ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಕಬ್ಬು ಬೆಳೆಗಾರರ ಸಂಕಷ್ಟ; ೭೧ ಸಕ್ಕರೆ ಕಾರ್ಖಾನೆಗಳಿಂದ ೧,೮೯೨ ಕೋಟಿ ರು. ಬಾಕಿ

ರೈತರ ಸಾಲ ಮನ್ನಾ ಬಿಕ್ಕಟ್ಟನ್ನು ಸದ್ಯಕ್ಕೆ ಬಗೆಹರಿಸಿರುವ ಸಿಎಂ ಕುಮಾರಸ್ವಾಮಿ, ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿರುವ ಬಾಕಿಯತ್ತ ಗಮನ ಹರಿಸಿದ್ದಾರೆ. ಪ್ರಭಾವಿಗಳಿಗೆ ಸೇರಿರುವ ಕಂಪನಿಗಳೇ ೪೧೬ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ

ಮಹಾಂತೇಶ್ ಜಿ

ರೈತರ ಸಾಲಮನ್ನಾ ಕುರಿತು ತಲೆದೋರಿದ್ದ ಬಿಕ್ಕಟ್ಟನ್ನು ಬಗೆಹರಿಸಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ. ಇದರ ಬೆನ್ನಲ್ಲೇ, ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಮೊತ್ತದತ್ತಲೂ ಗಮನ ಹರಿಸಿದ್ದಾರೆ. ಕಬ್ಬು ಬೆಳೆಗಾರರು ಸಮ್ಮಿಶ್ರ ಸರ್ಕಾರದ ವಿರುದ್ಧ ನಿಲುವು ತಳೆಯದಿರಲು ಈ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳು ನಷ್ಟ ಎದುರಿಸುತ್ತಿರುವ ಕಾರಣ ಪ್ರತಿ ಕ್ವಿಂಟಾಲ್ ಕಬ್ಬಿಗೆ ೫.೫ ರು. ಉತ್ಪಾದನಾ ಸಬ್ಸಿಡಿಯನ್ನು ನೇರವಾಗಿ ಕಬ್ಬು ಬೆಳೆಗಾರರಿಗೆ ನೀಡಲು ಕೇಂದ್ರ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುವ ಮುನ್ನವೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಪರ ತೀರ್ಮಾನ ಕೈಗೊಂಡಿತ್ತು. ಕಬ್ಬು ಬೆಳೆಗಾರರಿಗೆ ಬರಬೇಕಿರುವ ಬಾಕಿ ಮೊತ್ತ ಪಾವತಿ ಬಗ್ಗೆ ಸಮ್ಮಿಶ್ರ ಸರ್ಕಾರದತ್ತ ಕಬ್ಬು ಬೆಳೆಗಾರರು ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಮಹಾರಾ‍‍‍ಷ್ಟ್ರದಲ್ಲಿ ೨,೪೩೧ ಕೋಟಿ, ಉತ್ತರ ಪ್ರದೇಶದಲ್ಲಿ ೪,೫೮೯ ಕೋಟಿ, ಬಿಹಾರದಲ್ಲಿ ೮೯೦ ಕೋಟಿ ರೂ.ಬಾಕಿ ಉಳಿಸಿಕೊಂಡಿವೆ.

ರಾಜ್ಯದಲ್ಲಿರುವ ಒಟ್ಟು ೭೧ ಸಕ್ಕರೆ ಕಾರ್ಖಾನೆಗಳು ೨೦೧೮ ಮೇ ೧೫ರ ಅಂತ್ಯಕ್ಕೆ ಒಟ್ಟು ೧,೮೯೨ ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ೨೦೧೮ರ ಏಪ್ರಿಲ್ ೪ರ ಅಂತ್ಯಕ್ಕೆ ಕಬ್ಬು ಬೆಳೆಗಾರರಿಗೆ ೨,೨೧೪ ಕೋಟಿ ರು. ಬಾಕಿ ಉಳಿಸಿಕೊಂಡಿದ್ದವು. ಒಂದೇ ತಿಂಗಳಿನಲ್ಲಿ ಸಕ್ಕರೆ ಕಾರ್ಖಾನೆಗಳು ೩೨೨ ಕೋಟಿ ರೂ.ಗಳನ್ನು ಬೆಳೆಗಾರರಿಗೆ ಪಾವತಿಸಿವೆ. ಮಾಜಿ ಸಚಿವ ಸತೀಶ್‌ ಜಾರಕಿಹೊಳಿ, ಮುರುಗೇಶ್‌ ನಿರಾಣಿ ಸೇರಿದಂತೆ ಹಲವು ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳೂ ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿವೆ. ಪ್ರಭಾವಿಗಳಿಗೆ ಸೇರಿರುವ ಕಂಪನಿಗಳಿಂದಲೇ ೪೧೬ ಕೋಟಿ ರು. ಬಾಕಿ ಬರಬೇಕಿದೆ. ೧೫ ಕಾರ್ಖಾನೆಗಳು ಶೇ.೧೦೦ರಷ್ಟನ್ನು ಬಾಕಿ ಪಾವತಿಸಿವೆ.

೨೦೧೩-೧೪ನೇ ಸಾಲಿನಲ್ಲಿ ೧.೬೦ ಕೋಟಿ, ೨೦೧೪-೧೫ರಲ್ಲಿ ೦.೪೫ ಕೋಟಿ, ೨೦೧೫-೧೬ರಲ್ಲಿ ೨೦.೮೪ ಕೋಟಿ ಬಾಕಿ ಉಳಿಸಿಕೊಂಡಿವೆ. ೨೦೧೬-೧೭ರಲ್ಲಿ ಯಾವ ಬಾಕಿಯನ್ನೂ ಉಳಿಸಿಕೊಂಡಿಲ್ಲ.೨೦೧೭-೧೮ರಲ್ಲಿ ೧,೮೯೨ ಕೋಟಿ ಬಾಕಿ ಉಳಿಸಿಕೊಂಡಿವೆ ಎಂದು ಸಕ್ಕರೆ ನಿರ್ದೇಶನಾಲಯದ ಉನ್ನತ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಮಾಹಿತಿ ನೀಡಿದರು.೨೦೧೭-೧೮ನೇ ಸಾಲಿನಲ್ಲಿ ೬೫ ಕಾರ್ಖಾನೆಗಳು ೩೫೩.೬೯ ಲಕ್ಷ ಮೆಟ್ರಿಕ್ ಟನ್‌ ಕಬ್ಬನ್ನು ಅರೆದಿವೆ. ೩೭.೬೧ ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಿವೆ.

ಪ್ರಭಾವಿ ಮುಖಂಡರ ಒಡೆತನದಲ್ಲಿರುವರ ಕಂಪನಿಗಳಿವು

ಗೋಕಾಕ್‌ನಲ್ಲಿರುವ ಸತೀಶ್‌ ಶುಗರ್ಸ್‌ ಲಿಮಿಟೆಡ್‌ನಿಂದ ೫೮ ಕೋಟಿ, ಗೋಕಾಕ್ ಶುಗರ್ಸ್‌ನಿಂದ ೨೯ ಕೋಟಿ, ಬೆಳಗಾಂ ಶುಗರ್ಸ್‌ನಿಂದ ೪ ಕೋಟಿ, ಶಾಸಕ ಗಣೇಶ್‌ ಹುಕ್ಕೇರಿ ನಿರ್ದೇಶಕನಾಗಿರುವ ಹಾಲಸಿದ್ದನಾಥ ಶುಗರ್ಸ್‌ನಿಂದ ೯ ಕೋಟಿ, ಮಾಜಿ ಸಚಿವ ಡಿ ಬಿ ಇನಾಂದಾರ್‌ ನಿರ್ದೇಶಕರಾಗಿರುವ ಮಲಪ್ರಭಾ ಶುಗರ್ಸ್‌ ೩೦ ಕೋಟಿ, ಶಾಸಕ ಶ್ರೀಮಂತ್‌ ಪಾಟೀಲ್‌ ಒಡೆತನದಲ್ಲಿರುವ ಶಿರಗುಪ್ಪಿ ಶುಗರ್ಸ್‌ನಿಂದ ೭೨ ಕೋಟಿ, ಅಮಿತ್‌ ಕೋರೆ ಒಡೆತನದ ಶಿವಶಕ್ತಿ ಶುಗರ್ಸ್‌ನಿಂದ ೩೪ ಕೋಟಿ ರು. ಬಾಕಿ ಉಳಿಸಿಕೊಂಡಿದೆ.

ಅದೇ ರೀತಿ, ಮಾಜಿ ಸಚಿವ ಮುರುಗೇಶ್‌ ನಿರಾಣಿ ಒಡೆತನದ ಬೀಳಗಿ ಶುಗರ್ಸ್‌ ೪೫ ಕೋಟಿ, ನಿರಾಣಿ ಶುಗರ್ಸ್‌ ೨೭ ಕೋಟಿ, ಸಿದ್ದುನ್ಯಾಮಗೌಡ ಅವರಿಗೆ ಸೇರಿರುವ ಜಮಖಂಡಿ ಶುಗರ್ಸ್‌ ಘಟಕ ೯೬ ಕೋಟಿ, ವಿಜಯಪುರದಲ್ಲಿರುವ ಜಮಖಂಡಿ ಘಟಕ (೨) ೮೧ ಕೋಟಿ ,ಬಾಗಲಕೋಟೆಯಲ್ಲಿನ ಇಐಡಿ ಪ್ಯಾರಿ ಲಿಮಿಟೆಡ್‌ ೨ ಕೋಟಿ, ಅಥಣಿ ರೈತರ ಸಕ್ಕರೆ ಕಾರ್ಖಾನೆ ೩೬ ಕೋಟಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ೨೩ ಕೋಟಿ, ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ೭೨ ಕೋಟಿ, ಗೋದಾವರಿ ಸಕ್ಕರೆ ಕಾರ್ಖಾನೆ ೧೬೧ ಕೋಟಿ, ಪ್ರಭುಲಿಂಗೇಶ್ವರ ೫೭ಕೋಟಿ , ರೇಣುಕಾ ಶುಗರ್ಸ್‌ ೧೦೦ ಕೋಟಿ, ಕಲ್ಬುರ್ಗಿಯಲ್ಲಿರುವ ರೇಣುಕಾ ಶುಗರ್ಸ್ ೭೬ ಕೋಟಿ ಬಾಕಿ ಇರಿಸಿಕೊಂಡಿವೆ.

ಸಕ್ಕರೆ (ನಿಯಂತ್ರಣ) ಆದೇಶ ೧೯೬೬ರ ಪ್ರಕಾರ, ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ೧೪ ದಿನದೊಳಗೆ ಬೆಳೆಗಾರರಿಗೆ ಹಣ ಪಾವತಿ ಮಾಡುವುದು ಕಡ್ಡಾಯ. ವಿಳಂಬವಾದಲ್ಲಿ ಶೇ.೧೫ರಷ್ಟು ಬಡ್ಡಿ ಸೇರಿಸಿ ಬಾಕಿ ಪಾವತಿಸಬೇಕು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಧಿಕಾರವೂ ರಾಜ್ಯ ಸರ್ಕಾರಕ್ಕಿದೆ. ಆದರೆ ಈವರೆಗೂ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಚಲಾಯಿಸಿದ ನಿದರ್ಶನಗಳು ವಿರಳ.

ಇದನ್ನೂ ಓದಿ : ಕುಮಾರಸ್ವಾಮಿ ಅವರ ಸಾಲ ಮನ್ನಾ ಸೇವೆಗೆ ಪ್ರಧಾನಿಯವರೇಕೆ ಕೈ ಜೋಡಿಸಬಾರದು?

ಸಕ್ಕರೆ ಉತ್ಪಾದಕರಿಗೆ ನಷ್ಟ

ಕಬ್ಬಿನ ದರ ನಿಗದಿ ಮಾಡುವಾಗ ಸಕ್ಕರೆ ಉತ್ಪಾದನಾ ವೆಚ್ಚ ಮತ್ತು ಸಕ್ಕರೆ ಮಾರುಕಟ್ಟೆ ದರವನ್ನು ಆಧರಿಸಿರಬೇಕು ಎಂದು ಇಂಡಿಯನ್ ಷುಗರ್ ಮಿಲ್ಸ್ ಅಸೋಸಿಯೇಷನ್ (ಇಸ್ಮಾ) ಕೇಂದ್ರ ಸರ್ಕಾರಕ್ಕೆ ಈಗಾಗಲೇ ಒತ್ತಾಯಿಸಿದೆ. ಪ್ರಸ್ತುತ ಕಬ್ಬಿಗೆ ನಿಗದಿ ಮಾಡಿರುವ ದರವು ಸಕ್ಕರೆಯ ಮಾರುಕಟ್ಟೆ ವಾಸ್ತವಿಕ ದರಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದಾಗಿ ಸಕ್ಕರೆ ಉತ್ಪಾದಕರು ನಷ್ಟಕ್ಕೀಡಾಗಿದ್ದಾರೆ ಎಂದು ತಿಳಿಸಿದೆ.

ಪ್ರಸ್ತುತ 10.5ರಷ್ಟು ಸಕ್ಕರೆ ಇಳುವರಿ ಆಧರಿಸಿ ಪ್ರತಿ ಟನ್‌ಗೆ 2,900 ರುಪಾಯಿ ನಿಗದಿ ಮಾಡಲಾಗಿದೆ. ಈ ದರವು ಸಕ್ಕರೆಯ ಕಾರ್ಖಾನೆ ಪೂರ್ವ ದರ 3,580 ರುಪಾಯಿ ಇದ್ದಾಗ ಮಾತ್ರ ನ್ಯಾಯಸಮ್ಮತವಾಗಿರುತ್ತದೆ. ಆದರೆ, ಕಾರ್ಖಾನೆ ಪೂರ್ವ ಸಕ್ಕರೆ ದರವು ವಾಸ್ತವಿಕ ಕಬ್ಬಿನ ದರಕ್ಕಿಂತಲೂ ಕಡಮೆಯಿದೆ ಎಂದು ಇಸ್ಮಾ ವಿವರಿಸಿದೆ. ಸಕ್ಕರೆ ಕನಿಷ್ಠ ಮಾರಾಟ ದರ ನಿಗದಿ ಮಾಡುವುದಾದರೆ ಕಬ್ಬಿನ ದರ ಮತ್ತು ಸಕ್ಕರೆ ಉತ್ಪಾದನೆವೆಚ್ಚ ಗಮನದಲ್ಲಿಟ್ಟು ನಿಗದಿ ಮಾಡಬೇಕು. ಇಲ್ಲವಾದಲ್ಲಿ ಸಕ್ಕರೆ ಉತ್ಪಾದಕರು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವುದು ಕಷ್ಟವಾಗುತ್ತದೆ ಎಂದು ಇಸ್ಮಾ ಹೇಳಿದೆ.

“2017–18ರ ಸಕ್ಕರೆ ಮಾರುಕಟ್ಟೆ ಋತುವಿನಲ್ಲಿ ಜನವರಿ 31ರವರೆಗೆ ಕಾರ್ಖಾನೆಗಳು 13,931 ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿವೆ,” ಎಂದು ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ ರಾಜ್ಯ ಸಚಿವ ಸಿ ಆರ್‌ ಚೌಧರಿ ಅವರು ಲೋಕಸಭೆಗೆ ಇತ್ತೀಚೆಗಷ್ಟೇ ಲಿಖಿತ ಉತ್ತರದಲ್ಲಿ ತಿಳಿಸಿದ್ದನ್ನು ಸ್ಮರಿಸಿಕೊಳ್ಳಬಹುದು. “ಸಕ್ಕರೆ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿದೆಯಾದರೂ ಪ್ರತಿ ಕೆ.ಜಿ.ಗೆ 9 ರೂ.ನಷ್ಟು ಬೆಲೆ ಕಡಿಮೆಯಾಗಿ ಕಾರ್ಖಾನೆಗಳು ನಷ್ಟ ಅನುಭವಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು 20,000 ಕೋಟಿ ರು.ನಷ್ಟು ಬಾಕಿಯನ್ನು ಕಬ್ಬು ಬೆಳೆಗಾರರಿಗೆ ಬಾಕಿ ನೀಡಬೇಕಿದೆ. 1540 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡಲಿದೆ,” ಎಂದು ಸಕ್ಕರೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಮಾಹಿತಿ ನೀಡಿದರು. ಅಲ್ಲದೆ, 2017-18ರ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಲ್ ಗೆ 5.50ರಂತೆ ಹಣಕಾಸು ನೆರವು ಒದಗಿಸುವ ಈ ಸಬ್ಸಿಡಿಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 1,540 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.

ಜೆಡಿಎಸ್ Vidhana Soudha ವಿಧಾನಸೌಧ ಕಾಂಗ್ರೆಸ್ ಪಕ್ಷ ಕಬ್ಬು SugarCane CM H D Kumaraswamy ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆಗಳು ಬಾಕಿ ಮೊತ್ತ ಕಬ್ಬು ಬೆಳೆಗಾರರು Sugarcane Farmers Sugar Mills Due Payments
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು