ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಆರೋಪಿತರನ್ನೇ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಿಸಿದ್ದೇಕೆ?

ಗಂಭೀರ ಆರೋಪಗಳಿಗೆ ಗುರಿಯಾಗಿರುವ ವೇಣುಗೋಪಾಲ್‌ ಅವರನ್ನು ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ನೇಮಿಸಿರುವುದಕ್ಕೆ ಅಪಸ್ವರಗಳು ಕೇಳಿ ಬಂದಿವೆ. ಇವರ ನೇಮಕಕ್ಕೆ ಈ ಹಿಂದಿನ ಸರ್ಕಾರ ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೆ, ರಾಜ್ಯಪಾಲರು ಅವರನ್ನೇ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ

ಮಹಾಂತೇಶ್ ಜಿ

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ನೇಮಕಾತಿ ವಿಚಾರ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿಂದಿನ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಪ್ರಾಧ್ಯಾಪಕರನ್ನು ಕೈಬಿಟ್ಟು, ಸುಳ್ಳು ಆದಾಯ ಪ್ರಮಾಣ ಸಲ್ಲಿಸಿ ನೇಮಕವಾಗಿದ್ದಾರೆ ಎಂಬ ಆರೋಪವೂ ಸೇರಿದಂತೆ ಇನ್ನಿತರ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಯುವಿಸಿಇ ಪ್ರಾಂಶುಪಾಲ ಕೆ ಆರ್ ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ರಾಜ್ಯಪಾಲರು ನೇಮಿಸಿದ್ದೇ ವಿವಾದಕ್ಕೆ ಮೂಲ ಕಾರಣ.

ವಿಶೇಷವೆಂದರೆ, ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೂ ರಾಜ್ಯಪಾಲರು ಯಾರನ್ನೂ ಈ ಹುದ್ದೆಗೆ ನೇಮಿಸಿರಲಿಲ್ಲ. ಅಲ್ಲದೆ, ಇದಕ್ಕೆ ಸಂಬಂಧಿಸಿದ ಶೋಧನಾ ಸಮಿತಿ ಸಲ್ಲಿಸಿದ್ದ ಶಿಫಾರಸಿನ ಕಡತವನ್ನು ರಾಜ್ಯಪಾಲರು ೧೪ ತಿಂಗಳುವರೆಗೂ ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಆರೋಪಿತ ಪ್ರಾಂಶುಪಾಲ ವೇಣುಗೋಪಾಲ್ ಅವರನ್ನೇ ಕುಲಪತಿಯನ್ನಾಗಿ ತರಾತುರಿಯಲ್ಲಿ ನೇಮಕಗೊಳಿಸಿದ್ದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿರುವುದು ಸೇರಿದಂತೆ ಇನ್ನಿತರ ಗುರುತರ ಆರೋಪಗಳಿಗೆ ಗುರಿಯಾಗಿರುವ ವೇಣುಗೋಪಾಲ್‌ ಅವರನ್ನು ರಾಜ್ಯಪಾಲರು ಯಾಕೆ ನೇಮಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಎಸ್‌ ಆರ್ ನಿರಂಜನ್ ಅಧ್ಯಕ್ಷತೆಯ ಶೋಧನಾ ಸಮಿತಿ ನಾಗಭೂಷಣ್‌, ಸಂಗಮೇಶ್‌ ಪಾಟೀಲ್‌ ಮತ್ತು ವೇಣುಗೋಪಾಲ್ ಅವರನ್ನು ಬೆಂಗಳೂರು ವಿ ವಿ ಕುಲಪತಿ ಹುದ್ದೆಗೆ ಒಂದು ವರ್ಷಧ ಹಿಂದೆಯೇ ಶಿಫಾರಸು ಮಾಡಿತ್ತು. ಈ ಪೈಕಿ, ರಾಜ್ಯಪಾಲರು ವೇಣಗೋಪಾಲ್‌ ಅವರ ಆಯ್ಕೆಗೆ ಸಮ್ಮತಿ ವ್ಯಕ್ತಪಡಿಸಿದ್ದರೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಅರ್ಹತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಂಗಮೇಶ್‌ ಪಾಟೀಲ್‌ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.

ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ಸಂಗಮೇಶ್‌ ಪಾಟೀಲ್‌ ಹೆಸರು ಸೂಚಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿರುವ ಪ್ರತಿ

ಆದರೆ, ರಾಜ್ಯಪಾಲರು ಸಂಗಮೇಶ್ ಪಾಟೀಲ್ ಅವರ ಹೆಸರಿಗೆ ಸುತರಾಂ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ಹಿಂದಿನ ರಾಜ್ಯ ಸರ್ಕಾರವೂ ಬಿಗಿಪಟ್ಟು ಸಡಿಲಿಸಿರಲಿಲ್ಲ. ೨ನೇ ಬಾರಿಯೂ ಸಂಗಮೇಶ್ ಪಾಟೀಲ್ ಅವರ ಹೆಸರನ್ನೆ ಅಖೈರುಗೊಳಿಸಿ ರಾಜ್ಯಪಾಲರಿಗೆ ಕಳಿಸಿತ್ತು. ಇದೇ ವಿಚಾರ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷಕ್ಕೂ ಕಾರಣವಾಗಿತ್ತು. ಹೀಗಾಗಿ, ನೇಮಕಾತಿ ಪ್ರಕ್ರಿಯೆಯೇ ಸ್ಥಗಿತಗೊಂಡಿದ್ದರಿಂದ ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿತ್ತು.

ಇದನ್ನೂ ಓದಿ : ಶೋಧನಾ ಸಮಿತಿಗಳೇ ಅಕ್ರಮವಾಗಿರುವಾಗ ಅರ್ಹ ಕುಲಪತಿ ನೇಮಕ ಹೇಗೆ ಸಾಧ್ಯ?

ಗಂಭೀರ ಆರೋಪವೇನು?: ವೇಣುಗೋಪಾಲ್ ಕೆ ರಾಜು ಅವರು ಬೆಂಗಳೂರಿನ ಯುವಿಸಿಇ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಯುವಿಸಿಇನ ಕೆ ಎಸ್ ಗುರುಮೂರ್ತಿ ಎಂಬುವರು ಸಮಾಜ ಕಲ್ಯಾಣ ಇಲಾಖೆಗೆ ಬಗ್ಗೆ ದೂರು ಸಲ್ಲಿಸಿದ್ದರು.ಈ ದೂರಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ೨೦೦೧ರಲ್ಲೇ ತನಿಖೆ ನಡೆಸಿತ್ತು.

ವೇಣುಗೋಪಾಲ್‌ ಅವರು ಸೇಂಟ್‌ ಜೋಸೆಫ್‌ ಇಂಡಿಯನ್ ಹೈಸ್ಕೂಲ್ ಮತ್ತು ಮಾಧ್ಯಮಿಕ ಶಾಲೆಗೆ ಪ್ರವೇಶ ಪಡೆಯುವ ಮೊದಲು ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ತಂಡ ಪರಿಶೀಲಿಸಿತ್ತು. “ವೇಣುಗೋಪಾಲ್ ಕೆ ರಾಜು ಅಲಿಯಾಸ್‌ ವೇಣುಗೋಪಾಲ್‌ ಕೆ ಆರ್‌ ಇವರು ೧೯೮೬-೮೭ರಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಸುಳ್ಳು ಆದಾಯ ಪ್ರಮಾಣಪತ್ರ ನೀಡಿರುವುದು ದೃಢಪಟ್ಟಿದೆ. ಹೀಗಾಗಿ ಆದಾಯ ಪ್ರಮಾಣಪತ್ರವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕು,” ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಗಿನ ಆಯುಕ್ತರು ಸಮಾಜ ಕಲ್ಯಾಣ ಇಲಾಖೆಯ ಆಗಿನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ

ಈ ಪತ್ರದನ್ವಯ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, “ವೇಣುಗೋಪಾಲ್‌ ಅವರು ಉಪನ್ಯಾಸಕರಾಗಿ ನೇಮಕವಾಗುವಾಗ ಸುಳ್ಳು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿರುವ ಅಂಶವು ದೃಢಪಟ್ಟಿರುವ ಕಾರಣ, ಇವರನ್ನು ತಕ್ಷಣದಿಂದಲೇ ಸೇವೆಯಿಂದ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ಆದರೆ, ವಿಶ್ವವಿದ್ಯಾಲಯ ಈ ಸಂಬಂಧ ಯಾವುದೇ ಕ್ರಮ ವಹಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದುಬಂದಿದೆ.

ಸುಳ್ಳು ಆದಾಯ ಪ್ರಮಾಣಪತ್ರ ಪಡೆದಿರುವ ಅಂಶವನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ತಮ್ಮ ಟಿಪ್ಪಣಿಯಲ್ಲಿ ಪ್ರಧಾನವಾಗಿ ಉಲ್ಲೇಖಿಸಿದ್ದರು. ಅಲ್ಲದೆ, ವೇಣುಗೋಪಾಲ್‌ ಅವರು ಖಾಯಂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಪಿಎಚ್‌ಡಿಗೆ ಸಂಬಂಧಿಸದೇ ಇರದ ೪ ಕೋರ್ಸ್‌ಗಳನ್ನು ವ್ಯಾಸಂಗವನ್ನೂ ಪೂರ್ಣಗೊಳಿಸಿದ್ದರು. ಇದಕ್ಕೆ ಸಂಬಂಧ ಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ ಎಂಬುದನ್ನೂ ರಾಜ್ಯಪಾಲರ ಗಮನಕ್ಕೆ ತಂದಿದ್ದರು ಎಂಬ ಸಂಗತಿ ಲಭ್ಯ ಇರುವ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಹಾಗೆಯೇ, ವೇಣುಗೋಪಾಲ್ ಅವರು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಯೊಬ್ಬ ತರಗತಿ ಹಾಜರಾಗದೆ, ಶೂನ್ಯ ಹಾಜರಾತಿ ಹೊಂದಿದ್ದರೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ವಿಶ್ವವಿದ್ಯಾಲಯದ ಪರೀಕ್ಷೆ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಸಂಬಂಧ ಜುಲೈ ೨೧,೨೦೦೭ರಲ್ಲಿ ಆಗಿನ ಉಪ ಲೋಕಾಯುಕ್ತರು ಇವರ ವಿರುದ್ಧ ೧೨(೩)ಅಡಿಯಲ್ಲಿ ವರದಿ ಸಲ್ಲಿಸಿದ್ದರಲ್ಲದೆ, ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಿದ್ದರು ಎಂಬ ವಿಚಾರವನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್ ಮತ್ತು ಸಚಿವರಾಗಿದ್ದ ರಾಯರೆಡ್ಡಿ ಅವರ ಟಿಪ್ಪಣಿ ಪ್ರತಿ

ಈ ವರದಿ ಆಧರಿಸಿ ವೇಣುಗೋಪಾಲ್‌ ಅವರಿಗೆ ಪ್ರಾಧ್ಯಾಪಕ ಶ್ರೇಣಿಗೆ ಬಡ್ತಿ ನೀಡಬಾರದೆಂದು ಉನ್ನತ ಶಿಕ್ಷಣ ಇಲಾಖೆ ಬೆಂಗಳೂರು ವಿವಿಗೆ ಸೂಚಿಸಿತ್ತು. ಅಲ್ಲದೆ ಪ್ರಕರಣವೊಂದರಲ್ಲಿ, “ಕರ್ನಾಟಕ ಹೈಕೋರ್ಟ್‌ ಕೂಡ ವೇಣುಗೋಪಾಲ್ ನೇಮಕವನ್ನೇ ವಜಾಗೊಳಿಸಬೇಕು ಎಂದು ತೀರ್ಪು ನೀಡಿತ್ತು. ರೀಡರ್‌ ಹುದ್ದೆಯಲ್ಲಿದ್ದ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿತ್ತು,” ಎಂಬ ಅಂಶವನ್ನೂ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸೋಮಶೇಖರ್‌ ಕೂಡ ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು.

ಸಿದ್ದರಾಮಯ್ಯ Siddaramaiah Governor Vajubhai Vala University ವಿಶ್ವವಿದ್ಯಾಲಯ Vice Chancellor ಕುಲಪತಿ ನೇಮಕ ವಜುಭಾಯಿ ವಾಲ Higher Education Department ಉನ್ನತ ಶಿಕ್ಷಣ ಇಲಾಖೆ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು