ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

‘ಬಿ’ ರಿಪೋರ್ಟ್ ಹಾಕುವುದರಲ್ಲಿ ಲೋಕಾಯುಕ್ತ ಪೊಲೀಸರು ನಿಸ್ಸೀಮರು!

ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯ ತನಿಖಾ ವಿಧಾನ ಮತ್ತು ಅದರ ಫಲಿತಾಂಶ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಅನಾವರಣಗೊಳಿಸಿದೆ

ಮಹಾಂತೇಶ್ ಜಿ

ಸರ್ಕಾರಿ ಇಲಾಖೆಗಳಲ್ಲಿ ಕಂಡುಬರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ವಹಿಸುತ್ತಿರುವುದೇ ಭ್ರಷ್ಟ ಅಧಿಕಾರಿ, ನೌಕರರಿಗೆ ವರದಾನವಾಗಿದೆ. ಹಾಗೆಯೇ, ಲೋಕಾಯುಕ್ತಕ್ಕೆ ವಹಿಸಲಾಗುವ ಪ್ರಕರಣಗಳು ೧೫-೨೦ ವರ್ಷಗಳಾದರೂ ತನಿಖೆ ಪೂರ್ಣಗೊಳ್ಳದೆ ಬಾಕಿ ಇವೆ. ಅಷ್ಟೇ ಏಕೆ, ತನಿಖೆಯಿಂದಲೂ ಸತ್ಯ ಹೊರಬರುತ್ತಿಲ್ಲ.

ವಿಧಾನ ಪರಿಷತ್ತಿನ ಭರವಸೆ ಸಮಿತಿಗಳ ಅಧ್ಯಕ್ಷ ಬಸವರಾಜ ಹೊರಟ್ಟಿ (ಹಾಲಿ ಸಭಾಪತಿ) ಅವರ ಅಧ್ಯಕ್ಷತೆಯ ಭರವಸೆ ಸಮಿತಿ, ಲೋಕಾಯುಕ್ತ ಸಂಸ್ಥೆಯ ತನಿಖಾ ವಿಧಾನ ಮತ್ತು ಕಾರ್ಯನಿರ್ವಹಣೆಯೂ ಸೇರಿದಂತೆ ಸರ್ಕಾರಿ ಇಲಾಖೆಯ ಉನ್ನತ ಅಧಿಕಾರಿಗಳು, ವಿವಿಧ ಸ್ತರಗಳ ಅಧಿಕಾರಿ, ನೌಕರರ ಭ್ರಷ್ಟಾಚಾರ, ಕರ್ತವ್ಯಲೋಪಗಳನ್ನು ಅನಾವರಣಗೊಳಿಸಿದೆ. ಈ ಕುರಿತ ವರದಿಯನ್ನು ಸಮಿತಿ ೨೦೧೮ರ ಫೆಬ್ರವರಿಯಲ್ಲಿ ವಿಧಾನ ಪರಿಷತ್ತಿಗೆ ಸಲ್ಲಿಸಿದ್ದು, ವರದಿಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

“ತನಿಖೆಗೆ ವಹಿಸಲ್ಪಟ್ಟ ಹಲವು ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯು ‘ಬಿ’ ರಿಪೋರ್ಟ್‌ ಸಲ್ಲಿಸುತ್ತಿದೆ. ಇದನ್ನು ಗಮನಿಸಿದಲ್ಲಿ ಸಂಸ್ಥೆಯಿಂದ ತನಿಖೆಯು ನ್ಯಾಯಸಮ್ಮತವಾಗಿ ನಡೆದಿರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಅನೇಕ ಪ್ರಕರಣಗಳ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ,” ಎಂದು ಸಮಿತಿಯ ಅಧ್ಯಕ್ಷ ಬಸವರಾಜ ಹೊರಟ್ಟಿ ವರದಿಯಲ್ಲಿ ಪ್ರಧಾನವಾಗಿ ಉಲ್ಲೇಖಿಸಿದ್ದಾರೆ.

‘ಬಿ’ ರಿಪೋರ್ಟ್ ಹಾಕುತ್ತಿರುವ ಲೋಕಾಯುಕ್ತ ಪೊಲೀಸರ ಬಗ್ಗೆ ಆಕ್ಷೇಪ ಎತ್ತಿರುವ ಭರವಸೆ ಸಮಿತಿ

ನಂಜನಗೂಡಿನಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಶಂಕುಸ್ಥಾಪನೆಗೂ ಮುನ್ನವೇ ಕುಸಿದಿತ್ತು. ದೋಷಪೂರಿತ ಕಟ್ಟಡ ನಿರ್ಮಾಣಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ೧೯೮೫ರಲ್ಲಿ ನಿರ್ಮಾಣವಾಗಿದ್ದ ಕಟ್ಟಡ ಕಳಪೆ ಕಾಮಗಾರಿಯಿಂದ ಕೂಡಿತ್ತು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ೧೯೮೫ರಲ್ಲೇ ಲೋಕಾಯುಕ್ತಕ್ಕೆ ವಹಿಸಿದ್ದರೂ ೨೦೧೪ರ ಏ.೧೫ರಂದು ಲೋಕಾಯುಕ್ತ ಎಡಿಜಿಪಿ ಅವರು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. ಈ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಸಮಿತಿ, ಲೋಕಾಯುಕ್ತ ತನಿಖೆ ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಒತ್ತಿ ಹೇಳಿದೆ.

ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಆದರೆ, ೧೫-೨೦ ವರ್ಷಗಳಾದರೂ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಬಹಳಷ್ಟು ವರ್ಷಗಳಿಂದ ಬಾಕಿ ಇರುವ ಮತ್ತು ಆರೋಪ ಸಾಬೀತಾದ ಪ್ರಕರಣಗಳಲ್ಲಿಯೂ ‘ಬಿ’ ರಿಪೋರ್ಟ್ ಸಲ್ಲಿಸಲು ಹೇಗೆ ಸಾಧ್ಯವಾಯಿತು ಎಂದು ಸಮಿತಿ ಕೇಳಿದ್ದ ಪ್ರಶ್ನೆಗೆ ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ವರದಿಯಲ್ಲಿ ದಾಖಲಿಸಲಾಗಿದೆ.

ಅದೇ ರೀತಿ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಕೋಟ್ಯಂತರ ರುಪಾಯಿ ಮೊತ್ತದ ಭ್ರಷ್ಟಾಚಾರ, ಅವ್ಯವಹಾರ, ಹಣ ದುರ್ಬಳಕೆ ಪ್ರಕರಣ ನಡೆದಿವೆ. ಇಂತಹ ಪ್ರಕರಣಗಳು ಸದನದಲ್ಲಿ ಪ್ರಸ್ತಾಪವಾಗುವವರೆಗೂ ಇಲಾಖೆ ಅಧಿಕಾರಿಗಳು ಗಮನಿಸಿ ತನಿಖೆ ಕೈಗೊಳ್ಳುವುದಿಲ್ಲ. ಹಾಗೆಯೇ, ಈ ಪ್ರಕರಣಗಳ ತನಿಖೆಗೆ ಬೇಕಾದ ಮೂಲ ಕಡತ ಮತ್ತು ದಾಖಲೆಗಳು ನಾಪತ್ತೆಯಾಗಿವೆ. ಕೆಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸುವ ಇಲಾಖಾಧಿಕಾರಿಗಳು ತಮ್ಮ ಹಂತದಲ್ಲೇ ಯಾವ ಕ್ರಮಗಳನ್ನೂ ಕೈಗೊಳ್ಳದೆ ವರ್ಷಾನುಗಟ್ಟಲೆ ತಳ್ಳಿದ್ದಾರೆ. ತಪ್ಪಿತಸ್ಥ ಅಧಿಕಾರಿ, ನೌಕರರ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸದೆ ಭ್ರಷ್ಟರು ಬಡ್ತಿ ಹಾಗೂ ನಿವೃತ್ತಿ ಸೇವಾ ಸೌಲಭ್ಯ ಪಡೆದುಕೊಳ್ಳುವ ಹಂತದವರೆಗೆ ಪ್ರಕರಣಗಳನ್ನು ಮುಂದೂಡಲು ಸಹಕರಿಸಿರುವಂತಹ ಪ್ರಕರಣಗಳು ಶೇ.೯೯ರಷ್ಟಿವೆ ಎಂದೂ ಸಮಿತಿ ವಿವರಿಸಿದೆ.

ಇನ್ನು, ಲೋಕಾಯುಕ್ತ ಮತ್ತು ಲೋಕಾಯುಕ್ತ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಕಾಲಕಾಲಕ್ಕೆ ತನಿಖೆಗೆ ಬೇಕಾದ ದಾಖಲೆ, ಮಾಹಿತಿ ಒದಗಿಸದೆ ವಿಳಂಬ ನೀತಿ ಅನುಸರಿಸುತ್ತಿವೆ. ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ತಂದಂತಹ ಪ್ರಕರಣಗಳಲ್ಲೂ ತಡೆಯಾಜ್ಞೆ ತೆರವುಗೊಳಿಸಲು ಸೂಕ್ತ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬಹುತೇಕ ಆರೋಪಿತ ಅಧಿಕಾರಿ, ನೌಕರರು ನಿದೋರ್ಷಿಗಳೆಂದು ಪರಿಗಣಿಸಲ್ಪಡುತ್ತಿದ್ದಾರೆ. ಪ್ರಥಮ ತನಿಖಾ ವರದಿಯಲ್ಲಿ ಆರೋಪ ಸಾಬೀತಾಗಿದ್ದರೂ ಅಂತಹ ಅಧಿಕಾರಿ, ನೌಕರರಿಗೆ ಕಾಲಕಾಲಕ್ಕೆ ಬಡ್ತಿ, ನಿವೃತ್ತಿ ಹಾಗೂ ಸೇವಾ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ.

ಕೋಟ್ಯಂತರ ರುಪಾಯಿ ಮೊತ್ತದಲ್ಲಿ ಭ್ರಷ್ಟಾಚಾರ ಎಸಗಿರುವ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದ್ದರೂ ಒಂದು ಅಥವಾ ಎರಡು ವಾರ್ಷಿಕ ಬಡ್ತಿಯನ್ನು ತಡೆ ಹಿಡಿದಿರುವ ಕನಿಷ್ಠ ಶಿಕ್ಷೆ ವಿಧಿಸಲಾಗುತ್ತಿದೆ ಅಥವಾ ಅಂತಹ ಅಧಿಕಾರಿ, ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗುತ್ತಿದೆ. ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣಗಳಲ್ಲಿಯೂ ಹಣವನ್ನು ಅಧಿಕಾರಿ, ನೌಕರರಿಂದ ವಸೂಲು ಮಾಡಲಾಗಿದೆ ಎಂದು ಇಲಾಖೆ ಮುಖ್ಯಸ್ಥರು ತಿಳಿಸುತ್ತಿದ್ದಾರಾದರೂ, ಅಂತಹ ಅಧಿಕಾರಿಗಳಿಗೆ ಬಡ್ತಿ, ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಕೆಳಹಂತದ ನೌಕರರಿಗೆ ಶಿಕ್ಷೆ ವಿಧಿಸಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರುಗಳಿಗೆ ಯಾವುದೇ ಶಿಕ್ಷೆ ನೀಡದಿರುವುದರ ಕುರಿತು ಸಮಿತಿ ಗಂಭೀರ ಆಕ್ಷೇಪವನ್ನೂ ಎತ್ತಿದೆ.

ಇದನ್ನೂ ಓದಿ : ಆರೋಪಿತರನ್ನೇ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಿಸಿದ್ದೇಕೆ?

ಅಂದಾಜು ವೆಚ್ಚದಲ್ಲಿ ಹೆಚ್ಚಳ: ಸರ್ಕಾರ ಜಾರಿಗೊಳಿಸುವ ಬೃಹತ್‌, ಮಧ್ಯಮ ನೀರಾವರಿ ಯೋಜನೆಗಳ ಅನುಷ್ಠಾನದತ್ತಲೂ ಭರವಸೆ ಸಮಿತಿ ಕಣ್ಣಾಯಿಸಿದೆ. ೧೯೬೦ರಲ್ಲಿ ಬೆಣ್ಣೆತೋರಾ ದೊಡ್ಡ ನೀರಾವರಿ ಯೋಜನೆಗೆ ೭೮.೮೩ ಕೋಟಿ ರು.ಅಂದಾಜಿಸಿದ್ದರೆ, ನವೆಂಬರ್‌ ೨೦೧೬ರವರೆಗೆ ೫೦೪.೩೯ ಕೋಟಿ ರು.ಗೇರಿದೆ. ಅಮರ್ಜಾ ಯೋಜನೆಗೆ ೧೯೭೨ರಲ್ಲಿ ೫.೭೦ ಕೋಟಿ ರು.ಅಂದಾಜಿಸಿದ್ದರೆ, ೨೦೧೬ರಲ್ಲಿ ೨೯೫.೮೩ ಕೋಟಿ ರು. ಖರ್ಚಾಗಿದೆ. ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ಉಣಕಲ್‌ ಕೆರೆಯವರೆಗೆ ಫ್ಲೈ ಓವರ್‌ ನಿರ್ಮಾಣ ಕಾಮಗಾರಿಗೆ ಅನುಮತಿ ಕೊಟ್ಟಾಗ ೩೦ ಕೋಟಿ ರು. ಇದ್ದದ್ದು ಈಗ ೩೦೦ ಕೋಟಿ ರು. ಆಗಿದೆ.

ಹೀಗೆ, ಬಹುತೇಕ ಕಾಮಗಾರಿಗಳನ್ನು ವಿಳಂಬ ಮಾಡಿ, ಕಾಮಗಾರಿಗಳ ಅಂದಾಜು ವೆಚ್ಚವನ್ನು ೧೦೦ರಿಂದ ೨೦೦ ಪಟ್ಟು ಹೆಚ್ಚಳವಾಗುವಂತೆ ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ಅಧಿಕಾರಿಗಳೇ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದಾರೆ. ಆರ್ಥಿಕ ಇಲಾಖೆಯ ಅನುಮತಿಯನ್ನೂ ಪಡೆಯದೆ, ಮತ್ತೆ ಟೆಂಡರ್‌ ಕರೆದಿರುವ ಪ್ರಕರಣಗಳು ನಡೆದಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವುಂಟಾಗುತ್ತಲೇ ಇದೆ ಎಂದು ಸಮಿತಿ ಸರ್ಕಾರದ ಗಮನ ಸೆಳೆದಿದೆ.

corruption ಭ್ರಷ್ಟಾಚಾರ ಲೋಕಾಯುಕ್ತ H D Kumarswamy ವಿಚಾರಣೆ Basavaraj Horatti ಬಸವರಾಜ ಹೊರಟ್ಟಿ Lokayukta ಜಿ ಪರಮೇಶ್ವರ Enquiry ಲೋಕಾಯುಕ್ತ ಎಡಿಜಿಪಿ Lokayukta ADGP ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು