅಧಿಕಾರಿಗಳನ್ನು ಶಿಕ್ಷಿಸದೆಯೇ ದೂರನ್ನೇ ಮುಕ್ತಾಯಗೊಳಿಸುವುದು ತಪ್ಪು.
ಪ್ರಕಾಶ್‌ಬಾಬು, ದೂರುದಾರ

“ನನ್ನ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದ ವ್ಯಕ್ತಿ ಉಪ ವಿಚಾರಣಾಧಿಕಾರಿ (೩) ಎಂದು ಹೇಳಿದ್ದಾರೆ. ಕರೆ ಮಾಡಿದ್ದವರು ಉಪ ವಿಚಾರಣಾಧಿಕಾರಿಯೇ? ಇಲ್ಲವೆಂದಲ್ಲಿ ಕರೆ ಮಾಡಿದ್ದ ವ್ಯಕ್ತಿ ಯಾರು? ಸಂಸ್ಥೆಯ ಸ್ಥಿರ ದೂರವಾಣಿ ಸಂಖ್ಯೆಯಿಂದ ಕರೆ ಮಾಡಲು ಯಾರಿಗೆ ಅವಕಾಶವಿದೆ? ಅವರು ಕರೆ ಮಾಡಿಲ್ಲ ಎನ್ನುವುದಾದರೆ ಸಿಸಿಟಿವಿ ಆಧರಿಸಿ ಸಂಬಂಧಿತ ವ್ಯಕ್ತಿ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು. ಕರೆಯ ಧ್ವನಿಮುದ್ರಿಕೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಉಪ ವಿಚಾರಣಾಧಿಕಾರಿಯವರದ್ದೇ ಧ್ವನಿ ಎಂಬುದು ದೃಢಪಟ್ಟರೇ ಅವರ ವಿರುದ್ಧವೂ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು,” ಎಂದು ಪ್ರಕಾಶ್‌ಬಾಬು ದೂರಿನಲ್ಲಿ ಕೋರಿದ್ದಾರೆ.

ಇದನ್ನೂ ಓದಿ : ದಾಖಲೆ ಇದ್ದರೂ ಕಾರಣ ನೀಡದೆ ೩೧೦ ಪ್ರಕರಣ ಮುಕ್ತಾಯ ಮಾಡಿದ ಲೋಕಾಯುಕ್ತರು!

ಖಾತೆ ವರ್ಗಾವಣೆ ಮಾಡಿಕೊಡುವಲ್ಲಿ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿಯ ಮಲ್ಲೇಶ್ವರಂ ವಿಭಾಗದ ಕಂದಾಯ ಅಧಿಕಾರಿ ಬಸವಲಿಂಗಯ್ಯ ಸೇರಿ ಒಟ್ಟು ೮ ಮಂದಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಕರ್ತವ್ಯ ಲೋಪದಡಿ ಪ್ರಕಾಶ್‌ಬಾಬು ಎಂಬುವರು ೨೦೧೭ರ ಸೆಪ್ಟೆಂಬರ್‌ ೧೧ರಂದು ಲೋಕಾಯುಕ್ತಕ್ಕೆ ದೂರು (compt/uplok/bcd/2647/2017) ಸಲ್ಲಿಸಿದ್ದರು. ಉಪ ಲೋಕಾಯುಕ್ತ ಎನ್. ಆನಂದ್ ಅವರ ಕಾರ್ಯವ್ಯಾಪ್ತಿಗೆ ಬರುವ ಈ ದೂರನ್ನು ಉಪ ವಿಚಾರಣಾಧಿಕಾರಿ(೩) ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಎಂದರೆ ಈ ದೂರಿನ ವಿಚಾರಣೆ ಪ್ರಗತಿಯಲ್ಲಿದೆ. ಇದನ್ನು ಮುಕ್ತಾಯಗೊಳಿಸಲು ೨೦೧೮ ಫೆಬ್ರವರಿ ೨ರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ನೇರವಾಗಿ ದೂರುದಾರನಿಗೆ ಉಪ ವಿಚಾರಣಾಧಿಕಾರಿ ಹೆಸರಿನಲ್ಲಿ ಸ್ಥಿರ ದೂರವಾಣಿಯಿಂದ ಪ್ರಕಾಶ್‌ ಬಾಬು ಅವರಿಗೆ ಕರೆ ಹೋಗಿದೆ. ಕರೆಯ ಅವಧಿ ಒಂದು ನಿಮಿಷವಿದೆ ಎಂದು ಗೊತ್ತಾಗಿದೆ. ಈ ದೂರಿನ ವಿಚಾರಣೆ ಇದೇ ಮಾರ್ಚ್ ೩೧ಕ್ಕೆ ಮುಂದೂಡಿಕೆಯಾಗಿರುವುದು ತಿಳಿದು ಬಂದಿದೆ.

ಪ್ರಕಾಶ್‌ಬಾಬು ಸಲ್ಲಿಸಿರುವ ದೂರಿನ ವಿಚಾರಣೆ ಪ್ರಗತಿಯಲ್ಲಿರುವ ಪ್ರತಿ

ಪ್ರಕರಣ ವಿವರ: ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿ ಪ್ರಕಾಶ್‌ಬಾಬು ಎಂಬುವರು ಅಪಾರ್ಟ್‌ಮೆಂಟ್‌ ಖರೀದಿಸಿದ್ದರು. ಈ ಸಂಬಂಧ ಖಾತೆ ವರ್ಗಾವಣೆ ಮಾಡಿಕೊಡಬೇಕೆಂದು ಬಿಬಿಎಂಪಿಯ ಮಲ್ಲೇಶ್ವರಂನ ಕಂದಾಯ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಖಾತೆ ವರ್ಗಾವಣೆ ಮಾಡುವ ಸಂಬಂಧ ಅಧಿಕಾರಿಗಳು ಕಾನೂನು ವಿಭಾಗದ ಸಲಹೆ ಕೋರಿದ್ದರು. ಈ ಮಧ್ಯೆ ಖಾತೆ ವರ್ಗಾವಣೆ ಸಂಬಂಧಿಸಿದ ಕಡತವೇ ಕಣ್ಮರೆಯಾಗಿದೆ ಎಂದು ಅಧಿಕಾರಿಗಳೇ ಅರ್ಜಿದಾರ ಪ್ರಕಾಶ್‌ಬಾಬು ಅವರಿಗೆ ಮೌಖಿಕವಾಗಿ ತಿಳಿಸಿದ್ದರು.

ಕಡತ ಕಣ್ಮರೆಯಾಗಿರುವ ಸಂಬಂಧ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ ೨೦೧೦ರ ಅನ್ವಯ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಸಹಾಯಕ ಕಂದಾಯ ಅಧಿಕಾರಿಗೆ ದೂರು ಸಲ್ಲಿಸಿದ್ದರು. ಆದರೆ ಈ ದೂರಿನನ್ವಯ ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರಕಾಶ್‌ಬಾಬು ಅವರು ಉಪ ಲೋಕಾಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ಸಹಾಯಕ ಕಂದಾಯ ಅಧಿಕಾರಿ ಬಸವಲಿಂಗಯ್ಯ, ಜ್ಯೋತಿಲಕ್ಷ್ಮಿ, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್‌ ಸೇರಿದಂತೆ ಒಟ್ಟು ೮ ಮಂದಿಯನ್ನು ಪ್ರತಿವಾದಿಯನ್ನಾಗಿಸಿದ್ದರು.

ಲೋಕಾಯುಕ್ತ ದೂರು Lokayukta Complaints Upa Lokayukta Anand Deputy Registrar Enquires Phone Call Dereliction Of Duty ಉಪ ಲೋಕಾಯುಕ್ತ ಆನಂದ್‌ ಉಪ ವಿಚಾರಣಾಧಿಕಾರಿ ದೂರವಾಣಿ ಕರೆ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು