ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಇನ್ಫೋಸಿಸ್‌ಗೆ ಗೋಮಾಳ, ಸರ್ಕಾರಿ ಜಮೀನು; 12 ವರ್ಷ ಹಿಂದಿನ ಪ್ರಸ್ತಾವನೆಗೆ ಕ್ಷಿಪ್ರವೇಗ!

ಇನ್ಫೋಸಿಸ್ ಬಹಳ ವರ್ಷದ ಹಿಂದೆ ಖರೀದಿಸಿದ್ದ ಜಮೀನುಗಳಲ್ಲಿನ ಸರ್ಕಾರಿ ಖರಾಬು ಮತ್ತು ಸರ್ಕಾರಿ ಜಮೀನು ಮಂಜೂರಾತಿ ಕಡತಗಳಿಗೆ ಬಿರುಸಿನ ಚಾಲನೆ ಸಿಕ್ಕಿದೆ. ಈ ಸಂಬಂಧ ಸೂಕ್ತ ಪ್ರಸ್ತಾವನೆಯನ್ನು ಸಚಿವ ಸಂಪುಟ ಮುಂದೆ ಮಂಡಿಸಲು ಸಿದ್ಧತೆ ನಡೆದಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ

ಮಹಾಂತೇಶ್ ಜಿ

ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥೆಗೆ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ, ಬಿಲ್ಲಾಪುರ, ಬೂರುಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ಗಳ ಮಧ್ಯದಲ್ಲಿರುವ ಸರ್ಕಾರಿ ಖರಾಬು ಹಾಗೂ ಸರ್ಕಾರಿ ಜಮೀನು ಮಂಜೂರು ಮತ್ತು ಸರ್ಕಾರಿ ಓಣಿಯ ಪಥ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕಳೆದ ೧೨ ವರ್ಷಗಳಿಂದ ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ನನೆಗುದಿಗೆ ಬಿದ್ದಿತ್ತು. ಈ ಅವಧಿಯಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌ ಡಿ ಕುಮಾರಸ್ವಾಮಿ, ಬಿಜೆಪಿಯ ಬಿ ಎಸ್‌ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು. ಆದರೆ, ಈ ಎಲ್ಲ ಅವಧಿಯಲ್ಲಿ ಇನ್ಫೋಸಿಸ್‌ ಪ್ರಸ್ತಾವನೆ ಕಡತಗಳು ಆಮೆಗತಿಯಲ್ಲಿ ಸಾಗಿದ್ದವು.

ಪುನರಾವರ್ತನೆ ಎಂಬಂತೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ (೨೦೧೮) ಆರಂಭದಲ್ಲೇ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ, ಸುಧಾ ಮೂರ್ತಿ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರಲ್ಲದೆ, ‘ನಮ್ಮ ಮೆಟ್ರೋ’ ಯೋಜನೆಗೆ ೨೦೦ ಕೋಟಿ ರು. ನೆರವು ನೀಡುವ ಒಪ್ಪಂದವನ್ನೂ ಮಾಡಿಕೊಂಡಿದ್ದರು.

ಈ ಬೆಳವಣಿಗೆ ಚರ್ಚೆಗೀಡಾಗಿದ್ದರ ಬೆನ್ನಲ್ಲೇ, ಇನ್ಫೋಸಿಸ್‌ ಸಂಸ್ಥೆಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತಾದ ೧೨ ವರ್ಷದ ಹಿಂದಿನ ಪ್ರಸ್ತಾವನೆ ಕಡತಕ್ಕೆ ಕ್ಷಿಪ್ರಗತಿ ದೊರೆತಿದೆ. ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ೩ ತಿಂಗಳೊಳಗೆ ಇನ್ಫೋಸಿಸ್‌ ಪ್ರಸ್ತಾವನೆ ಕುರಿತಂತೆ ಸರಣಿ ಸಭೆಗಳು ನಡೆಯುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆಯಲ್ಲದೆ, ಭೂ ಮಂಜೂರಾತಿ ಮತ್ತು ಭೂ ಕಂದಾಯದ ಕೆಲ ನಿಯಮಗಳನ್ನು ಇನ್ಫೋಸಿಸ್ ಸಂಸ್ಥೆಗೆ ಪೂರಕವಾಗಿ ಸಡಿಲಿಸಲು ಸಮ್ಮಿಶ್ರ ಸರ್ಕಾರ ಒಲವು ತೋರಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ೨೦೧೮ರ ಆಗಸ್ಟ್‌ 10ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಒಟ್ಟು ೧೨ ಎಕರೆ ೧ ಗುಂಟೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಖರಾಬು ಜಮೀನುಗಳನ್ನು ಇನ್ಫೋಸಿಸ್ ಸಂಸ್ಥೆಗೆ ಮಂಜೂರು ಮಾಡುವ ಸಂಬಂಧ ತಲೆದೋರಿರುವ ಆಡಳಿತಾತ್ಮಕ ಮತ್ತು ಕಾನೂನು ಬಿಕ್ಕಟ್ಟುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು. ಹಾಗೆಯೇ, ಈ ಸಂಬಂಧದ ಕಡತವನ್ನು ತ್ವರಿತಗತಿಯಲ್ಲಿ ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚಿಸಿದ್ದಾರೆ ಎಂದು ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ. ಇನ್ಫೋಸಿಸ್‌ ಸಂಸ್ಥೆಗೆ ಸರ್ಕಾರಿ ಜಮೀನು ಮಂಜೂರು ಮಾಡುವ ಸಂಬಂಧದ ದಾಖಲೆಗಳು, ನಕ್ಷೆಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿವೆ.

ಸರ್ಜಾಪುರ, ಬಿಲ್ಲಾಪುರ, ಬೂರುಗಂಟೆ, ತಿಂಡ್ಲು ಗ್ರಾಮದಲ್ಲಿನ ಖರಾಬು ಭೂಮಿ ಬದಲಾವಣೆಯ ನಕ್ಷೆಯ ಪ್ರತಿ

ಸರ್ಜಾಪುರ ಹೋಬಳಿ, ಸರ್ಜಾಪುರ, ಬಿಲ್ಲಾಪುರ, ಬೂರುಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿ ಐಟಿ ಉದ್ಯಮ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಕೈಗಾರಿಕೆ ಉದ್ದೇಶಕ್ಕೆ ಭೂಪರಿವರ್ತನೆ ಆಗಿದ್ದ ಸುಮಾರು ೩೫೦ ಎಕರೆಯನ್ನು ಇನ್ಫೋಸಿಸ್‌ ಲಿಮಿಟೆಡ್‌ ೨೦೦೩-೦೪, ೨೦೦೪-೦೫ರಲ್ಲಿ ವಿವಿಧ ದಿನಾಂಕಗಳಂದು ರೈತರಿಂದ ನೇರವಾಗಿ ಖರೀದಿಸಿರುವುದು ‘ಭೂಮಿ’ ತಂತ್ರಾಂಶದಿಂದ ತಿಳಿದುಬಂದಿದೆ. ಅಲ್ಲದೆ, ಖರೀದಿಯಾಗಿದ್ದ ಪ್ರದೇಶಗಳಲ್ಲಿ ಸರ್ಕಾರಿ ಓಣಿ, ಹದ್ದುಗಿಡಿದ ಹಳ್ಳ, ಸರ್ಕಾರಿ ಗೋಮಾಳ, ಬಿ ಖರಾಬು, ಸರ್ಕಾರಿ ಕುಂಟೆ, ಸರ್ಕಾರಿ ತೋಪು ಕೂಡ ಇವೆ ಎಂಬುದನ್ನು ಆನೇಕಲ್‌ ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು.

ಸರ್ಕಾರಿ ಓಣಿ, ಹದ್ದುಗಿಡಿದ ಹಳ್ಳದ ಸ್ಥಳ ಬದಲಾವಣೆ ಮಾಡಿಕೊಡುವ ಸಂಬಂಧ ಆನೇಕಲ್‌ನ ಹಿಂದಿನ ತಹಶೀಲ್ದಾರ್‌ ಅವರು 2006ರ ಜೂನ್‌ 1ರಂದೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೆ, ಈ ಬಗ್ಗೆ ೨೦೧೫, ೨೦೧೬ ಮತ್ತು ೨೦೧೭ರಲ್ಲಿ ಕಂಪನಿ ಹಲವು ಬಾರಿ ಸಲ್ಲಿಸಿದ್ದ ಪ್ರಸ್ತಾವನೆಗಳಿಗೆ ಚಾಲನೆ ದೊರೆತಿರಲಿಲ್ಲ. ನನೆಗುದಿಗೆ ಬಿದ್ದಿದ್ದ ಈ ಪ್ರಸ್ತಾವನೆಯ ಕಡತಗಳಿಗೆ ೧೨ ವರ್ಷಗಳ ಬಳಿಕ ಇದೀಗ ಬಿರುಸಿನ ವೇಗ ದೊರೆತಿದೆ.

ಸರ್ಕಾರಿ ಖರಾಬು ಮತ್ತು ಸರ್ಕಾರಿ ಜಮೀನುಗಳನ್ನು ಇನ್ಫೋಸಿಸ್‌ ಸಂಸ್ಥೆಗೆ ಮಂಜೂರು ಮಾಡುವ ಸಂಬಂಧ ಆನೇಕಲ್‌ ತಹಶೀಲ್ದಾರ್‌ ಅವರು ೨೦೧೮ರ ಜುಲೈ ೬ ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. “ಸರ್ಜಾಪುರ ಗ್ರಾಮದಲ್ಲಿ ೩೫೨ ಗೋವುಗಳು ಇದ್ದರೂ ಯಾವುದೇ ಗೋಮಾಳ ಜಮೀನಾಗಲೀ ಮತ್ತು ಅರಣ್ಯ ಜಮೀನಾಗಲೀ ಲಭ್ಯ ಇಲ್ಲ. ಅದೇ ರೀತಿ, ಬಿಲ್ಲಾಪುರ ಗ್ರಾಮದಲ್ಲಿ ೨೮ ಗೋವುಗಳಿದ್ದರೂ ಯಾವುದೇ ಗೋಮಾಳ ಅಥವಾ ಅರಣ್ಯ ಜಮೀನಾಗಲೀ ಇಲ್ಲ,” ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸರ್ಜಾಪುರ ಮತ್ತು ಬಿಲ್ಲಾಪುರ ಗ್ರಾಮಗಳಲ್ಲಿರುವ ಗೋವುಗಳ ಸಂಖ್ಯೆ, ಲಭ್ಯ ಇರುವ ಗೋಮಾಳ, ಗೋಮಾಳ ವಿಸ್ತೀರ್ಣ ಕಡಿಮೆ ಇದ್ದಲ್ಲಿ ಪರ್ಯಾಯವಾಗಿ ಅರಣ್ಯ ಜಮೀನು ಲಭ್ಯತೆ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಉಳಿದಿರುವ ಗೋಮಾಳ ಜಮೀನು ಲಭ್ಯ ಇರುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ೨೦೧೮ರ ಆಗಸ್ಟ್ ೧ರಂದು ಮತ್ತೊಂದು ವರದಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಇನ್ಫೊಸಿಸ್‌ ನಾರಾಯಣಮೂರ್ತಿ- ಎಚ್‌ಡಿಕೆ ಭೇಟಿ ಕುತೂಹಲ ಹುಟ್ಟಿಸಲು ಕಾರಣವೇನು?

ವಿಶೇಷವೆಂದರೆ, ಬಿಲ್ಲಾಪುರದ ಸರ್ವೆ ನಂಬರ್‌ ೨೬ರಲ್ಲಿ ೪ ಎಕರೆ ೧೭ ಗುಂಟೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಪ್ರದೇಶದಲ್ಲಿ ೦-೩೦ ಗುಂಟೆ ವಿಸ್ತೀರ್ಣವನ್ನು ಸಾರ್ವಜನಿಕ ಉದ್ದೇಶದ ರಸ್ತೆಗಾಗಿ ಕಾಯ್ದಿರಿಸಲು ೨೦೦೯ರ ಸೆಪ್ಟಂಬರ್ ೨೫ರಲ್ಲೇ ಅಂದಿನ ವಿಶೇ‍ಷ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ಈ ಪ್ರದೇಶವನ್ನೀಗ ಇನ್ಫೋಸಿಸ್‌ ಲಿಮಿಟೆಡ್‌ ಪರವಾಗಿ ಪಥ ಬದಲಾವಣೆ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿವೆ ಎನ್ನಲಾಗಿದೆ.

ಇನ್ನು, “ಈ ಕಂಪನಿಯ ವ್ಯಾಪ್ತಿಯಲ್ಲಿರುವ ಬಿ ಖರಾಬು ಜಮೀನು ನೈಜ ಸ್ಥಿತಿ ಕಳೆದುಕೊಂಡಿದೆ ಮತ್ತು ದಾರಿಯು ಸಾರ್ವಜನಿಕರ ಬಳಕೆಯಲ್ಲಿ ಇಲ್ಲ ಎಂಬ ಕಾರಣದಿಂದ ಬಿ ಖರಾಬು ಪ್ರದೇಶವನ್ನು ಸಾರ್ವಜನಿಕ ನಿರ್ವಹಣೆಯಿಂದ ಮತ್ತು ಪ್ರವೇಶದಿಂದ ಹೊರತುಪಡಿಸಿ ಹಕ್ಕುದಾರಿಕೆ ನೀಡಿ ಎಂದು ಕೋರಿ ಕಂಪನಿ ಪ್ರಸ್ತಾವನೆ ಸಲ್ಲಿಸಿದೆ,” ಎಂದು ಆನೇಕಲ್‌ನ ಈ ಹಿಂದಿನ ತಹಶೀಲ್ದಾರ್ ೨೦೧೭ರ ಡಿಸೆಂಬರ್ ೧೧ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದನ್ನಾಧರಿಸಿ ಕಂಪನಿಗೆ ಹಕ್ಕುದಾರಿಕೆ ಕೊಡಲು ಸರ್ಕಾರದ ಮಟ್ಟದಲ್ಲಿ ಬಿರುಸಿನ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಆನೇಕಲ್‌ ತಾಲೂಕಿನ ಹಿಂದಿನ ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದ ಪ್ರತಿ

ಹೀಗಾಗಿ, ಈ ೪ ಗ್ರಾಮಗಳಲ್ಲಿ ಬರುವ ಬಿ ಖರಾಬು ಜಮೀನನ್ನು ಪ್ರತ್ಯೇಕಗೊಳಿಸಿ ಬದಲಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಇದನ್ನು ಮಂಜೂರು ಮಾಡಿದಲ್ಲಿ ಪರ್ಯಾಯವಾಗಿ ಹಣ ಪಾವತಿ ಮಾಡಲು ಇನ್ಫೋಸಿಸ್‌ ಕಂಪನಿ ಒಪ್ಪಿರುವುದನ್ನು ಸಮರ್ಥಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ಫೋಸಿಸ್‌ ಕಂಪನಿಗೆ ಹೊರರಾಜ್ಯಗಳು ರೆಡ್‌ ಕಾರ್ಪೆಟ್‌ ಹಾಸಿ ಸ್ವಾಗತಿಸುತ್ತಿವೆ. ಹೀಗಿರುವಾಗ, ನಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಆಶಯದೊಂದಿಗೆ ಕಂಪನಿಗೆ ಜಮೀನು ನೀಡಬೇಕು. ಹಾಗಾಗಿ, ತೊಡಕುಗಳನ್ನು ಇತ್ಯರ್ಥಪಡಿಸಲು ನಿರ್ದೇಶನ ನೀಡಿದ್ದೇನೆ.
ಟಿ ಎಂ ವಿಜಯಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ

ಈ ಪೈಕಿ, ಸರ್ಜಾಪುರ ಗ್ರಾಮದ ಸರ್ವೆ ನಂಬರ್ ೩೮೭ರಿಂದ ೪೨೫ವರೆಗಿನ ಮಧ್ಯಭಾಗದಲ್ಲಿ ಹದ್ದುಗಿಡದ ಹಳ್ಳ (೨ ಎಕರೆ ೩೫ ಗುಂಟೆ), ಸರ್ವೆ ನಂಬರ್ ೩೮೯ರಿಂದ ೩೯೬ರವರೆಗೆ ಸರ್ಕಾರಿ ಓಣಿ ಪ್ರದೇಶ (೦-೧೨ ಗುಂಟೆ), ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್ ೮೩ರಲ್ಲಿಯೂ ಸರ್ಕಾರಿ ಓಣಿ (೦-೦೮ ಗುಂಟೆ), ಸರ್ಜಾಪುರದ ಸರ್ವೆ ನಂಬರ್‌ ೩೭೩ರಲ್ಲಿ ೪ ಎಕರೆ ೧೬ ಗುಂಟೆ, ಬಿಲ್ಲಾಪುರದ ಗ್ರಾಮದ ಸರ್ವೆ ನಂಬರ್‌ ೨೬ರಲ್ಲಿ ೪ ಎಕರೆ ೧೭ ಗುಂಟೆ ಸೇರಿದಂತೆ ಒಟ್ಟು ೮ ಎಕರೆ ೩೩ ಗುಂಟೆ ಸರ್ಕಾರಿ ಮುಫತ್‌ ಕಾವಲ್‌, ಸರ್ಕಾರಿ ಗೋಮಾಳವಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಆದರೆ, ಕರ್ನಾಟಕ ಭೂಕಂದಾಯ ನಿಯಮ ೯೭(೪) ಪ್ರಕಾರ, ೧೦೦ ಗೋವುಗಳಿಗೆ ೩೦ ಎಕರೆಯನ್ನು ಕಾಯ್ದಿರಿಸಬೇಕಿದೆ. “ಗೋಮಾಳ ಜಮೀನು ಲಭ್ಯ ಇಲ್ಲದಿರುವಾಗ ಗೋಮಾಳವನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ, ಸರ್ಕಾರ ಇಚ್ಛಿಸಿದರೆ ನಿಯಮವನ್ನು ಸಡಿಲಿಸಿ ಗೋಮಾಳ ಮಂಜೂರು ಮಾಡಬಹುದು. ಈ ಅಧಿಕಾರ ಸಚಿವ ಸಂಪುಟಕ್ಕಿದೆ. ಅಲ್ಲದೆ, ವಿವಿಧ ಸರ್ವೆ ನಂಬರ್‌ಗಳ ಮಧ್ಯೆ ಇರುವ ಗೋಮಾಳವನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಕಂಪನಿ ಸಿದ್ಧವಿದೆ. ಈ ಸಂಬಂಧ ಸೂಕ್ತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಹಂತದಲ್ಲಿದೆ,” ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೪೨ರಲ್ಲಿ ೦-೧೮ ಗುಂಟೆ ಜಮೀನು ಮತ್ತು ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್‌ ೬೩ರಲ್ಲಿ ೦-೧೮ ಗುಂಟೆ ವಿಸ್ತೀರ್ಣದ ಸರ್ಕಾರಿ ಕುಂಟೆ, ತೋಪು ಮತ್ತು ಸರ್ಕಾರಿ ಜಮೀನುಗಳನ್ನು ಯಥಾಸ್ಥಿತಿ ಕಾಪಾಡಿಕೊಂಡು ಮತ್ತು ಇವುಗಳನ್ನು ಸಾರ್ವಜನಿಕ ನಿರ್ವಹಣೆಯಿಂದ ಹೊರತುಪಡಿಸಲು ಸಂಸ್ಥೆ ಕೋರಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನಾ ವರದಿ ಸಲ್ಲಿಸಿದ್ದರು.

ವಿಶೇ‍ಷ ಆರ್ಥಿಕ ವಲಯದ ನಿಯಮಾನುಸಾರ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಸರ್ಕಾರಿ ಭೂ ಭಾಗಗಳ ಸ್ಥಳಾಂತರ/ಪಥ ಬದಲಾವಣೆ ಸಂಬಂಧ ಇನ್ಫೋಸಿಸ್‌ ನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್‌ ನಾಯಕ್‌ ಅವರು ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ೨೦೧೭ರ ನವೆಂಬರ್‌ ೨೩ರಂದು ಪತ್ರ ಬರೆದಿದ್ದರು.

ಸರ್ಕಾರಿ ಭೂಭಾಗಗಳನ್ನು ಸ್ಥಳಾಂತರ ಮಾಡುವ ಸಂಬಂಧ ಇನ್ಫೋಸಿಸ್‌ನ ಪ್ರಾದೇಶಿಕ ವ್ಯವಸ್ಥಾಪಕರು ಬರೆದಿದ್ದ ಪತ್ರದ ಪ್ರತಿ

ಇನ್ಫೋಸಿಸ್‌ ಸಂಸ್ಥೆಯೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಆರಂಭದಲ್ಲಿ ಉತ್ತಮ ಸಂಬಂಧವನ್ನೇನೂ ಹೊಂದಿರಲಿಲ್ಲ. ಇನ್ಫೋಸಿಸ್ ಸಂಸ್ಥೆಗೆ ೨೦೦೫ರಲ್ಲಿ ಆಗಿದ್ದ ಭೂ ಮಂಜೂರಾತಿ ಮತ್ತು ಭೂ ಬಳಕೆ ಸಂಬಂಧ ದೇವೇಗೌಡರು ೨೦೦೫ರಲ್ಲಿ ವಾಗ್ದಾಳಿ ನಡೆಸಿದ್ದರು.

ಆದರೀಗ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಟಿಸುತ್ತಿರುವ ಮೊದಲ ಮತ್ತು ಎರಡನೇ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿರುವ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ನಡೆದಿತ್ತು.

ದೇವೇಗೌಡರ ಕುಟುಂಬ ಮತ್ತು ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರೊಂದಿಗಿನ ಸಂಬಂಧದಲ್ಲಿನ ಹಲವು ವಿರೋಧಾಭಾಸಗಳ ಕುರಿತು ‘ದಿ ಸ್ಟೇಟ್‌’ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

infosys ಬಿ ಎಸ್ ಯಡಿಯೂರಪ್ಪ ಆರ್ ವಿ ದೇಶಪಾಂಡೆ Chief Secretary Sudhamurthy ಸುಧಾಮೂರ್ತಿ ಇನ್ಫೋಸಿಸ್ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ T M Vijaya Bhaskar ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ R V Deshpande ಜಿ ಪರಮೇಶ್ವರ B S Yediyurappa ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara ಎನ್‌ ಆರ್‌ ನಾರಾಯಣ ಮೂರ್ತಿ Narayana Murthy Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy H D Devegowda
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು