ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ‘ಪಕ್ಷಪಾತ’

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯವೈಖರಿಯನ್ನು ಕರ್ನಾಟಕ ತಾಂತ್ರಿಕ ಸಲಹಾ ಸಂಸ್ಥೆ ಅನಾವರಣಗೊಳಿಸಿದೆ. ೧೩ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿರುವ ಈ ಸಂಸ್ಥೆ, ಮಂಡಳಿಯ ಅನುದಾನ ಹಂಚಿಕೆ ಸೇರಿದಂತೆ ಇಡೀ ಸಂಸ್ಥೆಯ ಚಟುವಟಿಕೆಗಳನ್ನು ಒರೆಗೆ ಹಚ್ಚಿದೆ.

ಮಹಾಂತೇಶ್ ಜಿ

ಚಾಮರಾಜನಗರ ಜಿಲ್ಲೆಯಿಂದ ಬೆಳಗಾವಿವರೆಗೆ ಒಟ್ಟು ೧೩ ಜಿಲ್ಲೆಗಳ ೬೫ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನವನ್ನು ಸಮ ಪ್ರಮಾಣದಲ್ಲಿ ಹಂಚಿಕೆ ಮಾಡುವಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವಿಫಲವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ ಮೊತ್ತದಲ್ಲಿ ವ್ಯಾಪಕವಾದ ವ್ಯತ್ಯಾಸಗಳು ಕಂಡು ಬಂದಿವೆ. ಮಂಡಳಿಯ ಕಾರ್ಯಚಟುವಟಿಕೆಗಳಲ್ಲಿ ಶಾಸಕರು, ಸಂಸದರು ವಹಿಸಿರುವ ನಿರಾಸಕ್ತಿ, ಮಂಡಳಿಯ ಅನುದಾನ ಹಂಚಿಕೆ ವ್ಯವಸ್ಥೆಯಲ್ಲಿ ಪಕ್ಷಪಾತವಿರುವುದು ಸೇರಿದಂತೆ ಮಂಡಳಿಯಲ್ಲಿನ ಹಲವು ವೈಫಲ್ಯಗಳನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿರುವ ಬಾಹ್ಯ ಮೌಲ್ಯಮಾಪನ ಹೊರಗೆಡವಿದೆ.

೨೦೦೯-೧೦ರಿಂದ ೨೦೧೩-೧೪ನೇ ಸಾಲಿನ ಒಟ್ಟು ೫ ವರ್ಷಗಳ ಅವಧಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ಕಾಮಗಾರಿ, ಹಂಚಿಕೆ ಮಾಡಿರುವ ಅನುದಾನ, ಕಾಮಗಾರಿಗಳ ಸ್ವರೂಪ, ಅನುಷ್ಠಾನದ ಪ್ರಗತಿ ಸೇರಿದಂತೆ ಮಂಡಳಿಯ ಚಟುವಟಿಕೆಗಳ ಕುರಿತು ಕರ್ನಾಟಕ ಸರ್ಕಾರದ ಸಂಸ್ಥೆಯಾಗಿರುವ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್‌) ಮೌಲ್ಯಮಾಪನ ನಡೆಸಿ ಫೆಬ್ರುವರಿ ೨೦೧೮ರಲ್ಲಿ ವರದಿ ಸಲ್ಲಿಸಿದೆ. ಈ ವರದಿಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಸಣ್ಣ ನೀರಾವರಿ, ಮಣ್ಣಿನ ಸಂರಕ್ಷಣೆ ಮತ್ತು ಅಂತರ್ಜಲ ಸಂವರ್ಧನೆ ಕಾಮಗಾರಿಗಳನ್ನು ಮಂಡಳಿ ನಿರ್ಲಕ್ಷ್ಯಿಸಿದೆ. ಈ ವಲಯಕ್ಕೆ ಅತಿ ಕಡಿಮೆ ಅನುದಾನ ಅಂದರೆ ಶೇ.೩.೯ರಿಂದ ಶೇ.೧ಕ್ಕೆ ಇಳಿಕೆಯಾಗಿದೆ. ವಸತಿ ಕಟ್ಟಡಗಳು, ದೇವಸ್ಥಾನಗಳು, ದೇವಾಲಯಗಳ ಕಾಲುದಾರಿಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಬಾರದು ಎಂಬ ಮಾರ್ಗಸೂಚಿಗಳಿದ್ದರೂ ಇವಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿ ಉಲ್ಲಂಘಿಸಿದೆ.

ಇದನ್ನೂ ಓದಿ : ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಕೇಸರಿ ಕಲರವ; ಕಾಂಗ್ರೆಸ್ ಅತಿರಥರಿಗೆ ಸೋಲು

ಇನ್ನು ವಿಪರ್ಯಾಸದ ಸಂಗತಿಯಂದರೆ ರಾಜ್ಯದ ಹಲವು ಪ್ರದೇಶಗಳಿಗೆ ವಿದ್ಯುತ್‌ ಪೂರೈಸುವ ಶರಾವತಿ ವಿದ್ಯುತ್‌ ಉತ್ಪಾದನಾ ಕೇಂದ್ರದಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರ ಇರುವ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದ್ದ ಸೌರ ಬೆಳಕಿನ ವ್ಯವಸ್ಥೆ ಮೂಲೆಗುಂಪಾಗಿದೆ. ಹೀಗಾಗಿ ಆ ಪ್ರದೇಶದಲ್ಲಿರುವ ಜನರು ಕತ್ತಲಲ್ಲಿದ್ದಾರೆ ಎಂಬ ಸಂಗತಿ ಟೆಕ್ಸಾಕ್‌ ಸಂಸ್ಥೆ ನೀಡಿರುವ ವರದಿಯಿಂದ ಗೊತ್ತಾಗಿದೆ.

೫ ವರ್ಷಗಳಲ್ಲಿ ೪೫೦ ಕೋಟಿ ರೂ.ವೆಚ್ಚದಲ್ಲಿ ೧೫,೦೦೦ಕ್ಕೂ ಹೆಚ್ಚು ಕಾಮಗಾರಿ, ಇದೇ ಅವಧಿಯಲ್ಲಿ ೧೦೮ ಕೋಟಿ ರೂ.ವೆಚ್ಚದಲ್ಲಿ ೨,೦೭೧ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಮಂಡಳಿ ಅನುಷ್ಠಾನಗೊಳಿಸಿದೆ. ಆದರೆ ಸಾಮಾನ್ಯ, ವಿಶೇಷ ಘಟಕ ಯೋಜನೆ, ಬುಡಕಟ್ಟು ಉಪ ಯೋಜನೆ ಅನುದಾನವನ್ನೂ ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೆ ಸಮನಾಗಿ ವಿತರಿಸಿಲ್ಲ. ೨೦೦೯-೧೦ನೇ ಸಾಲಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ೮.೪೬ ಲಕ್ಷ ರೂ.ಗಳನ್ನು ಹಂಚಬೇಕಿತ್ತು. ೭ ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ೫೯.೬೬ ಲಕ್ಷ ರೂ.ಗಳನ್ನು ಪಡೆಯಬೇಕಿತ್ತಾದರೂ ವಾಸ್ತವದಲ್ಲಿ ೧೨೧.೬೬ ಲಕ್ಷ ರೂ.ಗಳು ಹಂಚಿಕೆಯಾಗಿದೆ. ಎರಡು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಕೊಡಗು ಜಿಲ್ಲೆಗೆ ೧೬.೯೨ ಲಕ್ಷ ರೂ.ಗಳ ಬದಲಿಗೆ ೩೧.೫೯ ಲಕ್ಷ ರೂ.ಬಿಡುಗಡೆ ಮಾಡಿದೆ.

ಅದೇ ರೀತಿಯಲ್ಲಿ ೨೦೧೦-೧೧ರಲ್ಲಿ ೨೪.೧೦ ಲಕ್ಷ ರೂ., ೨೦೧೧-೧೨ರಲ್ಲಿ ೪೭.೦೪ ಲಕ್ಷ ರೂ., ೨೦೧೨-೧೩ರಲ್ಲಿ ೪೫.೪೨ ಲಕ್ಷ, ೨೦೧೩-೧೪ರಲ್ಲಿ ೪೨.೪೭ ಲಕ್ಷ ರೂ. ಹಂಚಿಕೆ ಮಾಡಬೇಕಿತ್ತು. ೨೦೦೯-೧೦ರಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಗಳು ಹೆಚ್ಚುವರಿಯಾಗಿ ಅನುದಾನ ಪಡೆದಿದ್ದರೆ, ದಕ್ಷಿಣ ಕನ್ನಡ, ಬೆಳಗಾವಿ, ಚಾಮರಾಜನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕಡಿಮೆ ಮೊತ್ತ ಹಂಚಲಾಗಿದೆ. ಹಾಗೆಯೇ ೫ ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅನುದಾನವನ್ನು ಶಿವಮೊಗ್ಗ ಪಡೆದಿದ್ದರೆ, ೯ ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೇವಲ ೧೧೮೪.೯೧ ಲಕ್ಷ ರೂ.ಹಂಚಿಕೆ ಮಾಡಲಾಗಿದೆ.

ಶಾಸಕರ ನಿರಾಸಕ್ತಿ; ಮಂಡಳಿಯಲ್ಲಿ ೬೫ ಮಂದಿ ಶಾಸಕರು ಇದ್ದರೂ ಸಹ ಪ್ರತಿ ವರ್ಷ ಸರಾಸರಿ ೧೪-೧೯ ಶಾಸಕರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ೨೬ ವಿಧಾನಸಭೆ ಕ್ಷೇತ್ರಗಳ ಶಾಸಕರು ಯಾವುದೇ ಸಭೆಗೂ ಭಾಗವಹಿಸಿಲ್ಲ. ಶಿವಮೊಗ್ಗ ನಗರ, ಸೊರಬ ಮತ್ತು ಕಾರವಾರ ಪ್ರತಿನಿಧಿಸುವ ೩ ಮಂದಿ ವಿಧಾನಪರಿಷತ್‌ ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ ಶಿವಮೊಗ್ಗದಿಂದ ಒಬ್ಬ ಸಂಸದರು ಮಾತ್ರ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಲಾಗಿದೆ.

ಇನ್ನು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರುಗಳ ಪೈಕಿ ೫ ವರ್ಷಗಳಲ್ಲಿ ಕೇವಲ ೧೦ ಮಂದಿ ಅಧ್ಯಕ್ಷರುಗಳು ಮಾತ್ರ ಭಾಗವಹಿಸಿದ್ದಾರೆ. ಉಳಿದಂತೆ ಬೆಳಗಾವಿ, ಹಾಸನ, ಮೈಸೂರಿನ ಅಧ್ಯಕ್ಷರು ಭಾಗವಹಿಸಿಲ್ಲ. ಬೆಳಗಾವಿ, ದಾವಣಗೆರೆ, ಹಾಸನ, ಹಾವೇರಿ, ಕೊಡಗು ಮತ್ತ ಕಾರವಾರದ ೬ ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲಾಧಿಕಾರಿಗಳು ಭಾಗವಹಿಸಿಲ್ಲ. ಅಷ್ಟೇ ಏಕೆ, ನಿಯಮಗಳ ಪ್ರಕಾರ ಮಂಡಳಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನೂ ನಡೆಸಿಲ್ಲ.ವರ್ಷಕ್ಕೆ ಒಂದು ಬಾರಿ ಮಾತ್ರ ಸಭೆ ನಡೆಸಲಾಗಿದೆ.

ಮಂಡಳಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳು, ಕಾಮಗಾರಿ ನಡೆಸುವ ಮುನ್ನವೇ ಶೇ.೭೫ರಿಂದ ೮೦ರವರೆಗೆ ಮುಂಗಡ ಹಣ ಪಡೆದಿವೆ. ಕ್ರೆಡಿಲ್‌ ಮತ್ತು ನಿರ್ಮಿತಿ ಕೇಂದ್ರ ೫೨೪ ಲಕ್ಷ ರೂ.ಗಳನ್ನು ಸಾಂಸ್ಥಿಕ ಖರ್ಚಿಗೆ ಬಳಸಿಕೊಂಡಿದೆ. ಈ ಮೊತ್ತವು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ೪ ವರ್ಷಗಳ ಸಾಂಸ್ಥಿಕ ಖರ್ಚುಗಳಿಗೆ ಸಮನಾಗಿದೆ. ಮುಂಗಡ ಪಡೆಯುವ ಈ ಸಂಸ್ಥೆಗಳು ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಒಪ್ಪಂದಗಳನ್ನೂ ಮಾಡಿಕೊಳ್ಳುವುದಿಲ್ಲ. ಪೂರ್ಣಗೊಂಡಿರುವ ಯೋಜನೆಯ ಸ್ವತ್ತನ್ನು ಕಾಮಗಾರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದಿರದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಿದೆ ಎಂಬ ಅಂಶವನ್ನು ಮೌಲ್ಯಮಾಪನ ಸಂಸ್ಥೆ ಹೊರಗೆಡವಿದೆ.

ಹಾಗೆಯೇ ಸೇತುವೆಗಳ ನಿರ್ವಹಣೆ ನಡೆಯುತ್ತಿಲ್ಲ ಮತ್ತು ಅರ್ಧ ನಿರ್ಮಿಸಿರುವ ಸೇತುವೆಗಳು ಯಾವುದೇ ಉದ್ದೇಶಗಳನ್ನೂ ಪೂರೈಸುತ್ತಿಲ್ಲ. ಕೆಲವು ಅನುಷ್ಠಾನ ಸಂಸ್ಥೆಗಳು ಅವಶ್ಯಕತೆ ಇರುವಲ್ಲಿ ಇತರೆ ಇಲಾಖೆಗಳ ನಿಧಿಗಳನ್ನು ತರಲು ಪ್ರಯತ್ನಿಸಿಲ್ಲ. ಹೀಗಾಗಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ವರದಿ ತಿಳಿಸಿದೆ.

ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಭವನ ಕಟ್ಟಡಗಳು ನಿರ್ಮಾಣವಾದ ಬಳಿಕ ದೇವಸ್ಥಾನ, ಪ್ರಾರ್ಥನಾ ಮಂದಿರಗಳಾಗಿ ಪರಿವರ್ತನೆಗೊಂಡಿವೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ವಿಶೇಷ ಘಟಕ ಯೋಜನೆ ಅನುದಾನ ಬಳಸಿ ನಿರ್ಮಿಸಿರುವ ಸಮುದಾಯ ಭವನವನ್ನು ನೈಜ ಫಲಾನುಭವಿಗಳಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಚಾಮರಾಜನಗರ, ಶಿವಮೊಗ್ಗ, ಕಾರವಾರ ಮತ್ತು ಮೈಸೂರಿನಲ್ಲಿ ಕೆಲವು ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಆಡವಾಡಲು ಸ್ಥಳಾವಕಾಶ ಇರದೇ ಇದ್ದರೂ ಆಟಿಕೆಗಳನ್ನು ಒದಗಿಸಿದೆ. ಅಲ್ಲದೆ, ಒದಗಿಸಿರುವ ಆಟಿಕೆಗಳು ಅಂಗನವಾಡಿ ಮಕ್ಕಳ ವಯಸ್ಸಿಗೆ ಹೊಂದುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಅಂಗನವಾಡಿಗಳಿಗೆ ದೊಡ್ಡ ಪ್ರಮಾಣದ ಅನುದಾನಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದೇಸ್ಥಳಕ್ಕೆ ಒದಗಿಸುತ್ತಿದೆ. ಆದರೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಟ್ಟಡಗಳಿಗೆ ಬದಲಿಗೆ ಆಟಿಕೆಗಳನ್ನು ಒದಗಿಸಲು ಅನುದಾನ ಬಳಸುವುದು ಸಮರ್ಪಕವಾಗಿಲ್ಲ ಎಂದು ವರದಿ ಅಭಿಪ್ರಾಪಟ್ಟಿದೆ.

ಅಭಿವೃದ್ಧಿ Development MLAs ಮಲೆನಾಡು ವಿಧಾನಸಭೆ Assembly MP ಶಾಸಕರು Malenadu
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು