ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ದೇಶದ ಆರ್ಥಿಕ ಅಭಿವೃದ್ಧಿಗೆ ಉದಾರವಾದಿ ವಾಜಪೇಯಿ ನೀಡಿದ ಕೊಡುಗೆ ಏನು?

ಆರ್ಥಿಕ ಉದಾರೀಕರಣದ ಫಲವನ್ನು ನಾವೆಲ್ಲ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಅದನ್ನು ಬಿತ್ತಿದ ಪಿ ವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವರಷ್ಟೇ ಮುಖ್ಯವಾಗಿ ಅದನ್ನು ಪೋಷಿಸಿ ಹೆಮ್ಮರವಾಗಲು ನೆರವಾದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಿಜಕ್ಕೂ ನೆನೆಯಬೇಕಿದೆ

ರೇಣುಕಾಪ್ರಸಾದ್ ಹಾಡ್ಯ

ತೊಂಬತ್ತರ ದಶಕದ ಆರಂಭದಲ್ಲಿ ಪ್ರಧಾನಿ ಪಿ ವಿ ನರಸಿಂಹ ರಾವ್ ಮತ್ತು ವಿತ್ತ ಸಚಿವ ಮನಮೋಹನ್ ಸಿಂಗ್ ಜೋಡಿ ದೇಶದಲ್ಲಿ ಜಾರಿಗೆ ತಂದ ಆರ್ಥಿಕ ಉದಾರೀಕರಣ ನೀತಿ ಯಶಸ್ವಿಯಾಗಿದ್ದರಲ್ಲಿ ಅದರ ಪ್ರಮುಖ ಪಾಲು ಮೂರು ಬಾರಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಸಲ್ಲುತ್ತದೆ.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಆರ್ಥಿಕ ಉದಾರೀಕರಣವನ್ನು ಬಿಜೆಪಿ ತಾತ್ವಿಕವಾಗಿ ವಿರೋಧಿಸುತ್ತಿತ್ತು. ದೇಶಭಕ್ತಿಯನ್ನೇ ಮೆಟ್ಟಿಲು ಮಾಡಿಕೊಂಡು ಅಧಿಕಾರ ಗದ್ದುಗೆ ಏರುವ ಕಾರ್ಯತಂತ್ರ ರೂಪಿಸಿದ್ದ ಬಿಜೆಪಿಗೆ ಉದಾರಿಕರಣ ವಿರೋಧಿಸುವುದು ಕೂಡ ಆಗ ಮತ ಗಳಿಕೆಯ ಹಾದಿಯಾಗಿತ್ತು.

13 ದಿನ, 13 ತಿಂಗಳು ಮತ್ತು ಐದು ಪೂರ್ಣ ವರ್ಷ ಅಧಿಕಾರ ನಡೆಸಿದ ವಾಜಪೇಯಿ, ದೇಶದಲ್ಲಿ ಜಾರಿಯಾಗಿದ್ದ ಉದಾರೀಕರಣ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವ ಉದಾರತೆ ಪ್ರದರ್ಶಿಸಿದರು. ವಾಜಪೇಯಿ ಮೂಲತಃ ಉದಾರವಾದಿ. ಅವರ ಉದಾರವಾದವು ಜನಪರವಾದದು. ಅವರು ಪ್ರತಿನಿಧಿಸುತ್ತಿದ್ದ ಪಕ್ಷದ ಮತ್ತು ಆ ಪಕ್ಷವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರಭಕ್ತಿ ಕುರಿತಾದ ಒಲವು-ನಿಲುವುಗಳೇನಿದ್ದರೂ ಸರ್ಕಾರದ ಆರ್ಥಿಕ ನೀತಿ ಜಾರಿ ಮಾಡುವ ಸಂದರ್ಭದಲ್ಲಿ ರಾಷ್ಟ್ರಭಕ್ತಿಯನ್ನು ಮೀರಿ ಸದಾ ಜನಪರ ನಿಲವುಗಳ ಪರ ನಿಲ್ಲುತ್ತಿದ್ದರು.

ಉದಾರೀಕರಣ ಜಾರಿಯಾದ ನಂತರ ದೇಶದಲ್ಲಿ ತಲೆದೋರಿದ ರಾಜಕೀಯ ಅಸ್ಥಿರತೆಗಳಿಂದಾಗಿ ಕುಸಿದ ವಿದೇಶಿ ಬಂಡವಾಳ ಹೂಡಿಕೆ, ತಗ್ಗಿದ ವಿದೇಶಿ ವಿನಿಮಯ ಸಂಗ್ರಹ ಮತ್ತಿತರ ಬಿಕ್ಕಟ್ಟುಗಳನ್ನು ಆರ್ಥಿಕ ಉದಾರನೀತಿಯನ್ನು ಉತ್ತೇಜಿಸುತ್ತಲೇ ನಿವಾರಿಸಿಕೊಂಡರು. ವಿದೇಶಿ ಬಂಡವಾಳ ಹರಿದು ಬಂದಂತೆ, ದೇಶದಲ್ಲಿ ಖಾಸಗೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ದೇಶದ ರಫ್ತು ಪ್ರಮಾಣವೂ ಹೆಚ್ಚಳವಾಯಿತು. ವಿದೇಶಿ ವಿನಿಮಯ ಮೀಸಲು ಕೊರತೆಯೂ ನಿವಾರಣೆಯಾಯಿತು. ದೇಶದ ಜಿಡಿಪಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೇ ಶೇ.6-7ರಷ್ಟು ದಾಟಿತು. ಹಣದುಬ್ಬರ ನಿಯಂತ್ರಣಕ್ಕೆ ಬಂದು ವಿವಿಧ ಸಾಲಗಳ ಮೇಲಿನ ಬಡ್ಡಿದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಯಿತು. ಗೃಹಸಾಲವು ಶೇ.7.5ಕ್ಕೆ ತಗ್ಗಿತ್ತು. ಆ ಅವಧಿಯಲ್ಲಿ ಬಹುತೇಕ ಮಧ್ಯಮವರ್ಗದ ಕುಟುಂಬಗಳ ಸ್ವಂತ ಸೂರು ಮಾಡಿಕೊಳ್ಳುವ ಕನಸು ನನಸಾಯಿತು.

ದೇಶದಲ್ಲಿ ನಿತ್ಯವೂ ಚರ್ಚೆ ಆಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗಿ ಒಂದು ವರ್ಷವಾಗಿದೆ. ಆದರೆ, ವಾಸ್ತವವಾಗಿ ‘ಒಂದು ದೇಶ ಒಂದೇ ತೆರಿಗೆ’ ಪರಿಕಲ್ಪನೆಯ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ನಾಂದಿ ಹಾಡಿದ್ದೇ ವಾಜಪೇಯಿ ಸರ್ಕಾರ. 2000ರಲ್ಲಿ ವಾಜಪೇಯಿ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ ಪರಿಕಲ್ಪನೆಯನ್ನು ಜಾರಿಗೆ ತರುವ ಸಲುವಾಗಿ ಅಂದಿನ ಪಶ್ಚಿಮ ಬಂಗಾಳ ವಿತ್ತ ಸಚಿವ ಆಸಿಮ್ ದಾಸ್ ಗುಪ್ತಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆಸಿಮ್ ಗುಪ್ತಾ ನೇತೃತ್ವದ ಸಮಿತಿಯು ಸರಕು ಮತ್ತು ಸೇವಾ ತೆರಿಗೆಯ ರೂಪುರೇಷೆಗಳನ್ನು ಸಿದ್ಧಪಡಿಸಿತು. ತೆರಿಗೆ ವ್ಯವಸ್ಥೆ ಸುಧಾರಣೆಗೆ ರಚಿಸಲಾಗಿದ್ದ ವಿಜಯ್ ಕೇಲ್ಕರ್ ನೇತೃತ್ವದ ಕಾರ್ಯಪಡೆಯು ಹಾಲಿ ತೆರಿಗೆಗಳನ್ನು ರದ್ದು ಮಾಡಿ, ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವಂತೆ ಶಿಫಾರಸು ಮಾಡಿತ್ತು. ಯುಪಿಎ ಸರ್ಕಾರ ಜಿಎಸ್ಟಿ ಜಾರಿಗೆ ತರಲು ಮುಂದಾದರೂ ವಾಜಪೇಯಿ ಅವರ ಗೈರುಹಾಜರಿಯಲ್ಲಿ ಬಿಜೆಪಿ ಶತಾಯಗತಾಯ ವಿರೋಧಿಸಿತ್ತು. ಕಳೆದ ವರ್ಷ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿದೆ.

ಈಗ ನಮ್ಮ ಕೈಯಲ್ಲಿ ಎರಡು ಸ್ಮಾರ್ಟ್‌ಫೋನ್, ಒಂದೊಂದು ಸ್ಮಾರ್ಟ್‌ಫೋನಿನಲ್ಲೂ ಎರಡೆರಡು ಸಿಮ್‌ಗಳಿವೆ. ನಿತ್ಯದ ವಹಿವಾಟು ಅಗತ್ಯಗಳನ್ನು ಮೊಬೈಲಿನಲ್ಲೇ ಪೂರೈಸಿಕೊಳ್ಳುವ ಹಂತದಲ್ಲಿ ನಾವಿದ್ದೇವೆ. ಈ ಅಗಾಧ ಪರಿವರ್ತನೆಯ ಕ್ರೆಡಿಟ್ ವಾಜಪೇಯಿ ಸರ್ಕಾರಕ್ಕೆ ಸಲ್ಲಬೇಕು. 1999ರಲ್ಲಿ ಜಾರಿಗೆ ತಂದ ದೂರಸಂಪರ್ಕ ನೀತಿಯು ದೇಶದಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿಯಾಡಿತು. ದೂರ ಸಂಪರ್ಕ ವಲಯದಲ್ಲಿ ಖಾಸಗಿಯವರು ಪಾಲ್ಗೊಳ್ಳುವಿಕೆ ಮತ್ತು ಆರೋಗ್ಯಕರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿತು.

ನಿಶ್ಚಿತ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ರದ್ದು ಮಾಡಿ ಆದಾಯ ಹಂಚಿಕೆ ವ್ಯವಸ್ಥೆಗೆ ಮುನ್ನುಡಿ ಬರೆಯಿತು. ಭಾರತ ಸಂಚಾರ ನಿಗಮ ನಿಯಮಿತ ರೂಪುಗೊಳ್ಳಲು ಕಾರಣವಾಯಿತು. ದೂರಸಂಪರ್ಕ ವ್ಯಾಜ್ಯ ಇತ್ಯರ್ಥ ನ್ಯಾಯಾಧಿಕರಣ (ಟಿಡಿಎಸ್ಎಟಿ) ರಚಿಸಿತು. ನಂತರ ವಿದೇಶ ಸಂಚಾರ ನಿಗಮ ನಿಯಮಿತವನ್ನು ಖಾಸಗೀಕರಣಗೊಳಿಸಿತು. ಮೊಬೈಲ್ ಮಾರುಕಟ್ಟೆ ಖಾಸಗಿಯವರಿಗೆ ಮುಕ್ತವಾದ ನಂತರ ಟಾಟಾ, ಏರ್ಟೆಲ್, ರಿಲಯನ್ಸ್, ವೊಡಾಫೋನ್, ಏರ್ಸೆಲ್, ಐಡಿಯಾ ಸೇರಿದಂತೆ ಹತ್ತಕ್ಕೂ ಹೆಚ್ಚು ಕಂಪನಿಗಳು ಮೊಬೈಲ್ ಸೇವೆ ಒದಗಿಸಲಾರಂಭಿಸಿದವು. ಆರಂಭದಲ್ಲಿ ದುಬಾರಿಯಾಗಿದ್ದ ಕರೆ ದರ ಇಳಿಯಿತು. ದುಬಾರಿಯಾಗಿದ್ದ ಎಸ್ಟಿಡಿ ಕರೆಗಳು ಸ್ಥಳೀಯ ಕರೆಗಳ ದರಕ್ಕೆ ಇಳಿದವು. ಈಗಂತೂ ಕರೆಗಳಿಗೆ ದರವೇ ಇಲ್ಲ. ಡೇಟಾ ಇದ್ದರೆ ಉಚಿತ ಕರೆ ಮಾಡಬಹುದು. ಈ ಹೊತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆಯಲೇ ಬೇಕು!

ಇದನ್ನೂ ಓದಿ : ಬುಕ್‌ಮಾರ್ಕ್‌ | ಸ್ವಾಮಿಗೆ ರಾಜಕೀಯ ಸ್ಥಾನ ಸಿಗದಂತೆ ತಂತ್ರಗಾರಿಕೆ ಹೆಣೆದಿದ್ದ ವಾಜಪೇಯಿ

ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದ ಹೆಗ್ಗಳಿಕೆಯೂ ವಾಜಪೇಯಿ ಅವರಿಗೆ ಸಲ್ಲುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಶಿಸ್ತು, ಬದ್ಧತೆ ಮತ್ತು ಉತ್ತರದಾಯಿತ್ವ ಈ ಕಾಯ್ದೆಯ ಆಶಯ. ಈ ಕಾಯ್ದೆಯಿಂದಾಗಿಯೇ ದೇಶದ ಆರ್ಥಿಕತೆ ಶಿಸ್ತು ಕಾಯ್ದುಕೊಂಡು ಮುಂದುವರಿದಿದೆ. ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ ರಾಜ್ಯಗಳಲ್ಲೂ ಜಾರಿಗೆ ಬಂದಿದ್ದು, ಮನಸೋ ಇಚ್ಚೆ ಸಾಲ ಮಾಡಿ ರಾಜ್ಯ ಸರ್ಕಾರಗಳನ್ನು ದಿವಾಳಿ ತಳ್ಳಬಹುದಾದ ಅಪಾಯದಿಂದ ಪಾರು ಮಾಡಿದೆ.

ಮನಮೋಹನ್ ಸಿಂಗ್ ರೂಪಿಸಿದ ಉದಾರಿಕರಣ ನೀತಿಯ ಮುಖ್ಯ ಭಾಗವಾಗಿದ್ದ ಬಂಡವಾಳ ಹಿಂತೆಗೆತ ನೀತಿಯನ್ನು ವಾಜಪೇಯಿ ತ್ವರಿತಗತಿಯಲ್ಲಿ ಮುಂದುವರಿಸಿದರು. ಅದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೇ ತೆರೆದರು. ಬಂಡವಾಳ ಹಿಂತೆಗೆತ ಖಾತೆಯ ಮೊದಲ ಸಚಿವರಾಗಿದ್ದು ಈಗ ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ. ವಾಜಪೇಯಿ ಅವರು ಪೂರ್ಣ ಅವಧಿ ಅಧಿಕಾರ ನಡೆಸಿದ ಅವಧಿಯಲ್ಲಿ ಭಾರತ್ ಅಲುಮಿನಿಯಂ ಕಂಪನಿ, ಹಿಂದೂಸ್ತಾನ್ ಜಿಂಕ್, ಇಂಡಿಯನ್ ಪೆಟ್ರೊಕೆಮಿಕಲ್ಸ್ ಕಾರ್ಪೊರೆಷನ್ ಲಿಮಿಟೆಡ್, ಮಾರುತಿ ಮತ್ತು ವಿದೇಶ ಸಂಚಾರ ನಿಗಮ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸಲಾಯಿತು.

GST Economy ಆರ್ಥಿಕತೆ ಜಿಎಸ್ಟಿ ಅಟಲ್ ಬಿಹಾರಿ ವಾಜಪೇಯಿ Atal Bihari Vajapeyi Reforms Telecom Policy ಸುಧಾರಣೆ ದೂರಸಂಪರ್ಕ ನೀತಿ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?