ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಸಚಿವರು ನೀಡಿದ ಭರವಸೆಗಳು ಮಣ್ಣುಪಾಲು; ಬಯಲಿಗೆ ಬಂತು ಅಧಿಕಾರಿಗಳ ಹೊಣೆಗೇಡಿತನ

ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿಯಾದಿಯಾಗಿ ಸಚಿವರು ನೀಡುವ ಭರವಸೆಗಳು ಈಡೇರುತ್ತಿವೆಯೇ? ಖಂಡಿತ ಇಲ್ಲ. ಭರವಸೆಗಳನ್ನು ಈಡೇರಿಸಬೇಕಿದ್ದ ಐಎಎಸ್‌ ಅಧಿಕಾರಿಗಳು ಅತ್ತ ನೋಡುತ್ತಲೂ ಇಲ್ಲ. ಅಧಿಕಾರಿಗಳ ಈ ಹೊಣೆಗೇಡಿತನವನ್ನು ಭರವಸೆಗಳ ಸಮಿತಿ ಬಯಲಿಗೆಳೆದಿದೆ

ಮಹಾಂತೇಶ್ ಜಿ

ರಾಜ್ಯದ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಸೇರಿದಂತೆ ಇಲಾಖಾ ಮುಖ್ಯಸ್ಥರು ವಿಫಲರಾಗಿದ್ದಾರೆ. ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಸದನದಲ್ಲಿ ಸಚಿವರು ನೀಡುವ ‘ಭರವಸೆ’ಗಳನ್ನೂ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಈಡೇರಿಸಿದ ನಿದರ್ಶನಗಳೇ ಇಲ್ಲ.

ಅಷ್ಟೇ ಏಕೆ, ಭರವಸೆಗಳನ್ನು ಈಡೇರಿಸುವ ಸಂಬಂಧ ಯಾವೊಬ್ಬ ಅಧಿಕಾರಿಯೂ ಪ್ರಾಮಾಣಿಕ ಪ್ರಯತ್ನ ಮಾಡಿರುವ ಬಗ್ಗೆ ಒಂದೇ ಒಂದು ನಿದರ್ಶನವೂ ಇಲ್ಲ. ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕಿದ್ದ ಪ್ರಧಾನ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರಿಗೆ ಯಾವುದೇ ಹೊಣೆಗಾರಿಕೆಯೂ ಇಲ್ಲ. ಸರ್ಕಾರವೂ ಇಂತಹ ಅಧಿಕಾರಿಗಳ ಗೊಡವೆಗೆ ಹೋಗುತ್ತಿಲ್ಲ.

ವಿಧಾನ ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ (ಹಾಲಿ ಹಂಗಾಮಿ ಸಭಾಪತಿ) ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸರ್ಕಾರಿ ಭರವಸೆಗಳ ಸಮಿತಿ, ೨೦೧೬-೧೭ನೇ ಸಾಲಿಗೆ ಸಂಬಂಧಿಸಿದಂತೆ ೨೦೧೮ರ ಫೆ.೨೩ರಂದು ಸಲ್ಲಿಸಿರುವ ೪೬ನೇ ವರದಿ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಬಹಿರಂಗಗೊಳಿಸಿದೆ. ಅಲ್ಲದೆ, ವಿಧಾನಪರಿಷತ್ತಿನ ಸದಸ್ಯರನ್ನೊಳಗೊಂಡ ಸಮಿತಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗೆಯೇ, ಸಭೆಗೆ ಹಾಜರಾಗುವ ಅಧಿಕಾರಿಗಳು ತಪ್ಪು ಉತ್ತರ ನೀಡಿ ಸಮಿತಿಯನ್ನೇ ದಿಕ್ಕು ತಪ್ಪಿಸಲೆತ್ನಿಸಿರುವ ನಿದರ್ಶನಗಳನ್ನು ಪತ್ತೆಹಚ್ಚಿದೆ.

“ಸಮಿತಿಯನ್ನು ಗಂಭೀರವಾಗಿ ಪರಿಗಣಿಸದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇಲಾಖಾ ಮುಖ್ಯಸ್ಥರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅವರ ಮರ್ಜಿಯ ಮೇಲೆ ಸರ್ಕಾರ ನಡೆಯುತ್ತದೆಂಬ ಭಾವನೆ ಹೆಚ್ಚಾಗುತ್ತಿದೆ. ಅಲ್ಲದೆ, ಯಾವ ಅಧಿಕಾರಿಯೂ ಕಿಂಚಿತ್ತೂ ಹೆದರದೆ, ನಾವೇ ಸರ್ಕಾರವೆಂಬ ಭಾವನೆಯಿಂದಾಗಿ ಇಡೀ ವ್ಯವಸ್ಥೆ ಹಾಳಾಗಿರುವುದು ವಿಪರ್ಯಾಸ,” ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

“ಈ ಎಲ್ಲ ಬೆಳವಣಿಗೆಗಳ ಕುರಿತು ಹಿಂದಿನ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಅರವಿಂದ್‌ ಜಾಧವ್‌ ಮತ್ತು ಸುಭಾಷ್‌ಚಂದ್ರ ಕುಂಟಿಆ ಅವರಿಗೆ ಸಮಿತಿ ಪತ್ರ ಬರೆದಿತ್ತು. ಇವರೆಲ್ಲರೂ ನೆಪಕ್ಕೆ ಒಂದು ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಫಲಿತಾಂಶ ಶೂನ್ಯವಾಗಿದ್ದರಿಂದ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿ ಎಷ್ಟೇ ಪ್ರಯತ್ನಪಟ್ಟರೂ ಸುಧಾರಣೆಯಾಗಿಲ್ಲ,” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಧಾನ ಮಂಡಲದ ಸಮಿತಿಗಳು ಸದನದ ಮುಂದುವರಿದ ಭಾಗ. ರಾಜ್ಯದ ಹಿತದೃಷ್ಟಿ ಹಾಗೂ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಚರ್ಚಿಸಲು ಸದನದಷ್ಟೇ ಗಾಂಭೀರ್ಯತೆಯು ಸಮಿತಿ ನಡೆಸುವ ಸಭೆಗಳಿಗಿವೆ. ಒಂದು ಸಭೆ ನಡೆಸಲು ಸರ್ಕಾರಕ್ಕೆ ೫ ಲಕ್ಷ ರು. ಖರ್ಚಾಗುತ್ತದೆ. ೨೦೧೬-೧೭ನೇ ಸಾಲಿನಲ್ಲಿ ಭರವಸೆ ಸಮಿತಿ ಒಟ್ಟು ೩೪ ಇಲಾಖೆಗಳಿಗೆ ಸಂಬಂಧಿಸಿದಂತೆ ೭೪ ಸಭೆ ನಡೆಸಿದೆ. ಸಮಿತಿ ನಡೆಸಿರುವ ಒಟ್ಟು ಸಭೆಗಳಿಗೆ ೩.೭೪ ಕೋಟಿ ರು. ಖರ್ಚಾಗಿದೆ. ಸಮಿತಿ ನಡೆಸಿರುವ ಸಭೆಗಳಿಗೆ ೩ ಕೋಟಿ ರು. ವೆಚ್ಚವಾಗಿದ್ದರೂ ಅಧಿಕಾರಿಗಳು ಮಾತ್ರ ಸಭೆಗೆ ‘ಲೋಕಾಭಿರಾಮವಾಗಿ’ ಹಾಜರಾಗಿದ್ದಾರೆ. ಸಮಿತಿಯ ಸಭೆಗಳು ಸರಿಯಾಗಿ ನಡೆಯದೆ ಮುಂದೂಡಿದಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ.

“ನಾನು ಈಗ ಈ ಹುದ್ದೆಯ/ಇಲಾಖೆಯ ಅಧಿಕಾರ ವಹಿಸಿಕೊಂಡಿರುವೆ. ನಾನು ನೋಡಿಲ್ಲವೆಂಬ ಸಬೂಬುಗಳನ್ನು ಹೆಚ್ಚಾಗಿ ಹೇಳುವುದನ್ನು ಬಿಟ್ಟರೆ ಸರ್ಕಾರದ ಕೆಲಸದ ಬಗ್ಗೆ ಯಾವೊಬ್ಬ ಇಲಾಖೆಯ ಅಧಿಕಾರಿಯೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲದಿರುವುದು ನೋವಿನ ಸಂಗತಿ,” ಎಂದು ಸಮಿತಿಯ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.

ಸಮಿತಿ ಸಭೆ ಕರೆದಾಗಲಷ್ಟೇ ಇಲಾಖಾಧಿಕಾರಿಗಳು ಭರವಸೆಗಳ ಕಡೆ ಗಮನ ಹರಿಸುತ್ತಿದ್ದಾರೆ. ಇದರಿಂದ ಕೆಲವೊಂದು ಭರವಸೆಗಳೂ ೧೦-೧೫ ವರ್ಷಗಳಾದರೂ ಈಡೇರದೆ ಭರವಸೆಗಳಾಗಿಯೇ ಉಳಿಯುತ್ತಿವೆ. ಸಚಿವರು ಕೂಡ ಸದನದಲ್ಲಿ ಉತ್ತರಿಸುವಾಗ ಕಾರ್ಯರೂಪಕ್ಕೆ ತರಲು ಅಸಾಧ್ಯವಾದಂತಹ ವಿಷಯಗಳಿಗೆ ಸಹ ಸಮಯೋಚಿತವಾಗಿ ಆಶ್ವಾಸನೆ ನೀಡುವ ಪರಿಪಾಠ ಬೆಳೆಸಿಕೊಂಡಿರುವುದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ : ‘ಬಿ’ ರಿಪೋರ್ಟ್ ಹಾಕುವುದರಲ್ಲಿ ಲೋಕಾಯುಕ್ತ ಪೊಲೀಸರು ನಿಸ್ಸೀಮರು!

ಇಲಾಖಾವಾರು ಬಾಕಿ ಇರುವ ಭರವಸೆಗಳನ್ನು ಈಡೇರಿಸಲು ಆಯಾ ಇಲಾಖೆಗಳು ವಾರಕ್ಕೊಮ್ಮೆ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲು ಒಂದು ತಿಂಗಳವರೆಗೆ ಸಮಯಾವಕಾಶವಿರುತ್ತದೆ. ಇದಾದ ನಂತರ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ಒದಗಿಸಲು ಸಮಿತಿ ಪತ್ರ ಬರೆಯುತ್ತದೆ. ಆದರೂ ಬಹಳಷ್ಟು ಇಲಾಖಾ ಮುಖ್ಯಸ್ಥರು ನಿಗದಿತ ಅವಧಿಯಲ್ಲಿ ಉತ್ತರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

“ಬಹುತೇಕ ಪ್ರಧಾನ ಕಾರ್ಯದರ್ಶಿಗಳು, ‘ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ’ ಅಥವಾ 'ಡೆಲಿಗೇಟ್ಸ್‌ ಜೊತೆ ಸಭೆ ಇದೆ’ ಎಂದು ಹೇಳಿ ಹಾಜರಾತಿಯಿಂದ ವಿನಾಯಿತಿ ಪಡೆಯುತ್ತಿದ್ದಾರೆ. ಕೆಲವು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಈ ರೀತಿಯ ಕಾರಣ ತಿಳಿಸಿ ಸಭೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇಲ್ಲವೇ, ತಪ್ಪು ಮಾಹಿತಿಯನ್ನು ಕೊಟ್ಟು ಕಚೇರಿಯಲ್ಲಿ ಕುಳಿತುಕೊಳ್ಳುವಂಥ ಉದಾಹರಣೆಗಳು ಸಾಕಷ್ಟಿವೆ,” ಎಂದು ವರದಿಯಲ್ಲಿ ಪ್ರಧಾನವಾಗಿ ಉಲ್ಲೇಖಿಸಲಾಗಿದೆ.

Chief Secretary ಮುಖ್ಯ ಕಾರ್ಯದರ್ಶಿ Basavaraj Horatti ಬಸವರಾಜ ಹೊರಟ್ಟಿ ಜಿ ಪರಮೇಶ್ವರ್ CM H D Kumaraswamy Deputy CM G Parameshwara Karnataka Legislative Council ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ Karnataka Legislature Assurance Committee Report
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು