ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಸಿಎಂ ಮಾತಿಗೆ ಕಿಮ್ಮತ್ತು ಕೊಡದ ಸಚಿವರು; ಲಕ್ಷಾಂತರ ರು. ಮೌಲ್ಯದ ಪೀಠೋಪಕರಣ ಖರೀದಿ!

ಸಮ್ಮಿಶ್ರ ಸರ್ಕಾರದ ಆರಂಭಕ್ಕೆ ಮಿತವ್ಯಯದ ಮಾತು ಕೇಳಿಬಂದಿತ್ತು. ಖುದ್ದು ಸಿಎಂ ಎಚ್‌ಡಿಕೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿಕೊಂಡಿದ್ದರು. ಆದರೆ, ಮಿತವ್ಯಯಕ್ಕೆ ಸೊಪ್ಪು ಹಾಕದ ಸಚಿವರುಗಳು, ಕಚೇರಿಗಳಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಪೀಠೋಪಕರಣ ಖರೀದಿಗೆ ಮುಂದಾಗಿದ್ದಾರೆ

ಮಹಾಂತೇಶ್ ಜಿ

ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅದರಂತೆ, ಅಧಿಕಾರಿಗಳ ಮಟ್ಟದಲ್ಲಿ ಹಂತಹಂತವಾಗಿ ಮಿತವ್ಯಯ ಸೂತ್ರ ಜಾರಿಯಾಗುತ್ತಿದೆ. ಆದರೆ, ಮುಖ್ಯಮಂತ್ರಿ ಅವರ ಸೂಚನೆಯನ್ನು ಕ್ಯಾಬಿನೆಟ್ ಸಚಿವರುಗಳೇ ಪಾಲಿಸುತ್ತಿಲ್ಲ!

ರೈತರ ಸಾಲಮನ್ನಾ ಮಾಡಿ ಬೊಕ್ಕಸಕ್ಕೆ ೫೩,೦೦೦ ಕೋಟಿ ರು. ಹೊರೆಬಿದ್ದಿರುವ ಹೊತ್ತಿನಲ್ಲೂ ಸಚಿವರ ದುಂದುವೆಚ್ಚಗಳಿಗೆ ಕಡಿವಾಣ ಬೀಳುತ್ತಿಲ್ಲ. ಅತ್ತ ಸಂಪನ್ಮೂಲ ಕ್ರೋಢೀಕರಣದತ್ತ ಮುಖ್ಯಮಂತ್ರಿ ಯೋಚಿಸುತ್ತಿದ್ದರೆ, ಇತ್ತ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಸಚಿವರ ಕೊಠಡಿಗಳಿಗೆ ಲಕ್ಷಾಂತರ ರುಪಾಯಿ ಮೌಲ್ಯದ ಹೊಸ ಸೋಫಾ, ಕುರ್ಚಿ ಮತ್ತಿತರ ಪೀಠೋಪಕರಣಗಳ ಖರೀದಿ ಪ್ರಕ್ರಿಯೆ ಭರ್ಜರಿಯಾಗಿ ಮುಂದುವರಿದಿದೆ.

ಕೆಲ ಸಚಿವರುಗಳಿಗೆ ಎರಡೆರಡು ಬಾರಿ ಪೀಠೋಪಕರಣಗಳು ಖರೀದಿಯಾಗಿವೆ. ಸಚಿವರ ಈ ಧೋರಣೆಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುಳಿದಿರುವ ಮಿತವ್ಯಯದ ಹಾದಿಗೆ ಧಕ್ಕೆಯಾಗುತ್ತಿದೆ. ಅಷ್ಟೇ ಅಲ್ಲ, ಸಾರ್ವಜನಿಕರ ಹಣದ ದುರುಪಯೋಗವಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

“ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಹಂಚಿಕೆಯಾಗಿರುವ ಕೊಠಡಿಗಳಿಗೆ ಸಚಿವರು ನಿರ್ದಿಷ್ಟವಾಗಿ ಸೂಚಿಸಿರುವ ಪೀಠೋಪಕರಣಗಳನ್ನೇ ಖರೀದಿಸಬೇಕು. ಕೊಠಡಿಗಳ ನವೀಕರಣವೂ ಇದಕ್ಕೆ ಹೊರತಾಗಿಲ್ಲ. ಟೆಂಡರ್‌ ಪ್ರಕ್ರಿಯೆ ನಡೆಸಲು ಅವಕಾಶವನ್ನೂ ನೀಡದೆಯೇ ಅತ್ಯಂತ ತುರ್ತು ಎಂಬ ಹೆಸರಿನಲ್ಲಿ ಖರೀದಿ ಮಾಡಬೇಕೆಂದು ಪತ್ರ ಬರೆಯುತ್ತಿದ್ದಾರೆ,” ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದರು.

ಇದನ್ನೂ ಓದಿ : ಅಧಿಕೃತ ಇಮೇಲ್‌ ಪಡೆಯಲು ಸಿಎಂ, ಡಿಸಿಎಂ, ಸಚಿವರು, ಶಾಸಕರಿಗೆ ಇಲ್ಲ ಆಸಕ್ತಿ!

ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌, ಜಿ ಟಿ ದೇವೇಗೌಡ, ಮನಗೂಳಿ, ರಾಜಶೇಖರ್‌ ಪಾಟೀಲ್‌, ವೆಂಕಟರಮಣಪ್ಪ, ಜಯಮಾಲಾ, ಯು ಟಿ ಖಾದರ್‌, ಬಂಡೆಪ್ಪ ಖಾಶೆಂಪೂರ, ಪುಟ್ಟರಂಗಶೆಟ್ಟಿ, ಶ್ರೀನಿವಾಸ್‌, ಜಮೀರ್‌ ಅಹ್ಮದ್‌ ಖಾನ್‌ ಅವರ ಕಚೇರಿಗಳಿಗೆ ಪೀಠೋಪಕರಣಗಳ ಖರೀದಿಗೆ ಒಟ್ಟು ೬೩ ಲಕ್ಷ ರು. ಖರ್ಚಾಗಿದೆ ಎಂದು ಗೊತ್ತಾಗಿದೆ.

ಅಲ್ಲದೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ ಜೆ ಜಾರ್ಜ್, ಸಾ ರಾ ಮಹೇಶ್, ಎನ್ ಮಹೇಶ್ ಮತ್ತು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರ ಕಚೇರಿಗಳಿಗೂ ಪೀಠೋಪಕರಣ ಖರೀದಿಗೆ ಪ್ರಸ್ತಾವನೆ ಸಲ್ಲಿಕೆಯಾಗಿವೆ. ಇದನ್ನು ಕೆಲ ಸಚಿವರ ಆಪ್ತ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ.

ಪೀಠೋಪಕರಣ ಖರೀದಿ ಮೊತ್ತದ ವಿವರ

 1. ಡಿ ಕೆ ಶಿವಕುಮಾರ್- ೧೩ ಲಕ್ಷ ರು.
 2. ಜಿ ಟಿ ದೇವೇಗೌಡ- ೩ ಲಕ್ಷ ರು.
 3. ಜಮೀರ್‌ ಅಹ್ಮದ್‌ ಖಾನ್‌- ೬ ಲಕ್ಷ ರು.
 4. ರಾಜಶೇಖರ್‌ ಪಾಟೀಲ್‌-೭ ಲಕ್ಷ ರು.
 5. ಜಯಮಾಲಾ- ೬ ಲಕ್ಷ ರು.
 6. ಯು ಟಿ ಖಾದರ್‌- ೪.೫೦ ಲಕ್ಷ ರು.
 7. ಬಂಡೆಪ್ಪ ಖಾಶೆಂಪೂರ-೧.೫೦ ಲಕ್ಷ ರು.
 8. ಪುಟ್ಟರಂಗಶೆಟ್ಟಿ- ೧೦ ಲಕ್ಷ ರು.
 9. ಶ್ರೀನಿವಾಸ್‌- ೭ ಲಕ್ಷ ರು.
 10. ಮನಗೂಳಿ- ೧ ಲಕ್ಷ ರು.
 11. ವೆಂಕಟರಮಣಪ್ಪ-೪ ಲಕ್ಷ ರು.

“ಈ ಹಿಂದೆ ಸಚಿವರಾಗಿದ್ದವರು ಲಕ್ಷಾಂತರ ರು. ವೆಚ್ಚದಲ್ಲಿ ಸರ್ಕಾರಿ ನಿವಾಸ ಮತ್ತು ಆಡಳಿತ ಕಚೇರಿಗಳನ್ನು ಸಜ್ಜುಗೊಳಿಸಿದ್ದರಲ್ಲದೆ, ಹೊಸ ಪೀಠೋಪಕರಣ ಖರೀದಿಸಲಾಗಿತ್ತು. ಆದರೆ, ಆ ಪೀಠೋಪಕರಣಗಳನ್ನು ಹೊಸ ಸಚಿವರುಗಳು ಬಳಸುವುದಿಲ್ಲ. ಹೊಸ ಸಚಿವರಿಗೆ ಹೊಸ ಸೋಫಾ, ಕುರ್ಚಿಯೇ ಬೇಕು ಎಂಬ ಬೇಡಿಕೆ ಮಂಡಿಸುತ್ತಾರೆ. ಆಪ್ತ ಕಾರ್ಯದರ್ಶಿ ಕಚೇರಿಗೆ ಪೀಠೋಪಕರಣವೂ ಇದರಲ್ಲಿ ಒಳಗೊಂಡಿರುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿನ ಸಚಿವರುಗಳ ಪೈಕಿ ಬಹುತೇಕರು ಈ ಹಿಂದಿನ ಸರ್ಕಾರದಲ್ಲಿಯೂ ಸಚಿವರಾಗಿದ್ದರು. ಆಗಲೂ ಅವರ ಕಚೇರಿಗಳಿಗೆ ಹೊಸದಾಗಿ ಪೀಠೋಪಕರಣ ಖರೀದಿಸಲಾಗಿತ್ತು. ಅವರಲ್ಲಿ ಕೆಲವು ಸಚಿವರು ಹಿಂದಿನ ಕೊಠಡಿಗಳನ್ನೇ ಹೊಂದಿದ್ದರೂ ಪುನಃ ಹೊಸದಾಗಿ ಪೀಠೋಪಕರಣ ಖರೀದಿಗೆ ಪತ್ರ ಬರೆದಿದ್ದಾರೆ,” ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ವಿಧಾನಸೌಧ, ವಿಕಾಸಸೌಧ ಕಟ್ಟಡದಲ್ಲಿರುವ ಕಚೇರಿಗಳಷ್ಟೇ ಅಲ್ಲದೆ, ಗೃಹ ಕಚೇರಿಗಳಿಗೆ ಪೀಠೋಪಕರಣ, ಗೃಹಪಯೋಗಿ ಉಪಕರಣಗಳ ಖರೀದಿಗೆ ಸಚಿವರಿಗೆ ತಲಾ ೧೦ ಲಕ್ಷ ರು. ಮೀಸಲಿರಿಸಲಾಗಿದೆ. ಈ ಹಣವನ್ನೂ ಎಲ್ಲ ಸಚಿವರುಗಳೂ ಚಾಚೂತಪ್ಪದೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹರಾಜು ನಡೆದಿಲ್ಲ: ಸಚಿವರು ಬಳಸಿರುವ ಪೀಠೋಪಕರಣ ಹರಾಜು ಹಾಕುವ ಮೂಲಕ ಮಾರಾಟ ಮಾಡಬೇಕು. ವಿಪರ್ಯಾಸ ಎಂದರೆ, ಈ ಹಿಂದಿನ ಸರ್ಕಾರಗಳಲ್ಲಿ ಸಚಿವರು ಬಳಸಿದ್ದ ಪೀಠೋಪಕರಣಗಳ ಹರಾಜು ಪ್ರಕ್ರಿಯೆಯೇ ನಡೆದಿಲ್ಲ. ಏಕೆಂದರೆ, ಹರಾಜು ಪ್ರಕ್ರಿಯೆ ನಡೆಸಲು ಪ್ಯಾನ್ ನಂಬರ್, ಜಿಎಸ್‌ಟಿ ನಂಬರ್‌ ಪಡೆದುಕೊಳ್ಳಬೇಕು. ಇದಾದ ನಂತರ ಅನ್‌ಲೈನ್‌ ಮೂಲಕ ಹರಾಜು ಪ್ರಕ್ರಿಯೆ ನಡೆಸಬೇಕು. ಈವರೆಗೂ ರಾಜ್ಯ ಸರ್ಕಾರ ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹೀಗಾಗಿ, “ಹಳೆಯ ಪೀಠೋಪಕರಣಗಳು ಉಗ್ರಾಣ ಕೊಠಡಿಯಲ್ಲಿ ತುಂಬಿತುಳುಕುತ್ತಿವೆಯಲ್ಲದೆ, ದೀರ್ಘ ವ‍ರ್ಷಗಳಿಂದಲೂ ಕೊಠಡಿಯಲ್ಲೇ ಇರುವುದರಿಂದ ಬಳಸಲು ಯೋಗ್ಯವಾಗಿಲ್ಲ,” ಎನ್ನುತ್ತಾರೆ ಅಧಿಕಾರಿಯೊಬ್ಬರು.

ಬಿ ಎಸ್ ಯಡಿಯೂರಪ್ಪ ಕೆ ಜೆ ಜಾರ್ಜ್ K J George ಡಿ ಕೆ ಶಿವಕುಮಾರ್ D K Shivakumar Chief Secretary ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ T M Vijaya Bhaskar Zameer Ahmed Khan ಜಿ ಪರಮೇಶ್ವರ ಜಮೀರ್ ಅಹ್ಮದ್ ಖಾನ್ B S Yediyurappa N Mahesh Deputy CM G Parameshwara ಶಿಕ್ಷಣ ಸಚಿವ ಎನ್ ಮಹೇಶ್ ಬಂಡೆಪ್ಪ ಖಾಶೆಂಪುರ Bandeppa Kashempur Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy ಉಸ್ತುವಾರಿ ಸಚಿವ ಸಾ ರಾ ಮಹೇಶ್ S R Mahesh ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು