ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಎಪಿಪಿ ಅಕ್ರಮ ಹಗರಣ: ಆರೋಪಿತ ಆಡಳಿತಾಧಿಕಾರಿ ಪರ ಎಚ್‌ಡಿಕೆ ವಕಾಲತ್ತು?

ಕಳಂಕಿತ ಆಡಳಿತಾಧಿಕಾರಿಯನ್ನು ಪುನಃ ಅದೇ ಹುದ್ದೆಗೆ ನೇಮಿಸುವ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ಚಾಲನೆ ದೊರೆತಿದೆ. ಜೆಡಿಎಸ್‌ ಶಾಸಕರೊಬ್ಬರು ಮಾಡಿದ್ದ ಶಿಫಾರಸಿನ ಅನುಸಾರ ಸಿಎಂ ಎಚ್‌ಡಿಕೆ ಅಗತ್ಯ ಕ್ರಮ ವಹಿಸಲು ಸೂಚಿಸಿರುವುದು ವಿಶೇ‍ಷ. ಹಾಗಾದರೆ ಯಾರು ಆ ಅಧಿಕಾರಿ? ಇಲ್ಲಿದೆ ವಿವರ

ಮಹಾಂತೇಶ್ ಜಿ

ಗಂಭೀರ ಆರೋಪದ ಅಡಿಯಲ್ಲಿ ೨ ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಪ್ರಾಸಿಕ್ಯೂಷನ್ (ಅಭಿಯೋಜನಾ) ಇಲಾಖೆಯ ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರನ್ನು ಅದೇ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿನ ಕೇಂದ್ರ ಸ್ಥಾನಿಕ ಸಹಾಯಕ (ಎಚ್‌ಕ್ಯುಎ) ಹುದ್ದೆಗೆ ಪುನರ್‌ ನೇಮಿಸಲು ಸರ್ಕಾರದ ಮಟ್ಟದಲ್ಲಿ ತೆರೆಮರೆಯಲ್ಲಿ ಕಸರತ್ತುಗಳು ನಡೆದಿವೆ.

ಈ ಸಂಬಂಧ ಆದೇಶ ಹೊರಡಿಸಲು ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಬರೆದಿದ್ದ ಪತ್ರ ಆಧರಿಸಿ ‘ಅಗತ್ಯ ಕ್ರಮಕ್ಕೆ ಸೂಚಿಸಿದೆ’ ಎಂದು ಅದೇ ಪತ್ರದ ಮೇಲೆಯೇ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಬರೆದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಈ ಪತ್ರ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ರವಾನೆಯಾಗಿದೆ.

ಪಬ್ಲಿಕ್‌‌ ಪ್ರಾಸಿಕ್ಯೂಟರ್ಸ್‌ ಮತ್ತು ಪ್ಲೀಡರ್ಸ್‌ ನೇಮಕಾತಿಯಲ್ಲಿ ನಡೆದಿರುವ ಗಂಭೀರ ಸ್ವರೂಪದ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ನಾರಾಯಣಸ್ವಾಮಿ ಅವರನ್ನು ೨ನೇ ಆರೋಪಿಯನ್ನಾಗಿಸಲಾಗಿದೆ. ಸದ್ಯದಲ್ಲೇ ವಿಚಾರಣೆ ಪ್ರಕ್ರಿಯೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಆರಂಭವಾಗಲಿದೆ. ಹೀಗಿದ್ದರೂ ಅದೇ ಅಧಿಕಾರಿಯನ್ನು ಅದೇ ಇಲಾಖೆಯಲ್ಲಿ ನೇಮಿಸುವುದು ಎಷ್ಟರಮಟ್ಟಿಗೆ ಸೂಕ್ತ ಎಂಬ ಪ್ರಶ್ನೆಗಳು ಕೇಳಿಬಂದಿವೆ.

"ಅಭಿಯೋಜನಾ ಇಲಾಖೆಯ ಆಡಳಿತಾಧಿಕಾರಿ ಆಗಿದ್ದ ನಾರಾಯಣಸ್ವಾಮಿ ಅವರು ದಕ್ಷ ಅಧಿಕಾರಿಯಾಗಿದ್ದು, ಇವರನ್ನು ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಕೇಂದ್ರ ಸ್ಥಾನಿಕ ಸಹಾಯಕ (ಎಚ್‌ಕ್ಯುಎ) ಪ್ರಭಾರದ ಮೇಲೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಬೇಕು," ಎಂದು ದೇವನಹಳ್ಳಿ ಶಾಸಕ ನಿಸರ್ಗ ಎಲ್ ಎನ್ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಜುಲೈ ೨೭, ೨೦೧೮ರಂದು ಮನವಿ ಸಲ್ಲಿಸಿದ್ದರು.

ಈ ಮನವಿ ಪತ್ರದ ಮೇಲೆ ‘ಅಗತ್ಯ ಕ್ರಮಕ್ಕೆ ಸೂಚಿಸಿದೆ’ ಎಂದು ಸಹಿ ಮಾಡಿರುವ ಎಚ್‌ ಡಿ ಕುಮಾರಸ್ವಾಮಿ ಅವರು, ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಶಾಸಕ ನಾರಾಯಣಸ್ವಾಮಿ ಅವರ ಪತ್ರವನ್ನು ರವಾನಿಸಿದ್ದಾರೆ. ಶಾಸಕರ ಮನವಿ ಪತ್ರ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಜೆಡಿಎಸ್‌ ಶಾಸಕ ನಾರಾಯಣಸ್ವಾಮಿ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದ ಪ್ರತಿ

ವಿಶೇಷವೆಂದರೆ, ಅಭಿಯೋಜನಾ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಕೇಂದ್ರ ಸ್ಥಾನಿಕ ಸಹಾಯಕ ಹುದ್ದೆಗೆ ಮಂಗಳೂರು ಮೂಲದ ಮಹಿಳಾ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿ ಶಿಫಾರಸು ಮಾಡಿರುವ ಕಡತ ೨ ತಿಂಗಳ ಹಿಂದೆಯೇ ಗೃಹ ಸಚಿವ ಜಿ ಪರಮೇಶ್ವರ್ ಅವರ ಕಚೇರಿಗೆ ತಲುಪಿದೆ ಎಂದು ಗೊತ್ತಾಗಿದೆ. ಈ ಹೊತ್ತಿನಲ್ಲೇ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು, ಆರೋಪಕ್ಕೆ ಗುರಿಯಾಗಿರುವ ನಾರಾಯಣಸ್ವಾಮಿ ಅವರನ್ನು ನೇಮಿಸಲು ಶಿಫಾರಸು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಎಪಿಪಿ ನೇಮಕ ಹಗರಣ: ಶೂನ್ಯ ಸಂಪಾದನೆಯು ‘8’ ಅಂಕವಾಗಿ ಬದಲಾದ ರಹಸ್ಯ

"ಲೋಕಾಯುಕ್ತ ಪ್ರಕರಣಗಳಲ್ಲಿ ವಿಚಾರಣೆಗೆ ಗುರಿಯಾಗಿರುವ ಅಧಿಕಾರಿ, ನೌಕರರನ್ನು ‘ಕೃತ್ಯ ನಡೆದ ಸ್ಥಳ ಹೊರತುಪಡಿಸಿ ಬೇರೆ ಕಡೆಯಲ್ಲಿ ಸ್ಥಾನ ಕಲ್ಪಿಸಬೇಕು’ ಎಂದು ಈ ಹಿಂದಿನ ಮುಖ್ಯ ಕಾರ್ಯದರ್ಶಿ ಎಸ್‌ ವಿ ರಂಗನಾಥ್‌ ಅವರು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ನಾರಾಯಣಸ್ವಾಮಿ ಅವರನ್ನು ಕೃತ್ಯ ನಡೆದಿರುವ ಸ್ಥಳದಲ್ಲಿಯೇ ಅಲ್ಲದೆ, ಅದೇ ಹುದ್ದೆಯಲ್ಲಿ ನೇಮಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಳಾಡಳಿತ ಇಲಾಖೆಗೆ ಸೂಚಿಸಿರುವುದು ಎಷ್ಟರಮಟ್ಟಿಗೆ ಸರಿ?” ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಪಬ್ಲಿಕ್‌ ಪ್ರಾಸಿಕ್ಯೂಟರ್ಸ್‌ ಮತ್ತು ಫ್ಲೀಡರ್ಸ್‌ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿತ್ತು. ಈ ಕುರಿತು ತೀರ್ಥಹಳ್ಳಿ ಮೂಲದ ವಕೀಲ ಎಚ್‌ ಟಿ ರವಿ ಎಂಬುವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದನ್ನಾಧರಿಸಿ ಲೋಕಾಯುಕ್ತ ನ್ಯಾಯಾಲಯ ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಿಸಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ನಾರಾಯಣಸ್ವಾಮಿ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದರಲ್ಲದೆ, ಪ್ರಕರಣದಲ್ಲಿ ೨ನೇ ಆರೋಪಿಯನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಲೋಕಾಯುಕ್ತರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಪ್ರತಿ

“ಆರೋಪಿತ ಅಭ್ಯರ್ಥಿಗಳಿಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರು ನೈಜವಾಗಿ ನೀಡಿರುವ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಿದ್ದಲ್ಲದೆ, ಕೆಲವೆಡೆ ಅಂಕಗಳನ್ನು ತಿದ್ದಲಾಗಿತ್ತು. ಮೌಲ್ಯಮಾಪಕರು ಮೌಲ್ಯಮಾಪನ ಮಾಡದೆ ಇದ್ದರೂ ಕೆಲವು ಉತ್ತರ ಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಬದಲಿ ಉತ್ತರಗಳನ್ನು ಬರೆಸಿ ನಕಲಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡುವ ಮೂಲಕ ಆರೋಪಿ ೨ (ನಾರಾಯಣಸ್ವಾಮಿ) ಅವರು ಅಕ್ರಮಗಳನ್ನು ಎಸಗಿರುವುದು ತನಿಖೆಯಿಂದ ದೃಢಪಟ್ಟಿದೆ,” ಎಂದು ಲೋಕಾಯುಕ್ತ ಎಡಿಜಿಪಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಅಲ್ಲದೆ, “ಆರೋಪಿತ ಅಭ್ಯರ್ಥಿಗಳು ಪ್ರಕರಣದ ಆರೋಪಿ ೧ ಮತ್ತು ಆರೋಪಿ ೨ ಅವರೊಂದಿಗೆ ಶಾಮೀಲಾಗಿ ಅಪರಾಧಿಕ ಒಳಸಂಚು ರೂಪಿಸಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆಯನ್ನು ತಪ್ಪಿಸಿ ಕಾನೂನುಬಾಹಿರ ಮಾರ್ಗದಲ್ಲಿ ಆಯ್ಕೆ ಆಗಬೇಕೆನ್ನುವ ಉದ್ದೇಶದಿಂದ ಉತ್ತರ ಪತ್ರಿಕೆಗಳ ತಿದ್ದುಪಡಿಗಳಿಗೆ ಜವಾಬ್ದಾರರಾಗಿದ್ದಾರೆ,” ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಇಡೀ ಪ್ರಕರಣದಲ್ಲಿ ಆರೋಪಿತರು ಗಂಭೀರ ಮತ್ತು ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ರುಜುವಾತುಪಡಿಸಿದ್ದಾರೆ. ‘ಅಕ್ರಮ ಫಲಾನುಭವಿ’ಗಳನ್ನು ಅಮಾನತುಗೊಳಿಸಲು ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡಿಲ್ಲ.

ಕೆಲ ನಿರ್ದಿಷ್ಟ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಿಸಿ, ಮೌಲ್ಯಮಾಪಕರ ಸಹಿಗಳನ್ನು, ಬರವಣಿಗೆಗಳನ್ನು ನಕಲು ಮಾಡಿಸಿ ಉತ್ತರ ಪತ್ರಿಕೆಗಳನ್ನೇ ಬದಲಾಯಿಸಲಾಗಿದೆ. ತಮಗೆ ಇಷ್ಟಬಂದ ಅಭ್ಯರ್ಥಿಗಳು ಆಯ್ಕೆಯಾಗಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಅಂಕಗಳನ್ನು ನೀಡಿ, ಆ ಮೂಲಕ ಅಕ್ರಮ ಲಾಭ ಗಳಿಸಲು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ತನಿಖಾ ತಂಡ ದೃಢಪಡಿಸಿತ್ತು. ಆರೋಪಿತ ಎಪಿಪಿಗಳ ವಿರುದ್ಧ ಪಿ.ಸಿ ಆಕ್ಟ್‌ ಮತ್ತು ಐಪಿಸಿ ೨೦೧, ೪೦೯,೪೬೫,೪೭೧, ೪೨೦, ೧೨೦(ಬಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿರುವುದನ್ನು ಸ್ಮರಿಸಿಕೊಳ್ಳಬಹುದು.

ಬಿ ಎಸ್ ಯಡಿಯೂರಪ್ಪ Chief Secretary ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ T M Vijaya Bhaskar ಕೃಷ್ಣ ಬೈರೇಗೌಡ Krishna Byregowda ಜಿ ಪರಮೇಶ್ವರ ನಾರಾಯಣಸ್ವಾಮಿ Narayanaswamy B S Yediyurappa ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು