ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಭೂಕಬಳಿಕೆ; ಶ್ರೀರಾಮುಲು ವಿಚಾರಣೆಗಾಗಿ ಲೋಕಾ ಪೊಲೀಸರಿಗೆ ಸಿಗದ ಅನುಮತಿ

ಬಾದಾಮಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು, ಬಳ್ಳಾರಿಯ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಎರಡು ವರ್ಷದಿಂದ ಅನುಮತಿ ಸಿಕ್ಕಿಲ್ಲ! ಲೋಕಾಯುಕ್ತ ಎಡಿಜಿಪಿ ಎಷ್ಟು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ

ಮಹಾಂತೇಶ್ ಜಿ

ಸರ್ಕಾರ ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಭೂಮಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ಬಳ್ಳಾರಿಯಲ್ಲಿ ೫೭.೩೦ ಎಕರೆ ಜಮೀನು ಕಬಳಿಸಿರುವ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಶ್ರೀರಾಮುಲು ಅವರನ್ನು ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಅನುಮತಿ ದೊರೆಯುತ್ತಿಲ್ಲ. ಈ ಕುರಿತು ಲೋಕಾಯುಕ್ತ ಸಂಸ್ಥೆ ಹಲವು ಬಾರಿ ಸಂಸತ್ ಮತ್ತು ವಿಧಾನಸಭೆಗೆ ಪತ್ರಗಳನ್ನು ಬರೆದಿದೆ. ಕಳೆದ ೨ ವರ್ಷಗಳಿಂದಲೂ ಅನುಮತಿ ದೊರೆತಿಲ್ಲ. ಶ್ರೀರಾಮುಲು ಅವರೀಗ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿದ್ದಾರೆ.

“ಶ್ರೀರಾಮುಲು ಅವರ ವಿಚಾರಣೆಗೆ ಅನುಮತಿ ನೀಡುವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಸಚಿವಾಲಯಗಳು ನುಣುಚಿಕೊಳ್ಳುತ್ತಿವೆ. ಇದು ಲೋಕಾಯುಕ್ತ ಪೊಲೀಸರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟತೆ ಪಡೆಯುವ ಸಂಬಂಧ ಲೋಕಾಯುಕ್ತ ಪೊಲೀಸ್‌ ವಿಭಾಗ ಇದೀಗ ಕಾನೂನು ವಿಭಾಗಕ್ಕೆ ಪತ್ರ ಬರೆದು ಅಭಿಪ್ರಾಯ ಕೋರಿದೆ,” ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಉನ್ನತ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಖಚಿತಪಡಿಸಿದ್ದಾರೆ.

“ಇದೇ ಪ್ರಕರಣದಲ್ಲಿ ಶ್ರೀರಾಮುಲು ಅವರು ಸೇರಿದಂತೆ ಉಳಿದ ಆರೋಪಿಗಳು ಬಳ್ಳಾರಿಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮತ್ತು ಮುಚ್ಚಳಿಕೆ ಪಡೆದಿದ್ದಾರೆ. ಆದರೆ, ವಿಚಾರಣೆಗೂ ನಿರೀಕ್ಷಣಾ ಜಾಮೀನಿಗೂ ಯಾವುದೇ ಸಂಬಂಧವಿಲ್ಲ. ಸಭಾಧ್ಯಕ್ಷರಿಂದ ಅನುಮತಿ ದೊರೆತರೆ ವಿಚಾರಣಾ ಪ್ರಕ್ರಿಯೆಗಳು ನಡೆಯಲಿವೆ,” ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ವಿವರ: ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು. ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ ಬಿ ಸ್ಯಾನಿಟೋರಿಯಂ ಆಸ್ಪತ್ರೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ ೫೯೭-ಬಿ ಪೈಕಿ ಒಟ್ಟು 259.95 ಎಕರೆ, ಸರ್ಕಾರಿ ಜಮೀನಿನ ಪೈಕಿ ಸರ್ವೆ ನಂ.601 ಎ ನಲ್ಲಿ ಒಟ್ಟು 57.30 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. "ಈ ಸುಳ್ಳು ದಾಖಲೆಗಳನ್ನೇ ನೈಜವೆಂದು ಬಿಂಬಿಸಿ ಸರ್ಕಾರಿ ಜಮೀನನ್ನು ಶ್ರೀರಾಮುಲು ಅವರ ಹೆಸರಿಗೆ ನೋಂದಾಯಿಸಿ ಅಕ್ರಮವಾಗಿ ಸ್ವಾಧೀನಕ್ಕೆ ನೀಡಲಾಗಿತ್ತು," ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ : ಕ್ರಿಮಿನಲ್ ಸಂಚು, ಬೆದರಿಕೆ; ಇವು ಶ್ರೀರಾಮುಲು ಎದುರಿಸುತ್ತಿರುವ ಮೊಕದ್ದಮೆಗಳು

ನೋಂದಾಯಿಸಿದ್ದು ಹೇಗೆ?: “57.30 ಎಕರೆ ಗುಂಟೆ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವ ಮೊದಲು ವಿವಿಧ ಸರ್ವೆ ನಂಬರ್‌ಗಳಲ್ಲಿನ ಜಮೀನುಗಳ ಪ್ರಕರಣದಲ್ಲಿ ಡಿಕ್ರಿ ಪಡೆದುಕೊಂಡಿದ್ದ ಶಾಸಕರಾಗಿದ್ದ ಶ್ರೀರಾಮುಲು ಅವರು, ಸರ್ವೆ ಲೆಕ್ಕ ದಾಖಲೆಗಳಲ್ಲಿ ಮತ್ತು ಆರ್‌ಟಿಸಿಗಳಿಗೆ ತಕ್ಕಂತೆ ವಿಸ್ತೀರ್ಣ ಸರಿ ಇಲ್ಲ. ಜಮೀನುಗಳ ಸ್ಥಳ ಪರಿಶೀಲನೆ ನಡೆಸಿ, ಉಳಿದ ವಿಸ್ತೀರ್ಣವನ್ನು ತನ್ನ ಹೆಸರಿನಲ್ಲಿ ಪಟ್ಟಾ ಬದಲಾವಣೆ ಮಾಡಿ ನಕಾಶೆ ತಯಾರಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನಾಧರಿಸಿ ಆಗಿನ ತಹಶೀಲ್ದಾರ್ ಶಶಿಧರ ಬಗಲಿ ಅವರು, ಶ್ರೀರಾಮುಲು ಅವರಿಗೆ ಸಹಕರಿಸುವ ದುರುದ್ದೇಶದಿಂದಲೇ ತಮ್ಮ ಕಚೇರಿಯಲ್ಲೇ ಸುಳ್ಳು ಪಹಣಿ ಸೃಷ್ಟಿಸಿ ಅವನ್ನೇ ನೈಜವೆಂದು ಬಿಂಬಿಸಿದ್ದರು,” ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ೮ ಮಂದಿಯನ್ನು ಆರೋಪಿಗಳನ್ನಾಗಿಸಿದ್ದಾರೆ. ಡಿ ಶಿವಪ್ಪ, ಬಳ್ಳಾರಿಯ ಹಿಂದಿನ ಅಸಿಸ್ಟೆಂಟ್‌ ಕಮಿಷನರ್‌ ವೆಂಕಟೇಶಲು, ಹಿಂದಿನ ತಹಶೀಲ್ದಾರ್‌ ಶಶಿಧರ್‌ ಬಗಲಿ, ಕಂದಾಯ ಅಧಿಕಾರಿ ವೀರೇಶ್‌ ಬಾಬು, ಭೂದಾಖಲೆಗಳ ಉಪನಿರ್ದೇಶಕ ನಾರಾಯಣಸ್ವಾಮಿ ಅವರಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಯಾರೆಂದು ತಿಳಿದುಬಂದಿಲ್ಲ.

ಪ್ರಕರಣದ ಕುರಿತು ಜಿ ಕೃಷ್ಣಮೂರ್ತಿ ಎಂಬುವವರು ೨೦೧೩ರ ಏ.೨೯ರಂದು ಖಾಸಗಿ ದೂರು ಸಲ್ಲಿಸಿದ್ದರು (ಪಿಸಿಆರ್ ನಂ ೦೧/೨೦೧೩). ಇದನ್ನಾಧರಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ ೨೦೧೬ರ ಜೂ.೨೯ರಂದು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಈ ವರದಿ ಆಧರಿಸಿ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಶ್ರೀರಾಮುಲು ಅವರನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ೨೦೧೬ರ ಆಗಸ್ಟ್‌ನಲ್ಲಿ ಲೋಕಾಯುಕ್ತ ಎಡಿಜಿಪಿ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದರು. "ಶ್ರೀರಾಮುಲು ಅವರು ಶಾಸಕರಾಗಿದ್ದಾಗ ನಡೆದ ಪ್ರಕರಣವಾಗಿರುವ ಕಾರಣ ವಿಧಾನಸಭೆ ಸ್ಪೀಕರ್‌ರಿಂದ ಅನುಮತಿ ಪಡೆಯಿರಿ,” ಎಂದು ಲೋಕಸಭೆ ಜಂಟಿ ಕಾರ್ಯದರ್ಶಿ ಒಂದು ವರ್ಷದ ನಂತರ (೨೦೧೭ರ ಜುಲೈ) ಉತ್ತರಿಸಿದ್ದರು. ಇದಾದ ನಂತರ ಲೋಕಾಯುಕ್ತ ಸಂಸ್ಥೆ ವಿಧಾನಸಭೆ ಸಚಿವಾಲಯಕ್ಕೆ ೨೦೧೭ರ ಅಕ್ಟೋಬರ್‌ನಲ್ಲಿ ಅನುಮತಿ ಕೋರಿ ಪತ್ರ ಬರೆದಿತ್ತು. "ಶ್ರೀರಾಮುಲು ಅವರು ಈಗ ಸಂಸತ್‌ ಸದಸ್ಯರಾಗಿರುವ ಕಾರಣ ಲೋಕಸಭೆ ಸ್ಪೀಕರ್‌ ಅವರಿಂದಲೇ ಅನುಮತಿ ಪಡೆಯಬೇಕು,” ಎಂದು ವಿಧಾನಸಭೆ ಸಚಿವಾಲಯ ೨೦೧೮ರ ಜ.೨೪ರಂದು ಉತ್ತರಿಸಿದೆ ಎಂದು ಲೋಕಾಯುಕ್ತ ಪೊಲೀಸ್‌ನ ಉನ್ನತ ಮೂಲಗಳು ‘ದಿ ಸ್ಟೇಟ್‌’ಗೆ ಖಚಿತಪಡಿಸಿವೆ.

ಶಾಸಕರು ಮತ್ತು ಸಂಸದರ ವಿರುದ್ಧದ ವಿಚಾರಣೆ ನಡೆಸುವ ಪ್ರಕರಣಗಳಲ್ಲಿ ಸಭಾಧ್ಯಕ್ಷರು ಅನುಮತಿ ಪಡೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂಡ್ಯದ ಮೂಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಸಿ ಎಸ್ ಪುಟ್ಟರಾಜು ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅನುಮತಿ ಕೋರುವ ಪ್ರಕರಣದಲ್ಲಿ ವಿಧಾನಸಭೆ ಹಿಂದಿನ ಸ್ಪೀಕರ್‌ ಅವರು ಸಿಬಿಐಗೆ ಸ್ಪಷ್ಟಪಡಿಸಿದ್ದರು. ಆದರೂ ಲೋಕಾಯುಕ್ತ ಪೊಲೀಸ್‌ ವಿಭಾಗ ಅನುಮತಿ ಕೋರಿ ಪತ್ರಗಳನ್ನು ಬರೆಯುತ್ತಲೇ ಇದೆ.

ಶ್ರೀರಾಮುಲು ಅವರಿಗೆ ಸಹಕರಿಸಿದ್ದಾರೆ ಎಂದು ಆರೋಪಕ್ಕೀಡಾಗಿದ್ದ ಆಗಿನ ತಹಶೀಲ್ದಾರ್‌ ಶಶಿಧರ್‌ ಬಗಲಿ (ಮೂರನೇ ಆರೋಪಿ) ಅವರ ವಿರುದ್ಧ ವಿಚಾರಣೆಗೆ ೨೦೧೭ರ ಮೇ ೩೦ರಂದು ಸರ್ಕಾರ ಅನುಮತಿ ನೀಡಿದೆ.

ಭೂ ಹಗರಣ Land Grabing ವಿಧಾನಸಭೆ ತನಿಖೆ Karnataka Assembly ಬಳ್ಳಾರಿ Karnataka Lokayukta ಶ್ರೀರಾಮುಲು Bellary ಸಂಸತ್ Parliment ಕರ್ನಾಟಕ ಲೋಕಾಯುಕ್ತ Investigation B Sriramulu ಜಮೀನು ಕಬಳಿಕೆ ಲೋಕಾಯುಕ್ತ ಎಡಿಜಿಪಿ Lokayukta ADGP
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು