ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

೪೯೫ ಕೋಟಿ ಮೌಲ್ಯದ ಜಮೀನು ಡಿನೋಟಿಫಿಕೇಷನ್; ಬಿಎಸ್‌ವೈ ವಿರುದ್ಧ ತನಿಖೆ?

ಶಾಸಕರು ಮತ್ತು ಅಧಿಕಾರಿಗಳ ಶಿಫಾರಸಿನ ಮೇರೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿನೋಟಿಫಿಕೇಷನ್‌ ಮಾಡಿದ್ದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಚುನಾವಣೆ ಹೊತ್ತಿನಲ್ಲಿ ಸರ್ಕಾರ ಇಟ್ಟಿರುವ ಹೆಜ್ಜೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ

ಮಹಾಂತೇಶ್ ಜಿ

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (೨೦೧೦) ಬೆಂಗಳೂರು ನಗರದ ವಿವಿಧೆಡೆ ನಿಯಮಬಾಹಿರವಾಗಿ ಡಿನೋಟಿಫಿಕೇಷನ್‌ ಮಾಡಿದ್ದ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಬೆಂಗಳೂರಿನಲ್ಲಿ ಬಡಾವಣೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಸ್ವಾಧೀನದಲ್ಲಿರಿಸಿಕೊಂಡಿದ್ದ ಜಮೀನುಗಳನ್ನು ನಿಯಮಬಾಹಿರವಾಗಿ ಭೂಸ್ವಾಧೀನದಿಂದ ಕೈಬಿಡಲು ಯಡಿಯೂರಪ್ಪ ಅವರು ಆದೇಶಿಸಿದ್ದರು. ಇಂಥ ಆದೇಶಗಳನ್ನು ಹೊರಡಿಸಿದ್ದ ಯಡಿಯೂರಪ್ಪ ಮತ್ತಿತರರ ವಿರುದ್ಧ ತನಿಖೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಡಿನೋಟಿಫೈ ಆಗಿದ್ದ ೩೭ ಎಕರೆ ಜಮೀನುಗಳಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ಸರ್ಕಾರಿ ಮಾರ್ಗಸೂಚಿ ದರದ (ಎಸ್‌ಆರ್) ಪ್ರಕಾರ ೩೭ ಎಕರೆಯ ಒಟ್ಟು ಮೌಲ್ಯ ೪೯೫ ಕೋಟಿ ರು.ಗಳಾಗಿವೆ. ಮುಕ್ತ ಮಾರುಕಟ್ಟೆ ದರದ ಪ್ರಕಾರ ಈ ಮೌಲ್ಯ ಎರಡು ಪಟ್ಟಿದೆ.

ಪ್ರಧಾನಿ ಮೋದಿ, ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಧುರೀಣರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲು ಪ್ರಯತ್ನಿಸಿದ್ದರು. ಆದರೀಗ ೩೭ ಎಕರೆಯನ್ನು ಭೂಸ್ವಾಧೀನದಿಂದ ಕೈ ಬಿಡಲು ಆದೇಶಿಸಿದ್ದ ಪ್ರಕರಣಗಳ ತನಿಖಾ ಪ್ರಕ್ರಿಯೆಗಳಿಗೆ ಈಚೆಗೆ ಚಾಲನೆ ಸಿಕ್ಕಿರುವುದು ಬಿಜೆಪಿ ತೀವ್ರ ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ.

“ಸಕ್ಷಮ ನ್ಯಾಯಾಲಯದಲ್ಲಿ ಕೇವಿಯೇಟ್‌ ಸಲ್ಲಿಸಿ, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಸಂಬಂಧಪಟ್ಟ ಭೂಮಾಲೀಕರಿಗೆ ನೋಟಿಸ್‌ ನೀಡುವ ಪ್ರಕ್ರಿಯೆಯನ್ನು ಕೂಡಲೇ ಕೈಗೊಳ್ಳಬೇಕು,” ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಕೆ ಜೆ ಜಾರ್ಜ್ ಅವರು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿರುವುದು ತಿಳಿದುಬಂದಿದೆ.

ಪ್ರಕರಣ ದಾಖಲಿಸಲು ಸಚಿವ ಕೆ ಜೆ ಜಾರ್ಜ್ ಅವರು ಸೂಚಿಸಿರುವ ಪ್ರತಿ

ಲೊಟ್ಟೆಗೊಲ್ಲಹಳ್ಳಿಯಲ್ಲಿ 14 ಗುಂಟೆ ಜಮೀನನ್ನು ಡಿನೋಟಿಫೈ ಮಾಡಿರುವ ಪ್ರಕರಣದಲ್ಲಿ ಯಡಿಯೂರಪ್ಪ, ‌ಎಸಿಬಿಯ ಡಿವೈಎಸ್ಪಿ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶ‌ ನೀಡಿದೆ. ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗೆ ಯಡಿಯೂರಪ್ಪ ಅವರು ತಂದಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಬಿಡಿಎ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ. ಈ ಬೆಳವಣಿಗೆಗಳ ಮಧ್ಯೆಯೇ, ೩೭ ಎಕರೆಯನ್ನು ಡಿನೋಟಿಫೈ ಮಾಡಿರುವ ಪ್ರಕರಣಗಳು ಸೇರಿದಂತಾಗಿವೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿದ್ದ ೩೭ ಎಕರೆಯನ್ನು ಭೂಸ್ವಾಧೀನದಿಂದ ಕೈಬಿಡಲು ನಿಯಮಗಳಲ್ಲಿ ಅವಕಾಶವಿರಲಿಲ್ಲ. ಆದರೂ ಯಡಿಯೂರಪ್ಪ ಅವರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಭೂಸ್ವಾಧೀನದಿಂದ ಕೈಬಿಡಲು ಆದೇಶಿಸಿದ್ದರು.

ಯಡಿಯೂರಪ್ಪ ಅವರು ಡಿನೋಟಿಫಿಕೇಷನ್ ಆದೇಶಿಸಿರುವ ಬಗ್ಗೆ ಟಿಪ್ಪಣಿ ಪ್ರತಿ

ಯಲಹಂಕದ ಮಾಜಿ ಶಾಸಕ ಪ್ರಸನ್ನಕುಮಾರ್, ಹಾಲಿ ಶಾಸಕ ಎಸ್‌ ಆರ್ ವಿಶ್ವನಾಥ್‌, ವಿಧಾನಪರಿಷತ್‌ನ ಮಾಜಿ ಸಭಾಪತಿ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಜಂಟಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳ ಟಿಪ್ಪಣಿ, ಶಿಫಾರಸು ಪತ್ರ, ಭೂಮಾಲೀಕರ ಸ್ವಯಂ ಕೋರಿಕೆಗಳನ್ನಾಧರಿಸಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದನ್ನು ನಗರಾಭಿವೃದ್ಧಿ ಇಲಾಖೆ ಗುರುತಿಸಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಆಧಾರವಿಲ್ಲದ ಜಾಹೀರಾತು; ರಾಜ್ಯ ಬಿಜೆಪಿಗೆ ಮುಖಭಂಗ

ಈ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸಿದ್ದಯ್ಯ (ಮಾರ್ಚ್ ೧೭,೨೦೦೮ರಿಂದ ಜನವರಿ ೭,೨೦೧೦) ಮತ್ತು ಭರತ್‌ಲಾಲ್‌ ಮೀನಾ ಅವರು (ಜನವರಿ ೭,೨೦೧೦ರಿಂದ ಏಪ್ರಿಲ್ ೬,೨೦೧೨ರವರೆಗೆ) ಕಾರ್ಯನಿರ್ವಹಿಸಿದ್ದರು. ಈ ಪೈಕಿ, ಸಿದ್ದಯ್ಯ ಅವರು ಆಯುಕ್ತರಾಗಿದ್ದ ಅವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ಅಗರ ಗ್ರಾಮದ ಸರ್ವೆ ನಂಬರ್‌ ೧೪೯ರಲ್ಲಿನ ೨ ಎಕರೆ ೫ ಗುಂಟೆ, ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿಯ ಗುಡ್ಡದಹಳ್ಳಿಯ ಸರ್ವೆ ನಂಬರ್‌ ೬/೨ಎ ಮತ್ತು ೬/೨ಬಿ ಮತ್ತು ಸರ್ವೆ ನಂಬರ್‌ ೭ರಲ್ಲಿನ ೧ ಎಕರೆ ೨೦ ಗುಂಟೆ ಜಮೀನನ್ನು ಯಡಿಯೂರಪ್ಪ ಅವರ ಆದೇಶದ ಮೇರೆಗೆ ಭೂಸ್ವಾಧೀನದಿಂದ ಕೈಬಿಟ್ಟಿರುವುದು ದಾಖಲೆಯಿಂದ ತಿಳಿದುಬಂದಿದೆ.

ಇನ್ನುಳಿದ ಪ್ರಕರಣಗಳನ್ನು ಭರತ್‌ಲಾಲ್‌ ಮೀನಾ ಅವರು ಆಯುಕ್ತರಾಗಿದ್ದ ಅವಧಿಯಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ. ನಿಯಮಬಾಹಿರವಾಗಿ ಮಾಡಿರುವ ಡಿನೋಟಿಫಿಕೇಷನ್‌ಗಳ ಹಿಂದೆ ಇರಬಹುದಾದ ಭ್ರಷ್ಟಾಚಾರದ ಪ್ರಕ್ರಿಯೆಗಳನ್ನು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲು ಮುಂದಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಟಿಎಂನ ೬ನೇ ಹಂತ, ಎಚ್‌ಬಿಆರ್, ಎಚ್‌ಎಸ್‌ಆರ್ ಸೇರಿದಂತೆ ವಿವಿಧೆಡೆ ಬಡಾವಣೆ ನಿರ್ಮಾಣ ಸಂಬಂಧ ೧೯೮೦ ಮತ್ತು ೧೯೯೦ರ ದಶಕದಲ್ಲಿ ೩೭ ಎಕರೆಯನ್ನು ಸ್ವಾಧೀನಪಡಿಸಿಕೊಂಡಿತ್ತು. ಅಲ್ಲದೆ, ಆ ಎಲ್ಲ ಜಮೀನುಗಳು ಬಿಡಿಎನ ಎಂಜಿನಿಯರಿಂಗ್‌ ವಿಭಾಗದ ವಶದಲ್ಲಿದ್ದವು. ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳಿಗೆ ಐ ತೀರ್ಪು ಕೂಡ ಅನುಮೋದನೆಯಾಗಿದ್ದವು. ಇಂತಹ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಲು ನಿಯಮಗಳಲ್ಲಿ ಅವಕಾಶಗಳೇ ಇರಲಿಲ್ಲ.

ಆದರೂ ಭೂಮಾಲೀಕರು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ಧರ್ಮಸಿಂಗ್ ಅವರ ಅವಧಿಯಲ್ಲಿ ಡಿನೋಟಿಫಿಕೇಷನ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ಆ ಅವಧಿಯಲ್ಲಿ ಅರ್ಜಿಗಳಿಗೆ ಚಾಲನೆ ಸಿಕ್ಕಿರಲಿಲ್ಲ. ಹಾಗೆಯೇ, ಈ ಎಲ್ಲ ಅರ್ಜಿಗಳನ್ನು ಡಿನೋಟಿಫಿಕೇಷನ್ ಸಮಿತಿ ತಿರಸ್ಕೃರಿಸಿತ್ತು. ಆ ಎಲ್ಲ ಅರ್ಜಿಗಳು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜೀವ ಪಡೆದುಕೊಂಡಿದ್ದವು.

ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿಯ ಕಾಚರಕನಹಳ್ಳಿ ಗ್ರಾಮದ ಸರ್ವೆ ನಂಬರ್‌ ೧೩೪ ಮತ್ತು ೧೩೬ರಲ್ಲಿ ೬ ಎಕರೆ ೨೦ ಗುಂಟೆ, ಯಶವಂತಪುರ ಹೋಬಳಿಯ ಹೇರೋಹಳ್ಳಿ ಸರ್ವೆ ನಂಬರ್ ೬೭ರಲ್ಲಿ ೫ ಎಕರೆ ೨೦ ಗುಂಟೆ, ಕಸಬಾ ಹೋಬಳಿ ಗುಡ್ಡದಹಳ್ಳಿ ಗ್ರಾಮದ ಸರ್ವೆ ನಂಬರ್ ೬/೨ಬಿ ಮತ್ತು ೭ರಲ್ಲಿನ ೧ ಎಕರೆ ೨೦ ಗುಂಟೆ ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್‌ ೪೬/೧, ೪೫,೫೦/೩ರಲ್ಲಿ ೮ ಎಕರೆ ೨೨ ಗುಂಟೆ, ಬೇಗೂರು ಹೋಬಳಿಯ ಅಗರ ಗ್ರಾಮದ ಸರ್ವೆ ನಂಬರ್‌ ೧೪೯ರಲ್ಲಿನ ೨ ಎಕರೆ ೫ ಗುಂಟೆ, ಕೆಂಗೇರಿ ಹೋಬಳಿ ಮತ್ತು ಉತ್ತರಹಳ್ಳಿ ಹೋಬಳಿಯ ಹೊಸಹಳ್ಳಿ ಸರ್ವೇ ನಂಬರ್ ೮/೮ಬಿರಲ್ಲಿ ೨ ಎಕರೆ ೩ ಗುಂಟೆ, ಬೇಗೂರು ಹೋಬಳಿ ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ ೧೫/೧ರಲ್ಲಿನ ೧ ಎಕರೆ ೯ ಗುಂಟೆ, ಕಸಬಾ ಹೋಬಳಿಯ ಅರಕೆರೆ ಗ್ರಾಮದ ಸರ್ವೆ ನಂಬರ್‌ ೮೦/೩ರಲ್ಲಿನ ೧ ಎಕರೆ ೧೩ ಗುಂಟೆ, ಉತ್ತರಹಳ್ಳಿ ಹೋಬಳಿಯ ಗೊಟ್ಟಿಗೆರೆ ಗ್ರಾಮದ ಸರ್ವೆ ನಂಬರ್ ೧೧೭/೧ರಲ್ಲಿನ ೨೦ ಗುಂಟೆ, ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್ ಪುರಂ ಹೋಬಳಿ ಬಾಣಸವಾಡಿ ಗ್ರಾಮದ ಸರ್ವೆ ನಂಬರ್ ೩೪೧ರಲ್ಲಿ ೨ ಎಕರೆ ೧ ಗುಂಟೆ, ಉತ್ತರಹರ್ಳಳಿ ಹೋಬಳಿಯ ತಲಘಟ್ಟಪುರ ಗ್ರಾಮದ ಸರ್ವೆ ನಂಬರ್‌ ೧೯/೩ರಲ್ಲಿನ ೨೬ ಗುಂಟೆ, ಹುಳಿಮಾವು ಗ್ರಾಮದ ಸರ್ವೆ ನಂಬರ್‌ ೧೦ರಲ್ಲಿ ೨ ಎಕರೆ ೮ ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡಲು ಯಡಿಯೂರಪ್ಪ ಅವರು ಆದೇಶಿಸಿದ್ದರು.

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ತನಿಖೆ CMSiddaramaiah B. S. Yeddyurappa ACB Urban Development Department ನಗರಾಭಿವೃದ್ಧಿ ಇಲಾಖೆ Investigation BDA
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು