ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಲೋಕಾಯುಕ್ತರು ಮುಕ್ತಾಯಗೊಳಿಸಿದ್ದ ಪ್ರಕರಣಕ್ಕೆ ಸಿಎಜಿ ಅಧಿಕಾರಿಗಳಿಂದ ಮರುಜೀವ

ಲೋಕಾಯುಕ್ತರು ಮುಕ್ತಾಯಗೊಳಿಸಿದ್ದ ಪ್ರಕರಣವೊಂದನ್ನು ಸಿಎಜಿ ಅಧಿಕಾರಿಗಳು ಮತ್ತೆ ತೆರೆದಿದ್ದಾರೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪ ನಡೆದಿವೆ ಎಂದು ಪ್ರಾಥಮಿಕ ತಪಾಸಣೆ ವರದಿ ಅಭಿಪ್ರಾಯಪಟ್ಟಿದೆ. ಪ್ರಕರಣ ಮುಚ್ಚಿಹೋಯಿತು ಎನ್ನುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ

ಮಹಾಂತೇಶ್ ಜಿ

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರು ಮುಕ್ತಾಯಗೊಳಿಸಿದ್ದ ಐಟಿಐಗಳಿಗೆ ಟೂಲ್‌ ಕಿಟ್ ಖರೀದಿಯಲ್ಲಿನ ಲೋಪಗಳ ಕುರಿತ ಪ್ರಕರಣ ಮರುಜೀವ ಪಡೆದಿದೆ. ಇದೇ ಪ್ರಕರಣ ಕುರಿತು ತಪಾಸಣೆ ನಡೆಸಿರುವ ಪ್ರಧಾನ ಮಹಾಲೇಖಪಾಲರು (ಸಿಎಜಿ), ಟೆಂಡರ್‌ನಲ್ಲಿನ ಲೋಪಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎಂದು ತಪಾಸಣೆ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ತಪಾಸಣೆ ವರದಿಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ತಪಾಸಣೆ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಉದ್ಯೋಗ ತರಬೇತಿ ಇಲಾಖೆ ಅಧಿಕಾರಿಗಳು, ೩ ತಿಂಗಳು ಕಳೆದರೂ ಸಿಎಜಿ ಅಧಿಕಾರಿಗಳಿಗೆ ಯಾವುದೇ ಉತ್ತರವನ್ನೂ ಒದಗಿಸಿಲ್ಲ ಎಂದು ತಿಳಿದುಬಂದಿದೆ. ಎಸ್‌ಸಿಪಿ ಮತ್ತು ಎಸ್‌ಟಿಪಿ ಅನುದಾನದಲ್ಲಿ ಟೂಲ್ ಕಿಟ್‌ ಖರೀದಿ ಸಂಬಂಧ ನಡೆದಿದ್ದ ಟೆಂಡರ್ ಪ್ರಕ್ರಿಯೆ‌ಯಲ್ಲಿ ಲೋಪಗಳು ಹೇಗೆಲ್ಲ ನಡೆದಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜು ಎಂಬುವರು ಮೇ ೨೭, ೨೦೧೭ರಂದು ಲೋಕಾಯುಕ್ತರಿಗೆ ಸಮಗ್ರ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.

ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಿ ಎಸ್ ವಿಶ್ವನಾಥ್, ಪಿ ಬಿ ರಾಮಮೂರ್ತಿ, ಸಮೀರ್ ಶುಕ್ಲಾ, ಈಶ್ವರ್‌ ನಾಯಕ್‌ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿದ್ದರು. ದೂರನ್ನು ನೋಂದಾಯಿಸಿಕೊಂಡಿದ್ದ ಲೋಕಾಯುಕ್ತ ಸಂಸ್ಥೆಯ ಹೆಚ್ಚುವರಿ ವಿಚಾರಣಾಧಿಕಾರಿಗಳು ಸೆಪ್ಟೆಂಬರ್‌ ೧೮, ೨೦೧೭ರಂದು ಸಕಾರಣಗಳಿಲ್ಲದೆ ಮುಕ್ತಾಯಗೊಳಿಸಿದ್ದರು. ಇದನ್ನು ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರು ಅನುಮೋದಿಸಿದ್ದರು. ಈ ಪ್ರಕರಣ ಕುರಿತು ‘ದಿ ಸ್ಟೇಟ್‌’ ವರದಿ ಪ್ರಕಟಿಸಿತ್ತು.

ವಿಶೇಷವೆಂದರೆ, ಇದೇ ಪ್ರಕರಣವನ್ನು ತಪಾಸಣೆಗೊಳಪಡಿಸಿರುವ ಸಿಎಜಿ ಅಧಿಕಾರಿಗಳು, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆಹಚ್ಚಿದ್ದಾರೆ. ಅಲ್ಲದೆ, ಉದ್ಯೋಗ ಮತ್ತು ತರಬೇತಿ ಇಲಾಖೆ ೨೦೧೬-೧೭ನೇ ಸಾಲಿನಲ್ಲಿ ನಡೆಸಿರುವ ವಿವಿಧ ಟೆಂಡರ್‌ ಮತ್ತು ಖರೀದಿ ಪ್ರಕ್ರಿಯೆಗಳ ಕುರಿತು ತಪಾಸಣೆ ಕಾರ್ಯವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : ದಾಖಲೆ ಇದ್ದರೂ ಕಾರಣ ನೀಡದೆ ೩೧೦ ಪ್ರಕರಣ ಮುಕ್ತಾಯ ಮಾಡಿದ ಲೋಕಾಯುಕ್ತರು!

“ಟೂಲ್ ಕಿಟ್ ಖರೀದಿ ಸಂದರ್ಭದಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾತ್ರ ಆಗಿರುವುದಲ್ಲದೆ, ಇದೊಂದು ಕ್ರಮಬದ್ಧವಲ್ಲದ ಯೋಜನೆ. ಗುತ್ತಿಗೆದಾರರು ಮತ್ತು ಸಮಾಲೋಚಕರೊಂದಿಗೆ ಆಗಿರುವ ಒಪ್ಪಂದಗಳಲ್ಲಿ ಆಗಿರುವ ಲೋಪಗಳಿಂದಾಗಿ ೯.೭೦ ಕೋಟಿ ರು. ಸರಬರಾಜುದಾರರಿಗೆ ಹೆಚ್ಚುವರಿಯಾಗಿ ಪಾವತಿಯಾಗಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ,” ಎಂದು ತಪಾಸಣೆ ವರದಿಯ ೩೦ನೇ ಅಧ್ಯಾಯದಲ್ಲಿ ಸಿಎಜಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿಎಜಿ ಅಧಿಕಾರಿಗಳ ತಪಾಸಣೆ ವರದಿಯ ಪ್ರತಿ 

ಉಚಿತವಾಗಿ ಟೂಲ್‌ ಕಿಟ್‌ ಒದಗಿಸಲು ೨೦೧೫ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿ ಇಲಾಖೆಯ ಅಧಿಕಾರಿಗಳು, ಟೆಂಡರ್‌ದಾರರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದರು. ಟೆಂಡರ್‌ಗೆ ಸಂಬಂಧಿಸಿದ ಹಣಕಾಸಿನ ವಿನಿಯೋಗದ ವಿವರಗಳನ್ನು ಟೆಂಡರ್‌ದಾರರಿಗೆ ಅಧಿಕಾರಿಗಳೇ ನೇರವಾಗಿ ತಲುಪಿಸಿದ್ದಾರೆ. ತಾಂತ್ರಿಕ ಮತ್ತು ಅಂದಾಜು ವೆಚ್ಚವನ್ನು ತಯಾರಿಸಲು ರಚಿಸಿದ್ದ ಸಮಿತಿಗೆ ಉನ್ನತ ಅಧಿಕಾರಿಗಳನ್ನು ನೇಮಿಸದೆ ಕೆಳಹಂತದ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಈ ಅಧಿಕಾರಿಗಳು ನೀಡಿದ್ದ ಅಂದಾಜು ವೆಚ್ಚಕ್ಕೂ ಖರೀದಿಸಿದ ದರಗಳಿಗೆ ಹೋಲಿಸಿದರೆ ಅಂದಾಜು ವೆಚ್ಚದ ದರ, ಖರೀದಿಸಿದ ದರದ ಮಧ್ಯೆ ಶೇ.೮೫ಕ್ಕಿಂತಲೂ ಹೆಚ್ಚಿದ್ದವು ಅಲ್ಲದೆ, ಮಾರುಕಟ್ಟೆ ದರಕ್ಕಿಂತಲೂ ನಾಲ್ಕೈದು ಪಟ್ಟು ಹೆಚ್ಚಿತ್ತು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಪ್ರತಿ

ಟೂಲ್‌ ಕಿಟ್‌ ಪ್ರಕರಣವೊಂದರಲ್ಲೇ ಸರ್ಕಾರಕ್ಕೆ ೨೫ ಕೋಟಿ ರುಪಾಯಿನಷ್ಟು ವಂಚನೆಯಾಗಿದೆ ಎಂದು ವಿವರಿಸಿದ್ದರು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೆಳಹಂತದ ಅಧಿಕಾರಿಗಳು ಟೆಂಡರ್‌ದಾರರು ಕಳಿಸಿದ್ದ ದರಪಟ್ಟಿಯನ್ನೇ ಅನುಮೋದಿಸಿದ್ದರ ಬಗ್ಗೆ ದಾಖಲೆಗಳನ್ನು ಕಲೆಹಾಕಿದ್ದಲ್ಲದೆ, ತಾಂತ್ರಿಕ ಬಿಡ್‌ನಲ್ಲಿ ಹಲವು ಲೋಪದೋಷಗಳನ್ನು ಪತ್ತೆಹಚ್ಚಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಆದರೆ, ಈ ದೂರಿನಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲೋಕಾಯುಕ್ತರು ದೂರು ಮುಕ್ತಾಯಗೊಳಿಸಿದ್ದು ಸಂಶಯಗಳಿಗೆ ಕಾರಣವಾಗಿತ್ತು.

ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರ ಪರಿಧಿಗೆ ಒಳಪಡುವ ಹಲವು ಪ್ರಕರಣಗಳನ್ನು ಮುಕ್ತಾಯಗೊಳಿಸಿರುವುದು ತಿಳಿದುಬಂದಿದೆ. ಅಕ್ರಮ, ನಿಯಮಬಾಹಿರ ಚಟುವಟಿಕೆ, ಉಲ್ಲಂಘನೆ, ಕರ್ತವ್ಯಲೋಪ, ವಂಚನೆ, ಅಧಿಕಾರ ದುರುಪಯೋಗ, ಅನುಮೋದನೆ ಇಲ್ಲದೆ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ನಡೆಸಿರುವ ಖರೀದಿ ಪ್ರಕ್ರಿಯೆಗಳ ಕುರಿತ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರು, ಸರ್ಕಾರದ ಹಿರಿಯ ಅಧಿಕಾರಿಗಳು ದಾಖಲೆ, ಪುರಾವೆ ಸಮೇತ ದೂರುಗಳನ್ನು ಸಲ್ಲಿಸಿದ್ದರು. ವಿಶ್ವನಾಥ್ ಶೆಟ್ಟಿ ಅವರು ಅಧಿಕಾರ ವಹಿಸಿಕೊಂಡ ನಂತರ ಅವೆಲ್ಲವೂ ಮುಕ್ತಾಯಗೊಂಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಮುಕ್ತಾಯಗೊಂಡಿರುವ ೩೦೦ಕ್ಕೂ ಹೆಚ್ಚು ಪ್ರಕರಣಗಳ ಪೈಕಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಸೇರಿದಂತೆ ಹಿರಿಯ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ಅಧಿಕಾರಿಗಳು ಹಾಗೂ ಪ್ರಭಾವಿಗಳ ವಿರುದ್ಧದ ಪ್ರಕರಣಗಳು ಸೇರಿವೆ.

ಟೂಲ್‌ಕಿಟ್‌ ಖರೀದಿ ಟೆಂಡರ್‌ ಪ್ರಕ್ರಿಯೆಯಲ್ಲಾಗಿರುವ ಲೋಪಗಳ ಕುರಿತು ಸಿಎಜಿ ಅಧಿಕಾರಿಗಳು ನಡೆಸಿರುವ ತಪಾಸಣೆ, ಉದ್ಯೋಗ ತರಬೇತಿ ಇಲಾಖೆಯ ಆಯುಕ್ತರು ಸೇರಿದಂತೆ ಇನ್ನಿತರ ಉನ್ನತ ಅಧಿಕಾರಿಗಳ ವಲಯದಲ್ಲಿ ನಡುಕ ಶುರುವಾಗಿದೆ.

ಲೋಕಾಯುಕ್ತ Lokayukta Justice Vishwanath Shetty ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ CAG ಸಿಎಜಿ Lokayukta ಜಿ ಪರಮೇಶ್ವರ Industrial Training Institute ಕೈಗಾರಿಕೆ ತರಬೇತಿ ಸಂಸ್ಥೆ CM H D Kumaraswamy ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು