ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಐಟಿಐ ಉಪಕರಣ ಖರೀದಿಯಲ್ಲಿ ಬೃಹತ್ ಗೋಲ್‌ಮಾಲ್ ಪತ್ತೆ ಮಾಡಿದ ಸಿಎಜಿ

ಉದ್ಯೋಗ ತರಬೇತಿ ಇಲಾಖೆಯಲ್ಲಿ ನಡೆಯುತ್ತಿರುವ ೪(ಜಿ) ವಿನಾಯಿತಿ ಸೌಲಭ್ಯ ದುರುಪಯೋಗವಾಗಿದೆ. ಈ ಸೌಲಭ್ಯದಡಿ ಸರ್ಕಾರದ ಬೊಕ್ಕಸಕ್ಕೂ ಅಪಾರ ಹಾನಿಯಾಗಿದೆ. ಇಲಾಖೆ ಅಧಿಕಾರಿಗಳು ಅನುದಾನವನ್ನು ಹೇಗೆಲ್ಲ ಖರ್ಚು ಮಾಡಿದ್ದಾರೆಂಬುದನ್ನು ಸಿಎಜಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ

ಮಹಾಂತೇಶ್ ಜಿ

ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳ (ಐಟಿಐ) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದ ವಿವಿಧ ಅನುದಾನಗಳನ್ನು ಆಯಾ ವರ್ಷದಲ್ಲೇ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಉದ್ಯೋಗ ತರಬೇತಿ ಇಲಾಖೆ ವಿಫಲವಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಮೊತ್ತದ ಹೆಚ್ಚುವರಿ ಹೊರೆಯೂ ಬಿದ್ದಿದೆ.

ಯಂತ್ರೋಪಕರಣ, ಸಮವಸ್ತ್ರ, ಸೋಲಾರ್‌ ಬೀದಿ ದೀಪ, ಲ್ಯಾಪ್‌ಟಾಪ್‌, ಟೂಲ್‌ ಕಿಟ್‌ ಖರೀದಿಯಲ್ಲಿ ನಡೆದಿರುವ ವಿವಿಧ ಸ್ವರೂಪದ ಲೋಪಗಳು ಬೆಳಕಿಗೆ ಬಂದಿವೆ. ಅಲ್ಲದೆ, ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿರುವ (೪ ಜಿ) ಅಧಿಕಾರಿಗಳ ತಂಡ, ಕಿಯೋನಿಕ್ಸ್‌ ಮೂಲಕ ಖಾಸಗಿ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಿರುವುದನ್ನು ಸಿಎಜಿ ಅಧಿಕಾರಿಗಳ ತಂಡ ಪತ್ತೆಹಚ್ಚಿದೆ.

ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿದ್ದ ಕೋಟ್ಯಂತರ ರುಪಾಯಿ ಮೊತ್ತದ ಅನುದಾನವನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಕೆ ಮಾಡದಿರುವುದು, ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಖರೀದಿ ಮಾಡಿರುವುದು, ಅನುಪಯುಕ್ತ ಯೋಜನೆಗಳಿಗೆ ಅನುದಾನ ವಿನಿಯೋಗ, ಅನುದಾನ ಬಳಕೆ ಸಂದರ್ಭದಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಬಜೆಟ್‌ ಮ್ಯಾನುಯಲ್ ಉಲ್ಲಂಘಿಸಿರುವುದು ಸೇರಿದಂತೆ ವಿವಿಧ ಆಡಳಿತಾತ್ಮಕ ಲೋಪಗಳನ್ನು ಪ್ರಧಾನ ಮಹಾಲೇಖಪಾಲರು (ಸಿಎಜಿ) ಪತ್ತೆಹಚ್ಚಿದ್ದಾರೆ. ಸಿಎಜಿ ಅಧಿಕಾರಿಗಳು ನಡೆಸಿರುವ ತಪಾಸಣೆ, ಉದ್ಯೋಗ ತರಬೇತಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ಒರೆಗೆ ಹಚ್ಚಿದೆ. ತಪಾಸಣೆ ವರದಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಸೋಲಾರ್‌ ಉಪಕರಣ, ಟ್ಯಾಬ್, ಸೋಲಾರ್ ಬೀದಿದೀಪ, ಸೋಲಾರ್ ಪವರ್ ಪ್ಯಾಕ್ ಖರೀದಿ ಪ್ರಕ್ರಿಯೆಗಳಲ್ಲಿನ ಲೋಪಗಳು, ಕರ್ನಾಟಕ ಜರ್ಮನ್ ವಿವಿಧ ಕೌಶಲ್ಯಗಳ ಅಭಿವೃದ್ಧಿ ಕೇಂದ್ರಕ್ಕೆ ಹಂಚಿಕೆಯಾಗಿದ್ದ ಅನುದಾನ ಬಳಕೆ ಬಗ್ಗೆಯೂ ಸಿಎಜಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆಯಲ್ಲಿ ಕಂಡುಬಂದಿರುವ ಲೋಪಗಳ ಕುರಿತು ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿಗಳು ನೀಡಿರುವ ಸಮಜಾಯಿಷಿಯನ್ನು ಸಿಎಜಿ ಅಧಿಕಾರಿಗಳು ಒಪ್ಪಿಕೊಂಡಿಲ್ಲ. ಹಲವು ಉಪಕರಣಗಳನ್ನು ನೇರವಾಗಿ ಖರೀದಿಸಲು ಅವಕಾಶಗಳಿದ್ದರೂ ಕಿಯೋನಿಕ್ಸ್‌ ಮೂಲಕ ಖರೀದಿಸಿ ಬೊಕ್ಕಸಕ್ಕೆ ಹಾನಿ ಮಾಡಿರುವುದಕ್ಕೆ ಆಕ್ಷೇಪಗಳನ್ನು ಎತ್ತಿದ್ದಾರೆ.

ಸೋಲಾರ್‌ ಉಪಕರಣ ಖರೀದಿಯಲ್ಲಿ ಹೆಚ್ಚುವರಿ ವೆಚ್ಚ: ರಾಜ್ಯದ ೪ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿನ ಸರ್ಕಾರಿ (೨೫೮), ಅನುದಾನಿತ (೧೯೬), ಮಾನ್ಯತೆ ಪಡೆದ ಖಾಸಗಿ ಕೈಗಾರಿಕೆ ತರಬೇತಿ ಸಂಸ್ಥೆ (೪೫), ಎನ್‌ಸಿವಿಟಿ ಅಧೀನದಲ್ಲಿ ೧,೧೭೨ ಖಾಸಗಿ ಕೈಗಾರಿಕೆ ತರಬೇತಿ ಸಂಸ್ಥೆಗಳಿಗೆ ಸೋಲಾರ್‌ ದೀಪ ಮತ್ತು ಸೋಲಾರ್‌ ಬೀದಿದೀಪಗಳನ್ನು ಕಿಯೋನಿಕ್ಸ್‌ ಮೂಲಕ ೨೦೧೫-೧೬ರಲ್ಲಿ ಖರೀದಿ ಪ್ರಕ್ರಿಯೆ ನಡೆಸಿತ್ತು. ಖರೀದಿ ಪ್ರಕ್ರಿಯೆಗಳನ್ನು ತಪಾಸಣೆಗೊಳಪಡಿಸಿರುವ ಸಿಎಜಿ ಅಧಿಕಾರಿಗಳು, ೩.೧೯ ಕೋಟಿ ರುಪಾಯಿ ಹೆಚ್ಚುವರಿ ವೆಚ್ಚವಾಗಿರುವುದನ್ನು ಪತ್ತೆಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

ಈ ಉಪಕರಣಗಳನ್ನು ಖರೀದಿಸಲು ಸರ್ಕಾರ ೯.೫೦ ಕೋಟಿ ರು. ವೆಚ್ಚ ಅಂದಾಜಿಸಿತ್ತು. ಫೆ.೧೮, ೨೦೧೫ರಲ್ಲಿ ೪(ಜಿ) ವಿನಾಯಿತಿ ಕೂಡ ನೀಡಿತ್ತು. ತಲಾ ೪,೮೮೨ ರು. ಮೊತ್ತದಲ್ಲಿ ಸೋಲಾರ್ ದೀಪದ ಯೂನಿಟ್‌ ಸರಬರಾಜು ಮಾಡಲು ಕಿಯೋನಿಕ್ಸ್‌ ಕೊಟೇಷನ್‌ ನೀಡಿತ್ತು. ಆದರೆ, ಅಂತಿಮವಾಗಿ ದರ ನಿಗದಿಪಡಿಸುವ ಸಂದರ್ಭದಲ್ಲಿ ಉದ್ಯೋಗ ತರಬೇತಿ ಇಲಾಖೆಯ ಯಾವ ಅಧಿಕಾರಿಯೂ ಭಾಗಿಯಾಗಿರಲಿಲ್ಲ. ಆ ನಂತರ ದರ ಸಂಧಾನ ನಡೆದ ಮೇಲೂ ಯೂನಿಟ್‌ವೊಂದಕ್ಕೆ ೫,೧೨೪ ರು. ನಿಗದಿಯಾಗಿತ್ತು! ಇದನ್ನು ಇಲಾಖೆ ಅಧಿಕಾರಿಗಳು (೧೮,೪೫೮ ಯೂನಿಟ್) ಒಪ್ಪಿಕೊಂಡಿದ್ದರು. ಕಿಯೋನಿಕ್ಸ್‌ ನೀಡಿದ್ದ ದರವನ್ನು ಒಪ್ಪಿಕೊಳ್ಳುವ ಮುನ್ನ ಅಧಿಕಾರಿಗಳು ಮಾರುಕಟ್ಟೆ ದರಕ್ಕೆ ಹೋಲಿಸಲಿಲ್ಲ ಎಂಬ ಅಂಶವನ್ನು ತಪಾಸಣೆ ವರದಿ ಉಲ್ಲೇಖಿಸಿದೆ.

ಈ ಉಪಕರಣಗಳು ಸಂಬಂಧಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ತಲುಪಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳದೆಯೇ ಸರಬರಾಜುದಾರರಿಗೆ ಒಟ್ಟು ೯.೪೫ ಕೋಟಿ ರು. ಪೈಕಿ ಅರ್ಧದಷ್ಟು ಎಂದರೆ, ೪.೭೨ ಕೋಟಿ ರು.ಗಳನ್ನು ಪಾವತಿಸಿತ್ತು. ಉಪಕರಣಗಳ ಗುಣಮಟ್ಟವನ್ನು ಪರಿಶೀಲಿಸುವ ಗೋಜಿಗೆ ಅಧಿಕಾರಿಗಳು ಹೋಗಿರಲಿಲ್ಲ. ವಿಶೇಷವೆಂದರೆ ಕಿಯೋನಿಕ್ಸ್‌, ನ್ಯೂಟೆಕ್‌ ಸೋಲಾರ್‌ ಸಿಸ್ಟಂನಿಂದ ಸೋಲಾರ್‌ ದೀಪದ ಯೂನಿಟ್‌ವೊಂದಕ್ಕೆ ೨,೭೦೦ ರು. ಕೊಟ್ಟು ಖರೀದಿಸಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡಿತ್ತು.

ಇದನ್ನೂ ಓದಿ : ಲೋಕಾಯುಕ್ತರು ಮುಕ್ತಾಯಗೊಳಿಸಿದ್ದ ಪ್ರಕರಣಕ್ಕೆ ಸಿಎಜಿ ಅಧಿಕಾರಿಗಳಿಂದ ಮರುಜೀವ

ಅಲ್ಲದೆ, ರೇಷ್ಮೆ ಇಲಾಖೆಯ ಆಯುಕ್ತರ ವರದಿ ಪ್ರಕಾರ, ೨೦೧೩ರಲ್ಲಿ ಸೋಲಾರ್‌ ದೀಪಗಳನ್ನು ಇದೇ ಕಂಪನಿಯಿಂದ ೧,೯೮೦ ರು.ಗೆ ಖರೀದಿಸಲಾಗಿತ್ತು. ಉದ್ಯೋಗ ತರಬೇತಿ ಇಲಾಖೆಗೆ ಅಂತಿಮಗೊಳಿಸಿದ್ದ ದರಕ್ಕೂ ಮತ್ತು ವಿವಿಧ ಇಲಾಖೆಗಳಿಗೆ ಸರಬರಾಜು ಮಾಡಿದ್ದ ದರಕ್ಕೂ ೨,೪೨೪ ರು. ವ್ಯತ್ಯಾಸವಿದೆ ಎಂಬುದನ್ನು ಸಿಎಜಿ ಅಧಿಕಾರಿಗಳು ತಪಾಸಣೆ ವೇಳೆಯಲ್ಲಿ ಬೆಳಕಿಗೆ ತಂದಿದ್ದಾರೆ.

೨೦೧೪-೧೫ನೇ ಸಾಲಿನಲ್ಲಿ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿರುವ ಒಟ್ಟು ೭೭ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಿಗೆ ೩೮೧ ಸೋಲಾರ್‌ ಬೀದಿದೀಪಗಳನ್ನು ಸರಬರಾಜು ಮಾಡುವಲ್ಲಿಯೂ ದರ ವ್ಯತ್ಯಾಸ ಪತ್ತೆಹಚ್ಚಿದ್ದಾರೆ. ಒಟ್ಟು ೧.೯೯ ಕೋಟಿ ರು. ಮೊತ್ತಕ್ಕೆ ಸರ್ಕಾರ ಆಡಳಿತಾತ್ಮಕ ಮಂಜೂರು ನೀಡುವ ಜೊತೆಯಲ್ಲೇ ೪(ಜಿ) ವಿನಾಯಿತಿಯನ್ನೂ ನೀಡಿತ್ತು. ದರ ಸಂಧಾನದ ಬಳಿಕ ಸೋಲಾರ್ ದೀಪದ ಯೂನಿಟ್‌ವೊಂದಕ್ಕೆ ಕಿಯೋನಿಕ್ಸ್ ಕೋಟ್ ಮಾಡಿದ್ದ ೬೭,೮೧೬ ರು. ದರವನ್ನು ಅಂತಿಮಗೊಳಿಸುವ ಮುನ್ನ ಇಲಾಖೆ ಅಧಿಕಾರಿಗಳು ಆ ದರವನ್ನು ಮೌಲ್ಯಮಾಪನಗೊಳಿಸಲಿಲ್ಲ. ೭ ಐಟಿಐಗಳಿಗೆ ಈ ಉಪಕರಣಗಳು ಸರಬರಾಜಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳದೆಯೇ ಹಣವನ್ನು ಪಾವತಿಸಲಾಗಿತ್ತು.

ವಿಶೇಷವೆಂದರೆ, ಕಿಯೋನಿಕ್ಸ್‌ ಸರಬರಾಜು ಮಾಡಿದ್ದ ಅದೇ ಗುಣಮಟ್ಟದ ಉಪಕರಣಗಳನ್ನು ೫೬,೮೭೧ ರು., ೩೧,೫೪೦ ರು., ೨೬,೪೪೬ ರು.ಗಳಿಗೆ ಇತರ ಇಲಾಖೆಗಳಿಗೆ ಸರಬರಾಜು ಮಾಡಿತ್ತು. ಅಧಿಕಾರಿಗಳು ದರವನ್ನು ಅಂತಿಮಗೊಳಿಸುವ ಮುನ್ನ ಇದನ್ನು ಗಮನಿಸಿದ್ದಲ್ಲಿ ಸರ್ಕಾರಕ್ಕೆ ೩೮.೬೩ ಲಕ್ಷ ರು.ಗಳನ್ನು ಉಳಿಸಬಹುದಿತ್ತು ಎಂದು ತಪಾಸಣೆ ವರದಿ ಅಭಿಪ್ರಾಯಪಟ್ಟಿದೆ.

ಇನ್ನು, ವಿವಿಧ ತರಬೇತಿ ಯೋಜನೆಗಳಿಗೆಂದು ಕರ್ನಾಟಕ ಜರ್ಮನ್‌ ವಿವಿಧ ಕೌಶಲ್ಯ ಅಭಿವೃದ್ಧಿ ಸಂಸ್ಥೆಗೆ (ಕೆಜಿಎಂಎಸ್‌ಡಿಸಿ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಿದ್ದ ಒಟ್ಟು ೧೧೯ ಕೋಟಿ ರು. ಪೈಕಿ ೪೬.೮೪ ಕೋಟಿ ರುಪಾಯಿ ಬಳಕೆಯಾಗಿರಲಿಲ್ಲ. ಈ ಅನುದಾನವನ್ನು ಸ್ವೀಕರಿಸಿದ್ದ ಸಂಸ್ಥೆ, ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿಟ್ಟಿತ್ತು. ೨೦೧೧-೧೨ರಿಂದ ೨೦೧೬-೧೭ರವರೆಗೆ ಕೇವಲ ೭೩.೦೫ ಕೋಟಿ ರುಪಾಯಿಯನ್ನಷ್ಟೇ ಬಳಸಿಕೊಂಡಿತ್ತು. ಉಳಿಕೆಯಾಗಿದ್ದ ೪೬.೮೪ ಕೋಟಿ ರುಪಾಯಿಯನ್ನು ಸಂಸ್ಥೆ ಇಲಾಖೆಗಾಗಲೀ, ಸರ್ಕಾರಕ್ಕಾಗಲೀ ಹಿಂದಿರುಗಿಸಿರಲಿಲ್ಲ. ಆರ್ಥಿಕ ವರ್ಷ ಪೂರ್ಣಗೊಂಡರೂ ಆ ಹಣವನ್ನು ತನ್ನ ಬಳಿಯೇ ಇರಿಸಿಕೊಳ್ಳುವ ಮೂಲಕ ಕರ್ನಾಟಕ ಬಜೆಟ್ ಮ್ಯಾನುಯಲ್ ಅನ್ನು ಉಲ್ಲಂಘಿಸಿದೆ.

ಅಲ್ಲದೆ, ಈಗಾಗಲೇ ವೆಚ್ಚ ಮಾಡಿರುವ ಹಣದ ಕುರಿತು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವುದು ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂಬ ಅಂಶ ತಪಾಸಣೆ ವರದಿಯಿಂದ ತಿಳಿದುಬಂದಿದೆ. ಹಾಗೆಯೇ ಇದೇ ಸಂಸ್ಥೆ ಕೆನರಾ, ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲಿರಿಸಿದ್ದ ಠೇವಣಿ ಮೊತ್ತಕ್ಕೆ ಗಳಿಕೆಯಾಗಿದ್ದ ೪.೪೬ ಕೋಟಿ ರು. ಬಡ್ಡಿ ಹಣವನ್ನೂ ಬಳಕೆ ಮಾಡಿರಲಿಲ್ಲ.

ಅದೇ ರೀತಿ, ರಾಜ್ಯದ ೧೦ ಹಿಂದುಳಿದ ತಾಲೂಕುಗಳಲ್ಲಿನ ೩೭ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ಕೊರತೆ ಇದ್ದ ಟೂಲ್‌, ಪೀಠೋಪಕರಣ ಖರೀದಿಯಲ್ಲಿಯೂ ನಿರಂತರವಾಗಿ ವೈಫಲ್ಯವನ್ನು ಪತ್ತೆಹಚ್ಚಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಲ್ಲಿ ೫.೫೭ ಕೋಟಿ ರು. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ತಾಂತ್ರಿಕ ಮೌಲ್ಯಮಾಪನದವರೆಗೂ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ೨೦೧೫-೧೬ನೇ ಆರ್ಥಿಕ ವರ್ಷ ಪೂರ್ಣಗೊಂಡಿದ್ದರೂ ಆಡಳಿತಾತ್ಮಕ ಅನುಮೋದನೆ ದೊರಕಿರಲಿಲ್ಲ. ಆದರೂ ೨೦೧೬-೧೭ನೇ ಸಾಲಿನಲ್ಲಿ ಇದೇ ಎಸ್‌ಡಿಪಿ ಯೋಜನೆ ಅಡಿಯಲ್ಲಿ ಹೊಸದಾಗಿ ೮.೦೦ ಕೋಟಿ ರು. ಅನುದಾನ ಮಂಜೂರಾಗಿದ್ದರೂ ಆರ್ಥಿಕ ವರ್ಷ ಪೂರ್ಣಗೊಂಡರೂ ಬಳಕೆಯಾಗಿರಲಿಲ್ಲ. ವಿಶೇಷವೆಂದರೆ, ಬಳಕೆಯಾಗದಿದ್ದ ಈ ೮ ಕೋಟಿ ರುಪಾಯಿಯನ್ನೂ ಸರ್ಕಾರಕ್ಕೆ ಹಿಂದಿರುಗಿಸಿರಲಿಲ್ಲ. ಇದಕ್ಕೆ ಅಧಿಕಾರಿಗಳು ನೀಡಿರುವ ಸಮಜಾಯಿಷಿಯನ್ನು ಸಿಎಜಿ ಅಧಿಕಾರಿಗಳು ಒಪ್ಪಿಕೊಂಡಿಲ್ಲ.

ಹಾಗೆಯೇ ಐಟಿಐಗಳಿಗೆ ೨೦೧೬-೧೭ನೇ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಯಂತ್ರೋಪಕರಣ, ಸಮವಸ್ತ್ರ, ಟೂಲ್‌ ಕಿಟ್‌, ಟ್ಯಾಬ್‌, ಸೋಲಾರ್‌ ಬೀದಿದೀಪ, ಬೀದಿದೀಪ, ಉದ್ಯೋಗ ಮೇಳ ಆಯೋಜನೆ, ಗಣಕೀಕರಣ ಸಂಬಂಧ ಒಟ್ಟು ಬಿಡುಗಡೆಯಾಗಿದ್ದ ೧೨೫.೮೮ ಕೋಟಿ ರು. ಪೈಕಿ ಕೇವಲ ೮೩.೬೭ ಕೋಟಿ ರು. ಮಾತ್ರ ಬಳಕೆ ಮಾಡಿಕೊಂಡಿತ್ತು. ಬಳಕೆಯಾಗದೆ ಇದ್ದ ೪೨.೨೦ ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಹಿಂದಿರುಗಿಸದೆ ಉದ್ಯೋಗ ತರಬೇತಿ ಇಲಾಖೆಯ ಆಯುಕ್ತಾಲಯ ತನ್ನ ಬಳಿಯೇ ಇರಿಸಿಕೊಂಡಿತ್ತು.

ಲ್ಯಾಪ್‌ಟಾಪ್, ಟೂಲ್ ಕಿಟ್‌, ಶೂ, ಸಾಕ್ಸ್‌ಗಳ‌ ಖರೀದಿಗೆಂದು ಸರ್ಕಾರ ೨೦೧೪-೧೫ನೇ ಸಾಲಿನಿಂದ ೨೦೧೬-೧೭ನೇ ಸಾಲಿನವರೆಗೆ ಬಿಡುಗಡೆ ಮಾಡಿದ್ದ ೧೨೦ ಕೋಟಿ ರು. ಪೈಕಿ ಕೇವಲ ೨೯.೬೨ ಕೋಟಿ ರು.ಗಳನ್ನಷ್ಟೇ ಬಳಕೆ ಮಾಡಿಕೊಂಡಿತ್ತು. ೨೦೧೪-೧೫ನೇ ಸಾಲಿನಲ್ಲಿ ಲ್ಯಾಪ್‌ಟಾಪ್, ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಿರಲಿಲ್ಲ. ೯೦.೪೨ ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ವೃತ್ತಿ ತರಬೇತಿ ಸಂಬಂಧ ಕಾರ್ಯಕ್ರಮಗಳಿಗೆ ೨೦೧೫-೧೬ ಮತ್ತು ೨೦೧೬-೧೭ನೇ ಸಾಲಿನವರೆಗೆ ಬಿಡುಗಡೆಯಾಗಿದ್ದ ಒಟ್ಟು ೩೦.೭೯ ಕೋಟಿ ರು.ಗಳನ್ನು ಕೆನರಾ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದು, ಇದರಿಂದ ಗಳಿಕೆಯಾಗಿದ್ದ ೩.೫೬ ಕೋಟಿ ರು.ಗಳನ್ನು ಬಳಕೆ ಮಾಡಿರಲಿಲ್ಲ ಎಂಬುದು ಸಿಎಜಿ ತಪಾಸಣೆ ವರದಿಯಿಂದ ಗೊತ್ತಾಗಿದೆ.

CAG ಜಿ ಪರಮೇಶ್ವರ ಸಿಎಜಿ ವರದಿ Industrial Training Institute Employment and Training Department ಕೈಗಾರಿಕೆ ತರಬೇತಿ ಸಂಸ್ಥೆ ಉದ್ಯೋಗ ಮತ್ತು ತರಬೇತಿ ಇಲಾಖೆ Tender Payments ಟೆಂಡರ್ ಮೊತ್ತ CM H D Kumaraswamy ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು