ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಎಪಿಪಿಗಳ ನೇಮಕ ಹಗರಣ; ಅಕ್ರಮ ಒಂದೇ, ಆದರೆ ಕಾನೂನು ಇಲಾಖೆ ಭಿನ್ನ ನಿಲುವು

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಕ್ರಮಗಳನ್ನು ಎಸಗಿ ಸರ್ಕಾರಿ ನೌಕರಿಗೆ ಸೇರಿದರೂ ಯಾವುದೇ ಶಿಕ್ಷೆ ಇಲ್ಲದೆಯೇ ಬಚಾವಾಗಬಹುದು! ಏಕೆಂದರೆ ಸೇವೆಗೆ ಸೇರುವ ಮುನ್ನವೇ ಅಕ್ರಮ ಎಸಗಿ ನೇಮಕವಾಗಿರುವ ಸರ್ಕಾರಿ ನೌಕರರನ್ನು ಅಮಾನತುಗೊಳಿಸಲು ನಿಯಮಗಳೇ ಇಲ್ಲ

ಮಹಾಂತೇಶ್ ಜಿ

ಅಕ್ರಮ ಮಾರ್ಗಗಳ ಮೂಲಕ ನೇಮಕವಾಗಿರುವ ೬೧ ಮಂದಿ ಅಸಿಸ್ಟಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್ ಮತ್ತು ಅಸಿಸ್ಟಂಟ್‌ ಗೌರ್ನಮೆಂಟ್‌ ಪ್ಲೀಡರ್ರ್ಸ್ (ಎಪಿಪಿ)ಗಳನ್ನು ಅಮಾನತುಗೊಳಿಸುವ ಸಂಬಂಧ ಕಾನೂನು ಇಲಾಖೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಗಂಭೀರ ಮತ್ತು ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ರುಜುವಾತುಪಡಿಸಿದ್ದಾರಲ್ಲದೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಆದರೂ ‘ಅಕ್ರಮ ಫಲಾನುಭವಿ’ಗಳನ್ನು ಅಮಾನತುಗೊಳಿಸಲು ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡಿಲ್ಲ. ಹೀಗಾಗಿ ಯಾವ ನಿಯಮಗಳ ಅಡಿಯಲ್ಲಿ ಅಮಾನತುಗೊಳಿಸಬೇಕು ಎಂಬ ಬಗ್ಗೆ ಗೃಹ ಇಲಾಖೆ(ಒಳಾಡಳಿತ) ಜಿಜ್ಞಾಸೆಯಲ್ಲಿ ಮುಳುಗಿದೆ.

ಸೇವೆಗೆ ಸೇರುವ ಮುನ್ನ ಎಸಗಿದ್ದಾರೆ ಎನ್ನಲಾದ ಕೃತ್ಯಗಳ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸುವ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ ಎನ್ನುವ ಕಾರಣವನ್ನು ಕಾನೂನು ಇಲಾಖೆ ಈಗ ಮುಂದೊಡ್ಡಿರುವುದೇ ಜಿಜ್ಞಾಸೆಗೆ ಕಾರಣ.

ವಿಶೇಷವೆಂದರೆ ಉತ್ತರ ಪತ್ರಿಕೆಗಳನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ರತ್ನಕಲಾ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಧೀಂದ್ರರಾವ್‌ ಸೇರಿದಂತೆ ಹಲವು ಜಿಲ್ಲಾ ನ್ಯಾಯಾಧೀಶರು ಮೌಲ್ಯಮಾಪನ ಮಾಡಿದ್ದರು. ಮೌಲ್ಯಮಾಪನವಾದ ನಂತರ ಉತ್ತರ ಪತ್ರಿಕೆಗಳು ಬದಲಾಯಿಸಲಾಗಿತ್ತು. ಹಾಗೆಯೇ ಮೌಲ್ಯಮಾಪನ ಮಾಡಿದ್ದ ನ್ಯಾಯಾಧೀಶರ ಸಹಿಗಳನ್ನೇ ನಕಲು ಮಾಡಲಾಗಿತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯವು ಇದನ್ನು ದೃಢಪಡಿಸಿತ್ತು.

ಮೌಲ್ಯಮಾಪನ ಆದ ನಂತರ ನಡೆದಿರುವ ಬದಲಾವಣೆಗಳನ್ನು ತಾವು ಮಾಡಿಲ್ಲ ಎಂದು ರತ್ನಕಲಾ ಅವರು ಸೇರಿದಂತೆ ಜಿಲ್ಲಾ ನ್ಯಾಯಾಧೀಶರುಗಳು ತನಿಖೆ ವೇಳೆಯಲ್ಲಿ ಹೇಳಿಕೆ ನೀಡಿದ್ದರು.ಇಂತಹ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರೂ ಅಕ್ರಮ ಫಲಾನುಭವಿಗಳನ್ನು ಅಮಾನತುಗೊಳಿಸಲು ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡಿಲ್ಲ.

ಆದರೆ ಇವರೆಲ್ಲ ಸರ್ಕಾರಿ ನೌಕರಿಗೆ ಅರ್ಹರಾಗಲು ಅಕ್ರಮವಾಗಿ ಪಡೆದಿರುವ ಅಂಕಗಳೇ ಮೂಲ ಕಾರಣ ಎಂಬುದನ್ನು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಸಾಬೀತುಪಡಿಸಿದ್ದಾರೆ. ಅಕ್ರಮವಾಗಿ ತಿದ್ದುಪಡಿ ಮಾಡಿರುವ ಅಂಕಗಳನ್ನು ಪರಿಗಣಿಸದಿದ್ದರೆ ಅವರೆಲ್ಲರೂ ಸರ್ಕಾರಿ ಸೇವೆಗೇ ಅರ್ಹರಾಗುತ್ತಿರಲಿಲ್ಲ ಎಂಬ ವಿವರಗಳೂ ದೋಷಾರೋಪಣೆ ಪಟ್ಟಿಯಲ್ಲಿವೆ. ಆದರೂ ಕಾನೂನು ಇಲಾಖೆ ಇವುಗಳನ್ನು ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ.

ಎಪಿಪಿಗಳ ನೇಮಕಾತಿ ಅಧಿಸೂಚನೆ(ಮೇ ೧೫,೨೦೧೨) ಅನ್ವಯ ಯಾವುದೇ ಅಭ್ಯರ್ಥಿಯು ಅಧಿಕಾರಿಗಳಿಂದಾಗಲಿ, ಅಥವಾ ಅಧಿಕಾರೇತರರಿಂದಾಗಲಿ ಯಾವುದೇ ರೀತಿಯ ಬಾಹ್ಯ ಪ್ರಭಾವ ಬೀರಲು ಪ್ರಯತ್ನಿಸಿದರೆ ಅಂತಹ ಅಭ್ಯರ್ಥಿಯು ನೇಮಕಾತಿಗೆ ಅನರ್ಹನಾಗುತ್ತಾನೆ. ಆದರೆ ಈ ಪ್ರಕರಣದಲ್ಲಿ ಬಾಹ್ಯ ಪ್ರಭಾವವನ್ನು ಬೀರುವ ಪ್ರಯತ್ನವನ್ನು ಮೀರಿ ನಕಲಿ ಅಂಕಗಳನ್ನು ಪಡೆಯುವ ಮೂಲಕ ಅನರ್ಹರಿದ್ದರೂ ಸಹ ಅರ್ಹತೆಯನ್ನು ಪಡೆದು ಸರ್ಕಾರಿ ಸೇವೆಗೆ ಸೇರಿರುತ್ತಾರೆ. ಇದು ಅಧಿಸೂಚನಯ ನಿಯಮಗಳ ಉಲ್ಲಂಘನೆ ಎಂದು ತನಿಖೆ ದೃಢಪಡಿಸಿದೆಯಾದರೂ ಇವರನ್ನು ಅಮಾನತುಗೊಳಿಸಲು ಕಾನೂನು ಇಲಾಖೆ ಸರಿಯಾದ ನಿಲುವು ತಳೆದಿಲ್ಲ. ಇದು ಅಕ್ರಮ ಫಲಾನುಭವಿಗಳ ರಕ್ಷಣೆಗೆ ನಿಂತಿದೆಯಲ್ಲದೇ ಬೇರೇನೂ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

“ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗದಂತೆ ಒಳಸಂಚು ರೂಪಿಸಿಕೊಂಡು ಅಪರಾಧಿಕ ಒಳ ಸಂಚು ನಡೆಸಿ ಅಕ್ರಮ ಅಂಕಗಳನ್ನು ಗಳಿಸುವ ಮೂಲಕ ಸರ್ಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ. ಸರ್ಕಾರಿ ನೌಕರನಿಗೆ ತಕ್ಕುದಲ್ಲದ ಕೃತ್ಯವನ್ನು ಮಾಡುವ ಮೂಲಕ ಸರ್ಕಾರಿ ನೌಕರರಾಗಿದ್ದಾರೆ. ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಅನುಚಿತ ಮಾರ್ಗಗಳ ಮೂಲಕ ಅಕ್ರಮಗಳನ್ನೆಸಗಿ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ. ಇವರನ್ನು ಈಗಾಗಲೇ ಕ್ರಿಮಿನಲ್ ಪ್ರಾಸಿಕ್ಯೂಷನ್ ಗೆ ಗುರಿಪಡಿಸಲಾಗಿರುತ್ತದೆ,” ಎಂದು ಲೋಕಾಯುಕ್ತ ಎಡಿಜಿಪಿ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ನೇಮಕಾತಿ ಸಮಯದಲ್ಲಿ ಎಸಗುವ ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು(ಸಾಮಾನ್ಯ ನೌಕರಿ ಭರ್ತಿ) ೧೯೭೭ರ ನಿಯಮ ೨೦ರಡಿಯಲ್ಲಿ ಉಲ್ಲೇಖಿಸಿದೆ. ಈ ನಿಯಮದ ಪ್ರಕಾರ ಒಬ್ಬ ಅಭ್ಯರ್ಥಿಯು ನೌಕರಿ ಭರ್ತಿಯ ಉದ್ದೇಶಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಅನುಚಿತ ಮಾರ್ಗಗಳನ್ನು ಬಳಸಿರುವ ಅಥವಾ ಬಳಸಲು ಪ್ರಯತ್ನಿಸಿರುವ ಅಥವಾ ಆತನ ನೌಕರಿ ಭರ್ತಿಗೆ ಸಂಬಂಧಿಸಿದಂತೆ ಯಾವುದೇ ಇತರ ಅಕ್ರಮ ಅಥವಾ ಅಸಮರ್ಪಕ ಮಾರ್ಗಗಳನ್ನು ಅನುಸರಿಸಿ ತಪ್ಪಿತಸ್ಥನಾಗಿ ಕಂಡು ಬಂದರೆ ಆತ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಮತ್ತು ಶಿಸ್ತು ಕ್ರಮಕ್ಕೆ ಸ್ವತಃ ಗುರಿಯಾಗಲಿದ್ದಾನೆ.

ಹಾಗೆಯೇ “ಅಭ್ಯರ್ಥಿಗಳ ಆಯ್ಕೆಗಾಗಿ ಆಯೋಗ ಅಥವಾ ಇತರ ನೌಕರಿ ಭರ್ತಿ ಅಥವಾ ಪರೀಕ್ಷಾ ಪ್ರಾಧಿಕಾರವು ಯಾವುದೇ ಪರೀಕ್ಷೆ ತೆಗೆದುಕೊಳ್ಳುವುದರಿಂದ ಅಥವಾ ಸಂದರ್ಶನಕ್ಕೆ ಹಾಜರಾಗುವುದರಿಂದ ಮತ್ತು ಸರ್ಕಾರವು ತನ್ನ ಅಡಿಯಲ್ಲಿ ಉದ್ಯೋಗದಿಂದ ಖಾಯಂ ಆಗಿ ಆಥವಾ ಒಂದು ನಿರ್ದಿಷ್ಟ ಅವಧಿಯವರೆಗೆ ಅನರ್ಹಗೊಳಿಸಬಹುದು. ಈ ಅಂಶಗಳ ಆಧಾರದ ಮೇರೆಗೆ ೬೧ ಅಸಿಸ್ಟಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ಗಳನ್ನು ಅಮಾನತುಗೊಳಿಸಬಹುದು,” ಎಂದು ಲೋಕಾಯುಕ್ತ ಎಡಿಜಿಪಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಸ್ಪಷ್ಟತೆ ಇಲ್ಲದ ಅಭಿಪ್ರಾಯ; ಅಮಾನತುಗೊಳಿಸುವ ಸಂಬಂಧ ಲೋಕಾಯುಕ್ತ ಎಡಿಜಿಪಿ ಅವರು ಸ್ಪಷ್ಟವಾಗಿ ನಿಯಮಗಳನ್ನು ಉಲ್ಲೇಖಿಸಿದ್ದರೆ, ಕಾನೂನು ಇಲಾಖೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ನೀಡಿದೆ. “ಕರ್ನಾಟಕ ನಾಗರಿಕ ಸೇವಾ ನಿಯಮಗಳು ೧೯೫೭ರ ತಿದ್ದುಪಡಿ ನಿಯಮ ೧೦, ಕರ್ನಾಟಕ ಸಿವಿಲ್‌ ಸೇವಾ(ಸಾಮಾನ್ಯ ನೌಕರಿ ಭರ್ತಿ) ನಿಯಮ ೨೦ ಮತ್ತು ಅಭಿಯೋಜಕರ ನೇಮಕಾತಿ ಅಧಿಸೂಚನೆ ದಿನಾಂಕ ಮೇ ೧೬,೨೦೧೨ ಕಂಡಿಕೆ ೧೮(ಇ) ಇವುಗಳಲ್ಲಿ ಅವರು ಸೇವೆಗೆ ಸೇರುವ ಮುನ್ನ ಎಸಗಿದ್ದಾರೆ ಎನ್ನಲಾದ ಕೃತ್ಯಗಳ ಆಧಾರದ ಮೇಲೆ ಅವರನ್ನು ಅಮಾನತು ಮಾಡುವ ಬಗ್ಗೆ ಯಾವುದೇ ಸ್ಪಷ್ಟ ಉಪಬಂಧಗಳು ಇಲ್ಲವಾದ ಕಾರಣ ಆಡಳಿತ ಇಲಾಖೆಯು ತಮಗೆ ಸೂಕ್ತವೆನಿಸುವ ತೀರ್ಮಾನವನ್ನು ತೆಗೆದುಕೊಳ್ಳಬಹುದು,” ಎಂದು ಅಭಿಪ್ರಾಯ ನೀಡಿದೆ.

ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

ವಿಶೇಷವೆಂದರೆ ಕರ್ನಾಟಕ ಲೋಕಸೇವಾ ಆಯೋಗ ೧೯೯೮,೯೯,೨೦೦೪ನೇ ಸಾಲಿನಲ್ಲಿ ಗ್ರೂಪ್ ಎ ಮತ್ತು ಗ್ರೂಪ್‌ ಬಿ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆ ಮತ್ತು ಸಂದರ್ಶನದಲ್ಲಿ ನಡೆದಿದ್ದ ವ್ಯಾಪಕ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡೀ ಪಟ್ಟಿಯನ್ನೇ ಪರಿಷ್ಕರಿಸಲು ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಆಯ್ಕೆಯಾಗಿದ್ದವರ ಪೈಕಿ ಬಹುತೇಕ ಅಭ್ಯರ್ಥಿಗಳು ಅಕ್ರಮ ಮಾರ್ಗಗಳ ಮೂಲಕವೇ ಸರ್ಕಾರಿ ನೌಕರಿಗೆ ಸೇರಿದ್ದರು ಎಂದು ಸಿಐಡಿ ಮತ್ತು ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಅಂದಿನ ನ್ಯಾಯಾಧೀಶ ಎನ್‌ ಕುಮಾರ್‌ ಅವರು, ಸರ್ಕಾರಿ ನೌಕರಿಗೆ ಸೇರುವ ಮುನ್ನ ನಡೆದಿದ್ದ ಪರೀಕ್ಷೆ, ಸಂದರ್ಶನದಲ್ಲಿನ ಅಕ್ರಮಗಳನ್ನು ಪ್ರಸ್ತಾಪಿಸಿದ್ದರಲ್ಲದೆ, ನೇಮಕಾತಿ ಪ್ರಕ್ರಿಯೆಗಳೇ ಕಾನೂನುಬಾಹಿರವಾಗಿವೆ ಎಂದು ಅದೇಶದಲ್ಲಿ ಹೇಳಿದ್ದರು. ಆಯೋಗದ ಕಾನೂನು ಸಲಹೆಗಾರ ಮತ್ತು ಸರ್ಕಾರದ ಕಾನೂನು, ಡಿಪಿಎಆರ್‌ ಇಲಾಖೆ ನೇಮಕಾತಿ ನೀಡಿದ್ದ ಸಮಜಾಯಿಷಿಗಳನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಪುರಸ್ಕರಿಸಿರಲಿಲ್ಲ. ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಕಾನೂನಾತ್ಮಕವಾಗಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಅಸಿಸ್ಟಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ಗಳ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಅಭ್ಯರ್ಥಿಗಳ ಕೆಲವು ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಸಹಿ ಮತ್ತು ಕೊಠಡಿ ಮೌಲ್ಯಮಾಪಕರ ಸಹಿಯೂ ನಕಲುಗೊಂಡಿತ್ತು. ಮುಖಪುಟದಲ್ಲಿ ನಮೂದಿಸಿರುವ ಅಂಕಗಳನ್ನು ತಿದ್ದಲಾಗಿತ್ತು. ಆದರೆ ಆ ಬರವಣಿಗೆಯು ಮೌಲ್ಯಮಾಪಕರದ್ದಲ್ಲ. ಇಂಗ್ಲೀಷ್‌ ಅಕ್ಷರದಲ್ಲಿ ಬರೆದಿರುವ ಒಟ್ಟು ಅಂಕದ ಬರವಣಿಗೆಯನ್ನೂ ಹೊಡೆದು ಹಾಕಿ ತಿದ್ದಲಾಗಿದೆ. ಹಾಗೆಯೇ ಒಳಪುಟಗಳಲ್ಲಿನ ಉತ್ತರಗಳಿಗೆ ನೀಡಿರುವ ಅಂಕಗಳನ್ನೂ ಹೊಡೆದುಹಾಕಿ ತಿದ್ದಲಾಗಿದೆ ಎಂದು ತನಿಖಾ ವರದಿ ವಿವರಿಸಿದೆ.

ಕೆಲ ನಿರ್ದಿಷ್ಟ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಿಸಿ, ಮೌಲ್ಯಮಾಪಕರ ಸಹಿಗಳನ್ನು ಬರವಣಿಗೆಗಳನ್ನು ನಕಲು ಮಾಡಿಸಿ ಉತ್ತರ ಪತ್ರಿಕೆಗಳನ್ನೇ ಬದಲಾಯಿಸಲಾಗಿದೆ. ತಮಗೆ ಇಷ್ಟ ಬಂದ ಅಭ್ಯರ್ಥಿಗಳು ಆಯ್ಕೆಯಾಗಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಅಂಕಗಳನ್ನು ನೀಡಿ ಆ ಮೂಲಕ ಅಕ್ರಮ ಲಾಭ ಗಳಿಸಲು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ತನಿಖಾ ತಂಡ ದೃಢಪಡಿಸಿತ್ತು. ಇವರ ವಿರುದ್ಧ ಪಿ.ಸಿ.ಆಕ್ಟ್‌ ಮತ್ತು ಐಪಿಸಿ ೨೦೧, ೪೦೯,೪೬೫,೪೭೧, ೪೨೦, ೧೨೦(ಬಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿದೆ.

Law minister of Karnataka ಎಚ್‌ ಡಿ ಕುಮಾರಸ್ವಾಮಿ ಕಾನೂನು ಸಚಿವ App ಸಚಿವ ಕೃಷ್ಣ ಬೈರೇ ಗೌಡ Krishna Byregowda ಜಿ ಪರಮೇಶ್ವರ ಲೋಕಾಯುಕ್ತ ಎಡಿಜಿಪಿ Lokayukta ADGP ಕಾನೂನು ಇಲಾಖೆ Law Department Deputy CM G Parameshwara Chief Minister H D Kumaraswamy Rules ಸೇವಾ ನಿಯಮ Civil Services
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು