ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

೨ ವರ್ಷದಿಂದ ಕೆಲಸ ಮಾಡದ ಸಿಸಿ ಕ್ಯಾಮರಾಗಳು; ಶಾಸಕರ ಭವನಕ್ಕಿಲ್ಲ ಭದ್ರತೆ?

ಲೋಕಾಯುಕ್ತ ಸಂಸ್ಥೆಯಲ್ಲಿ ಭದ್ರತಾ ವೈಫಲ್ಯ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಶಾಸಕರ ಭವನದ ಕಟ್ಟಡಗಳಲ್ಲೂ ಭದ್ರತಾ ವೈಫಲ್ಯ ಕಂಡು ಬಂದಿದೆ. ಶಾಸಕರ ಭವನಕ್ಕೆ ಅನುಮಾನಸ್ಪದ ವ್ಯಕ್ತಿಗಳು ಪ್ರವೇಶಿಸುತ್ತಿದ್ದರೂ ಸುರಕ್ಷತೆ, ಭದ್ರತೆ ಕೈಗೊಳ್ಳುವಲ್ಲಿ ವಿಧಾನಸಭೆ ಸಚಿವಾಲಯ ವಿಫಲವಾಗಿದೆ

ಮಹಾಂತೇಶ್ ಜಿ

ಪ್ರತಿನಿತ್ಯ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರವೇಶಿಸುವ ಬೆಂಗಳೂರಿನಲ್ಲಿರುವ ಶಾಸಕರ ಭವನದ ಕಟ್ಟಡಗಳಿಗೆ, ಅಲ್ಲಿರುವ ಶಾಸಕರಿಗೆ ಸುರಕ್ಷತೆ ಮತ್ತು ಭದ್ರತೆಯೇ ಇಲ್ಲ! ಏಕೆಂದರೆ ಶಾಸಕರ ಭವನದಲ್ಲಿ ಅಂದಾಜು ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ೧೫೧ ಸಿ ಸಿ ಕ್ಯಾಮರಾಗಳ ಪೈಕಿ ಬಹುತೇಕ ಕ್ಯಾಮರಾಗಳು ಕಳೆದ ೨ ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಯನಿರ್ವಹಿಸುತ್ತಿರುವ ಕೆಲವು ಸಿ ಸಿ ಕ್ಯಾಮರಾಗಳಲ್ಲಿ ರೆಕಾರ್ಡ್‌ ಕೂಡ ಆಗುತ್ತಿಲ್ಲ.

ಅಷ್ಟೇ ಏಕೆ, ಶಾಸಕರಿಗೆ ವಿತರಿಸುತ್ತಿರುವ ವಾಹನಗಳ ಪಾಸ್‌ಗಳನ್ನು ಕೆಲವು ವ್ಯಕ್ತಿಗಳು ಕಲರ್‌ ಜೆರಾಕ್ಸ್‌ ಮಾಡಿಸಿಕೊಂಡು ಶಾಸಕರ ಭವನ, ವಿಧಾನಸೌಧ, ವಿಕಾಸಸೌಧ, ಆವರಣದೊಳಗೆ ಪ್ರವೇಶಿಸುತ್ತಿದ್ದಾರೆ. ಶಾಸಕರ ವಾಹನಗಳಿಗೆ ನೀಡುವ ವಾಹನಗಳ ಪಾಸ್‌ಗಳಲ್ಲಿಯೂ ನಕಲು ಮಾಡಲಾಗದಂತಹ ಭದ್ರತಾ ವೈಶಿಷ್ಟ್ಯಗಳೂ ಇಲ್ಲ.ಇಂತಹದೊಂದು ಆತಂಕಕಾರಿ ವಿಚಾರವನ್ನು ಶಾಸಕರ ಭವನದ ಭದ್ರತಾ ವಿಭಾಗ ಹೊರಗೆಡವಿದೆ.

ಶಾಸಕರ ಭವನದ ಭದ್ರತಾ ವಿಭಾಗದ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಇದೇ ಜೂನ್‌ ೬ ರಂದು ವಿಧಾನಸಭೆ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಸುರಕ್ಷತೆ ಮತ್ತು ಭದ್ರತೆ ಕುರಿತು ವಿವರಿಸಿದ್ದಾರೆ. ಈ ಪತ್ರ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ಈ ಪತ್ರವನ್ನಾಧರಿಸಿ ಶಾಸಕರ ಭವನದ ವಸತಿ ಸೌಕರ್ಯ ಸಮಿತಿ ಸಭೆಯಲ್ಲಿ ಜೂನ್ ೧೯,೨೦೧೮ರಂದು ಶಾಸಕರ ಭವನದಲ್ಲಿ ಚರ್ಚೆ ನಡೆಸಿದೆಯಾದರೂ ಸುರಕ್ಷತೆ ಭದ್ರತೆ ಕುರಿತು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ವಿಧಾನಸಭೆ ಸಚಿವಾಲಯದ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಶಾಸಕರ ಭವನದ ಭದ್ರತಾ ವಿಭಾಗದ ಪೊಲೀಸ್‌ ಇನ್ಸ್‌ಪೆಕ್ಟರ್‌ ಬರೆದಿರುವ ಪತ್ರದ ಪ್ರತಿ

ಶಾಸಕರ ಭವನದಿಂದ ಕೂಗಳತೆ ದೂರದಲ್ಲಿರುವ ಲೋಕಾಯುಕ್ತರಾದ ವಿಶ್ವನಾಥಶೆಟ್ಟಿ ಅವರಿಗೆ ಕಚೇರಿಯೊಳಗೆ ನುಗ್ಗಿದ್ದ ತೇಜರಾಜ್ ಶರ್ಮ ಎಂಬಾತ ಚೂರಿ ಇರಿದಿದ್ದ ಘಟನೆ ನಡೆದಿತ್ತು. ಆ ವೇಳೆಯಲ್ಲಿಯೂ ಲೋಕಾಯುಕ್ತ ಸಂಸ್ಥೆಯ ಭದ್ರತಾ ವೈಫಲ್ಯ ಕಂಡುಬಂದಿತ್ತು. ಈ ಪ್ರಕರಣ ಕಣ್ಣ ಮುಂದಿದ್ದರೂ ಶಾಸಕರ ಭವನದಲ್ಲಿರುವ ಸಿಸಿ ಕ್ಯಾಮರಾಗಳ ಕಾರ್ಯನಿರ್ವಹಣೆ ಕುರಿತು ೨ ವರ್ಷಗಳಿಂದಲೂ ಪರಿಶೀಲಿಸದಿರುವುದು ವಿಧಾನಸಭೆ ಸಚಿವಾಲಯದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತ್ತದೆ.

ಇದನ್ನೂ ಓದಿ : ಹತ್ತು ದಿನಗಳ ಅಧಿವೇಶನ; ತಾತ್ಕಾಲಿಕ ಶೌಚಾಲಯ ವ್ಯವಸ್ಥೆಗೆ ೧ ಕೋಟಿ ರೂ. ವೆಚ್ಚ!

“ಶಾಸಕರ ಭವನದಲ್ಲಿ ಗಣ್ಯ, ಅತಿ ಗಣ್ಯ ವ್ಯಕ್ತಿಗಳು, ಶಾಸಕರುಗಳು, ಮಾಜಿ ಶಾಸಕರುಗಳಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಗಣ್ಯ ವ್ಯಕ್ತಿಗಳ ಭದ್ರತಾ ದೃಷ್ಟಿಯಿಂದ ಶಾಸಕರ ಭವನಕ್ಕೆ ಅನುಮಾನಸ್ಪದವಾಗಿ ಹಾಗೂ ಅನಧಿಕೃತವಾಗಿ ಆಗಮಿಸುತ್ತಿರುವ ಮತ್ತು ವಾಸ್ತವ್ಯ ಹೂಡಲು ಆಗಮಿಸುತ್ತಿರುವವರನ್ನು ನಿಯಂತ್ರಿಸಲು ಹಾಗೂ ನಿರ್ಬಂಧಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ,” ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದ ಕುರಿತು ಪೊಲೀಸ್‌ ಇನ್ಸ್‌ಪೆಕ್ಟರ್‌ ಬರೆದಿರುವ ಪತ್ರದ ಪ್ರತಿ

ಇನ್ನು, ಹಾಲಿ ಶಾಸಕರುಗಳಿಗೆ ಹೊಸದಾಗಿ ವಿತರಿಸುತ್ತಿರುವ ವಾಹನಗಳ ಪಾಸ್‌ಗಳನ್ನು ನಕಲು ಮಾಡಲಾಗದಂತಹ ಭದ್ರತಾ ವೈಶಿಷ್ಟ್ಯಗಳು ಇಲ್ಲ. ಅಲ್ಲದೆ, ಪಾಸ್‌ಗಳನ್ನು ವಾಹನಗಳ ಗ್ಲಾಸ್‌ಗಳಿಗೆ ಅಂಟಿಸುವ ಸ್ಟಿಕ್ಕರ್‌ ಇಲ್ಲದಿರುವುದರಿಂದ ಬೇರೆಯವರು ಕೂಡ ಉಪಯೋಗಿಸುವ ಸಾಧ್ಯತೆ ಇದೆ.ಹಾಗೆಯೇ ಹಾಲೋಗ್ರಾಮ್‌ ಹಾಗೂ ಆರ್‌ಎಫ್‌ಐಡಿ ತಂತ್ರಜ್ಞಾನ ಹೊಂದಿರುವ ಕಾರ್‌ ಪಾಸ್‌ಗಳನ್ನು ಶಾಸಕರುಗಳಿಗೆ ವಿತರಿಸಬೇಕು ಎಂದು ಒಳಾಡಳಿತ ಇಲಾಖೆ ವಿಧಾನಸಭೆ ಕಾರ್ಯದರ್ಶಿಯ ಗಮನಕ್ಕೆ ತಂದಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರಿಗೆ ಕೊಡಲು ಸಿದ್ಧಪಡಿಸಿರುವ ವಾಹನದ ಪಾಸ್‌

ಶಾಸಕರ ಭವನಕ್ಕೆ ೪೦೦ ಸರ್ಕಾರಿ ವಾಹನಗಳು, ೫೦೦ ಖಾಸಗಿ ವಾಹನಗಳು, ೧೦೦೦ ದ್ವಿಚಕ್ರ ವಾಹನಗಳು ಪ್ರತಿನಿತ್ಯ ಪ್ರವೇಶಿಸುತ್ತವೆ. ಹೀಗಾಗಿ ಶಾಸಕರ ಭವನದ ಮುಖ್ಯದ್ವಾರದ ಬಳಿ ೦೮ ಅಡಿ ಎತ್ತರದ ಕಬ್ಬಿಣದ(semi automatic sliding gate)ನ್ನು ಹೆಚ್ಚುವರಿಯಾಗಿ ಅಳವಡಿಸಬೇಕು. ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಸಂಗ್ರಹಿಸುವ ಮತ್ತು ಮುಖ ಚಹರೆಯ ಫೋಟೋಗಳನ್ನು ಸಂಗ್ರಹಿಸುವ ನೂತನ ತಂತ್ರಜ್ಞಾನ ಹೊಂದಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಮುಖ್ಯ ದ್ವಾರದ ಬಳಿ ಕಾಲರ್‌ ಐ ಡಿ ಹಾಟ್‌ಲೈನ್‌ನೊಂದಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬೆಂಗಳೂರಿನಲ್ಲಿ ಅತಿಯಾದ ಜನದಟ್ಟಣೆ ಹೊಂದಿರುವ ಸಾರ್ವಜನಿಕ ಪ್ರದೇಶಗಳ ಆಯಕಟ್ಟಿನ ಜಾಗಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಬಹುತೇಕ ಸಿಸಿ ಟಿವಿ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜರಾಜೇಶ್ವರಿ ನಗರದಲ್ಲಿನ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿದ್ದ ಸಂದರ್ಭದಲ್ಲಿಯೂ ಆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದ ಕಾರಣ, ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲಾಗುತ್ತಿಲ್ಲ. ಇಂತ ಪ್ರಕರಣಗಳು ಹಲವು ಬಾರಿ ಮರುಕಳಿಸುತ್ತಿದ್ದರೂ ಶಾಸಕರ ಭವನಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸದಿರುವುದು ವಿಧಾನಸಭೆ ಸಚಿವಾಲಯ ಮಾತ್ರವಲ್ಲ, ಗೃಹ ಇಲಾಖೆಯ ವೈಫಲ್ಯವೂ ಹೌದು.

MLAs ವಿಧಾನಸಭೆ ಕಾರ್ಯದರ್ಶಿ Home Department Karnataka ಗೃಹ ಇಲಾಖೆ Legislative Assembly ಕರ್ನಾಟಕ ವಿಧಾನಸಭೆ ಸಚಿವಾಲಯ ಭದ್ರತಾ ವೈಫಲ್ಯ Security Check
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು