ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಬೌರಿಂಗ್‌ ಕ್ಲಬ್‌ ಲಾಕರ್‌ ಪ್ರಕರಣ; ಬಿಲ್ಡರ್ಸ್‌ ಪಾಲಾದವೇ ನಿವೇಶನಗಳು?

ಬೌರಿಂಗ್‌ ಕ್ಲಬ್‌ ನ ಲಾಕರ್‌ ನಲ್ಲಿ ದೊರೆತಿದ್ದ ನಿವೇಶನಗಳ ದಾಖಲೆಗಳನ್ನಾಧರಿಸಿ ಐ ಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಬೆನ್ನಲ್ಲೇ ಅವಿನಾಶ್‌ ಪಾಲುದಾರಿಕೆಯ ಅನುಷ್ಕಾ ಎಸ್ಟೇಟ್ಸ್‌ ಖರೀದಿಸಿದ್ದ ಕೆಲ ನಿವೇಶನಗಳು ಬಿಲ್ಡರ್ಸ್‌ ಜೊತೆಗಿನ ಒಪ್ಪಂದಕ್ಕೆ ಒಳಪಟ್ಟಿರುವುದು ಬಹಿರಂಗಗೊಂಡಿವೆ

ಮಹಾಂತೇಶ್ ಜಿ

ವಿವಾದಿತ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಗೆ ಸೇರಿರುವ ನಿವೇಶನಗಳನ್ನು ಬಿಜೆಪಿ ಮುಖಂಡ ಪ್ರಸಾದ್‌ ರೆಡ್ಡಿ ಅವರಿಂದ ಖರೀದಿಸಿದ್ದ ಅನುಷ್ಕಾ ಎಸ್ಟೇಟ್ಸ್ ನ ವ್ಯಾವಹಾರಿಕ ಪಾಲುದಾರ ಅವಿನಾಶ್ ಅಮರ್ ಲಾಲ್ ಕುಕ್ರೇಜ್(ಬೌರಿಂಗ್‌ ಕ್ಲಬ್ ಲಾಕರ್) ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಅನುಷ್ಕಾ ಎಸ್ಟೇಟ್ಸ್‌ ಈ ಹಿಂದೆ ಖರೀದಿಸಿದ್ದ ನಿವೇಶನಗಳು ಅಂತಿಮವಾಗಿ ಕಟ್ಟಡ ನಿರ್ಮಾಣ ಕಂಪನಿಯೊಂದಿಗಿನ ಅಭಿವೃದ್ಧಿ ಒಪ್ಪಂದಕ್ಕೆ ಒಳಪಟ್ಟಿರುವುದು ಇದೀಗ ಬಹಿರಂಗಗೊಂಡಿದೆ.

ಬೌರಿಂಗ್‌ ಇನ್ಸಿಟಿಟ್ಯೂಟ್‌ ನ ಲಾಕರ್‌ ನಲ್ಲಿದ್ದ ಅವಿನಾಶ್ ಗೆ ಸಂಬಂಧಿಸಿದ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿರುವ ಹೊತ್ತಿನಲ್ಲೇ ಈ ಮಾಹಿತಿ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ.

ಮಧ್ಯಮ ಮತ್ತು ಬಡ ವರ್ಗದವರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚುವ ಉದ್ದೇಶದಿಂದ ಆರಂಭಗೊಂಡಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು, ಸಂಘದ ಅರ್ಹ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡದೆಯೇ ಖಾಸಗಿ ಡೆವಲಪರ್ಸ್, ಬಿಲ್ಡರ್ಸ್ ಗಳಿಗೆ ಮಾರಾಟ ಮಾಡುತ್ತಿವೆ ಮತ್ತು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಇದರ ಬೆನ್ನಲ್ಲೇ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಗೆ ಸೇರಿರುವ ನಿವೇಶನಗಳನ್ನು ಖರೀದಿಸಿದ್ದ ಅನುಷ್ಕಾ ಎಸ್ಟೇಟ್ಸ್‌ ಮತ್ತು ಕಟ್ಟಡ ನಿರ್ಮಾಣ ಕಂಪನಿ ಮಧ್ಯೆ ಆಗಿರುವ ಅಭಿವೃದ್ಧಿ ಒಪ್ಪಂದಗಳ ವಿವರಗಳು ಬಹಿರಂಗಗೊಂಡಿರುವುದು ಈ ಆರೋಪಗಳನ್ನು ಪುಷ್ಟೀಕರಿಸಿದಂತಾಗಿದೆ.

ಪ್ರಕರಣದ ವಿವರ; ಜಿ ಪ್ರಸಾದ್‌ ರೆಡ್ಡಿ ಮತ್ತು ಇವರ ಕುಟುಂಬ ಸದಸ್ಯರು ೧,೧೧,೭೪೪ ಚದರ ಅಡಿ ವಿಸ್ತೀರ್ಣ ಹೊಂದಿರುವ ೧೬ ನಿವೇಶನಗಳನ್ನು ಅವಿನಾಶ್ ವ್ಯಾವಹಾರಿಕ ಪಾಲುದಾರನಾಗಿರುವ ಅನುಷ್ಕಾ ಎಸ್ಟೇಟ್ಸ್‌ ಗೆ ೨೦೧೪ರ ಏಪ್ರಿಲ್ ೨೫,೨೬,೨೯ರಂದು ನೋಂದಣಿ ಮಾಡಿಸಿದ್ದರು. ಇದಾದ ೭ ತಿಂಗಳಿನಲ್ಲಿ ಅಂದರೆ ನವೆಂಬರ್ ೧೪,೨೦೧೪ರಂದು ಅನುಷ್ಕಾ ಎಸ್ಟೇಟ್ಸ್, ಇದೇ ನಿವೇಶನಗಳಿಗೆ ಸಂಬಂಧಿಸಿದಂತೆ ಪ್ರೆಸ್ಟೀಜ್ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ನೊಂದಿಗೆ ಅಭಿವೃದ್ಧಿ ಒಪ್ಪಂದ (DEVELOPMENT AGREEMENT) ಮಾಡಿಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಅನುಷ್ಕಾ ಎಸ್ಟೇಟ್ಸ್‌ ಪ್ರೆಸ್ಟೀಜ್ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಜತೆ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿರುವ ಪ್ರತಿ

ವಿಶೇಷವೆಂದರೆ ಅಭಿವೃದ್ಧಿ ಒಪ್ಪಂದಕ್ಕೆ ಒಳಪಟ್ಟಿರುವ ಈ ೧೬ ನಿವೇಶನಗಳು ಮೂಲತಃ ವಿವಾದಿತ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಗೆ ಸಂಬಂಧಿಸಿವೆ. ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಶಿನಿವಾಗಿಲು ಮತ್ತು ಜಕ್ಕಸಂದ್ರದ ಸರ್ವೆ ನಂಬರ್‌ ೧೦ ಮತ್ತು ೧೧ರಲ್ಲಿದ್ದ ಈ ನಿವೇಶನಗಳು, ಪ್ರಸಾದ್ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಹೆಸರಿಗೆ ನೋಂದಣಿ ಆಗಿದ್ದವು. ಗಂಭೀರ ಆರೋಪಗಳಿಗೆ ಗುರಿಯಾಗಿರುವ ಈ ಗೃಹ ನಿರ್ಮಾಣ ಸಹಕಾರ ಸಂಘ, ಅರ್ಹ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಎಂದು ಆರೋಪ ಕೇಳಿ ಬಂದಿದ್ದವು.

ಇದನ್ನೂ ಓದಿ : ಬೌರಿಂಗ್‌ ಕ್ಲಬ್ ಲಾಕರ್‌ ಪ್ರಕರಣ; ಅವಿನಾಶ್‌ ಜೊತೆ ಪ್ರಸಾದ್‌ ರೆಡ್ಡಿ ಪುತ್ರನ‌ ನಂಟು!

ಅಲ್ಲದೆ ಅವಿನಾಶ್‌ ಕುಕ್ರೇಜ್‌ ವ್ಯಾವಹಾರಿಕ ಪಾಲುದಾರಿಕೆ ಹೊಂದಿರುವ ಅನುಷ್ಕಾ ಎಸ್ಟೇಟ್ಸ್, ಹಲವು ಆರೋಪಗಳಿಗೆ ಗುರಿಯಾಗಿರುವ ವಿವಿಧ ಗೃಹ ನಿರ್ಮಾಣ ಸಹಕಾರ ಸಂಘಗಳ ಬಡಾವಣೆಗೆ ಸೇರಿರುವ ನಿವೇಶನಗಳನ್ನು ಖರೀದಿಸಿ, ಅತ್ಯಲ್ಪ ಅವಧಿಯಲ್ಲಿ ಬೃಹತ್‌ ಕಟ್ಟಡ ನಿರ್ಮಾಣ ಕಂಪನಿಗಳೊಂದಿಗೆ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನುಷ್ಕಾ ಎಸ್ಟೇಟ್ಸ್ ಜತೆ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿರುವ ಕಟ್ಟಡ ನಿರ್ಮಾಣ ಕಂಪನಿಗಳನ್ನೂ ತನಿಖೆಗೊಳಪಡಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಹಾಗೆಯೇ ಬೌರಿಂಗ್‌ ಕ್ಲಬ್‌ ನ ಲಾಕರ್‌ ನಲ್ಲಿ ದೊರೆತಿರುವ ನಿವೇಶನಗಳ ದಾಖಲೆಗಳನ್ನಾಧರಿಸಿ ೭೦ ಮಂದಿಗೆ ನೋಟೀಸ್‌ ಜಾರಿಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ನಿವೇಶನಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳ ಬಗ್ಗೆ ವಿವರಣೆ ಒದಗಿಸಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಸಾದ್‌ ರೆಡ್ಡಿ ಮತ್ತು ಅವರ ಪುತ್ರ ವಿಶ್ವಾಸ್‌ ಅವರು ಜಂಟಿಯಾಗಿ ನಿವೇಶನಗಳ ಕ್ರಯ ಪತ್ರಗಳನ್ನು ಅನುಷ್ಕಾ ಎಸ್ಟೇಟ್ಸ್‌ ಗೆ ಮಾಡಿಕೊಟ್ಟಿದ್ದಾರಲ್ಲದೆ, ವಿಶ್ವಾಸ್ ಮತ್ತು ರಮಣ ಪ್ರಸಾದ್ ರೆಡ್ಡಿ ಎಂಬುವರು ವೈಯಕ್ತಿಕವಾಗಿ ಕ್ರಯ ಪತ್ರ ಮಾಡಿಕೊಟ್ಟಿದ್ದರು. ಇದರಲ್ಲಿ ವಿಶ್ವಾಸ್‌ ಒಬ್ಬರೇ ನೇರವಾಗಿ ೪ ನಿವೇಶನಗಳನ್ನು ಮಾರಾಟ ಮಾಡಿದ್ದನ್ನು ‘ದಿ ಸ್ಟೇಟ್’ ಬಹಿರಂಗಗೊಳಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ಬಿ ಎಸ್ ಯಡಿಯೂರಪ್ಪ B S Yeddyurappa IT ಎಚ್‌ ಡಿ ಕುಮಾರಸ್ವಾಮಿ G Parameshwara Raid ಜಿ ಪರಮೇಶ್ವರ ದಾಳಿ Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy ಆದಾಯ ತೆರಿಗೆ ಇಲಾಖೆ ಬೌರಿಂಗ್‌ ಕ್ಲಬ್ ಲಾಕರ್‌ ಪ್ರಕರಣ Bowring Club Locker Case ಅವಿನಾಶ್‌ ಕುಕ್ರೇಜ ಜಿ ಪ್ರಸಾದ್‌ ರೆಡ್ಡಿ Avinash Kukreja G Prasad Reddy
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು