ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಯುಪಿಎ ಅವಧಿಯಲ್ಲಿ ಜಿಡಿಪಿ ಹೆಚ್ಚಳ; ಮೋದಿ ಸರ್ಕಾರ ತಕರಾರು ಎತ್ತುತ್ತಿರುವುದೇಕೆ?

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ ಅವಧಿಗಳಲ್ಲಿ ದೇಶದ ಜಿಡಿಪಿ ಗರಿಷ್ಠ ಪ್ರಮಾಣದಲ್ಲಿ ಅಭಿವೃದ್ಧಿ ಆಗಿತ್ತು ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಇತ್ತೀಚಿನ ಅಂಕಿ-ಅಂಶಗಳು ಸಾರುತ್ತಿವೆ. ಆದರೆ, ಈ ಅಂಕಿ-ಅಂಶಗಳ ಬಗ್ಗೆ ಕೇಂದ್ರ ಸರ್ಕಾರವೇ ತಕರಾರೆತ್ತಿದೆ

ರೇಣುಕಾಪ್ರಸಾದ್ ಹಾಡ್ಯ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದ ಒಂದು ದಶಕದ ಅವಧಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಇದುವರೆಗೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಆಯೋಗಕ್ಕೆ ವಲಯವಾರು ವಾಸ್ತವಿಕ ಅಂಕಿ-ಅಂಶಗಳ ಸಮಿತಿ (ರಿಯಲ್ ಸೆಕ್ಟರ್ ಸ್ಟಾಟಿಸ್ಟಿಕ್ಸ್ ಕಮಿಟಿ) ನೀಡಿರುವ ಅಂಕಿ-ಅಂಶಗಳು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಒಂದು ವೇಳೆ, 2004-05ನೇ ವರ್ಷವನ್ನು ಮೂಲವರ್ಷವನ್ನಾಗಿ ಪರಿಗಣಿಸಿ ಮೋದಿ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿನ ಅಭಿವೃದ್ಧಿ ಲೆಕ್ಕಾಚಾರ ಹಾಕಿದರೆ, ಮೋದಿ ಸರ್ಕಾರದ ಸಾಧನೆಯು ಈಗ ಅಂದುಕೊಂಡಿರುವುದಕ್ಕಿಂತಲೂ ಕಳಪೆ ಮಟ್ಟಕ್ಕೆ ಇಳಿಯಲಿದೆ. ಈ ಅಂಶವು ಪ್ರಧಾನಿ ಮೋದಿ ಮತ್ತವರ ತಂಡಕ್ಕೆ ತೀವ್ರ ಅಸಮಾಧಾನ ತಂದಿದೆ.

2011-12ನ್ನು ಮೂಲವರ್ಷವನ್ನಾಗಿ ಇಟ್ಟುಕೊಂಡು ಲೆಕ್ಕ ಹಾಕಿದ್ದರಿಂದಲೇ ಮೋದಿ ಸರ್ಕಾರದ ಅವಧಿಯಲ್ಲಿ ಜಿಡಿಪಿ ಹೆಚ್ಚಿದೆ. ಒಂದು ವೇಳೆ, 2004-05ನೇ ಸಾಲನ್ನು ಮೂಲವರ್ಷವನ್ನಾಗಿ ಪರಿಗಣಿಸಿ ಲೆಕ್ಕಾಚಾರ ಹಾಕಿದ್ದರೆ ಯುಪಿಎ ಸರ್ಕಾರದ ಈಗಾಗಲೇ ಘೋಷಿತ ಜಿಡಿಪಿ ಅಂಕಿ-ಅಂಶಗಳಿಗಿಂತಲೂ ಕಳಪೆ ಎಂಬುದು ಸಾಬೀತಾಗುತ್ತಿತ್ತು. ಈ ಕಾರಣಕ್ಕಾಗಿ ಮೋದಿ ಸರ್ಕಾರವು ಈಗ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ರಾಷ್ಟ್ರೀಯ ಸಾಂಖ್ಯಿಕ ಆಯೋಗ ಮತ್ತು ನೀತಿ ಆಯೋಗವನ್ನು ಬಳಸಿಕೊಂಡು ಬಿಡುಗಡೆಗೊಂಡಿರುವ ಅಂಕಿ-ಅಂಶಗಳು ಅಧಿಕೃತವೇ ಅಲ್ಲವೆಂದು ಸಾಬೀತು ಮಾಡಲು ಹೊರಟಿದೆ.

ಯುಪಿಎ-1, ಯುಪಿಎ-2 ಅವಧಿಯಲ್ಲಿ ದೇಶದ ಜಿಡಿಪಿ ಅಭಿವೃದ್ಧಿ ಸರಾಸರಿ ಶೇ.8.2ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಆಯೋಗಕ್ಕೆ ವಲಯವಾರು ವಾಸ್ತವಿಕ ಅಂಕಿ-ಅಂಶಗಳ ಸಮಿತಿಯು ನೀಡಿರುವ ಅಂಕಿ-ಅಂಶಗಳು ಅಧಿಕೃತ ಅಲ್ಲ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿದೆ. ಅಲ್ಲದೆ, ಜಿಡಿಪಿಯ ಹಿಂದಿನ ಸರಣಿಯ (ಪರಿಷ್ಕೃತ ವರ್ಷದ ಲೆಕ್ಕಾಚಾರದ ನಂತರ ಬಂದ ಫಲಿತಾಂಶ) ಅಂಕಿ-ಅಂಶಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ಸಚಿವಾಲಯ ಸ್ಪಷ್ಟಪಡಿಸಿದೆ.

ಶುಕ್ರವಾರ ವಲಯವಾರು ವಾಸ್ತವಿಕ ಅಂಕಿ-ಅಂಶಗಳ ಸಮಿತಿ ಬಿಡುಗಡೆ ಮಾಡಿದ್ದ ಹಿಂದಿನ ಸರಣಿಯ ಜಿಡಿಪಿ ಅಂಕಿ-ಅಂಶಗಳ ಪ್ರಕಾರ, ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ಶೇ.8.12ರಷ್ಟಿತ್ತು. 2006-09ರಲ್ಲಿ ಶೇ.10.2ರಷ್ಟಿತ್ತು. ಇದು ಉದಾರೀಕರಣೋತ್ತರ ಆರ್ಥಿಕತೆಯಲ್ಲಿ ಅತಿ ಗರಿಷ್ಠ ಜಿಡಿಪಿ ಎಂದು ವಿವರಿಸಲಾಗಿತ್ತು.

ಯುಪಿಎ ಅವಧಿಯ ಆಡಳಿತದ ಬಗ್ಗೆ ಸದಾ ಟೀಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡಕ್ಕೆ ಈ ಅಂಕಿ-ಅಂಶಗಳ ಮೂಲಕ ಕಾಂಗ್ರೆಸ್ ಪ್ರತಿಟೀಕೆಯ ಸುರಿಮಳೆಗೈಯ್ದಿತ್ತು. ಅಂಕಿ-ಅಂಶಗಳ ಸರಣಿ ಟ್ವೀಟ್ ಮಾಡಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, “ಯುಪಿಎ ಸರ್ಕಾರವು ಸ್ವಾತಂತ್ರ್ಯೋತ್ತರ ಭಾರತದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಸಾಧಿಸಿದೆ. 14 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ,” ಎಂದು ವಿವರಿಸಿದ್ದರು. ಕಳೆದ ನಾಲ್ಕು ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯ ಜಿಡಿಪಿಯು ಯುಪಿಎ ಅವಧಿಗಿಂತ ಕಳಪೆಯಾಗಿದ್ದನ್ನು ಪ್ರಸ್ತಾಪಿಸಿದ್ದ ಚಿದಂಬರಂ, “ಉಳಿದಿರುವ ಅವಧಿಯಲ್ಲಾದರೂ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಒತ್ತು ನೀಡಲಿ,” ಎಂದು ವ್ಯಂಗ್ಯರೂಪದ ಸಲಹೆ ನೀಡಿದ್ದರು.

ಆದರೆ, ಅಂಕಿ-ಅಂಶಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡ, ಅಂಕಿ-ಅಂಶಗಳೇ ಸರಿಯಿಲ್ಲ ಎಂದು ಪ್ರತಿಪಾದಿಸಿದೆ. ಅಂಕಿ-ಅಂಶಗಳನ್ನು ಬಿಡಗಡೆ ಮಾಡಿದ್ದ ರಾಷ್ಟ್ರೀಯ ಸಾಂಖ್ಯಿಕ ಆಯೋಗವು, “ಹಿಂದಿನ ಸರಣಿಯ ಜಿಡಿಪಿ ಲೆಕ್ಕಾಚಾರವು ಇನ್ನೂ ಪ್ರಗತಿಯಲ್ಲಿದೆ, ಅಂತಿಮಗೊಂಡಿಲ್ಲ,” ಎಂದೂ ಸ್ಪಷ್ಟನೆ ನೀಡಿದೆ.

ರಾಷ್ಟ್ರೀಯ ಸಾಂಖ್ಯಿಕ ಆಯೋಗವು ಸುದಿಪ್ತೋ ಮಂಡಲ್ ಅವರ ಅಧ್ಯಕ್ಷತೆಯಲ್ಲಿ ವಾಸ್ತವಿಕ ವಲಯಗಳ ಮೂಲ ಅಂಕಿ-ಅಂಶಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಆಧುನೀಕರಣಗೊಳಿಸಲು ವಲಯವಾರು ವಾಸ್ತವಿಕ ಅಂಕಿ-ಅಂಶಗಳ ಸಮಿತಿಯನ್ನು 2017ರ ಏಪ್ರಿಲ್‌ನಲ್ಲಿ ರಚಿಸಿತ್ತು. ಸಮಿತಿಯು 2004-05 ಸಾಲಿನ ಮೂಲವರ್ಷದ ಆಧಾರದ ಮೇಲೆ ಲೆಕ್ಕಹಾಕಿದ ಜಿಡಿಪಿ ಅಂಕಿ-ಅಂಶಗಳನ್ನು 2011-12 ಮೂಲವರ್ಷಕ್ಕೆ ಪರಿವರ್ತಿಸುವುದರಿಂದಾಗುವ ಸವಾಲುಗಳ ಬಗ್ಗೆಯೂ ಪರಾಮರ್ಶೆ ಮಾಡಿತ್ತು. ಯುಪಿಎ ಸರ್ಕಾರದ ಅವಧಿಯ ಜಿಡಿಪಿಯನ್ನು 2004-05 ಮೂಲ ವರ್ಷವನ್ನಾಗಿಟ್ಟುಕೊಂಡು ಲೆಕ್ಕ ಹಾಕಿದ್ದನ್ನು 2011-12 ಮೂಲವರ್ಷಕ್ಕೆ ಪರಿವರ್ತಿಸಿ ಲೆಕ್ಕ ಹಾಕಿತ್ತು. ಅದರ ಫಲಿತಾಂಶವೇ ಯುಪಿಎ ಅವಧಿಯಲ್ಲಿ ಜಿಡಿಪಿ ಸರಾಸರಿ ಶೇ.8.12ರಷ್ಟಿತ್ತು.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, “ಸಮಿತಿಯು ಹಿಂದಿನ ಸರಣಿಯ ಜಿಡಿಪಿ ಲೆಕ್ಕಾಚಾರ ಹಾಕಲು ಮೂರು ಕಾರ್ಯಸಾಧ್ಯ ವಿಧಾನಗಳನ್ನು ಅನುಸರಿಸಲು ಪರಿಗಣಿಸುತ್ತಿದೆ, ಹೀಗಾಗಿ ವರದಿಯಲ್ಲಿರುವ ಅಂದಾಜುಗಳು ಅಧಿಕೃತವಲ್ಲ, ಅವುಗಳನ್ನಾಧರಿಸಿ ಮುಂದೆ ಯಾವ ವಿಧಾನವನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲಷ್ಟೇ ಬಳಸಿಕೊಳ್ಳಲಾಗುತ್ತದೆ. ಸುದೀಪ್ತೊ ಮಂಡಲ್ ಸಮಿತಿ ನೀಡಿರುವ ವರದಿಯನ್ನು ಸಾಂಖ್ಯಿಕ ಸಚಿವಾಲಯವು ಪರಿಶೀಲಿಸಲಿದ್ದು, ನಂತರ ಹಿಂದಿನ ಸರಣಿಯ ಜಿಡಿಪಿ ಲೆಕ್ಕಚಾರ ಹಾಕಲು ಯಾವ ವಿಧಾನ ಅಳವಡಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ತಜ್ಞರಿಗೆ ಬಿಡಲಾಗುತ್ತದೆ,” ಎಂದು ತಿಳಿಸಿದೆ.

ರಾಷ್ಟ್ರೀಯ ಲೆಕ್ಕ ಮತ್ತು ಸಾಂಖ್ಯಿಕ ಸಲಹಾ ಸಮಿತಿಯು ಹಿಂದಿನ ಸರಣಿಯನ್ನು ಅಂದಾಜನ್ನು ಅಂತಿಮಗೊಳಿಸುವ ಮುನ್ನ ಅವುಗಳ ನಿರಂತರತೆ, ಸ್ಥಿರತೆ, ವಿಶ್ವಾಸಾರ್ಹತೆಯನ್ನು ಪರಾಮರ್ಶೆ ಮಾಡಲಿದೆ ಎಂದು ಸಚಿವಾಲಯ ಹೇಳಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಸಾಧಿಸಿರುವ ಅಭಿವೃದ್ಧಿಯು ಸಮರ್ಥಿಸಲಾಗದಂಥ ವಿತ್ತೀಯ ಕೊರತೆಯ ಮತ್ತು ಮಿತಿಮೀರಿ ಬ್ಯಾಂಕುಗಳು ಸಾಲ ನೀಡಿದ್ದರ ಫಲಶೃತಿ. ಇದರಿಂದಾಗಿ ಆರ್ಥಿಕತೆ ತ್ವರಿತವಾಗಿ ಕುಸಿದಿತ್ತು ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. “ರಾಜೀವ್ ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಶೇ.10ರಷ್ಟು ಅಭಿವೃದ್ಧಿಯು ಬೃಹತ್ ಸಾಲ ನೀಡಿಕೆಯಿಂದ ಸಾಧಿಸಿದ್ದು. ಅದರ ಪರಿಣಾಮ 1990-92ರ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿ ತೀವ್ರವಾಗಿ ಕುಸಿಯಿತು. ಸಾಲ ಸುಸ್ತಿಯಾಗುವುದನ್ನು ತಡೆಯಲು ಚಿನ್ನವನ್ನು ಬೇರೆ ದೇಶಗಳಿಗೆ ಸಾಗಿಸಬೇಕಾದ ಪರಿಸ್ಥಿತಿ ಬಂದಿತ್ತು,” ಎಂದು ಹೇಳಿದ್ದಾರೆ.

“ಯುಪಿಎ-1 2004-05ರಿಂದ 2008-09ರ ಅವಧಿಯಲ್ಲಿ ದೇಶದ ಜಿಡಿಪಿ ಸರಾಸರಿ ಶೇ.8.89 ಅಭಿವೃದ್ಧಿ ದಾಖಲಿಸಿದ್ದರೆ, 2009-10ರಿಂದ 2013-14 ಅವಧಿಯಲ್ಲಿ ಶೇ.7.39 ಜಿಡಿಪಿ ದಾಖಲಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014-15ರಿಂದ 2017-18ರ ಅವಧಿಯಲ್ಲಿ ಜಿಡಿಪಿ ಶೇ.7.35ರಷ್ಟು ದಾಖಲಾಗಿದೆ,” ಎಂದು ಸುದಿಪ್ತೊ ಮಂಡಲ್ ವರದಿಯು ತಿಳಿಸಿತ್ತು.

ಇದು ಯುಪಿಎ ಸರ್ಕಾರದ ಹತ್ತು ವರ್ಷಗಳ ಸರಾಸರಿ ಜಿಡಿಪಿ ಅಭಿವೃದ್ಧಿ ಪ್ರಮಾಣ ಶೇ.8.12ಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಅವಧಿಯಲ್ಲಿ ಜಿಡಿಪಿ ಶೇ.0.77 ಕಡಿಮೆ ಸಾಧಿಸಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಯುಪಿಎ ಸರ್ಕಾರದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಹೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಯುಪಿಎ ಸರ್ಕಾರಕ್ಕಿಂತ ಶೇ.10ರಷ್ಟು ಕಡಿಮೆ ಆರ್ಥಿಕ ಅಭಿವೃದ್ಧಿಯಾಗಿದೆ.

2006-07ನೇ ಸಾಲಿನಲ್ಲಿ ಜಿಡಿಪಿ ಶೇ.10.08ರಷ್ಟು ದಾಖಲಾಗಿದೆ. ಉದಾರೀಕರಣೋತ್ತರ ಆರ್ಥಿಕತೆಯಲ್ಲಿ ಜಿಡಿಪಿ ಎರಡಂಕಿ ಅಭಿವೃದ್ಧಿ ದಾಖಲಿಸಿದ್ದು ಇದೇ ಮೊದಲು. ಉದಾರೀಕರಣ ಪೂರ್ವದಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ 1988-89ರಲ್ಲಿ ಜಿಡಿಪಿ ಶೇ.10.20ರಷ್ಟು ದಾಖಲಾಗಿತ್ತು. ಸ್ವಾತಂತ್ಯ್ರೋತ್ತರ ಇತಿಹಾಸದಲ್ಲಿ ಈ ಎರಡು ವರ್ಷಗಳಲ್ಲಿ ಮಾತ್ರವೇ ದೇಶದ ಜಿಡಿಪಿ ಎರಡಂಕಿ ಅಭಿವೃದ್ಧಿ ದಾಖಲಿಸಿರುವುದು!

ರಾಷ್ಟ್ರೀಯ ಸಾಂಖ್ಯಿಕ ಆಯೋಗ (ಸಿಎಸ್‌ಸಿ) 1994-2014ರ ಅವಧಿಯಲ್ಲಿನ ದೇಶದ ಆರ್ಥಿಕ ಅಭಿವೃದ್ಧಿಯನ್ನು 2011-12ರ ವರ್ಷವನ್ನು ಮೂಲ ವರ್ಷವನ್ನಾಗಿ ಹೊಸದಾಗಿ ಲೆಕ್ಕ ಹಾಕುತ್ತಿದೆ. ಈ ಮೊದಲು, 2004-05 ವರ್ಷವನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಲಾಗಿತ್ತು. ಪರಿಷ್ಕೃತ ಲೆಕ್ಕದಡಿ ಜಿಡಿಪಿ ಶೇ.0.3-0.5ರಷ್ಟು ಹೆಚ್ಚಳವಾಗಲಿದೆ.

ಇದನ್ನೂ ಓದಿ : ಜಿಡಿಪಿ ಅಂಕಿ-ಅಂಶ ವಿಶ್ವಾಸಾರ್ಹವೇ? ರಂಗರಾಜನ್ ಅವರಿಗೂ ಅನುಮಾನ ಇದೆ!

ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸಾಂಖ್ಯಿಕ ಕಚೇರಿಯು ಜಿಡಿಪಿ ಅಭಿವೃದ್ಧಿ ಅಳೆಯಲು ಮೂಲ ವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಿತು. ಆಯೋಗವು ಆರಂಭದಲ್ಲಿ 2009-10ರ ವರ್ಷವನ್ನು ಮೂಲ ವರ್ಷವನ್ನಾಗಿ ಬಳಸಲು ಸೂಚಿಸಿತ್ತು. ಆದರೆ, 2008ರಲ್ಲಿ ಜಾಗತಿಕ ಆರ್ಥಿಕ ಕುಸಿತ ಉಂಟಾದ ಕಾರಣ ದೇಶದ ಆರ್ಥಿಕತೆಯೂ ಕುಸಿದಿದ್ದರಿಂದ ಆ ವರ್ಷವನ್ನು ಕೈಬಿಡಲಾಯಿತು.

ಹೊಸ ಸರಣಿಯಲ್ಲಿ ಕಂಪನಿಗಳ ಆರ್ಥಿಕ ಸ್ಥಿತಿಗತಿ ಕುರಿತ ಆರ್‌ಬಿಐ ಅಧ್ಯಯನವನ್ನು ಮಾತ್ರ ಪರಿಗಣಿಸದೆ, ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯದಿಂದ ಎಂಸಿಎ21 ಡಾಟಾಬೇಸ್‌ನಿಂದ ಕಂಪನಿಗಳ ಫಲಿತಾಂಶಾಧಾರಿತ ಅಂಕಿ-ಅಂಶಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕಾರ್ಪೋರೆಟ್ ವಲಯದ ಸಮಗ್ರ ಮಾಹಿತಿ ಜಿಡಿಪಿಗೆ ಸೇರ್ಪಡೆಗೊಳ್ಳುತ್ತಿದೆ. ಇದರಿಂದ ಜಿಡಿಪಿಗೆ ಶೇ.60ರಷ್ಟು ಕೊಡುಗೆ ನೀಡುವ ಸೇವಾ ವಲಯದ ಅಂಕಿ-ಅಂಶಗಳು ಹೆಚ್ಚು ನಿಖರವಾಗಿ ಲಭ್ಯವಾಗುತ್ತಿವೆ.

ನರೇಂದ್ರ ಮೋದಿ Narendra Modi Manmohan Singh Economy ಆರ್ಥಿಕತೆ ಜಿಡಿಪಿ GDP ಮನಮೋಹನ್ ಸಿಂಗ್ Development UPA ಯುಪಿಎ NDA ಎನ್ಡಿಎ ಅಬಿವೃದ್ಧಿ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?