ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ ಪ್ರಕರಣಕ್ಕೆ ಮರುಜೀವ ಕೊಟ್ಟ ಸುಪ್ರೀಂ

ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ಮುನ್ನಡೆ ಸಿಕ್ಕಿದೆ. ದಿನಚರಿಯಲ್ಲಿ ವಿವರ ನಮೂದಿಸದ ಕಾರಣದಿಂದ ತನಿಖೆ ರದ್ದುಗೊಳಿಸಲಾಗದು ಎಂದು ಲೋಕೋಪಯೋಗಿ ಮುಖ್ಯ ಎಂಜಿನಿಯರ್‌ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು ನೀಡಿದೆ

ಮಹಾಂತೇಶ್ ಜಿ

ಅಕ್ರಮ ಆಸ್ತಿ ಗಳಿಕೆ ಆರೋಪಗಳಡಿಯಲ್ಲಿ ದಾಳಿ ನಡೆಸಿದ ನಂತರ ಎಫ್‌ಐಆರ್‌ ದಾಖಲಿಸುವ ಹಂತದಲ್ಲಿ ಲೋಕಾಯುಕ್ತ ಪೊಲೀಸರು ‘ದಿನಚರಿ’ಯಲ್ಲಿ (ಸ್ಟೇಷನ್ ಡೈರಿ) ವಿವರಗಳನ್ನು ನಮೂದಿಸಿಲ್ಲ ಎಂಬ ಕ್ಷುಲಕ ಕಾರಣವನ್ನು ಆರೋಪಿತ ಸರ್ಕಾರಿ ಅಧಿಕಾರಿಗಳು ವಿಚಾರಣೆ ವೇಳೆಯಲ್ಲಿ ಇನ್ನು ಮುಂದೆ ನೀಡಲಾಗದು. ದಿನಚರಿಯಲ್ಲಿ ನಮೂದಿಸಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಪ್ರಾಥಮಿಕ ತನಿಖೆಯನ್ನೇ ರದ್ದುಗೊಳಿಸಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. 2018ರ ಮೇ ೧೮ರಂದು ನೀಡಿದ ಈ ತೀರ್ಪಿನ ಮಾಹಿತಿ ಇದೀಗ ಲಭ್ಯವಾಗಿದೆ.

ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧದ ಸ್ಥಗಿತಗೊಂಡಿರುವ ಪ್ರಾಥಮಿಕ ತನಿಖೆ ಮುಂದುವರಿಸಲು ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಹಸಿರು ನಿಶಾನೆ ತೋರಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದ ಲೋಕೋಪಯೋಗಿ ಮುಖ್ಯ ಎಂಜಿನಿಯರ್‌ ಸಿ ಮೃತ್ಯುಂಜಯಸ್ವಾಮಿ (ಯೋಜನೆ ರಸ್ತೆ ನಿರ್ವಹಣೆ) ಮತ್ತು ಸಹಾಯಕ ಎಂಜಿನಿಯರ್ ಎಚ್ ಶ್ರೀನಿವಾಸ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಎನ್‌ ವಿ ರಮಣ ಮತ್ತು ಕರ್ನಾಟಕ ಮೂಲದ ಎಸ್‌ ಅಬ್ದುಲ್‌ ನಜೀರ್‌ ಅವರ ನೇತೃತ್ವದ ಪೀಠ‌ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಈ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆಯನ್ನು ಮುಂದುವರಿಸಬೇಕು ಎಂದೂ ಆದೇಶಿಸಿದೆ. ಆದರೆ, ವಿಚಾರಣೆ ಮುಂದುವರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಆದೇಶಿಸಿದೆಯಾದರೂ ರಾಜ್ಯ ಸರ್ಕಾರ ಮಂಜೂರಾತಿ ನೀಡುವವರೆಗೂ ಲೋಕಾಯುಕ್ತ ಪೊಲೀಸರು ವಿಚಾರಣೆ ಆರಂಭಿಸಲಾಗದು.

ವಿಶೇಷವೆಂದರೆ, ದಾಳಿ ಪ್ರಕರಣದಲ್ಲಿ ವಿವರಗಳನ್ನು ದಿನಚರಿಯಲ್ಲಿ ನಮೂದಿಸುವುದು ಅಥವಾ ನಮೂದಿಸದಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ಆನಂದ್‌ ಬೈರಾರೆಡ್ಡಿ ಅವರು ಭಿನ್ನ ತೀರ್ಪುಗಳನ್ನು ನೀಡಿದ್ದರು. ಲೋಕೋಪಯೋಗಿ ಮುಖ್ಯ ಎಂಜಿನಿಯರ್‌ ಸಿ ಮೃತ್ಯುಂಜಯಸ್ವಾಮಿ ಅವರ ಪ್ರಕರಣದಲ್ಲಿ ದಿನಚರಿಯಲ್ಲಿ ವಿವರಗಳನ್ನು ಲೋಕಾಯುಕ್ತ ಪೊಲೀಸರು ನಮೂದಿಸಿಲ್ಲ ಎಂಬ ಒಂದೇ ಕಾರಣದಿಂದ ತನಿಖೆಯನ್ನು ರದ್ದುಗೊಳಿಸಲು ಆದೇಶಿಸಿದ್ದರು (2016ರ ಆಗಸ್ಟ್ 22).

ಇದನ್ನೂ ಓದಿ : ‘ಬಿ’ ರಿಪೋರ್ಟ್ ಹಾಕುವುದರಲ್ಲಿ ಲೋಕಾಯುಕ್ತ ಪೊಲೀಸರು ನಿಸ್ಸೀಮರು!

ಆದರೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಭಾವ ಅಬಕಾರಿ ಜಂಟಿ ಆಯುಕ್ತ ವೈ ಮಂಜುನಾಥ್‌ ಅವರ ಮೇಲಿನ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ದಿನಚರಿಯಲ್ಲಿ ನಮೂದು ಆದರೂ ಅಥವಾ ಆಗದೆ ಇದ್ದರೂ ಇದೇ ಅಂಶವನ್ನು ಪುರಸ್ಕರಿಸುವುದು ತಪ್ಪು. ಇದೊಂದೇ ಕಾರಣವನ್ನಿಟ್ಟುಕೊಂಡು ತನಿಖೆಯನ್ನು ರದ್ದುಗೊಳಿಸಲಾಗದು ಎಂದು ನ್ಯಾಯಾಧೀಶರಾಗಿದ್ದ ಆನಂದ್‌ ಬೈರಾರೆಡ್ಡಿ ಅವರು ತೀರ್ಪು ನೀಡಿದ್ದರು. ಈ ತೀರ್ಪು ನ್ಯಾಯಾಂಗದ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಸುಪ್ರೀಂ ಹೇಳಿದ್ದೇನು?: ಸಿ ಮೃತ್ಯುಂಜಯಸ್ವಾಮಿ ಅವರ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಕುರಿತು 2018ರ ಮೇ ೧೮ರಂದು ತೀರ್ಪು ಪ್ರಕಟಿಸಿದೆ. “ದಿನಚರಿಯಲ್ಲಿ ನಮೂದು ಮಾಡದಿದ್ದರೆ ಅದೇ ಒಂದು ನೆಪವಾಗಬಾರದು. ಆ ನೆಪದ ಮೇಲೆ ವಿಚಾರಣೆಯನ್ನು ರದ್ದುಪಡಿಸಬಾರದು. ಅಲ್ಲದೆ, ಆ ಬಗ್ಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ,” ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ಅದೇ ರೀತಿ, “ದಿನಚರಿಯಲ್ಲಿ ನಮೂದು ಮಾಡದೆ ಇರುವ ಅಂಶವನ್ನು ಸಾಕ್ಷ್ಯ ವಿಚಾರಣೆ ಸಂದರ್ಭದಲ್ಲಿ ಬಳಸಬಹುದು. ಅದನ್ನು ಹೊರತುಪಡಿಸಿದರೆ ಅದೇ ಕಾರಣಕ್ಕಾಗಿ ವಿಚಾರಣೆ, ತನಿಖೆಯನ್ನೇ ರದ್ದುಪಡಿಸಬಾರದು. ದಿನಚರಿ ನಿರ್ವಹಣೆ ಮಾಡದೆ ಇದ್ದದ್ದಕ್ಕೆ ಆರೋಪಿತ ಅಧಿಕಾರಿಯ ಹಕ್ಕುಗಳು ಯಾವ ರೀತಿ ತೊಂದರೆಗೆ ಒಳಗಾಗಿದೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಹಾಗೆಯೇ, ದಿನಚರಿ ನಿರ್ವಹಣೆ ಸಂಬಂಧ ಸಿಆರ್‌ಪಿಸಿಯಲ್ಲಿ ಯಾವುದೇ ಉಲ್ಲೇಖವಿಲ್ಲ,” ಎಂದು ವಿವರಿಸಿದೆ.

ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಸಿ ಮೃತ್ಯುಂಜಯಸ್ವಾಮಿ ಅವರ ಮನೆ ಮತ್ತು ವಿಕಾಸಸೌಧದ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಜುಲೈ ೨೧, ೨೦೧೧ರಲ್ಲಿ ದಾಳಿ ನಡೆಸಿದ್ದರು. ಸುಮಾರು 8 ಕೋಟಿ ರು. ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆಯಲ್ಲಿ ವಶಪಡಿಸಿಕೊಂಡಿದ್ದರು.

ಅಲ್ಲದೆ, ಪೊಲೀಸರ ಶೋಧದ ವೇಳೆಯಲ್ಲಿ ಸುಮಾರು 80 ಕೆ.ಜಿ ಅಕ್ರಮ ಶ್ರೀಗಂಧ ಕೂಡ ಪತ್ತೆಯಾಗಿತ್ತು. ಜು.22ರಿಂದ 48 ಗಂಟೆಗಳಿಗೂ ಹೆಚ್ಚು ಕಾಲ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಲೋಕಾಯುಕ್ತ ಅಂದಿನ ಎಡಿಜಿಪಿ ಶಿಫಾರಸಿನ ಅನ್ವಯ ಆ.3ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಹಾಗೆಯೇ ಶ್ರೀಗಂಧ ಅಕ್ರಮ ಸಂಗ್ರಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಆ ನಂತರ ಅಕ್ರಮ ಆಸ್ತಿ ಗಳಿಕೆ ಆರೋಪಗಳಡಿಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆಯನ್ನು ಮುಂದುವರಿಸಿದ್ದರು. ಈ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಿನಚರಿಯಲ್ಲಿ ವಿವರಗಳನ್ನು ನಮೂದಿಸಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಲಲಿತಾಕುಮಾರಿ ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ನ್ಯಾಯಾಧೀಶರಾಗಿದ್ದ ಆನಂದ್‌ ಬೈರಾರೆಡ್ಡಿ ಅವರು ತನಿಖೆಯನ್ನು ರದ್ದುಗೊಳಿಸಿ ಆದೇಶಿಸಿದ್ದರು. ಈ ಆದೇಶ ಪ್ರಕಟಗೊಂಡು ಹಲವು ತಿಂಗಳಾದರೂ ಪ್ರಶ್ನಿಸದೆ ನಿರ್ಲಕ್ಷ್ಯ ತಾಳಿದ್ದ ರಾಜ್ಯ ಸರ್ಕಾರ, ಕಡೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.

ಸರ್ಕಾರ ಅನುಮತಿ ನೀಡುವುದೇ?: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿ ಮೃತ್ಯುಂಜಯಸ್ವಾಮಿ ಅವರನ್ನು ವಿಚಾರಣೆಗೊಳಪಡಿಸಲು ಲೋಕಾಯುಕ್ತ ಪೊಲೀಸರು ಕೋರಿದ್ದ ಮಂಜೂರಾತಿಯನ್ನು ಲೋಕೋಪಯೋಗಿ ಇಲಾಖೆ ಈವರೆವಿಗೂ ನೀಡಿಲ್ಲ. ಕಳೆದ ೫ ವರ್ಷದಿಂದಲೂ ಈ ಸಂಬಂಧದ ಕಡತ ಸರ್ಕಾರದ ಹಂತದಲ್ಲೇ ಇದೆ. ಆರೋಪಿತ ಅಧಿಕಾರಿಗಳ ವಿರುದ್ಧದ ವಿಚಾರಣೆಗೆ ೯೦ ದಿನದೊಳಗೆ ಅನುಮತಿ ನೀಡಬೇಕು ಎಂದು ಡಾ.ನಂದೀಶ್‌ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶಿಸಿದೆ. ಹಾಗೆಯೇ ವಿಚಾರಣೆ ಮಂಜೂರಾತಿ ಪ್ರಕರಣಗಳನ್ನು ಹೈಕೋರ್ಟ್‌ ನಿಗಾ ಇಟ್ಟಿದ್ದರೂ ರಾಜ್ಯ ಸರ್ಕಾರ ಈವರೆವಿಗೂ ಮಂಜೂರಾತಿ ನೀಡದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

High Court SupremeCourt ಸುಪ್ರೀಂ ಕೋರ್ಟ್‌ ಹೈಕೋರ್ಟ್ Karnataka Lokayukta H D Kumarswamy G Parameshwara ಜಿ ಪರಮೇಶ್ವರ್ Raid ಕರ್ನಾಟಕ ಲೋಕಾಯುಕ್ತ H D Revanna ದಾಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ Chief Engineer Mruthyunjaya Swamy
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು