ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಅಪನಗದೀಕರಣ ಯೋಜನೆ ಮಹಾವಿಫಲ; ನೈತಿಕ ಹೊಣೆ ಹೊರುತ್ತಾರೆಯೇ ಪ್ರಧಾನಿ ಮೋದಿ?

ದೇಶದಲ್ಲಿರುವ ಜನರೆಲ್ಲರೂ ಕಪ್ಪುಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬರ್ಥದಲ್ಲಿ ದೂಷಿಸಿ ಅಪನಗದೀಕರಣ ಯೋಜನೆ ಜಾರಿಗೆ ತಂದಿದ್ದರು ಪ್ರಧಾನಿ ಮೋದಿ. 20 ತಿಂಗಳ ನಂತರ ಆರ್‌ಬಿಐ ನೀಡಿರುವ ವರದಿ ಪ್ರಕಾರ, ಯೋಜನೆ ಮಹಾವೈಫಲ್ಯ ಕಂಡಿದೆ. ಇದರ ನೈತಿಕ ಹೊಣೆ ಹೊರುವವರಾರು?

ರೇಣುಕಾಪ್ರಸಾದ್ ಹಾಡ್ಯ

ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಅಪನಗದೀಕರಣ ಯೋಜನೆ ಮಹಾ ವೈಫಲ್ಯ ಕಂಡಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ರದ್ದಾದ ನೋಟುಗಳ ಪೈಕಿ ಶೇ.99.30ರಷ್ಟು ನೋಟುಗಳು ವಾಪಸಾಗಿವೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಜುಗರಕ್ಕೆ ಈಡುಮಾಡಿವೆ.

2016ರ ನ.8ರಂದು 500 ಮತ್ತು 1,000 ರುಪಾಯಿ ನೋಟುಗಳ ಚಲಾವಣೆ ರದ್ದು ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಪನಗದೀಕರಣ ಯೋಜನೆಯನ್ನು ಮರ್ಯಾದೆಯ ಉತ್ಸವ, ಪ್ರಾಮಾಣಿಕತೆಯ ಪರ್ವ, ಸಮಗ್ರತೆಯ ಹಬ್ಬ, ವಿಶ್ವಾಸಾರ್ಹತೆಯ ಆಚರಣೆ ಎಂದು ಅತ್ಯಂತ ಪ್ರಾಸಬದ್ಧವಾಗಿ ಹೇಳಿದ್ದರು.

20 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಅಪನಗದೀಕರಣ ಯೋಜನೆ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಆ ವರದಿ ಪ್ರಕಾರ, ಅಪನಗದೀಕರಣ ಯೋಜನೆಯಡಿ ರದ್ದಾದ ಶೇ.99.30ರಷ್ಟು ನೋಟುಗಳು ವಾಪಸಾಗಿವೆ. ನೋಟುಗಳ ಎಣಿಕೆ ಕಾರ್ಯ ಮುಗಿದಿದ್ದು, 15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸಾಗಿವೆ. ಈ ಪ್ರಮಾಣದಲ್ಲಿ ನೋಟುಗಳು ವಾಪಸಾಗುವುದು ನಿಶ್ಚಿತವಾಗಿತ್ತು. ಏಕೆಂದರೆ ಆರ್‌ಬಿಐ ನೀಡಿದ್ದ ಮಧ್ಯಂತರ ವರದಿಯಲ್ಲೇ 15.28 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸಾಗಿವೆ ಎಂಬುದನ್ನು ತಿಳಿಸಿತ್ತು. ಅಂದರೆ, 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ರದ್ದು ಮಾಡಿದ ನೋಟುಗಳ ಪೈಕಿ ಕೇವಲ 10,000 ಕೋಟಿ ಮೌಲ್ಯದ ನೋಟುಗಳು ಮಾತ್ರ ವಾಪಸಾಗಿಲ್ಲ.

ಇದರರ್ಥ, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಜಾರಿಗೆ ತಂದ ಅಪನಗದೀಕರಣ ಯೋಜನೆಯು ಬರೀ ವಿಫಲವಲ್ಲ, ಮಹಾವೈಫಲ್ಯ ಕಂಡಿದೆ.

ಇದು ಮಹಾ ವೈಫಲ್ಯ ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗೆ ಉತ್ತರ ಸರಳ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಅಪನಗದೀಕರಣದಿಂದ 10,000 ಕೋಟಿ ಮೌಲ್ಯದ ನೋಟುಗಳು ಮಾತ್ರ ವಾಪಸಾಗಿಲ್ಲ; ಅಷ್ಟಾದರೂ ದೇಶಕ್ಕೆ ಲಾಭವಾಯಿತು ಎಂದುಕೊಳ್ಳೋಣ. ಅಂದರೆ, ಮೋದಿ ಅವರ ‘ಮಹಾಯಜ್ಞ’ದಿಂದ ದೇಶಕ್ಕಾದ ಲಾಭ 10,000 ಕೋಟಿ ರುಪಾಯಿ. ಆದರೆ, ಅಪನಗದೀಕರಣದಿಂದಾಗಿ ನೋಟು ಬದಲಾವಣೆ ಪ್ರಕ್ರಿಯೆ ಅಂದರೆ, ಹೊಸ ನೋಟು ಮುದ್ರಣ, ಸಾಗಾಣಿಕೆ, ವಿತರಣೆ ಮತ್ತಿತರ ಕಾರ್ಯಗಳಿಗೆ ಆಗಿರುವ ವೆಚ್ಚವೇ 21,000 ಕೋಟಿ. ಅಂದರೆ, ಮೋದಿ ಅವರ ಮಹಾಯಜ್ಞದಿಂದ 10,000 ಕೋಟಿ ರುಪಾಯಿ ಉಳಿತಾಯವಾಗಿದ್ದರೆ 21,000 ಕೋಟಿ ರುಪಾಯಿ ವೆಚ್ಚವಾಗಿದೆ.

ವೆಚ್ಚದ್ದು ಒಂದು ಭಾಗ. ಮತ್ತೊಂದು ಪ್ರಮುಖ ಭಾಗ ಎಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮಹಾಯಜ್ಞದಿಂದಾಗಿ ದೇಶದ ಆರ್ಥಿಕತೆ ದಿಕ್ಕೆಟ್ಟುಹೋಗಿತ್ತು. ಅಪನಗದೀಕರಣದಿಂದಾಗಿ ನೋಟುಗಳ ಕೊರತೆಯುಂಟಾಗಿ ದೇಶವ್ಯಾಪಿ ಬ್ಯಾಂಕುಗಳ ಮುಂದೆ ಸಾಲುಗಳಲ್ಲಿ ನಿಂತು ನಿತ್ರಾಣರಾಗಿ ನೂರಾರು ಜನರು ಸತ್ತಿದ್ದರು. ನೋಟು ಸಿಗದೆ ಚಿಕಿತ್ಸೆ ಕೊಡಿಸಲಾಗದೆ ಸತ್ತವರು, ದುಡ್ಡು ಇದ್ದರೂ ನೋಟು ಸಿಗದೆ ನಿಶ್ಚಿತವಾಗಿದ್ದ ಮಕ್ಕಳ ಮದುವೆ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡವರ ಲೆಕ್ಕವನ್ನು ಯಾರೂ ಇಟ್ಟಿಲ್ಲ.

ಅಪನಗದೀಕರಣದಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದು, ಜಿಡಿಪಿ ಶೇ.2ಕ್ಕೂ ಹೆಚ್ಚು ಕುಗ್ಗಿತ್ತು. ಅಂದರೆ, ಸುಮಾರು 2.50 ಲಕ್ಷ ಕೋಟಿ ರುಪಾಯಿಗಳಷ್ಟು ಆರ್ಥಿಕ ನಷ್ಟವಾಗಿತ್ತು. ಇದು ದೇಶಕ್ಕಾದ ನಷ್ಟವಾದರೆ, ವೈಯಕ್ತಿಕವಾಗಿ ಜನರು ಅನುಭವಿಸಿದ ನೂರು ದಿನಗಳ ಕಾಲದ ಮಹಾನೋವು ಮತ್ತು ಆ ನೋವಿನಿಂದಾದ ಘಾಸಿಯಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಪನಗದೀಕರಣ ಯೋಜನೆಯನ್ನು ಪೂರ್ವಸಿದ್ಥತೆ ಇಲ್ಲದೆ ಏಕಾಏಕಿ ಮಾಡಿದ್ದರಿಂದಾಗಿ ಇಪ್ಪತ್ತು ತಿಂಗಳು ಕಳೆದರೂ ದೇಶವ್ಯಾಪಿ ನೋಟುಗಳ ಕೊರತೆ ನೀಗಿಲ್ಲ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಇನ್ನೂ ಶೇ.25ರಷ್ಟು ಎಟಿಎಂಗಳ ಮರುಹೊಂದಾಣಿಕೆಯನ್ನೇ ಮಾಡಿಲ್ಲ. ಸಕಾಲದಲ್ಲಿ ನೋಟು ದಕ್ಕದೆ ಅನಿವಾರ್ಯವಾಗಿ ಜನರು ಡಿಜಿಟಲ್ ಪೇಮೆಂಟ್ ಮಾಡಿದರೆ ಅದನ್ನೇ ಮೋದಿ ಸರ್ಕಾರ ಹೆಗ್ಗಳಿಕೆ ಎಂದು ಕೊಳ್ಳುತ್ತಿದೆ.

ಅಪನಗದೀಕರಣದಿಂದಾಗಿ ನಿರುದ್ಯೋಗ ತಾರಕಕ್ಕೇರಿತು. ಇಡೀ ಪ್ರಕ್ರಿಯೆಯಲ್ಲಿ ಮೋದಿಯವರನ್ನು ಬೆಂಬಲಿಸುವ ಶ್ರೀಮಂತರಿಗೆ ಯಾವುದೇ ಕಷ್ಟವಾಗಲಿಲ್ಲ. ಅವರೆಲ್ಲರೂ ಈಗಾಗಲೇ ಡಿಜಿಟಲ್ ಪೇಮೆಂಟ್ ಬಳಕೆ ಮಾಡುತ್ತಿದ್ದರು. ಆದರೆ, ಕಷ್ಟ ಅನುಭವಿಸಿದ್ದು ಸದಾ ನಗದು ಬಳಸಿಯೇ ವಹಿವಾಟು ನಡೆಸುವ ಗ್ರಾಮೀಣ ಪ್ರದೇಶದ ಜನರು, ನಗರದ ಪ್ರದೇಶದ ಕೆಳ ಮತ್ತು ಅತ್ಯಂತ ಕೆಳವರ್ಗದ ಜನರು; ಕೃಷಿಕಾರ್ಮಿಕರು, ಕೂಲಿಕಾರ್ಮಿಕರು. ಸಣ್ಣ-ಸಣ್ಣ ವ್ಯಾಪಾರಿಗಳು.

ನೂರು ದಿನಗಳಲ್ಲಿ ಈ ತಾತ್ಕಾಲಿಕ ಸಮಸ್ಯೆ ನಿವಾರಣೆ ಆಗಿಬಿಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಲ್ಲದೆ, “ದೇಶದ ಜನರು ಅಪ್ರಾಮಾಣಿಕತೆ ಮತ್ತು ಕಷ್ಟದ ಆಯ್ಕೆಯ ಪ್ರಶ್ನೆ ಬಂದಾಗ ಅಪ್ರಾಮಾಣಿಕತೆ ಆಯ್ಕೆ ಮಾಡುವುದಿಲ್ಲ, ಕಷ್ಟವನ್ನೇ ಆಯ್ಕೆ ದೇಶದ ಪರವಾಗಿ ನಿಲ್ಲುತ್ತಾರೆ,” ಎಂದು ಹೇಳಿದ್ದರು. ಆಗ ಜನರು ಪ್ರಧಾನಿ ಮೋದಿ ಪರವಾಗಿ ನಿಂತರು. ಆದರೆ, ಸಂಕಷ್ಟಗಳು ಅಲ್ಪಕಾಲ ಎಂದುಕೊಂಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ‘ಮಹಾಯಜ್ಞ’ ಜಾರಿಗೆ ಬಂದು 20 ತಿಂಗಳು ಕಳೆದ ನಂತರವೂ ಬಡಜನರ ಸಂಕಷ್ಟ ಮುಗಿದಿಲ್ಲ. ಪ್ರಧಾನಿ ಮೋದಿ ಜನರ ನೆರವಿಗೆ ಬರುತ್ತಿಲ್ಲ.

ಮೋದಿ ಅವರ ‘ಮಹಾಯಜ್ಞ’ ಮಹಾ ವೈಫಲ್ಯ ಕಂಡಿರುವುದನ್ನು ಆರ್‌ಬಿಐ ಅಂಕಿ-ಅಂಶಗಳೇ ಸಾರಿ ಹೇಳುತ್ತಿವೆ. ನೋಟು ಚಲಾವಣೆ ರದ್ದಾದ ಶೇ.99.3ರಷ್ಟು ನೋಟುಗಳು ವಾಪಸಾಗಿವೆ ಅಂದರೆ, ಪ್ರಧಾನಿಗಳ ಕಪ್ಪುಹಣದ ಲೆಕ್ಕಾಚಾರವೇ ತಪ್ಪು ಎಂದಾಯಿತಲ್ಲವೇ? ಶೇ.25-30ರಷ್ಟು ಕಪ್ಪುಹಣ ಇದೆ ಎಂಬ ಕುರುಡು ಲೆಕ್ಕಾಚಾರಕ್ಕೆ ಯಾರು ಹೊಣೆ?

ನಕಲಿ ನೋಟುಗಳನ್ನು ನಿಗ್ರಹಿಸಲು ನೋಟು ಚಲಾವಣೆ ರದ್ದು ಮಾಡುತ್ತಿರುವುದಾಗಿ ಪ್ರಧಾನಿ ಹೇಳಿದ್ದರು. ನೋಟು ಚಲಾವಣೆ ರದ್ದಾದ ನಂತರವೂ 2017-18ರಲ್ಲಿ 5,22,783 ನಕಲಿ ನೋಟುಗಳು ಪತ್ತೆಯಾಗಿವೆ. ಇವುಗಳ ಮೊತ್ತವೇ 23 ಕೋಟಿ. 23 ಕೋಟಿ ನಕಲಿ ನೋಟು ಪತ್ತೆಹಚ್ಚಲು 2.5 ಲಕ್ಷ ಕೋಟಿ ರುಪಾಯಿ ಮೌಲ್ಯದ ಆರ್ಥಿಕ ನಷ್ಟ ಅನುಭವಿಸುವುದೇ?

ಇನ್ನೊಂದೆಡೆ, ನಗದು ಬಳಕೆ ಕಡಿಮೆ ಮಾಡುವ ಉದ್ದೇಶವೂ ಈಡೇರಿಲ್ಲ. ಆರ್‌ಬಿಐ ಅಂಕಿ-ಅಂಶಗಳ ಪ್ರಕಾರ, ಖರ್ಚು ಮಾಡಬಹುದಾದ ಒಟ್ಟು ರಾಷ್ಟ್ರೀಯ ಆದಾಯದ (ಜಿಎನ್ಡಿಐ) ಶೇ.2ರಷ್ಟು ಹೆಚ್ಚುವರಿಯಾಗಿ ನಗದು ಸೇರ್ಪಡೆಯಾಗಿದೆ.

ಇದನ್ನೂ ಓದಿ : ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ

ಕಪ್ಪುಹಣ ನಿಯಂತ್ರಿಸಿದರೆ ಭಯೋತ್ಪಾದಕರಿಗೆ ಸರಬರಾಜಾಗುತ್ತಿದ್ದ ಕಪ್ಪುಹಣ ಸ್ಥಗಿತಗೊಂಡು ಭಯೋತ್ಪಾದನೆಯೂ ನಿಗ್ರಹಿಸಲ್ಪಡುತ್ತದೆ ಎಂಬುದು ಮೋದಿ ಅವರ ಲೆಕ್ಕಾಚಾರವಾಗಿತ್ತು. ಈಗ ಕಪ್ಪುಹಣವನ್ನೇ ಪತ್ತೆ ಮಾಡಲಾಗಿಲ್ಲ; ಇನ್ನು, ಭಯೋತ್ಪಾದನೆ ನಿಗ್ರಹವೆಲ್ಲಿ ಆದೀತು? ಕೇಂದ್ರದ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಅವರ ಪ್ರಕಾರ, “ಕಾಶ್ಮೀರದಲ್ಲಿ ಕಲ್ಲು ತೂರಾಟ ಇನ್ನೂ ನಿಂತಿಲ್ಲ. ಕಾಶ್ಮೀರದ ಕಲ್ಲು ತೂರಾಟವು ಅಪನಗದೀಕರಣದ ವೈಫಲ್ಯದ ಪ್ರತೀಕದಂತೆಯೇ ಇದೆ.”

“ಯಾರೂ ಕಪ್ಪುಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಅಪನಗದೀಕರಣ ವೈಫಲ್ಯವಾಗಿದೆ,” ಎಂದು ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣಬ್ ಸೇನ್ ಹೇಳಿದ್ದಾರೆ. “ಚಲಾವಣೆ ರದ್ದಾದ ನೋಟುಗಳ ಪೈಕಿ ಶೇ.99.30ರಷ್ಟು ವಾಪಸಾಗಿರುವುದು ಅತ್ಯಂತ ನಿರೀಕ್ಷಿತ. ಅಪನಗದೀಕರಣ ಯೋಜನೆ ವಿಫಲವಾಗಿದೆ,” ಎಂದಿದ್ದಾರವರು.

ಅಪನಗದೀಕರಣ ಯೋಜನೆ ವೈಫಲ್ಯವಾಗಿದೆ. ದೇಶದ ಜನತೆಯ ಸಂಕಷ್ಟು ಇನ್ನೂ ಮುಗಿದಿಲ್ಲ. ದೇಶದ ಆರ್ಥಿಕತೆಗೆ 2.5 ಲಕ್ಷ ಕೋಟಿ ನಷ್ಟವಾಗಿದೆ. ಪ್ರಧಾನಿ ಮೋದಿ ಅವರ ‘ಮಹಾಯಜ್ಞ’ ವೈಫಲ್ಯವಾಗಿರುವುದರಿಂದ ಇದರ ನೈತಿಕ ಜವಾಬ್ದಾರಿಯನ್ನು ಖುದ್ದು ಪ್ರಧಾನಿ ಮೋದಿ ಅವರೇ ಹೊರುತ್ತಾರೆಯೇ? ಅದನ್ನು ಆರ್‌ಬಿಐ ಹೆಗಲಿಗೆ ಏರಿಸುತ್ತಾರೆಯೇ ಅಥವಾ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಅಪನಗದೀಕರಣ ಯೋಜನೆ ಯಶಸ್ವಿಯಾಗಿದೆ ಎಂದು ಮೊಂಡು ವಾದ ಮಂಡಿಸುತ್ತಾರೆಯೇ?

ನರೇಂದ್ರ ಮೋದಿ Narendra Modi Demonetisation ಕಪ್ಪು ಹಣ corruption ಭ್ರಷ್ಟಾಚಾರ black money ಅಪನಗದೀಕರಣ ನಕಲಿ ನೋಟು Fake Note
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?