ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಕೆಎಎಸ್‌ ಅಕ್ರಮ; ಹುದ್ದೆ ಕಳೆದುಕೊಳ್ಳಲಿರೋ ಅಧಿಕಾರಿಗಳು ಯಾರು? ಎಷ್ಟು ಮಂದಿ?

ಕೆಎಎಸ್‌ ಅಧಿಕಾರಿಗಳ ಅಕ್ರಮ ನೇಮಕಾತಿ ಕುರಿತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವ ಹೈಕೋರ್ಟ್ ಆದೇಶ ಅಧಿಕಾರಿಗಳ ವಲಯದಲ್ಲಿ ತಲ್ಲಣ ಎಬ್ಬಿಸಿದೆ. ೧೯೯೮ನೇ ಸಾಲಿನ ಆಯ್ಕೆಪಟ್ಟಿ ಪರಿಷ್ಕೃತಗೊಂಡಿದ್ದು ಈ ಪೈಕಿ ೧೪೦ ಮಂದಿ ಹುದ್ದೆಯಲ್ಲಿ ಸ್ಥಾನ ಪಲ್ಲಟವಾಗಿದೆ. ಪರಿಷ್ಕೃತ ಪಟ್ಟಿಯ ವಿವರ ಇಲ್ಲಿದೆ

ಮಹಾಂತೇಶ್ ಜಿ

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಗ್ರೂಪ್‌ ಎ ಮತ್ತು ಬಿ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ಈಗ ರಾಜ್ಯ ಸರ್ಕಾರ ಮತ್ತು ಆಯೋಗಕ್ಕೆ ಎದುರಾಗಿದೆ. ೧೯೯೮ನೇ ಸಾಲಿನ ಪಟ್ಟಿಯನ್ನಷ್ಟೇ ಪರಿಷ್ಕತಗೊಳಿಸಿದ್ದ ಆಯೋಗ, ೧೯೯೯ ಮತ್ತು ೨೦೦೪ನೇ ಸಾಲಿನ ಆಯ್ಕೆಪಟ್ಟಿಯನ್ನೂ ಪರಿಷ್ಕೃತಗೊಳಿಸಬೇಕಿದೆ. ಹೀಗಾಗಿ, ಈ ಮೂರೂ ಸಾಲಿನಲ್ಲಿ ಆಯ್ಕೆಯಾಗಿ ಉಪವಿಭಾಗಾಧಿಕಾರಿ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.

೧೯೯೮, ೯೯ ಮತ್ತು ೨೦೦೪ನೇ ಸಾಲಿನ ನೇಮಕಾತಿಯಲ್ಲಿ ನಡೆದಿರುವ ವಿವಿಧ ಸ್ವರೂಪದ ಅಕ್ರಮಗಳ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲಿ ಆಯೋಗ, ೧೯೯೮ನೇ ಸಾಲಿನ ನೇಮಕಾತಿ ಪಟ್ಟಿಯನ್ನಷ್ಟೇ ಪರಿಷ್ಕೃತಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಹೈಕೋರ್ಟ್ ವಿಭಾಗೀಯ ಪೀಠ ೨೦೧೬ರಲ್ಲಿ ತೀರ್ಪು ನೀಡುವ ಮುನ್ನ, ಆಯೋಗ ಸಲ್ಲಿಸಿದ್ದ ಪರಿಷ್ಕತ ಪಟ್ಟಿಯನ್ನು ಒಪ್ಪಿಕೊಂಡಿತ್ತಲ್ಲದೆ, ೧೯೯೯ ಮತ್ತು ೨೦೦೪ನೇ ಸಾಲಿನ ಆಯ್ಕೆಪಟ್ಟಿಯನ್ನೂ ಪರಿಷ್ಕೃತಗೊಳಿಸಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿರುವುದರಿಂದ ೧೯೯೯ ಮತ್ತು ೨೦೦೪ನೇ ಸಾಲಿನ ನೇಮಕಾತಿ ಪಟ್ಟಿ ಪರಿಷ್ಕೃರಣೆಗೆ ಒಳಗಾಗಬೇಕಿದೆ.

೧೯೯೮ನೇ ಸಾಲಿನ ಆಯ್ಕೆಪಟ್ಟಿಯನ್ನು ಆಯೋಗ ಪರಿಷ್ಕೃತಗೊಳಿಸಿದ್ದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ೩೮೩ ಹುದ್ದೆಗಳ ಪೈಕಿ ೧೪೦ ಹುದ್ದೆಗಳು ಪರಿಷ್ಕೃತಗೊಳ್ಳಲಿದೆ. ಇವರಲ್ಲಿ ಐಎಎಸ್‌ಗೆ ಬಡ್ತಿ ಹೊಂದಿದ್ದ ೩೩ ಮಂದಿಯ ಪೈಕಿ ೭ ಮಂದಿ ಅಧಿಕಾರಿಗಳು ಗಳಿಸಿದ್ದ ಮೂಲ ಅಂಕಗಳಲ್ಲೂ ಇಳಿಕೆಯಾಗಿರುವುದಲ್ಲದೆ, ಅಸಿಸ್ಟೆಂಟ್ ಕಮಿಷನರ್ ಹುದ್ದೆಯಿಂದ ಕೆಳಗಿನ ಹುದ್ದೆಗೆ ಇಳಿದಿದ್ದಾರೆ. ಅಲ್ಲದೆ, ಒಟ್ಟು ೨೫ ಮಂದಿ ಅಭ್ಯರ್ಥಿಗಳನ್ನು ಮೂಲಪಟ್ಟಿಯಿಂದಲೇ ಹೊರಗಿಡಲಾಗಿದೆ. ಆ ಅವಧಿಯಲ್ಲಿ ೩೮೩ ಮಂದಿ ಅಭ್ಯರ್ಥಿಗಳು ಮೊದಲು ಗಳಿಸಿದ್ದ ಒಟ್ಟು ಅಂಕಗಳಲ್ಲೂ ಇಳಿಕೆಯಾಗಿರುವುದು ಪರಿಷ್ಕೃತ ಪಟ್ಟಿಯಿಂದ ತಿಳಿದುಬಂದಿದೆ. ಅಂಕಗಳಲ್ಲಿನ ವ್ಯತ್ಯಾಸದ ಕಾರಣದಿಂದ ಹಾಲಿ ಹೊಂದಿರುವ ಹುದ್ದೆಗಳನ್ನು ಕಳೆದುಕೊಂಡು, ಮೂಲ ಹುದ್ದೆಗೆ ಮರಳಲಿದ್ದಾರೆ. ಆದರೆ, ಅಂಕಗಳ ಹೆಚ್ಚಳ ಮತ್ತು ಇಳಿಕೆ ಮಾಡಿರುವ ಬಗ್ಗೆ ಕೆಪಿಎಸ್‌ಸಿ ಯಾವ ಮಾನದಂಡ ಅನುಸರಿಸಿದೆ ಎಂಬ ವಿವರಗಳನ್ನು ನೀಡಿಲ್ಲ. ಅಭ್ಯರ್ಥಿಗಳ ಪರ ವಕೀಲರು ವಿಚಾರಣೆ ವೇಳೆಯಲ್ಲಿ ಈ ಬಗ್ಗೆ ಆಕ್ಷೇಪಣೆ ಎತ್ತಿದ್ದರೂ ವಿವರಗಳನ್ನು ಬಹಿರಂಗಗೊಳಿಸಿರಲಿಲ್ಲ.

ಅಸಿಸ್ಟೆಂಟ್‌ ಕಮಿಷನರ್‌ ಆಗಿ ನೇಮಕವಾಗಿದ್ದ ೨೦ ಮಂದಿ ಅಧಿಕಾರಿಗಳ ಪಟ್ಟಿಗೆ ೮ ಮಂದಿಯನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಕಡಿಮೆ ಅಂಕಗಳನ್ನು ಪಡೆದಿದ್ದಾರೆ ಎಂದು ಪಟ್ಟಿಯಿಂದ ಕೈಬಿಡಲಾಗಿದ್ದ ೨೮ ಅಭ್ಯರ್ಥಿಗಳನ್ನು ಪರಿಷ್ಕೃತ ಪಟ್ಟಿಯಲ್ಲಿ ಸೇರ್ಪಡೆ ಮಾಡಿ, ಅಸಿಸ್ಟೆಂಟ್‌ ರಿಜಿಸ್ಟ್ರಾರ್‌ ಕೋ ಆಪರೇಟಿವ್‌ ಸೊಸೈಟಿ, ಉದ್ಯೋಗಾಧಿಕಾರಿ ಸೇರಿದಂತೆ ಇನ್ನಿತರ ಹುದ್ದೆಗಳನ್ನು ನೀಡಿದೆ. ತಹಶೀಲ್ದಾರ್‌ ಸೇರಿದಂತೆ ಇನ್ನಿತರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಪೈಕಿ ೨೫ ಮಂದಿಯನ್ನು ಪರಿಷ್ಕೃತ ಪಟ್ಟಿಯಲ್ಲಿ ಕೈ ಬಿಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ : ಕೆಪಿಎಸ್ಸಿ ಅಕ್ರಮ ನೇಮಕಕ್ಕೆ ಕೊನೆಗೂ ಸುಪ್ರೀಂ ಕತ್ತರಿ; ಹಿರಿಯ ಅಧಿಕಾರಿಗಳಲ್ಲಿ ತಳಮಳ

ಕಳೆದ ೨ ತಿಂಗಳ ಹಿಂದೆಯಷ್ಟೇ ಐಎಎಸ್‌ಗೆ ಬಡ್ತಿ ಪಡೆದಿದ್ದ ೩೩ ಮಂದಿಯ ಪೈಕಿ ಹಲವರು ಪಡೆದಿದ್ದ ಮೂಲ ಅಂಕಗಳಲ್ಲೂ ಇಳಿಕೆಯಾಗಿದೆ. ಇವರಲ್ಲಿ ಎಚ್ ಎನ್ ಗೋಪಾಲಕೃಷ್ಣ, ಎಚ್‌ ಬಸವರಾಜೇಂದ್ರ (ಹಾಲಿ ಉಪ ಕಾರ್ಯದರ್ಶಿ, ಗಣಿ ತನಿಖಾ ಕೋಶ), ಕರಿಗೌಡ, ಪಿ ವಸಂತಕುಮಾರ್‌, ಕವಿತಾ ಮನ್ನಿಕೇರಿ, ಶಿವಾನಂದ ಕಾಪಸಿ, ಜಿ ಸಿ ವೃಷಬೇಂದ್ರಮೂರ್ತಿ ಮೊದಲಾದವರಿದ್ದಾರೆ.

ಬಸವರಾಜೇಂದ್ರ ಅವರು ೧,೨೦೧ ಅಂಕ ಪಡೆದು ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದರು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ಇವರಿಗೆ ೧,೧೪೭ ಅಂಕಗಳನ್ನು ನೀಡುವ ಮೂಲಕ ಅಸಿಸ್ಟೆಂಟ್‌ ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆ ನೀಡಲಾಗಿದೆ.

ವಿಶೇಷವೆಂದರೆ, ನ್ಯಾ.ಎನ್‌ ಕುಮಾರ್‌ ಅವರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದ ಎಚ್‌ ಎನ್ ‌ಗೋಪಾಲಕೃಷ್ಣ, ೧,೧೯೩ ಅಂಕ ಪಡೆದು ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದರು. ಪರಿಷ್ಕೃತ ಪಟ್ಟಿಯಲ್ಲಿ ಇವರಿಗೆ ೧,೦೬೭ ಅಂಕ ನೀಡಿ, ತಹಶೀಲ್ದಾರ್‌ಗೆ ಹುದ್ದೆ ನೀಡಲಾಗಿದೆ.

ಅದೇ ರೀತಿ, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದ ಕರಿಗೌಡ ಅವರು, ೧,೦೮೭ ಅಂಕ ಪಡೆದು ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇವರಿಗೆ ಪರಿಷ್ಕೃತ ಪಟ್ಟಿಯಲ್ಲಿ ೧,೦೭೫ ಅಂಕ ನೀಡಿ ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ (ಸಿಟಿಓ) ಹುದ್ದೆ ನೀಡಲಾಗಿದೆ.

ಕವಿತಾ ಎಸ್‌ ಮನ್ನಿಕೇರಿ ಅವರು ೧,೦೩೧ ಅಂಕ ಪಡೆದು ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದರು. ಪರಿಷ್ಕೃತ ಪಟ್ಟಿಯಲ್ಲಿ ಇವರಿಗೆ ೧,೦೨೦ ಅಂಕ ನೀಡಿ ಅಸಿಸ್ಟೆಂಟ್‌ ಕಮಷಿರ್ಯಲ್‌ ಟ್ಯಾಕ್ಸ್‌ ಅಫೀಸರ್‌ ಹುದ್ದೆ ನೀಡಲಾಗಿದೆ. ಹಾಗೆಯೇ, ಶಿವಾನಂದ ಕಾಪಸಿ ಅವರು ೧,೦೫೨ ಅಂಕ ಪಡೆದು ಅಸಿಸ್ಟೆಂಟ್‌ ಕಮಿಷನರ್‌ ಆಗಿ ನೇಮಕವಾಗಿದ್ದರು. ಪರಿಷ್ಕೃತ ಪಟ್ಟಿಯಲ್ಲಿ ಇವರಿಗೆ ೧,೦೩೪ ಅಂಕ ನೀಡಿ ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆ ನೀಡಲಾಗಿದೆ. ಜಿ ಸಿ ವೃಷಬೇಂದ್ರಮೂರ್ತಿ ಅವರು ೯೨೫ ಅಂಕ ಪಡೆದು ಅಸಿಸ್ಟೆಂಟ್‌ ಕಮಿಷನರ್‌ ಆಗಿ ನೇಮಕವಾಗಿದ್ದು, ಪರಿಷ್ಕೃತ ಪಟ್ಟಿಯಲ್ಲಿ ಇವರಿಗೆ ೮೯೬ ಅಂಕ ನೀಡಿ ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಅಸಿಸ್ಟೆಂಟ್‌ ಕಂಟ್ರೋಲರ್‌ ಹುದ್ದೆ ನೀಡಲಾಗಿದೆ.

ಅರುಂಧತಿ ಚಂದ್ರಶೇಖರ್ (ಹಾಲಿ ಐಎಎಸ್‌) ಇವರಿಗೆ ಮೊದಲು ೧,೧೬೯ ಅಂಕ ನೀಡಿದ್ದರೆ, ಪರಿಷ್ಕೃತ ಪಟ್ಟಿಯಲ್ಲಿ ೧,೧೮೫ ಅಂಕ ನೀಡಲಾಗಿದೆ. ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಆಗಿ ನೇಮಕವಾಗಿದ್ದ ಎಚ್‌ ಆರ್‌ ಶಿವಕುಮಾರ್‌, ವೀರಭದ್ರಪ್ಪ ಹಂಚಿನಾಳ್‌ (ವಾಣಿಜ್ಯ ತೆರಿಗೆ), ಕೆ ರೂಪಶ್ರೀ (ಡೆಪ್ಯುಟಿ ಸೂಪರಿಟೆಂಡೆಂಟ್‌ ಎಕ್ಸೈಸ್‌), ಜಿ ಎನ್ ಮಂಜುನಾಥ್‌ ಸ್ವಾಮಿ (ಸಮಾಜ ಕಲ್ಯಾಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ), ಪ್ರದೀಪ್‌ ಪಿ ಬಾಗೇವಾಡಿ, ಕೆ ಚನ್ನಪ್ಪ (ಬಳ್ಳಾರಿ ಜಿಪಂ ಸಿಇಒ), ಸುಶೀಲಮ್ಮ, ರಾಮಪ್ಪ ಹಟ್ಟಿ (ಬೆಳಗಾವಿ ಪಾಲಿಕೆ ಸಿಇಒ) ಇವರಿಗೆ ಪರಿಷ್ಕೃತ ಪಟ್ಟಿಯಲ್ಲಿ ಅಸಿಸ್ಟೆಂಟ್‌ ಕಮಿಷನರ್‌ ಹುದ್ದೆ ನೀಡಲಾಗಿದೆ. ಬಿ ಬಸಪ್ಪ ಸೇರಿದಂತೆ ಒಟ್ಟು ೨೫ ಮಂದಿಯನ್ನು ಸೇವೆಯಿಂದಲೇ ಹೊರಗಿಡಲಾಗಿದೆ.

ಸುಪ್ರೀಂ ಕೋರ್ಟ್‌ KPSC ಕೆಪಿಎಸ್‌ಸಿ DPAR ಡಿಪಿಎಆರ್‌ Supreme Court of India ಕರ್ನಾಟಕ ಹೈಕೋರ್ಟ್ Karnataka High Court Recruitment Revised List ನೇಮಕಾತಿ ಪರಿಷ್ಕೃತ ಪಟ್ಟಿ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು