ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಇನ್ಫೋಸಿಸ್‌ಗೆ ಸರ್ಕಾರಿ ಹಳ್ಳ ಮಂಜೂರು: ಅಡ್ಡಿಯಾಗಲಿದೆಯೇ ಭೂಕಂದಾಯ ಕಾಯ್ದೆ?

ಇನ್ಫೋಸಿಸ್‌ಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡುವ ೧೨ ವರ್ಷದ ಹಿಂದಿನ ಕಡತಕ್ಕೆ ವೇಗ ದೊರೆತಿರುವುದನ್ನು ‘ದಿ ಸ್ಟೇಟ್’ ವರದಿ ಮಾಡಿತ್ತು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮುಂದುವರಿದ ಸಭೆ ಆ.೨೫ರಂದು ನಡೆದಿದ್ದು, ಮಂಜೂರು ವಿಚಾರದಲ್ಲಿ ಜಿಜ್ಞಾಸೆ ಮುಂದುವರಿದಿದೆ

ಮಹಾಂತೇಶ್ ಜಿ

ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥೆಗೆ ಆನೇಕಲ್ ತಾಲೂಕಿನ ವಿವಿಧೆಡೆ ಸರ್ಕಾರಿ ಕುಂಟೆ, ಹದ್ದುಗಿಡದ ಹಳ್ಳವೂ ಸೇರಿದಂತೆ ಖರಾಬು ಹಾಗೂ ಸರ್ಕಾರಿ ಜಮೀನು ಮಂಜೂರು ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಭೂಕಂದಾಯ ಕಾಯ್ದೆ ತೊಡಕಾಗುವ ಸಾಧ್ಯತೆಗಳಿವೆ. ಕಂದಾಯ ದಾಖಲಾತಿಗಳಲ್ಲಿ ಬರುವ ಸರ್ಕಾರಿ ಕೆರೆ, ಕುಂಟೆ ಮತ್ತು ಹಳ್ಳಗಳು ಸೇರಿದಂತೆ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಹಕ್ಕಿನಿಂದ ಅಥವಾ ಸಾರ್ವಜನಿಕ ನಿರ್ವಹಣೆಯಿಂದ ಹೊರತುಪಡಿಸಲು ಕಾಯ್ದೆಯಲ್ಲಿ ಅವಕಾಶಗಳನ್ನು ಕಲ್ಪಿಸದಿರುವುದೇ ಇದಕ್ಕೆ ಕಾರಣ.

ಇನ್ಫೋಸಿಸ್‌ ಲಿಮಿಟೆಡ್,‌ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ, ಬಿಲ್ಲಾಪುರ, ಬೂರುಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು ೩೫೦ ಎಕರೆಯನ್ನು ೨೦೦೩-೦೪, ೨೦೦೪-೦೫ರಲ್ಲಿ ವಿವಿಧ ದಿನಾಂಕಗಳಂದು ಖರೀದಿಸಿತ್ತು. ಈ ಜಮೀನುಗಳ ಮಧ್ಯದಲ್ಲಿ ಸರ್ಕಾರಿ ಕುಂಟೆ, ಹಳ್ಳ ಮತ್ತು ಹದ್ದುಗಿಡದ ಹಳ್ಳದ ವಿಸ್ತೀರ್ಣ ೬ ಎಕರೆ ೨೯ ಗುಂಟೆ ಪ್ರದೇಶವೂ ಸೇರಿದೆ. ಈ ವಿಚಾರವನ್ನು ಇನ್ಫೋಸಿಸ್‌ ಪ್ರಾದೇಶಿಕ ವ್ಯವಸ್ಥಾಪಕ ಪಿ ವೆಂಕಟೇಶ್‌ ನಾಯಕ್‌ ಅವರು ೨೦೧೮ರ ಆಗಸ್ಟ್ ೨೩ರಂದು ಸರ್ಕಾರಕ್ಕೆ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ.

ಇನ್ಫೋಸಿಸ್‌ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್‌ ನಾಯಕ್‌ ಬರೆದಿರುವ ಪತ್ರದ ಪ್ರತಿ

ಕುಂಟೆ, ಹಳ್ಳ, ಹದ್ದುಗಿಡದ ಹಳ್ಳವನ್ನು ಮಂಜೂರು ಮಾಡುವ ಸಂಬಂಧ ಕಂದಾಯ ಅಧಿಕಾರಿಗಳು ಕರ್ನಾಟಕ ಭೂಕಂದಾಯ ಕಾಯ್ದೆಯನ್ನು ಪಾಲಿಸಬೇಕೇ ಬೇಡವೇ ಎಂಬ ಬಗ್ಗೆ ಚಿಂತಿತರಾಗಿದ್ದಾರೆ. ಅಲ್ಲದೆ, ಈ ಪ್ರದೇಶಗಳನ್ನು ಸಾರ್ವಜನಿಕ ಹಕ್ಕಿನಿಂದ ಹೊರತುಪಡಿಸಬೇಕೆಂದು ಸಂಸ್ಥೆ ೨೦೦೫ರಿಂದಲೂ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳು ನೆನೆಗುದಿಗೆ ಬೀಳಲು ಈ ಕಾಯ್ದೆಯೇ ಕಾರಣ ಎನ್ನಲಾಗಿದೆ.

ಖಾಸಗಿ ಕಂಪನಿ, ಉದ್ದಿಮೆಗಳು, ಸಂಘಸಂಸ್ಥೆಗಳು ಕ್ರಯಕ್ಕೆ ಪಡೆದಿರುವ ಹಾಗೂ ಹಿಡುವಳಿ ಜಮೀನುಗಳ ಮಧ್ಯದಲ್ಲಿ ಬರುವಂತಹ ಸರ್ಕಾರಿ ಕಟ್ಟೆ, ಕುಂಟೆ, ಹಳ್ಳಗಳಂತಹ ಜಲಮೂಲ ಖರಾಬು ಪ್ರದೇಶಗಳನ್ನು ಮಂಜೂರು ಮಾಡುವ ಪ್ರಸ್ತಾವನೆಗಳ ಕುರಿತು ಕಂದಾಯ ಇಲಾಖೆ ೨೦೧೮ರ ಜೂನ್‌ ೧೪ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿಯೂ ಭೂಕಂದಾಯ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸುತ್ತೋಲೆ ಮುನ್ನೆಲೆಗೆ ಬಂದಿದೆ.

“ಕರ್ನಾಟಕ ಭೂಕಂದಾಯ ಕಾಯ್ದೆ ಕಲಂ ೬೮(೧)ರಲ್ಲಿ ಸರ್ಕಾರಿ ಕಟ್ಟೆ, ಕುಂಟೆ ಮತ್ತು ಹದ್ದುಗಿಡದ ಹಳ್ಳಗಳಂತಹ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಹಕ್ಕಿನಿಂದ ಹೊರಗಿಡಲು ಅವಕಾಶವಿರುವುದಿಲ್ಲ. ಹೀಗಾಗಿ, ಜಲಮೂಲ ಪ್ರದೇಶಗಳನ್ನು ಒಳಗೊಂಡ ಪ್ರಸ್ತಾವನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಬಾರದು,” ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ಅವರು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದರು. ಸದ್ಯ ರಮಣ ರೆಡ್ಡಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಇ ವಿ ರಮಣ ರೆಡ್ಡಿ ಅವರು ಹೊರಡಿಸಿದ್ದ ಸುತ್ತೋಲೆಯ ಪ್ರತಿ
ಇದನ್ನೂ ಓದಿ : ಇನ್ಫೋಸಿಸ್‌ಗೆ ಗೋಮಾಳ, ಸರ್ಕಾರಿ ಜಮೀನು; 12 ವರ್ಷ ಹಿಂದಿನ ಪ್ರಸ್ತಾವನೆಗೆ ಕ್ಷಿಪ್ರವೇಗ!

ಅಲ್ಲದೆ, ಇನ್ಫೋಸಿಸ್‌ ಖರೀದಿಸಿರುವ ಜಮೀನುಗಳ ಮಧ್ಯೆ ಇರುವ ಕುಂಟೆ, ಹದ್ದುಗಿಡದ ಹಳ್ಳದ ಕುರಿತು ಬೆಂಗಳೂರು ನಗರ ಜಿಲ್ಲೆಯ ಭೂದಾಖಲೆಗಳ ಜಂಟಿ ನಿರ್ದೇಶಕರು ಸ್ಥಳ ತನಿಖೆ ವರದಿ ಸಲ್ಲಿಸಿದ್ದಾರೆ. “ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೮೭, ೩೮೮, ೩೮೯, ೩೯೧, ೩೯೨, ೩೯೪, ೩೯೫, ೪೨೩, ೪೨೪, ೪೨೫ರ ಮಧ್ಯೆ ಹದ್ದುಗಿಡದ ಹಳ್ಳ ಪ್ರದೇಶವಾಗಿದೆ. ಇದರ ಒಟ್ಟು ಒಟ್ಟು ವಿಸ್ತೀರ್ಣ ೨ ಎಕರೆ ೩೫ ಗುಂಟೆ. ಈ ಹಳ್ಳ ಪ್ರದೇಶವು ಇನ್ಫೋಸಿಸ್‌ ಸಂಸ್ಥೆಯ ವ್ಯಾಪ್ತಿಯೊಳಗೆ ಇದ್ದು, ಕೆರೆಗೆ ನೀರು ಹರಿಯುವ ಹಳ್ಳ ಪ್ರದೇಶವಾಗಿರುತ್ತದೆ,” ಎಂದು ಭೂದಾಖಲೆಗಳ ಜಂಟಿ ನಿರ್ದೇಶಕರು ವರದಿ ನೀಡಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿಗಳು ಉಲ್ಲೇಖಿಸಿರುವ ಭೂದಾಖಲೆಗಳ ಜಂಟಿ ನಿರ್ದೇಶಕರ ವರದಿ

ಇದೇ ವರದಿ ಆಧರಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ ಶಂಕರ್ ಅವರು, “ಕರ್ನಾಟಕ ಭೂಕಂದಾಯ ಕಾಯ್ದೆ ೧೯೬೪ರ ಕಲಂ ೬೮, ೬೯ ಹಾಗೂ ಕರ್ನಾಟಕ ಭೂಕಂದಾಯ ಕಾಯ್ದೆ ನಿಯಮ ೯೪, ೯೫, ೯೬, ೯೭(೪)ರ ಅಡಿ ಮತ್ತು ಕರ್ನಾಟಕ ಭೂಕಂದಾಯ ನಿಯಮಗಳು ೧೯೬೯ರ ನಿಯಮ ೨೮ರ ಅಡಿ ಕ್ರಮ ವಹಿಸಬೇಕು,” ಎಂದು ಸರ್ಕಾರಕ್ಕೆ ೨೦೧೬ರ ನವೆಂಬರ್‌ ೧೧ರಂದೇ ವರದಿ ಸಲ್ಲಿಸಿದ್ದಾರೆ.

ಆದರೆ, ಬೆಂಗಳೂರು ನಗರದ ಈಗಿನ ಜಿಲ್ಲಾಧಿಕಾರಿ ವಿಜಯಶಂಕರ್‌ ಅವರು ೨೦೧೮ರ ಆಗಸ್ಟ್‌ ೨೪ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ವರದಿ ಭಿನ್ನತೆಯಿಂದ ಕೂಡಿದೆ. “ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸರ್ಕಾರಿ ಹಳ್ಳ ಮತ್ತು ಸಣ್ಣ ಕಾಲುವೆಗಳು ಭೌತಿಕ ಸ್ಥಿತಿ ಉಳಿಸಿಕೊಂಡಿಲ್ಲ,” ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಎರಡೂ ವರದಿಗಳ ಪೈಕಿ ಯಾವುದನ್ನು ಪರಿಗಣಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ತಲೆಬಿಸಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯ ಪ್ರತಿ

ಕಂದಾಯ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಮುಂದಿಟ್ಟುಕೊಂಡಿರುವ ಅಧಿಕಾರಿಗಳು, ಇನ್ಫೋಸಿಸ್‌ನ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಜಲಮೂಲಗಳಿಗೆ ಸಂಬಂಧಿಸಿದ ಯಾವುದೇ ಜಮೀನುಗಳು ತಮ್ಮ ಸ್ವರೂಪ ಕಳೆದುಕೊಂಡಿದೆ ಎಂಬ ಕಾರಣಕ್ಕಾಗಿ ಯಾವುದೇ ಸಾರ್ವಜನಿಕ, ಖಾಸಗಿ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯಗಳೂ ಸಂಬಂಧಿಸಿದ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಿವೆ,” ಎಂಬ ಅಂಶವನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಇ ವಿ ರಮಣ ರೆಡ್ಡಿ ಅವರು ಹೊರಡಿಸಿದ್ದ ಸುತ್ತೋಲೆಯಲ್ಲಿ ಪ್ರಧಾನವಾಗಿ ಉಲ್ಲೇಖಿಸಲಾಗಿತ್ತು. ಹೀಗಾಗಿ, ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಕರ್ನಾಟಕ ಭೂಕಂದಾಯ ಕಾಯ್ದೆ-೧೯೬೪ರ ಕಲಂ ೬೮(೧)ರ ನಿಯಮವನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಬೇರೆ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಸರ್ಕಾರಿ ಕುಂಟೆ, ಹಳ್ಳ, ಮುಂತಾದ ಜಮೀನುಗಳ ಮಂಜೂರಾತಿಗಾಗಿ ಪ್ರಸ್ತಾವನೆ ಕಳಿಸುವ ಮುನ್ನ ಅಂತಹ ಪ್ರದೇಶಗಳನ್ನು ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಬೃಹತ್‌ ನೀರಾವರಿ, ಸಣ್ಣ ನೀರಾವರಿ, ಮುಖ್ಯ ಎಂಜಿನಿಯರ್‌ಗಳ ಜೊತೆ ಸ್ಥಳ ಪರಿಶೀಲನೆ ಮಾಡಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ೨೦೦೦ದ ಏಪ್ರಿಲ್ ೭ರಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಆದೇಶ ಪಾಲಿಸಲು ೨೦೦೦ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನೂ ಸರ್ಕಾರ ಈಗಾಗಲೇ ಹಿಂಪಡೆದಿದೆ.

ಹಾಗೆಯೇ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ ೨೦೧೪ರ ಪ್ರಕರಣ(ಎಚ್‌)ದಲ್ಲಿ ಕೆರೆ, ಕುಂಟೆ ಬಗ್ಗೆಯೂ ಸ್ಪಷ್ಟವಾಗಿ ಹೇಳಲಾಗಿದೆ. “ಸರೋವರ ಎಂದರೆ ಅದರಲ್ಲಿ ನೀರು ಇರಲಿ ಅಥವಾ ಇಲ್ಲದಿರಲಿ, ಕಂದಾಯ ದಾಖಲೆಗಳಲ್ಲಿ ಹೇಳಲಾದ ಸರ್ಕಾರಿ ಕೆರೆ, ಖರಾಬು, ಕೆರೆ, ಕುಂಟೆ, ಕಟ್ಟೆ ಅಥವಾ ಯಾವುದೇ ಇತರ ಹೆಸರಿನಿಂದ ಕರೆಯುವ ಒಳನಾಡು ಜಲಮೂಲ ಮತ್ತು ಅದು ಹೊರವಲಯ ಜಲಾನಯನ ಪ್ರದೇಶಗಳನ್ನು ರಾಜಕಾಲುವೆ ಮುಖ್ಯ ಒಳಹರಿವು ಒಡ್ಡುಗಳನ್ನು, ಅಡ್ಡ ಕಟ್ಟೆಗಳನ್ನು, ಕುಂಟೆಗಳನ್ನು, ಕಾಲುವೆಗಳ ಹೊರ ಹರಿವುಗಳನ್ನು ಹಾಗೂ ಹೊರಗೆ ಹರಿದುಹೋಗುವ ಮುಖ್ಯ ಹರಿವಿನ ನೀರು ಕಾಲುವೆಗಳನ್ನು ಒಳಗೊಳ್ಳುತ್ತದೆ,” ಎಂದು ಸ್ಪಷ್ಟಪಡಿಸಲಾಗಿದೆ.

ಸರೋವರ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಪ್ರತಿ

ಹೀಗಾಗಿ, ಕುಂಟೆ, ಹಳ್ಳ, ಹದ್ದುಗಿಡದ ಹಳ್ಳ ಪ್ರದೇಶವನ್ನು ಇನ್ಫೋಸಿಸ್‌ಗೆ ಹೇಗೆ ಮಂಜೂರು ಮಾಡುವುದು ಎಂಬ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆಯಾಗಿರುವ ಸುಧಾಮೂರ್ತಿ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆರ್‌.ವಿ.ದೇಶಪಾಂಡೆ infosys ಕಂದಾಯ ಸಚಿವ revenue minister ಬಿ ಎಸ್ ಯಡಿಯೂರಪ್ಪ ಡಿ ವಿ ಸದಾನಂದಗೌಡ R Ashok Sudhamurthy ಸುಧಾಮೂರ್ತಿ Ratna Prabha K ರತ್ನಪ್ರಭಾ ಕೆ ಕಂದಾಯ ಇಲಾಖೆ ಇನ್ಪೊಸಿಸ್ Jagadeesh Shettar ಟಿ ಎಂ ವಿಜಯಭಾಸ್ಕರ್ T M Vijaya Bhaskar Basavaraj Horatti ಬಸವರಾಜ ಹೊರಟ್ಟಿ D V Sadananda Gowda R V Deshpande G Parameshwara ಜಿ ಪರಮೇಶ್ವರ K R Ramesh Kumar ಕೆ ಆರ್ ರಮೇಶ್ ಕುಮಾರ್ ಜಗದೀಶ ಶೆಟ್ಟರ್ ಆರ್‌ ಅಶೋಕ್ B S Yediyurappa Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು