ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ವಿಧಾನಮಂಡಲ ರದ್ದಾದ ನಂತರ ಸಿಬ್ಬಂದಿಯ ಮೂಲ ದಾಖಲೆಗಳೇ ಇಲ್ಲವಂತೆ!

ಬಡ್ತಿ ಮೀಸಲಾತಿ ಸಂಬಂಧ ಸರ್ಕಾರದ ಬಹುತೇಕ ಇಲಾಖೆಗಳು ೧೯೭೮ರಿಂದ ಪರಿಷ್ಕೃತ ಜೇಷ್ಠತಾ ಪಟ್ಟಿ ಪ್ರಕಟಿಸಿವೆ. ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯ ಮಾತ್ರ ೧೯೯೮ರಿಂದ ಪಟ್ಟಿ ಪರಿಷ್ಕರಿಸಿವೆ. ಇದಕ್ಕೆ ಕೊಟ್ಟಿರುವ ಕಾರಣ ವಿಧಾನಮಂಡಲದ ಸಿಬ್ಬಂದಿಯ ಮೂಲ ದಾಖಲೆಗಳು ಇಲ್ಲವೆಂಬುದು!

ಮಹಾಂತೇಶ್ ಜಿ

ಕರ್ನಾಟಕ ವಿಧಾನಮಂಡಲ ರದ್ದಾದ ನಂತರ ಅದರ ಮೂಲ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ೧೯೭೮ರ ಬದಲಿಗೆ ೧೯೯೮ರಿಂದ ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿರುವ ವಿಧಾನಸಭೆ ಸಚಿವಾಲಯ, ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ಪರಿಷ್ಕೃತಾ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸುವ ಸಂಬಂಧ ಜನವರಿ ೧೦,೨೦೧೮ರಂದು ನಡೆದಿದ್ದ ಪರಿಶೀಲನಾ ಸಭೆಯಲ್ಲಿ ವಿಧಾನಮಂಡಲದ ಮೂಲ ದಾಖಲೆಗಳು ವಿಧಾನಸಭೆ ಸಚಿವಾಲಯದ ಬಳಿ ಲಭ್ಯ ಇಲ್ಲ ಎಂಬ ಸಂಗತಿ ಕುರಿತು ಚರ್ಚೆ ನಡೆದಿರುವುದು ತಿಳಿದು ಬಂದಿದೆ. ಆದರೆ ಈ ಸಂಬಂಧವಾಗಿ ಹೊರಡಿಸಿರುವ ಗೆಜೆಟ್‌ನಲ್ಲಿ ‘ಮೂಲ ದಾಖಲೆಗಳು ಲಭ್ಯವಿಲ್ಲ’ ಎಂಬ ಅಂಶವನ್ನು ಪ್ರಸ್ತಾಪಿಸಿಲ್ಲ.

ವಿಧಾನಸಭೆ ಸಚಿವಾಲಯದ ಈ ಸಮರ್ಥನೆಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ನಿವೃತ್ತ ಕಾರ್ಯದರ್ಶಿಗಳು ಇದಕ್ಕೆ ಬಲವಾಗಿ ಆಕ್ಷೇಪ ಎತ್ತಿದ್ದಾರೆ. ‘ದಿ ಸ್ಟೇಟ್‌’ ಜೊತೆ ಮಾತನಾಡಿದ ಅವರುಗಳು “ದಾಖಲೆಗಳು ಇಲ್ಲದೇ ಇದ್ದಲ್ಲಿ ಸಚಿವಾಲಯ ಇದುವರೆಗೆ ಕಾರ್ಯನಿರ್ವಹಿಸಿದ್ದಾರೂ ಹೇಗೆ? ೧೯೭೮ ಮತ್ತು ಆ ನಂತರ ಸೇವೆಗೆ ಸೇರಿದ ಮತ್ತು ನಿವೃತ್ತಿಗೊಂಡಿರುವ ಕಾರ್ಯದರ್ಶಿಳಾದಿಯಾಗಿ ಇತರೆ ಅಧಿಕಾರಿ, ನೌಕರರಿಗೆ ನಿವೃತ್ತಿ ವೇತನ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಹೇಗೆ ನೀಡಲಾಗಿದೆ,” ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ನೌಕರರ ಬಡ್ತಿಯಲ್ಲಿನ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದ ಪ್ರಕಾರ ವಿಧಾನಸಭೆ ಸಚಿವಾಲಯವೂ ೧೯೭೮ರಿಂದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿರ್ದೇಶನ ನೀಡಿತ್ತು. ಆದರೆ ೧೯೯೮ರಿಂದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

೧೯೯೮ರಿಂದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಣೆ ಮಾಡಿರುವುದರಿಂದ ಅಧಿಕಾರಿ,ನೌಕರರು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಇವುಗಳನ್ನು ಪರಿಶೀಲಿಸಬೇಕೆಂದು ಡಿಪಿಎಆರ್, ವಿಧಾನಸಭೆ ಸಚಿವಾಲಯಕ್ಕೆ ಸೂಚಿಸಿತ್ತು. ಅದರಂತೆ ರಚನೆಯಾಗಿದ್ದ ಪರಿಶೀಲನಾ ಸಮಿತಿ ೨೦೧೮ರ ಜನವರಿ ೧೦ರಂದು ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅವರ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆದಿತ್ತು. ಆ ಸಭೆಯಲ್ಲಿ ಸಮಿತಿಯ ಸಂಚಾಲಕರು ಹಾಗೂ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎಸ್‌.ಕುಮಾರಸ್ವಾಮಿ, ಉಪ ಕಾರ್ಯದರ್ಶಿ ಪಿ.ಎನ್‌.ಪಾರ್ವತಮ್ಮ, ಅಧೀನ ಕಾರ್ಯದರ್ಶಿ ಎಚ್‌.ಎಸ್‌.ಕಸ್ತೂರಿ, ಡಿಪಿಎಆರ್‌ನ ಉಪ ಕಾರ್ಯದರ್ಶಿ ಮಂಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ಭಾಗವಹಿಸಿದ್ದರು ಎಂದು ಗೊತ್ತಾಗಿದೆ.

ಜೇಷ್ಠತಾ ಪಟ್ಟಿಯನ್ನು ೧೯೭೮ರಿಂದ ಪರಿಷ್ಕರಿಸುವ ಸಂಬಂಧ ಚರ್ಚೆ ನಡೆದ ಸಂದರ್ಭದಲ್ಲಿ ಕಾರ್ಯದರ್ಶಿ ಅವರು, “೧೯೯೮ರ ಪ್ರತ್ಯೇಕ ನಿಯಮದಂತೆ ವಿಧಾನಪರಿಷತ್ತಿನ ಸಚಿವಾಲಯ ಹಾಗೂ ವಿಧಾನಸಭೆಯ ಸಚಿವಾಲಯದ ಪ್ರತ್ಯೇಕ ಜೇಷ್ಠತಾ ಪಟ್ಟಿ ಅಸ್ತಿತ್ವಕ್ಕೆ ಬಂದು ವಿಧಾನಮಂಡಲವು ರದ್ದಾಯಿತು. ಇದರ ಮೂಲ ದಾಖಲೆಗಳನ್ನು ಯಾರಿಗೂ ಕೊಟ್ಟಿಲ್ಲ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಚಿವಾಲಯಗಳ ನೌಕರರ ಕಾರ್ಯನಿರ್ವಹಣಾ ವರದಿ(ಸಿ ಆರ್ ) ಕಡತಗಳು ಆಯಾ ಸಚಿವಾಲಯಗಳಿಗೆ ಹೋಯಿತು. ಆಯಾ ಸಚಿವಾಲಯಗಳ ಕಡತಗಳು ಅವವರವರ ಕಡೆ ಹೋಗಿದ್ದರಿಂದ ವಿಧಾನಮಂಡಲದ ಮೂಲ ದಾಖಲೆಗಳು ಯಾರ ಹತ್ತಿರವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂಬ ಸಂಗತಿಯನ್ನು ಕಾರ್ಯದರ್ಶಿ ಅವರು ಸಮಿತಿ ಮುಂದೆ ಬಹಿರಂಗಪಡಿಸಿದ್ದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು 'ದಿ ಸ್ಟೇಟ್‌'ಗೆ ತಿಳಿಸಿದ್ದಾರೆ.

ಸಭೆ ನಡೆದ ೨ ದಿನದ ನಂತರ ಅಂದರೆ ಜನವರಿ ೧೨ರಂದು ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. “೧೯೯೮ರಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಹೊಸ ಸಚಿವಾಲಯ ಹೊಸದಾಗಿ ನೇಮಕಾತಿ ಮತ್ತು ಸೇವಾ ಷರತ್ತುಗಳ ನಿಯಮಾವಳಿ ರಚನೆ ಮಾಡಿಕೊಂಡಿದೆ.ಹೊಸ ಸಚಿವಾಲಯ ಹೊಸದಾಗಿ ಜೇಷ್ಠತಾ ಪಟ್ಟಿಯನ್ನು ಪ್ರಕಟಗೊಳಿಸಿದೆ.ಕರ್ನಾಟಕ ವಿಧಾನಮಂಡಲ ಕಾರ್ಯಾಲಯ ಅಸ್ತಿತ್ವದಲ್ಲಿ ಇಲ್ಲದ ಕಾರಣ ಮತ್ತು ಆ ಅವಧಿಯಿಂದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕೆಂಬ ಮನವಿಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸಮಿತಿ ಅಭಿಪ್ರಾಯಕ್ಕೆ ಬಂದಿದೆ. ಆ ಎಲ್ಲ ಮನವಿಗಳು ಮತ್ತು ಆಕ್ಷೇಪಣೆಗಳನ್ನು ಕೈ ಬಿಡಲು ಸಮಿತಿ ತೀರ್ಮಾನಿಸಿದೆ,” ಎಂದು ರಾಜ್ಯಪತ್ರದಲ್ಲಿ ವಿಧಾನಸಭೆ ಸಚಿವಾಲಯ ಉಲ್ಲೇಖಿಸಿದೆ.

ಈ ಕುರಿತು ದೂರು ಸಲ್ಲಿಕೆಯಾದಲ್ಲಿ ಡಿಪಿಎಆರ್ ಪ್ರಧಾನ ಕಾರ್ಯದರ್ಶಿಗಳ ಮೂಲಕ ಪರಿಶೀಲನೆ ನಡೆಸಲಾಗುತ್ತದೆ.
ಕೆ ರತ್ನಪ್ರಭಾ, ಮುಖ್ಯ ಕಾರ್ಯದರ್ಶಿ
ಇದನ್ನೂ ಓದಿ : ಬಡ್ತಿ ಮೀಸಲಾತಿ; ವಿಧಾನ ಪರಿಷತ್‌ಗೆ ಮಾಹಿತಿ ಒದಗಿಸದ ವಿಧಾನಸಭೆ ಸಚಿವಾಲಯ

ವಿಚಿತ್ರವೆಂದರೆ, ಜನವರಿ ೧೦ರಂದು ನಡೆದಿದ್ದ ಪರಿಶೀಲನಾ ಸಮಿತಿ ಸಭೆಯಲ್ಲಿ ಕಾರ್ಯದರ್ಶಿ ಅವರು ಬಹಿರಂಗಪಡಿಸಿದ್ದ ವಿಧಾನಮಂಡಲದ ಮೂಲ ದಾಖಲೆಗಳು ಯಾರ ಹತ್ತಿರವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶವನ್ನು ರಾಜ್ಯಪತ್ರದಲ್ಲಿ ಪ್ರಸ್ತಾಪಿಸಿಲ್ಲ. ಇದಕ್ಕೂ ಮುನ್ನ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನೂ ವಿಧಾನಸಭೆ ಸಚಿವಾಲಯ ಪಡೆದುಕೊಂಡಿದೆ. “ಸಚಿವಾಲಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಏಪ್ರಿಲ್‌‌ ೨,೧೯೯೮ರಿಂದ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ,” ಎಂದು ಅಭಿಪ್ರಾಯ ನೀಡಿದ್ದಾರೆ ಎಂದು ರಾಜ್ಯಪತ್ರದಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

ಎ.ಜಿ ಅವರು ಕೊಟ್ಟಿರುವ ಅಭಿಪ್ರಾಯವನ್ನು ಪರಿಶೀಲನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಡಿಪಿಎಆರ್ ಮತ್ತು ಸಮಾಜ ಕಲ್ಯಾಣ ಇಲಾಖೆ‌ ಉಪ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿತ್ತು.ಮೂಲ ದಾಖಲೆಗಳು ಮತ್ತು ವಿಧಾನಮಂಡಲದ ಸೇವೆಗೆ ಸೇರಿದ ದಿನಾಂಕ ಗೊತ್ತಿಲ್ಲ ಎಂದು ಕಾರ್ಯದರ್ಶಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಡಿಪಿಎಆರ್ ಉಪ ಕಾರ್ಯದರ್ಶಿಗಳು ಆ ಎಲ್ಲಾ ಮಾಹಿತಿಗಳೂ ಸೇವಾ ಪುಸ್ತಕದಲ್ಲಿರುತ್ತವೆ ಎಂದು ಗಮನ ಸೆಳೆದಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಯಾಕೂಬ್‌ ಷರೀಫ್‌ ಅವರು, “ದಾಖಲೆಗಳು ಎಲ್ಲಿಯೂ ಹೋಗುವುದಿಲ್ಲ. ಅಲ್ಲೇ ಇರುತ್ತವೆ. ಅವನ್ನೇನು ನಾವು ಜೇಬಿನಲ್ಲಿಟ್ಟುಕೊಂಡಿರುತ್ತೇವೇಯೇ?ದಾಖಲೆಗಳು ಇಲ್ಲದೆ ಇದ್ದರೆ ಸಚಿವಾಲಯವನ್ನು ಇದುವರೆಗೂ ಹೇಗೆ ಕಾರ್ಯನಿರ್ವಹಿಸಲಾಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್‌ನ ನಿವೃತ್ತ ಕಾರ್ಯದರ್ಶಿ ಎಚ್‌ ಸಿ ರುದ್ರಪ್ಪ ಅವರೂ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ಮೂಲ ದಾಖಲೆಗಳು ಇಲ್ಲದೆ ಇದ್ದಲ್ಲಿ ಇದುವರೆಗೆ ಹೇಗೆ ಬಡ್ತಿ ನೀಡಲಾಗಿದೆ? ವೇತನ, ನಿವೃತ್ತಿ ವೇತನ, ಪಿಂಚಣಿ ಹೇಗೆ ಕೊಡಲಾಗಿದೆ. ದಾಖಲೆಗಳು ಇಲ್ಲ ಎಂದು ಹೇಳುತ್ತಿರುವುದರ ಹಿಂದೆ ಕೆಲವರ ಸ್ವಾರ್ಥ ಇದೆ. ದಾಖಲೆಗಳು ಇಲ್ಲದೆ ಇದ್ದರೆ ಸಚಿವಾಲಯವೂ ಕೆಲಸ ಮಾಡಲಾಗುವುದಿಲ್ಲ. ಆಧಾರ ಇಲ್ಲದೆಯೇ ೧೯೯೮ರಿಂದ ಬಡ್ತಿ ಹೇಗೆ ನೀಡುತ್ತಾರೆ? ಸ್ವತಃ ಹಾಲಿ ಕಾರ್ಯದರ್ಶಿ ಎಸ್‌ ಮೂರ್ತಿ ಅವರು ಬಡ್ತಿಯನ್ನು ನ್ಯಾಯಾಲಯದ ನಿರ್ದೇಶನದ ಪ್ರಕಾರ ಪಡೆದಿದ್ದಾರೆ. ಆಗ ಯಾವ ವರ್ಷದಿಂದ ಬಡ್ತಿಗೆ ಅವರನ್ನು ಪರಿಗಣಿಸಲಾಗಿದೆ ಎಂದು ಹೇಳಲಿ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ದಾಖಲೆಗಳು ಇಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಸೇವಾ ಪುಸ್ತಕಗಳು ಅವರ ಬಳಿಯೇ ಇರುತ್ತವೆ. ವಿಧಾನಸಭೆ ಸಚಿವಾಲಯವೇ ಮಾತೃ ಇಲಾಖೆ. ಮಾಹಿತಿಯೇ ಇಲ್ಲ ಎನ್ನುವುದು ಸುಳ್ಳು. ದಾಖಲೆಗಳನ್ನು ಬೇರೆ ಕಡೆ ಹುಡುಕುವುದು ಬೇಡ. ೧೯೭೮ ಮತ್ತು ಆ ನಂತರ ನೇಮಕವಾಗಿರುವವರಲ್ಲಿ ಶೇ.೬೦ರಿಂದ ೭೦ರಷ್ಟು ಇನ್ನೂ ಸೇವೆಯಲ್ಲಿದ್ದಾರೆ. ಅವರ ಸೇವಾ ಪುಸ್ತಕಗಳಲ್ಲೇ ಮಾಹಿತಿ ಇರುತ್ತವೆ,” ಎನ್ನುತ್ತಾರೆ ವಿಧಾನಪರಿಷತ್‌ನ ಹಾಲಿ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ.

ಚಿತ್ರ ಕೃಪೆ: ದಿ ಹಿಂದೂ

ಕರ್ನಾಟಕ ಸರ್ಕಾರ Government of Karnataka ಸುಪ್ರೀಂ ಕೋರ್ಟ್‌ ಬಡ್ತಿಯಲ್ಲಿ ಮೀಸಲಾತಿ Karnataka Legislative Assembly Secretariat ಕರ್ನಾಟಕ ವಿಧಾನಸಭೆ ಸಚಿವಾಲಯ Supreme Court Directions Reservation-in-Promotion ಕೆ ರತ್ನಪ್ರಭಾ K Rathna Prabha
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು