ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಅಕ್ರಮ ಕಲ್ಲು ಗಣಿಗಾರಿಕೆ; ಮಾಲೂರು ಕಾಂಗ್ರೆಸ್‌ ಶಾಸಕರಿಗೆ ೧೫ ಕೋಟಿ ರು. ದಂಡ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆಯ ಪ್ರಕರಣಗಳಲ್ಲಿ ದಂಡ ವಸೂಲು ಕ್ರಮಕ್ಕೆ ಚಾಲನೆ ಸಿಕ್ಕಿದೆ. ಈ ಸಂಬಂಧ ಮಾಲೂರಿನ ಕಾಂಗ್ರೆಸ್‌ ನ ಶಾಸಕ ಕೆ ವೈ ನಂಜೇಗೌಡ ಅವರಿಗೂ ನೋಟಿಸ್‌ ಜಾರಿಯಾಗಿರುವುದು ವಿಶೇಷ. ನೋಟಿಸ್‌ ನ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂಬ ಆರೋಪವೂ ಕೇಳಿ ಬಂದಿದೆ. 

ಮಹಾಂತೇಶ್ ಜಿ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್‌ ಹೋಬಳಿಯ ಹರದಕೊತ್ತೂರು ಸೇರಿದಂತೆ ಇತರೆ ಗ್ರಾಮಗಳಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ೫ ಪಟ್ಟು ದಂಡ ವಸೂಲು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ. ಈ ಸಂಬಂಧ ಆರೋಪಿತ ಕಾಂಗ್ರೆಸ್ ನ ಶಾಸಕ ಕೆ ವೈ ನಂಜೇಗೌಡ ಸೇರಿದಂತೆ ಇನ್ನಿತರೆ ಗಣಿ ಉದ್ಯಮಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಅದಿರು ಗಣಿಗಾರಿಕೆ ನಡೆಸಿರುವ ಉದ್ಯಮಿಗಳಿಂದ ನಷ್ಟ ವಸೂಲು ಮಾಡುವಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ವಿಫಲವಾಗಿತ್ತು. ನೋಟಿಸ್‌ ಗಳಿಗೆ ಉದ್ಯಮಿಗಳು ನ್ಯಾಯಾಲಯಗಳಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸುವುದರಲ್ಲಿಯೂ ಕ್ರಮ ಕೈಗೊಳ್ಳದ ಇಲಾಖೆ, ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಉದ್ಯಮಿಗಳಿಂದ ಬಹು ಕೋಟಿ ಮೊತ್ತದ ದಂಡವನ್ನು ವಸೂಲು ಮಾಡುವಲ್ಲಿ ಯಶಸ್ವಿಯಾಗುವುದೇ ಎಂಬ ಪ್ರಶ್ನೆಯೂ ಎದುರಾಗಿದೆ.

ನೋಟೀಸ್ ಜಾರಿಗೊಂಡಿರುವ ಪೈಕಿ ಮಾಲೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡ ಮತ್ತು ಅವರ ಕುಟುಂಬ ಸದಸ್ಯರಿಗೆ 2018ರ ಆಗಸ್ಟ್ ‌೯ ರಂದು ಕೋಲಾರ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ೩ನೇ ನೋಟೀಸ್‌ ಜಾರಿ ಮಾಡಿದ್ದಾರೆ. ಈ ನೋಟೀಸ್‌ ನ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಜಾರಿಗೊಳಿಸಿರುವ ನೋಟೀಸ್‌ ನ ಪ್ರತಿ

ಹರದಕೊತ್ತೂರು, ಅನಿಮಿಟ್ನಹಳ್ಳಿ, ಕಣಗಲಾ, ಬನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕಲ್ಲುಗಣಿ ಗುತ್ತಿಗೆ ಮಂಜೂರು ಪಡೆದ ನಂತರ ಗುತ್ತಿಗೆ ಪ್ರದೇಶದ ಹೊರಭಾಗವನ್ನೂ ಅತಿಕ್ರಮಿಸಿ ಕಲ್ಲು ಗಣಿಗಾರಿಕೆ ನಡೆಸಿರುವುದನ್ನು ಜಿಲ್ಲಾ ಟಾಸ್ಕ್‌ ಫೋರ್ಸ್‌ ಜಂಟಿ ಸರ್ವೇ ಕೈಗೊಂಡಿತ್ತು. ಈ ಸರ್ವೆಯೇ ಸರಿ ಇಲ್ಲ, ಅಸಮರ್ಪಕವಾಗಿದೆ ಎಂದು ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನೂ ತಳ್ಳಿ ಹಾಕಿರುವ ಗಣಿ, ಭೂ ವಿಜ್ಞಾನ ಇಲಾಖೆ, ದಂಡದ ಮೊತ್ತವನ್ನು ಪಾವತಿಸಲು ನೋಟೀಸ್‌ ಜಾರಿಗೊಳಿಸಿದೆ.

ಮಾಲೂರಿನ ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡ, ಸೋದರಿ ಕೆ ವೈ ಮಂಜುಳಾ, ಪುತ್ರ ಕೆ ಎನ್ ಹರೀಶ್‌ ಕುಮಾರ್, ಸೋದರ ಈರೇಗೌಡ ಸೇರಿದಂತೆ ಇತರೆ ಉದ್ಯಮಿಗಳಾದ‌ ಸಿ ಎಚ್‌ ಚೆನ್ನಯ್ಯ, ಪಾಪರಾವ್‌, ಬೆಂಗಳೂರಿನ ಎಂ ವೆಂಕಟರಾಮರೆಡ್ಡಿ ಇವರಿಗೆ ನೋಟೀಸ್‌ ಜಾರಿಯಾಗಿದೆ. ಇವರೆಲ್ಲರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದನ್ನು ಜಂಟಿ ಸರ್ವೆ ವರದಿ ದೃಢಪಡಿಸಿದೆ. ೧೨,೭೩,೯೦೫.೩೧ ಮೆಟ್ರಿಕ್ ಟನ್ ಸಾಗಿಸಿರುವುದನ್ನು ತನಿಖೆ ವೇಳೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ೫ ಪಟ್ಟು ದಂಡದ ಮೊತ್ತ ೩೮,೨೧,೭೧,೫೯೩ ರು.ವಿಧಿಸಿದ್ದು, ಈ ಮೊತ್ತವನ್ನು ೩೦ ದಿನದೊಳಗೆ ಪಾವತಿಸಬೇಕು ಎಂದು ನೋಟಿಸ್‌ ನಲ್ಲಿ ಸೂಚಿಸಿದೆ.

“ನಿಗದಿತ ಅವಧಿಯೊಳಗೆ ದಂಡದ ಮೊತ್ತ ಪಾವತಿಸುವುದನ್ನು ತಪ್ಪಿದ್ದಲ್ಲಿ ಕಲ್ಲು ಗಣಿ ಗುತ್ತಿಗೆಯನ್ನು ರದ್ದುಪಡಿಸಿ, ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹಿರಿಯ ಭೂ ವಿಜ್ಞಾನಿ ನೋಟಿಸ್‌ ನಲ್ಲಿ ಎಚ್ಚರಿಸಿದ್ದಾರೆ.

ಹರದಕೊತ್ತೂರು, ಅನಿಮಿಟ್ನಹಳ್ಳಿ, ಕಣಗಲಾ, ಬನಹಳ್ಳಿ ಮತ್ತು ಇತರೆ ಗ್ರಾಮಗಳಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ೨೦೧೭ರ ಅಕ್ಟೋಬರ್‌ ೯, ೧೦ ಮತ್ತು ೧೧ರಂದು ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಹಿರಿಯ ಭೂ ವಿಜ್ಞಾನಿ ಹಾಗೂ ಕಲ್ಲು ಗಣಿ ಗುತ್ತಿಗೆದಾರರ ಸಮ್ಮುಖದಲ್ಲಿಯೇ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಇದಲ್ಲದೆ “ಕಲ್ಲು ಗಣಿ ಪ್ರದೇಶಗಳ ಗುತ್ತಿಗೆದಾರರು ಗುತ್ತಿಗೆ ಪ್ರದೇಶಗಳ ಹೊರ ಭಾಗದಲ್ಲಿ ಒತ್ತುವರಿ ಮಾಡಿ ಗಣಿಗಾರಿಕೆ ಮಾಡಿರುವುದು ಕಂಡು ಬಂದಿದೆ,” ಎಂದು ಹಿರಿಯ ಭೂ ವಿಜ್ಞಾನಿ(ನವೆಂಬರ್ ೮,೨೦೧೭)ಸಲ್ಲಿಸಿದ್ದ ಜಂಟಿ ವರದಿಯಲ್ಲಿ ವಿವರಿಸಲಾಗಿದೆ.

ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತು ಜಂಟಿ ಸರ್ವೆ ವರದಿಯ ಪ್ರತಿ

ಶಾಸಕ ಕೆ ವೈ ನಂಜೇಗೌಡ ಅವರಿಗೆ ೫ ಪಟ್ಟು ದಂಡದ ಮೊತ್ತ ವಿಧಿಸಿರುವ ಇಲಾಖೆ, ೧೫ ಕೋಟಿ ರು.ಪಾವತಿಸಬೇಕು ಎಂದು ನೋಟಿಸ್‌ ನಲ್ಲಿ ಸೂಚಿಸಲಾಗಿದೆ. “೨೦೦೫-೦೬ರಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದೇನೆ. ಸರ್ಕಾರಕ್ಕೆ ರಾಯಲ್ಟಿಯನ್ನೂ ಕಾಲಕಾಲಕ್ಕೆ ಪಾವತಿಸುತ್ತಿದ್ದೇನೆ. ಅಕ್ರಮ ಗಣಿಗಾರಿಕೆ ನಡೆಸಿಲ್ಲ, ರಾಜಧನವನ್ನೂ ಬಾಕಿ ಉಳಿಸಿಕೊಂಡಿಲ್ಲ. ಅಧಿಕಾರಿಗಳು ನೀಡಿರುವ ನೋಟಿಸ್‌ ಗೆ ನಿಗದಿತ ಅವಧಿಯೊಳಗೆ ಪ್ರತಿಕ್ರಿಯೆ ನೀಡುತ್ತೇನೆ,” ಎಂದು ಕೆ ವೈ ನಂಜೇಗೌಡ ಅವರು ‘ದಿ ಸ್ಟೇಟ್‌’ಗೆ ಪ್ರತಿಕ್ರಿಯೆ ನೀಡಿದರು.

ಶಾಸಕ ಕೆ ವೈ ನಂಜೆಗೌಡ ಸೇರಿದಂತೆ ಹಲವರಿಗೆ ಜಾರಿಗೊಳಿಸಿರುವ ನೋಟೀಸ್‌ ನ ಪ್ರತಿ
ಇದನ್ನೂ ಓದಿ : ಅಕ್ರಮ ಅದಿರು ಸಾಗಾಣಿಕೆ ಪ್ರಕರಣ; ವಸೂಲಾಗದ ದಂಡ 134 ಕೋಟಿ ರು.

ಶಾಸಕರ ಸೋದರಿ ಕೆ ವೈ ಮಂಜುಳಾ ಅವರಿಗೆ ಮಾಲೂರು ತಾಲೂಕಿನ ಟೇಕಲ್‌ ಹೋಬಳಿಯ ಕಣಗಲಾ ಗ್ರಾಮದ ಸರ್ವೆ ನಂಬರ್‌ ೬೬ರಲ್ಲಿ ೪ ಎಕರೆ ಮತ್ತು ಕೆ ವೈ ಮಂಜುಳಾ ಅವರಿಂದ ನಾಗಾದೇವಿ ಸ್ಟೋನ್‌ ಕ್ರಷರ್ಸ್‌ ಅವರಿಗೆ ೫ ಎಕರೆ ವಿಸ್ತೀರ್ಣ ಪ್ರದೇಶ ೨೦೦೬ರ ಫೆ.೨೪ ಮತ್ತು ಜುಲೈ ೨೪ರಿಂದ ೫ ವರ್ಷದವರೆಗೆ (ಗುತ್ತಿಗೆ ಸಂಖ್ಯೆ ೭೧೮ ಮತ್ತು ೮೧೫ ) ಮಂಜೂರಾಗಿತ್ತು.

ಆದರೆ “ಈ ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿಯೂ ರಾಜನಧನ ಪಾವತಿಸದೆಯೇ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸಿ ಅಂದಾಜು ೩,೫೭,೮೦೫.೩೮ ಮೆಟ್ರಿಕ್‌ ಟನ್‌ ನಷ್ಟು ಖನಿಜವನ್ನು ತೆಗೆದು ಸಾಗಾಣಿಕೆ ಮಾಡಲಾಗಿದೆ,” ಎಂದು ಡ್ರೋನ್‌ ಮತ್ತು ಡಿಜಿಪಿಎಸ್‌ ಸರ್ವೆ ವರದಿಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಗುತ್ತಿಗೆ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿರುವುದಕ್ಕೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು ೧೯೯೪ರಂತೆ ಒಟ್ಟು ೧೦,೭೩,೪೧,೬೧೪ ರು. ದಂಡ ವಿಧಿಸಲಾಗಿದೆ.

ನನಗೆ ನೋಟಿಸ್‌ ಬಂದಿರುವುದು ನಿಜ. ೧೫ ಕೋಟಿ ಪಾವತಿಸಲು ಸೂಚಿಸಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಅಧಿಕಾರಿಗಳು ಮಾಡಿರುವ ಸರ್ವೆ ತಪ್ಪಿನಿಂದ ಕೂಡಿದೆ. ಸರಿಯಾಗಿ ತನಿಖೆ ಮಾಡಿಲ್ಲ.೨೦೦೫-೦೬ರಿಂದಲೂ ಗಣಿಗಾರಿಕೆ ಮಾಡುತ್ತಿದ್ದೇನೆ. ಆಗ ಅಕ್ರಮ ಎಂದು ನೋಟಿಸ್‌ ನೀಡಿರಲಿಲ್ಲ. ಈಗ ನೋಟಿಸ್‌ ನೀಡಲಾಗಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ನಿಗದಿತ ಅವಧಿಯೊಳಗೆ ನೀಡುತ್ತೇನೆ.
ಕೆ ವೈ ನಂಜೇಗೌಡ, ಮಾಲೂರು ಶಾಸಕ

ಅದೇ ರೀತಿ ಟೇಕಲ್‌ ಹೋಬಳಿಯ ಹರದಕೊತ್ತೂರು ಗ್ರಾಮದ ಸರ್ವೆ ನಂಬರ್‌ ೩೦ರಲ್ಲಿ ಕೊಮ್ಮನಹಳ್ಳಿ ಗ್ರಾಮದ ಈರೇಗೌಡ ಎಂಬುವರಿಗೆ ೩ ಎಕರೆ ೨೦ ಗುಂಟೆ(ಗುತ್ತಿಗೆ ಸಂಖ್ಯೆ ೮೪೬)ಯನ್ನು ೨೦೦೮ರ ಫೆ.೧೪ರಿಂದ ಒಟ್ಟು ೧೦ ವರ್ಷದವರೆಗೆ ಮಂಜೂರು ಮಾಡಲಾಗಿತ್ತು. ಈ ಗುತ್ತಿಗೆದಾರನೂ ರಾಜಧನವನ್ನು ಪಾವತಿಸದೆ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಅಂದಾಜು ೨,೦೫,೦೪೭.೧೧ ಮೆಟ್ರಿಕ್‌ ಟನ್‌ ನಷ್ಟು ಖನಿಜವನ್ನು ತೆಗೆದು ಸಾಗಾಣಿಕೆ ಮಾಡಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ. ಹೀಗಾಗಿ ಇವರಿಗೆ ೬,೧೫,೧೪,೧೩೩ ರು. ದಂಡ ಪಾವತಿಸಲು ಸೂಚಿಸಲಾಗಿದೆ.

ಮಾಲೂರು ತಾಲೂಕಿನ ಹುಣಸಿಕೋಟೆ ಗ್ರಾಮದ ಸುತ್ತಮುತ್ತ ನೀಡಿದ್ದ ಕಲ್ಲು ಗಣಿಗಾರಿಕೆ ಗುತ್ತಿಗೆ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ೩೫ ಕಂಪನಿಗಳಿಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಲು ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸರ್ಕಾರಕ್ಕೆ ನೋಟೀಸ್‌ ಜಾರಿಗೊಳಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ಬಿ ಎಸ್ ಯಡಿಯೂರಪ್ಪ ಆರ್ ವಿ ದೇಶಪಾಂಡೆ ಎಚ್‌ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ D K Shivakumar Chief Secretary Department of Mines and Geology ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ T M Vijaya Bhaskar R V Deshpande ಜಿ ಪರಮೇಶ್ವರ B S Yediyurappa Deputy CM G Parameshwara Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು