ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಐಟಿಐ ಅಕ್ರಮ; ಲೆಕ್ಕಪತ್ರ ಅಧಿಕಾರಿಗಳ ‘ಬಿಲ್’‌ವಿದ್ಯೆ ಕರಾಮತ್ತು ಬಹಿರಂಗ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿನ ವಿವಿಧ ಸ್ವರೂಪದ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಅಕ್ರಮಗಳಲ್ಲಿ ಉದ್ಯೋಗ ತರಬೇತಿ ಇಲಾಖೆಯ ಲೆಕ್ಕಪತ್ರ ವಿಭಾಗದ ಅಧಿಕಾರಿಗಳೇ ಭಾಗಿ ಆಗಿರುವುದು ವಿಶೇಷ

ಮಹಾಂತೇಶ್ ಜಿ

ರಾಜ್ಯದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ನಿಯಮಬಾಹಿರವಾಗಿ ನಡೆದಿರುವ ಕೋಟ್ಯಂತರ ರೂಪಾಯಿ ಮೊತ್ತದ ಉಪಕರಣಗಳ ಖರೀದಿ ಪ್ರಕ್ರಿಯೆಗಳ ಕುರಿತು ಕೈಗಾರಿಕೆ ತರಬೇತಿ, ಉದ್ಯೋಗ ಆಯುಕ್ತಾಲಯದ ಲೆಕ್ಕಪತ್ರ ವಿಭಾಗ ತನಿಖೆಯನ್ನು ಬಿರುಸುಗೊಳಿಸಿದೆ. ಹಲವು ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ನಡೆದಿರುವ ನಿಯಮಬಾಹಿರ ಖರೀದಿ ಪ್ರಕ್ರಿಯೆಗಳಲ್ಲಿ ಲೆಕ್ಕಪತ್ರ ವಿಭಾಗದ ಅಧಿಕಾರಿಗಳೇ ಭಾಗಿ ಆಗಿದ್ದಾರೆ ಎಂಬುದು ವಿಶೇಷ.

ಅಲ್ಲದೆ, ಇ-ಟೆಂಡರ್‌ ಪ್ರಕ್ರಿಯೆ ನಡೆಸಬೇಕಿದ್ದ ಅಧಿಕಾರಿಗಳು ವಿತ್ತಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೀಮಿತ ಟೆಂಡರ್‌ ನಡೆಸಿರುವುದು ಬೆಳಕಿಗೆ ಬಂದಿದೆ. ಹಾಗೆಯೇ, ಅಧಿಕಾರಿಗಳ ಬಿಲ್‌ ವಿದ್ಯೆಯ ಕರಾಮತ್ತನ್ನೂ ವಿಚಾರಣಾಧಿಕಾರಿಗಳ ತಂಡ ಬಯಲುಗೊಳಿಸಿದೆ.

ಇದರ ಸುಳಿವು ಆಧರಿಸಿದ ‘ಆಯುಕ್ತಾಲಯ’ದ ಲೆಕ್ಕಪತ್ರ ವಿಭಾಗದ ಹಿರಿಯ ಅಧಿಕಾರಿಗಳ ಮತ್ತೊಂದು ತಂಡ, ಈ ಜಾಲವನ್ನು ಭೇದಿಸಿದೆ. ಇದರ ಮುಂದುವರಿಕೆಯಾಗಿ ಹುಬ್ಬಳ್ಳಿಯಲ್ಲಿರುವ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿನ ಸಣ್ಣ ಉಪಕರಣಗಳ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ತರಬೇತಿ, ಉದ್ಯೋಗ ಇಲಾಖೆಯ ಆಯುಕ್ತಾಲಯದ ಲೆಕ್ಕಪತ್ರ ವಿಭಾಗದ ಹೆಚ್ಚುವರಿ ಸಹಾಯಕ ನಿರ್ದೇಶಕಿ ಮಂಜುಳಮ್ಮ ಮತ್ತು ಕಚೇರಿ ಅಧೀಕ್ಷಕ ಮಂಜುನಾಥ್ ಎಂಬುವವರನ್ನು ಜೂನ್‌ ೨೧, ೨೦೧೮ರಂದು ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳನ್ನು ಅಮಾನತುಗೊಳಿಸಿ ಹೊರಡಿಸಿರುವ ಆದೇಶದ ಪ್ರತಿ

ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶಿಗ್ಗಾಂವ್‌ಕರ್ ಅವರನ್ನು ಅಮಾನತುಗೊಳಿಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದರ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ಐಟಿಐಗಳಿಗೆ ಉಪಕರಣಗಳ ಖರೀದಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳಿಗೆ ಪರಿಶೀಲನೆ ಕಾರ್ಯ ಮತ್ತಷ್ಟು ಪುಷ್ಟಿ ನೀಡಿದೆ.

“ಅನುದಾನ ಲಭ್ಯ ಇಲ್ಲದೆ ಇದ್ದರೂ ಮತ್ತು ಆಯುಕ್ತರ ಅನುಮೋದನೆ ಇಲ್ಲದೆಯೆ ಖರೀದಿ ಪ್ರಕ್ರಿಯೆ ನಡೆಸಿರುವುದು, ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿರುವುದು ಸೇರಿದಂತೆ ಹಲವು ಸ್ವರೂಪದ ಅಕ್ರಮಗಳು ನಡೆದಿರುವ ಸಾಧ್ಯತೆಗಳಿವೆ. ಇದು ಕೇವಲ ಹುಬ್ಬಳ್ಳಿಯಲ್ಲಿನ ಕೈಗಾರಿಕೆ ತರಬೇತಿ ಸಂಸ್ಥೆ ಮಾತ್ರವಲ್ಲ, ರಾಜ್ಯದ ಇತರ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲೂ ಈ ರೀತಿಯ ಪ್ರಕರಣಗಳು ನಡೆದಿರುವ ಸಂಭವ ಇದೆ. ಹೀಗಾಗಿ ಹೆಚ್ಚಿನ ತನಿಖೆ ಅಗತ್ಯವಿದೆ,” ಎಂದು ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಟೂಲ್‌ ಕಿಟ್‌ ಖರೀದಿಗೆ ಸಂಬಂಧಿಸಿದಂತೆ ನಡೆದಿರುವ ನಿಯಮಬಾಹಿರ ಖರೀದಿ ಸೇರಿದಂತೆ ಇನ್ನಿತರ ಅವ್ಯವಹಾರಗಳ ಕುರಿತು ಸಿಎಜಿ ಅಧಿಕಾರಿಗಳು ಇತ್ತೀಚೆಗಷ್ಟೇ ತಪಾಸಣೆ ವರದಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕೈಗಾರಿಕೆ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರು ವಿತ್ತಾಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು, ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿರುವುದು ಸೇರಿದಂತೆ ಇನ್ನಿತರ ನಿಯಮಬಾಹಿರ ಖರೀದಿ ಪ್ರಕ್ರಿಯೆಗಳ ಕುರಿತು ಹೆಚ್ಚಿನ ತನಿಖೆ ನಡೆಸಲು ಆಯುಕ್ತರು ಮುಂದಾಗಿದ್ದಾರೆ.

ಹುಬ್ಬಳ್ಳಿ ಪ್ರಕರಣ ವಿವರ: ಹುಬ್ಬಳ್ಳಿಯಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯುತ್, ಮೆಕ್ಯಾನಿಕಲ್, ಆಟೊಮೊಬೈಲ್ ಸೇರಿದಂತೆ ಇತರ ವಿಭಾಗಗಳಿಗೆ ಸಣ್ಣ ಉಪಕರಣಗಳ ಖರೀದಿಗಾಗಿ ಹೆಚ್ಚುವರಿ ಅನುದಾನ ಕೋರಿಕೆ ಮೇರೆಗೆ ಸೆಪ್ಟೆಂಬರ್ ೭, ೨೦೧೭ರಂದು ೧೩೩ ಲಕ್ಷ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಬಳಸಿಕೊಂಡು ಒಂದೇ ಬಾರಿಗೆ ಅದೂ ಇ-ಟೆಂಡರ್‌ ಪ್ರಕ್ರಿಯೆ ಮೂಲಕ ಉಪಕರಣಗಳನ್ನು ಖರೀದಿಸಬೇಕಿತ್ತು. ಆದರೆ, ೨೦೧೬-೧೭ನೇ ಸಾಲಿನ ಮಾರ್ಚ್ ಮತ್ತು ೨೦೧೭-೧೮ನೇ ಸಾಲಿನ ಏಪ್ರಿಲ್‌ನಲ್ಲಿ ವಿತ್ತಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೀಮಿತ ಟೆಂಡರ್ ಮೂಲಕ ಉಪಕರಣಗಳನ್ನು ಖರೀದಿಸಲಾಗಿದೆ. ಹಾಗೆಯೇ, ಖರೀದಿಸಿರುವ ಉಪಕರಣಗಳ ಬಿಲ್‌ಗಳನ್ನು (೧೮೬) ವಿಭಜಿಸಲಾಗಿದೆ ಎಂದು ವಿಚಾರಣೆ ವರದಿಯಲ್ಲಿ ಹೇಳಲಾಗಿದೆ.

ಹುಬ್ಬಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಬಿಡುಗಡೆ ಮಾಡಿದ್ದ ಅನುದಾನದ ವಿವರ

೨೦೧೫-೧೬, ೨೦೧೬-೧೭ ಮತ್ತು ೨೦೧೭-೧೮ನೇ ಸಾಲಿನಲ್ಲಿ ಒಟ್ಟು ಅನುದಾನವನ್ನು ಬಳಸಿಕೊಂಡಿದ್ದ ಅಧಿಕಾರಿಗಳು, ವರ್ಷದ ಕೊನೆಯಲ್ಲಿ ಅಂದರೆ, ಮಾರ್ಚ್ ತಿಂಗಳಲ್ಲಿ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ತೋರಿಸಲಾಗಿದೆ. ಅದೇ ರೀತಿ, ಜುಲೈ ೬, ೨೦೧೭ರಂದು ೧೪೯ ಲಕ್ಷ ರು. ಬಿಡುಗಡೆಯಾಗಿತ್ತು. ೨೦೧೬-೧೭ನೇ ಸಾಲಿನಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಸೀಮಿತ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣಗಳನ್ನು ಖರೀದಿಸಲಾಗಿತ್ತು. ಸುಮಾರು ೨೨೨ ಬಿಲ್‌ಗಳನ್ನು ಆಗಸ್ಟ್‌ ೨೦೧೭ರಲ್ಲಿ ತಯಾರಿಸಲಾಗಿದೆ ಎಂದು ವಿಚಾರಣೆ ವರದಿಯಲ್ಲಿ ವಿವರಿಸಲಾಗಿದೆ.

ಒಂದೊಂದು ಬಿಲ್‌ನಲ್ಲಿ ೪೫ ಸಾವಿರಕ್ಕಿಂತ ಹೆಚ್ಚು ಮತ್ತು ೭೫ ಸಾವಿರಕ್ಕಿಂತ ಕಡಿಮೆ ಇದೆ. ೨೫ ಬಿಲ್‌ಗಳನ್ನು ಒಂದೇ ದಿನ ಅಂದರೆ, ಆಗಸ್ಟ್‌ ೮, ೨೦೧೭ರಂದು ತಯಾರಿಸಲಾಗಿದೆ. ವಿಶೇಷವೆಂದರೆ, ಮಾರ್ಚ್,೨೦೧೭ರಲ್ಲೇ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು. ಎಲ್ಲ ಖರೀದಿಗಳನ್ನು ಒಬ್ಬರೇ ಸರಬರಾಜುದಾರರಿಂದ ಮಾಡಲಾಗಿದೆಯಲ್ಲದೆ, ಸರಬರಾಜು ಆದೇಶಗಳನ್ನು ಪ್ರತಿದಿನ ಒಂದಕ್ಕಿಂತ ಹೆಚ್ಚು ಅಂದರೆ, ೮ರಿಂದ ೧೦ ಸರಬರಾಜು ಆದೇಶಗಳನ್ನು ನೀಡಿರುವುದನ್ನು ವಿಚಾರಣೆ ತಂಡ ಬಹಿರಂಗಪಡಿಸಿದೆ. ಈ ರೀತಿ ಹೊರಡಿಸಿರುವ ಸರಬರಾಜು ಆದೇಶಗಳ ಮೊತ್ತ ೪ ಲಕ್ಷ ರು.ಗಳಿಗಿಂತಲೂ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಐಟಿಐ ಉಪಕರಣ ಖರೀದಿಯಲ್ಲಿ ಬೃಹತ್ ಗೋಲ್‌ಮಾಲ್ ಪತ್ತೆ ಮಾಡಿದ ಸಿಎಜಿ

ವಿಶೇಷವೆಂದರೆ, ಸರಬರಾಜು ಆದೇಶ ಹೊರಡಿಸಿದ್ದ ದಿನಾಂಕಗಳಲ್ಲಿ ಅನುದಾನ ಲಭ್ಯವಿರಲಿಲ್ಲ. ಆದರೂ ಆಯುಕ್ತರ ಅನುಮೋದನೆಯಿಲ್ಲದೆಯೇ ಖರೀದಿ ಪ್ರಕ್ರಿಯೆ ನಡೆಸಿದೆ. ಇದೆಲ್ಲವನ್ನೂ ಗಮನಿಸಿದಲ್ಲಿ ನಿಜವಾಗಿಯೂ ಉಪಕರಣಗಳು ಸರಬರಾಜಾಗಿದೆಯೇ ಇಲ್ಲವೇ ಎಂಬ ಬಗ್ಗೆ ವಿಚಾರಣಾಧಿಕಾರಿಗಳ ತಂಡ ಅನುಮಾನ ವ್ಯಕ್ತಪಡಿಸಿದೆ. ಈ ಮೂರು ಸಾಲಿನಲ್ಲಿ ಖರೀದಿಸಿರುವ ಉಪಕರಣಗಳ ಸಂಬಂಧ ಸಲ್ಲಿಕೆಯಾಗಿದ್ದ ಬಿಲ್‌ ಮತ್ತು ನೋಂದಣಿ ಪುಸ್ತಕ ಕಾಣೆಯಾಗಿದ್ದನ್ನು ವಿಚಾರಣೆ ತಂಡ ಪತ್ತೆ ಹಚ್ಚಿದೆ.

karnataka ಕರ್ನಾಟಕ ಹುಬ್ಬಳ್ಳಿ Hubli ಆಯೋಗ Commission Industrial Training Institute Employment and Training Department ಕೈಗಾರಿಕೆ ತರಬೇತಿ ಸಂಸ್ಥೆ ಉದ್ಯೋಗ ಮತ್ತು ತರಬೇತಿ ಇಲಾಖೆ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು