ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಅಕ್ರಮ ಗಣಿಗಾರಿಕೆ ಹಗರಣ: ಸಿಬಿಐ ತನಿಖೆಗೆ ಶಿಫಾರಸಾದ ಕಡತಗಳೇ ನಾಪತ್ತೆ!

ಅಕ್ರಮ ಗಣಿಗಾರಿಕೆ ಪ್ರಕರಣಗಳು ಚುನಾವಣಾ ಅಖಾಡದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇವೆ. ಇದರ ಬೆನ್ನಲ್ಲೇ ಪ್ರಭಾವಿಗಳಿಗೆ ಸಂಬಂಧಿಸಿದ ಕಡತಗಳೇ ಇಲಾಖೆಯಲ್ಲಿ ಲಭ್ಯವಿಲ್ಲ ಎಂದು ಇಲಾಖೆ ಉತ್ತರಿಸಿದೆ. ಸಿಬಿಐ ತನಿಖೆಗೆ ಶಿಫಾರಸಾಗಿದ್ದ ಕಡತಗಳೂ ಈ ಪಟ್ಟಿಯಲ್ಲಿವೆ ಎಂಬುದು ಆತಂಕಕಾರಿ

ಮಹಾಂತೇಶ್ ಜಿ

ಅಕ್ರಮ ಗಣಿಗಾರಿಕೆ ನಡೆಸಿದ್ದ ಗಣಿ ಗುತ್ತಿಗೆದಾರರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸಾಗಿದ್ದ ಕಡತವೇ ಈಗ ಸರ್ಕಾರದಲ್ಲಿ ಇಲ್ಲ! ಲಭ್ಯವಿಲ್ಲ ಎಂದು ಹೇಳಲಾಗಿರುವ ಕಡತಗಳಲ್ಲಿ ಮಾಜಿ ಸಚಿವ ವಿ ಸೋಮಣ್ಣ ಅವರ ಕುಟುಂಬದ ಒಡೆತನಕ್ಕೆ ಸೇರಿದ ಮಾತಾ ಮಿನರಲ್ಸ್‌ ಮತ್ತು ಅನಿಲ್ ಲಾಡ್ ಅವರ ಕುಟುಂಬದ ಒಡೆತನಕ್ಕೆ ಸೇರಿದ ಕೆನರಾ ಮಿನರಲ್ಸ್ ಕಂಪನಿ ಸೇರಿದಂತೆ ಒಟ್ಟು ೫ ಗಣಿ ಗುತ್ತಿಗೆದಾರರ ಪ್ರಕರಣಗಳ ಕಡತಗಳೂ ಇವೆ.

ಸಿಬಿಐ ತನಿಖೆ ನಡೆಸಲು ಶಿಫಾರಸಾಗಿದ್ದ ಕಡತವನ್ನು ಕೋರಿ ಮಾಹಿತಿ ಹಕ್ಕು ಅಧಿನಿಯಮದಡಿ ‘ದಿ ಸ್ಟೇಟ್‌’ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, "ಕಡತ ಮತ್ತು ದಾಖಲೆ ಶಾಖೆಯಲ್ಲಿ ಲಭ್ಯವಿಲ್ಲ,” ಎಂದು ಉತ್ತರಿಸಿದೆ. ಇದಕ್ಕೆ ಪೂರಕವಾಗಿ ಸಚಿವ ಸಂಪುಟ ಟಿಪ್ಪಣಿಯ ಪ್ರತಿಯನ್ನೂ ‘ದಿ ಸ್ಟೇಟ್‌’ ಸಂಬಂಧಿಸಿದ ಶಾಖೆಗೆ ನೀಡಿತ್ತು. ಅರ್ಜಿ ಸಲ್ಲಿಸಿದ ೨ ತಿಂಗಳ ನಂತರ ಕಡತ ಮತ್ತು ದಾಖಲೆ ಶಾಖೆಯಲ್ಲಿ ಲಭ್ಯವಿಲ್ಲ ಎಂಬ ಉತ್ತರ ಸಿಕ್ಕಿದೆ. ಕಡತಗಳು ನಾಪತ್ತೆಯಾಗಿವೆಯೇ ಅಥವಾ ನಾಶಗೊಳಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಐದು ಕಂಪನಿಗಳು ನಡೆಸಿದ್ದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ೨೦೧೧ರಲ್ಲಿ ಎರಡನೇ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಕ್ರಮ ಕೈಗೊಳ್ಳಲು ರಚಿಸಿದ್ದ ಉನ್ನತ ಮಟ್ಟದ ಸಮಿತಿಯೂ ವರದಿ ಸಲ್ಲಿಸಿತ್ತು. ಈ ಎರಡೂ ವರದಿ ಆಧರಿಸಿ ಡೆಕ್ಕನ್ ಮೈನಿಂಗ್‌ ಕಂಪನಿ ಲಿಮಿಟೆಡ್, ಕೆನರಾ ಮಿನರಲ್‌ ಲಿಮಿಟೆಡ್, ಲತಾ ಮೈನಿಂಗ್‌ ಕಂಪನಿ ಲಿಮಿಟೆಡ್, ಮಾತಾ ಮಿನರಲ್ಸ್‌ ಪ್ರೈವೈಟ್‌ ಲಿಮಿಟೆಡ್ ಮತ್ತು ಆರ್‌ ಪ್ರವೀಣ್‌ ಚಂದ್ರ ಅವರ ವಿರುದ್ಧ ಸಿಬಿಐ ತನಿಖೆಗೆ (೨೦೧೩ರಲ್ಲಿ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಂದಿನ ಕಾರ್ಯದರ್ಶಿ ಕೆ ಅಮರನಾರಾಯಣ ಅವರು ೨೦೧೩ರಲ್ಲಿ ಶಿಫಾರಸು ಮಾಡಿದ್ದರು. ಅಲ್ಲದೆ, ಅನುಮೋದನೆಗೆ ಕೋರಿ ಸಚಿವ ಸಂಪುಟಕ್ಕೆ ಕಡತ ಮಂಡಿಸಿದ್ದರು.

ಸಿಬಿಐ ತನಿಖೆಗೆ ಶಿಫಾರಸಾದ ಸರ್ಕಾರದ ಕಾರ್ಯದರ್ಶಿಯ ಟಿಪ್ಪಣಿ ಪ್ರತಿ
ಇದನ್ನೂ ಓದಿ : ಸಿದ್ದರಾಮಯ್ಯನವರು ಹೇಳಿದಂತೆ ಗಣಿ ಲೂಟಿ ಕೇವಲ ೩೫,೦೦೦ ಕೋಟಿ ರು. ಅಲ್ಲ!

ಮಾತಾ ಮಿನರಲ್ಸ್ ನಡೆಸಿರುವ ಗಣಿ ಅಕ್ರಮದ ಕುರಿತು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಯು ವಿ ಸಿಂಗ್ ಸಲ್ಲಿಸಿರುವ ವರದಿಯ 20ನೇ ಅಧ್ಯಾಯದಲ್ಲಿ ವಿವರಗಳಿದ್ದವು. ಮಾತಾ ಮಿನರಲ್ಸ್ ಎಸಗಿರುವ ಅಕ್ರಮದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಇಲಾಖೆ ಕಾರ್ಯದರ್ಶಿ ಅಮರನಾರಾಯಣ ಅವರು ಶಿಫಾರಸು ಮಾಡಿದ್ದ ಕಡತವೇ ಇಲಾಖೆಯಲ್ಲಿ ಲಭ್ಯವಿಲ್ಲ ಎಂದು ಉತ್ತರಿಸಿರುವುದು ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಇಲಾಖೆ ನೀಡಿರುವ ಉತ್ತರದ ಪ್ರತಿ
ಕಡತ ಲಭ್ಯ ಇಲ್ಲ ಎಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಉದ್ಧಟತನದ ಉತ್ತರ. ಸಿಬಿಐ ತನಿಖೆ ನಡೆಸಬೇಕು ಎಂದು ನಾವು ಕೂಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು. ಸಿಬಿಐ ತನಿಖೆಗೆ ಶಿಫಾರಸಾಗಿದ್ದ ಕಡತವೇ ಇಲ್ಲ ಎಂದು ಹೇಳುತ್ತಿರುವುದರ ಹಿಂದೆ ಪ್ರಭಾವಿಗಳನ್ನು ರಕ್ಷಿಸಲು ಉನ್ನತ ಮಟ್ಟದಲ್ಲಿ ಕುತಂತ್ರ ನಡೆದಿದೆ ಎಂದು ಅನ್ನಿಸುತ್ತಿದೆ.
ಎಸ್ ಆರ್ ಹಿರೇಮಠ್‌, ಸಮಾಜ ಪರಿವರ್ತನಾ ಸಮುದಾಯ

ಮಾತಾ ಮಿನರಲ್ಸ್ ಕಂಪನಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಮತ್ತು ಮೂಡಲಪಾಳ್ಯ ಗ್ರಾಮಗಳ ವ್ಯಾಪ್ತಿಯಲ್ಲಿ 129.03 ಹೆಕ್ಟೇರ್ ಪ್ರದೇಶದಲ್ಲಿ ಮ್ಯಾಂಗನೀಸ್, ಕಬ್ಬಿಣದ ಅದಿರು, ಡಾಲೋಮೈಟ್‌ ಸೇರಿದಂತೆ ಇನ್ನಿತರ ಖನಿಜಗಳ ಗಣಿಗಾರಿಕೆ ನಡೆಸಲು 2000 ಇಸವಿಯ ಜೂ.23ರಂದು ಗಣಿ ಗುತ್ತಿಗೆ ಮಂಜೂರು ಮಾಡಿತ್ತು. ಈ ಕಂಪನಿ 2004-05ರಿಂದ 2005-08ರವರೆಗೆ ಕಬ್ಬಿಣ ಅದಿರು ಉತ್ಪಾದನೆ ಮಾಡಲು ಅನುಮತಿ ಇಲ್ಲದಿದ್ದರೂ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿ, 3,56,566 ಮೆಟ್ರಿಕ್ ಟನ್‌ನಷ್ಟು ಅದಿರು ಉತ್ಪಾದಿಸಿತ್ತು. ಈ ಪ್ರಮಾಣಕ್ಕೆ ಖನಿಜ ಮುಖಬೆಲೆ 238 ರು. ಲೆಕ್ಕದಲ್ಲಿ ಒಟ್ಟು 8,48,38,908 ರು.ಗಳನ್ನು ಗುತ್ತಿಗೆದಾರರದಿಂದ ವಸೂಲು ಮಾಡಲು ಇಂಡಿಯನ್ ಆಡಿಟ್‌ ಅಕೌಂಟೆಂಟ್‌ ಇಲಾಖೆಯ ಅಧಿಕಾರಿಗಳು ಗಣಿ, ಭೂವಿಜ್ಞಾನ ಇಲಾಖೆಗೆ ಸೂಚಿಸಿದ್ದರು. ಈ ಬಗ್ಗೆ ಇಲಾಖೆಯ ಕಾನೂನು ಶಾಖೆ ಕೂಡ ಮಾತಾ ಮಿನರಲ್ಸ್‌ ಪ್ರೈವೇಟ್ ಲಿಮಿಟೆಡ್ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿರುವ ಕಾರಣ, ಅಕೌಟೆಂಟ್ ಜನರಲ್ ಅವರು ಲೆಕ್ಕ ಮಾಡಿರುವ ಮೊತ್ತವನ್ನು ಇಲಾಖೆಗೆ ಹೊಂದಾಣಿಕೆ ಮಾಡದೆ ದಂಡ ವಸೂಲಿ ಮಾಡಬೇಕು ಎಂದು ಕಾನೂನು ಶಾಖೆ ಅಧಿಕಾರಿಗಳು ನಿರ್ದೇಶಿಸಿದ್ದರು.

ಮಾತಾ ಮಿನರಲ್ಸ್, ಲತಾ ಮೈನಿಂಗ್ ಕಂಪನಿಗಳು ಎಸಗಿರುವ ಗಂಭೀರ ಸ್ವರೂಪದ ಕಾನೂನುಬಾಹಿರ ಕತ್ಯಗಳು ಸಿಬಿಐ ತನಿಖೆಗೆ ಯೋಗ್ಯವಾಗಿವೆ ಎಂದು ಸಮಾಜ ಪರಿವರ್ತನಾ ಸಮುದಾಯವೂ ಹೇಳಿತ್ತಲ್ಲದೆ, ಸಿಬಿಐ ತನಿಖೆಗೆ ವಹಿಸಿ ಎಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು. ಮಂಜೂರಾದ ತನ್ನ ಗಣಿ ಗುತ್ತಿಗೆ ಪ್ರದೇಶದ ವ್ಯಾಪ್ತಿಯಲ್ಲಿ ಇಲ್ಲದ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸುಮಾರು ಹತ್ತು ಲಕ್ಷ ಟನ್ನುಗಳಷ್ಟು ಕಬ್ಬಿಣದ ಅದಿರನ್ನು ಮಾತಾ ಮಿನರಲ್ಸ್‌ ಸಾಗಿಸಿತ್ತು. ಮಾರುಕಟ್ಟೆ ಮೌಲ್ಯ ಆಧರಿಸಿ ಹಣವನ್ನು ಸಂಬಂಧಪಟ್ಟ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಂದ ವಸೂಲು ಮಾಡಬೇಕು ಎಂದು ಈ ಸಂಬಂಧ ತನಿಖೆ ನಡೆಸಿದ್ದ ಜಂಟಿ ತನಿಖಾ ಸಮಿತಿಯು ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ ಶಿಫಾರಸು ಮಾಡಿತ್ತು.

ಲತಾ ಮೈನಿಂಗ್‌ ೧೦,೭೪,೧೯೩ ಮೆಟ್ರಿಕ್‌ ಟನ್‌, ಕೆನರಾ ಮಿನರಲ್ಸ್‌ ೧,೭೪,೨೮೭ ಮೆಟ್ರಿಕ್‌ ಟನ್‌ ಅದಿರು ಗಣಿಗಾರಿಕೆ ನಡೆಸಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ಈ ಕಂಪನಿಗಳ ಪೈಕಿ ಕೆನರಾ ಮಿನರಲ್ಸ್‌ ಲಿಮಿಟೆಡ್, 2010ರಿಂದ 2 ವರ್ಷಗಳ ಕಾಲ ಪರವಾನಿಗೆ ಪಡೆಯದೆ 82 ಸಾವಿರ ಮೆಟ್ರಿಕ್ ಟನ್ ಅದಿರನ್ನು ಸಾಗಿಸಿತ್ತು. ಈ ಸಂಬಂಧ ಅಕ್ರಮವಾಗಿ ಅದಿರು ಸಾಗಾಟ ನಡೆಸಿದ ಆರೋಪದದಡಿಯಲ್ಲಿ ಎಸ್‍ಐಟಿ ಎಫ್ಐಆರ್ ದಾಖಲಿಸಿತ್ತು.

ಲತಾ ಮೈನಿಂಗ್ ಕಂಪನಿ ಲಿಮಿಟೆಡ್‌ನ ಗುತ್ತಿಗೆ ವ್ಯಾಪ್ತಿ ಸಣ್ಣದಾದರೂ ಸುಮಾರು ಹತ್ತು ಲಕ್ಷ ಟನ್‌ಗಳಷ್ಟು ಅದಿರನ್ನು ಅಕ್ರಮವಾಗಿ ಹೊರತೆಗೆದು ಸಾಗಿಸಿದೆ ಎಂದೂ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಿಳಿಸಿತ್ತು.

ಕರ್ನಾಟಕ ಸರ್ಕಾರ ಅಕ್ರಮ ಗಣಿಗಾರಿಕೆ ಸಿಎಂ ಸಿದ್ದರಾಮಯ್ಯ Department of Mines and Geology ಗಣಿ ಮತ್ತು ಭೂವಿಜ್ಞಾನ ಇಲಾಖೆ CM Siddaramaiah ತನಿಖೆ CBI ಸಿಬಿಐ IllegalMining Investigation ಕಾನೂನು ಇಲಾಖೆ ಅಕೌಂಟೆಂಟ್ ಜನರಲ್ ಡೆಕ್ಕನ್ ಮೈನಿಂಗ್‌ ಕಂಪನಿ ಲಿಮಿಟೆಡ್ ಕೆನರಾ ಮಿನರಲ್‌ ಲಿಮಿಟೆಡ್ ಲತಾ ಮೈನಿಂಗ್‌ ಕಂಪನಿ ಲಿಮಿಟೆಡ್ ಮಾತಾ ಮಿನರಲ್ಸ್‌ ಪ್ರೈವೈಟ್‌ ಲಿಮಿಟೆಡ್ ಆರ್‌ ಪ್ರವೀಣ್‌ ಚಂದ್ರ Accountant General Karnataka Law Department Deccan Mining Company Canara Minerals Pvt LTD
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು