ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ರಘುರಾಂ ರಾಜನ್ ಹಾದಿಯಲ್ಲಿ ನಡೆಯಲು ಊರ್ಜಿತ್ ಪಟೇಲ್ ನಿರ್ಧರಿಸಿದ್ದು ಏಕೆ? 

ಊರ್ಜಿತ್ ಪಟೇಲ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೇರಿ ಎರಡು ವರ್ಷ. ಆರಂಭದಲ್ಲಿ ನರೇಂದ್ರ ಮೋದಿ ಸರ್ಕಾರದ ಅಪನಗದೀಕರಣ ಯೋಜನೆಗೆ ಕೈಜೋಡಿಸಿದ್ದ ಊರ್ಜಿತ್, ಈಗ ಸರ್ಕಾರದ ಅಣತಿ ಧಿಕ್ಕರಿಸುವ ಮತ್ತು ಸ್ವತಂತ್ರ ನಿರ್ಧಾರ ಕೈಗೊಳ್ಳುವಷ್ಟು ಪ್ರಬುದ್ಧರಾಗಿ ಹೊರಹೊಮ್ಮಿದ್ದಾರೆ!

ರೇಣುಕಾಪ್ರಸಾದ್ ಹಾಡ್ಯ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅಧಿಕಾರ ಗ್ರಹಿಸಿ ಸೆ.4ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಅವರಿಗಿಂತ ಮೊದಲು ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರ ಅಧಿಕಾರವನ್ನು ಎರಡನೇ ಅವಧಿಗೆ ವಿಸ್ತರಿಸಲಿಲ್ಲ ಎಂಬುದು ದೊಡ್ಡ ವಿವಾದವಾಗಿತ್ತು. ಅದುವರೆಗೆ ಸುಮಾರು ಎರಡೂವರೆ ದಶಕಗಳಲ್ಲಿ ಎಲ್ಲ ಗವರ್ನರ್‌ಗಳೂ ಮೊದಲ ಮೂರು ವರ್ಷದ ಅವಧಿ ಜೊತೆಗೆ ಮತ್ತೆರಡು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದರು. ಅದೊಂದು ಅಲಿಖಿತ ನಿಯಮವೇ ಆಗಿಬಿಟ್ಟಿತ್ತು. ದೇಶದ ಆರ್ಥಿಕ ಸ್ಥಿತಿಗತಿಗಳನ್ನು ಅರಿತು ಸುಸ್ಥಿರ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಗವರ್ನರ್‌ಗಳಿಗೆ ಐದು ವರ್ಷಗಳ ಅವಧಿ ಅತ್ಯಗತ್ಯ ಎಂಬುದು ಆಡಳಿತಾತ್ಮಕ ಕಾರಣವಾಗಿತ್ತೇ ಹೊರತು ರಾಜಕೀಯ ಕಾರಣವಾಗಿರಲಿಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ರಘುರಾಂ ರಾಜನ್ ಅವರನ್ನು ಎನ್‌ಡಿಎ ಸರ್ಕಾರ ಮೊದಲ ಮೂರು ವರ್ಷಗಳ ಅವಧಿ ಮುಗಿದ ನಂತರ ಎರಡು ವರ್ಷಗಳ ಅವಧಿಗೆ ಮರುನೇಮಕ ಮಾಡಲಿಲ್ಲ. ಅದಕ್ಕೆ ಮುಖ್ಯ ಕಾರಣ ಎಂದರೆ, ಎನ್‌ಡಿಎ ಸರ್ಕಾರದ ಕೆಲವು ಸಲಹೆ, ಸೂಚನೆಗಳನ್ನು ರಘುರಾಂ ರಾಜನ್ ಸೌಜನ್ಯದಿಂದಲೇ ತಳ್ಳಿಹಾಕಿದ್ದರು. ಮುಖ್ಯವಾಗಿ, ಬಡ್ಡಿದರ ಇಳಿಸುವ ಕುರಿತಂತೆ ಹಣಕಾಸು ಇಲಾಖೆ ಮತ್ತು ಆರ್‌ಬಿಐ ನಡುವೆ ಸದಾ ಶೀತಲ ಸಮರ ನಡೆಯುತ್ತಿತ್ತು. ಒಂದು ಹಂತದಲ್ಲಿ ಇದು ಅರುಣ್ ಜೇಟ್ಲಿ ಮತ್ತು ರಘುರಾಂ ರಾಜನ್ ಅವರ ನಡುವಿನ ಶೀತಲ ಸಮರವಾಗಿತ್ತು.

ರಘುರಾಂ ರಾಜನ್ ಅವರಿಗೆ ಎರಡನೇ ಅವಧಿಗೆ ಮುಂದುವರಿಸಲು ನಿರಾಕರಿಸಿದ್ದೇಕೆ ಎಂಬುದು 2016ರ ನ.8ರಂದು ರಾತ್ರಿ 8 ಗಂಟೆಗೆ ಇಡೀ ದೇಶಕ್ಕೆ ಗೊತ್ತಾಗಿತ್ತು. ಒಂದು ವೇಳೆ, ರಾಜನ್ ಗವರ್ನರ್ ಆಗಿ ಮುಂದುವರಿದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಿನ ಮಹಾತ್ವಾಕಾಂಕ್ಷಿ ಮತ್ತು ಈಗಿನ ಮಹಾವಿಫಲದ ಯೋಜನೆಯಾಗಿರುವ ಅಪನಗದೀಕರಣ ಜಾರಿಗೆ ಅವಕಾಶ ನೀಡುತ್ತಿರಲಿಲ್ಲ. ಕೇಂದ್ರ ಸರ್ಕಾರ ಆರ್‌ಬಿಐ ಮೇಲೆ ತೀವ್ರ ಒತ್ತಡ ಹೇರಲು ಆಗುತ್ತಿರಲಿಲ್ಲ. ಒಂದು ವೇಳೆ, ಆರ್‌ಬಿಐ ಮೇಲೆ ಮೋದಿ ಸರ್ಕಾರ ಒತ್ತಡ ಹೇರಿದ್ದರೂ ರಾಜನ್ ತಮ್ಮ ಹುದ್ದೆ ತೊರೆಯುತ್ತಿದ್ದರೇ ಹೊರತು ಅಪನಗದೀಕರಣ ಜಾರಿ ಮಾಡುತ್ತಿರಲಿಲ್ಲ. ರಾಜನ್ ಹುದ್ದೆಯಲ್ಲಿದ್ದು ಅಪನಗದೀಕರಣ ಜಾರಿ ಮಾಡದೆ ಹುದ್ದೆ ತೊರೆದು ಹೋಗಿದ್ದರೆ ಕೇಂದ್ರ ಸರ್ಕಾರಕ್ಕೆ ಭಾರಿ ಮುಖಭಂಗ ಆಗುತ್ತಿತ್ತು. ಅದೆಲ್ಲವನ್ನು ತಪ್ಪಿಸಿಕೊಳ್ಳಲು ಮೋದಿ ಸರ್ಕಾರ ಗುಜರಾತ್ ಮೂಲದ ಊರ್ಜಿತ್ ಪಟೇಲ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಿದ್ದು ಈಗ ಇತಿಹಾಸ.

ಅಪನಗದೀಕರಣ ಜಾರಿ ಮತ್ತು ಅದಾದ ನಂತರ ಕೇಂದ್ರ ಸರ್ಕಾರ ಕೈಗೊಂಡ ಅನಿಶ್ಚಿತ ನಿರ್ಧಾರ, ನಿಲುವುಗಳಿಂದಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಮೋದಿ ಸರ್ಕಾರದ ‘ರಬ್ಬರ್ ಸ್ಟಾಂಪ್’ ಎಂದೇ ಬಣ್ಣಿಸಲಾಗುತ್ತಿತ್ತು. ರಾಜನ್ ಅವರಂತೆ ನೇರ ಮತ್ತು ಕಠಿಣ ಮಾತುಗಳನ್ನಾಡದ ಊರ್ಜಿತ್ ಅವರ ಸೌಮ್ಯ ನಡವಳಿಕೆಯೂ ಇದಕ್ಕೆ ಪುಷ್ಟಿ ಕೊಟ್ಟಿತ್ತು.

ಅಪನಗದೀಕರಣ ಜಾರಿಗೆ ಒಪ್ಪಿಗೆ ನೀಡಿದ್ದರ ಹೊರತಾಗಿಯೂ ಅವರು, ರಾಜನ್ ಅವರ ನೀತಿಗಳನ್ನು ಮುಂದುವರಿಸಿಕೊಂಡು ಬಂದರು; ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಶುದ್ಧೀಕರಣ ಪ್ರಮುಖವಾದುದು. 2018ರ ಫೆ.12ರಂದು ಒತ್ತಡದಲ್ಲಿರುವ ಸಾಲಗಳು ನಿಷ್ಕ್ರಿಯ ಸಾಲಗಳಾಗಿ ಪರಿವರ್ತನೆಯಾಗುವ ಮುನ್ನ ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಲುವಾಗಿ ಕೆಲವು ನಿಯಮಗಳನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಿದರು.

ನಂತರದಲ್ಲಿ ಫೆ.12ರ ಅಧಿಸೂಚನೆಯ ಕೆಲವು ನಿಯಮಗಳನ್ನು ಬದಲಿಸುವಂತೆ ಹಣಕಾಸು ಸಚಿವಾಲಯ ನೀಡಿದ ಮನವಿಪೂರ್ವಕ ಸೂಚನೆಯನ್ನು ತಳ್ಳಿಹಾಕಿ ಸರ್ಕಾರದ ವಿರುದ್ಧ ಮೌನ ಬಂಡಾಯ ಸಾರಿದ್ದರು. ಊರ್ಜಿತ್ ಪಟೇಲ್ ನಿಜವಾಗಿ ದನಿ ಎತ್ತಿದ್ದು 14,000 ಕೋಟಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ನಂತರ.

ವಿತ್ತ ಸಚಿವ ಅರುಣ್ ಜೇಟ್ಲಿ, “ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಗಳು ಕಾರಣ,” ಎಂದು ಹೇಳಿದ್ದರು. ಇದು ಊರ್ಜಿತ್ ಪಟೇಲ್ ಅವರನ್ನು ಕೆರಳಿಸಿತ್ತು. ಮಾ.14ರಂದು ಗುಜರಾತ್‌ನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣವನ್ನು ಪ್ರಸ್ತಾಪಿಸಿ, “ಈ ಹಗರಣದಲ್ಲಿ ಆರ್‌ಬಿಐ ಪಾತ್ರವಿಲ್ಲ. ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಆರ್‌ಬಿಐಗೆ ನಿಯಂತ್ರಣ ಇಲ್ಲ. ನಿಯಂತ್ರಣ ಇರುವುದು ವಿತ್ತ ಸಚಿವಾಲಯಕ್ಕೆ,” ಎಂದು ಅರುಣ್ ಜೇಟ್ಲಿ ಅವರಿಗೆ ತಿರುಗೇಟು ನೀಡಿದ್ದರು.

ಅದಾದ ನಂತರ, ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡದಿದ್ದರೂ ವಿತ್ತ ಸಚಿವಾಲಯದ ಉನ್ನತಾಧಿಕಾರಿಗಳು ಹಾಲಿ ಇರುವ ಕಾನೂನುಗಳನ್ನು ಪಟ್ಟಿ ಮಾಡಿ, “ರಿಸರ್ವ್ ಬ್ಯಾಂಕ್‌ಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ನಿಯಂತ್ರಣ ಇದೆ. ಆರ್‌ಬಿಐ ಹಗರಣ ತಡೆಯಬಹುದಿತ್ತು,” ಎಂಬರ್ಥದ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಆರ್‌ಬಿಐ, ಹಾಲಿ ಇರುವ ಎಲ್ಲ ಕಾನೂನುಗಳು ಮತ್ತು ಆ ಕಾನೂನುಗಳು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಿಯಂತ್ರಿಸಲು ಆರ್‌ಬಿಐ ಅನ್ನು ಹೇಗೆ ನಿರ್ಬಂಧಿಸುತ್ತವೆ ಎಂಬ ವಿಸ್ತೃತ ವಿವರಣೆಯನ್ನು ಪ್ರಕಟಿಸಿತ್ತು. ಇದಾದ ನಂತರವೂ ಆರ್‌ಬಿಐ ಮತ್ತು ವಿತ್ತ ಸಚಿವಾಲಯದ ಸಾರ್ವಜನಿಕ ವಲಯದ ಬ್ಯಾಂಕುಗಳ ನಿಯಂತ್ರಣ ಯಾರದೆಂಬ ಕುರಿತಂತೆ ವಾಗ್ವಾದಗಳು ನಡೆಯುತ್ತಲೇ ಇದ್ದವು.

ಆದರೆ, ಫೆ.12ರಂದು ಒತ್ತಡ ಸಾಲಗಳ ನಿರ್ವಹಣೆಗೆ ನಿಮಯಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದ್ದ ಊರ್ಜಿತ್ ಪಟೇಲ್, ಮಾ.14ರಂದು ಎತ್ತಿದ ದನಿಯು ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಎತ್ತಿದ ದನಿಯಾಗಿತ್ತು. ಅದಾದ ನಂತರ ಊರ್ಜಿತ್ ಕಠಿಣ ನಿಲವು ಮುಂದುವರಿಸಿದರು. ಫೆ.12ರ ಅಧಿಸೂಚನೆಯಲ್ಲಿನ ಕೆಲ ನಿಯಮಗಳನ್ನು ವಿದ್ಯುತ್ ಯೋಜನೆಗಳಿಗೆ ಸೀಮಿತವಾಗಿ ಮಾರ್ಪಾಡು ಮಾಡುವಂತೆ ಕೇಂದ್ರ ವಿತ್ತ ಸಚಿವಾಲಯ ಮಾಡಿದ ಮನವಿಯನ್ನು ತಿರಸ್ಕರಿಸಿದರು. ಫೆ.12ರ ಅಧಿಸೂಚನೆಯಿಂದಾಗಿ ಬಹುತೇಕ ಒತ್ತಡದ ಸಾಲಗಳ ನಿರ್ವಹಣೆ ಸುಗಮವಾಗಿ ನಡೆದಿದೆ. ಬ್ಯಾಂಕುಗಳ ನಿಷ್ಕ್ರಿಯ ಸಾಲಗಳ ನಿರ್ವಹಣೆಯು ಪರಿಣಾಮಕಾರಿ ನಡೆಯುತ್ತಿದ್ದು, ಮುಂಬರುವ ಎರಡು ಮೂರು ತ್ರೈಮಾಸಿಕಗಳಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದಾಗಿದೆ.

ಬಡ್ಡಿದರ ನಿಗದಿ ವಿಚಾರದಲ್ಲೂ ಊರ್ಜಿತ್ ಕಠಿಣ ನಿಲುವು ತಳೆದಿದ್ದಾರೆ. ಜೂನ್ ಮತ್ತು ಆಗಸ್ಟ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ, ಸತತ ಎರಡು ಅವಧಿಗೆ ತಲಾ 25 ಅಂಶಗಳಷ್ಟು ಬಡ್ಡಿದರ ಏರಿಸಿದ್ದಾರೆ. ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಮತ್ತೊಂದು ಸುತ್ತು ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಪೇಟೆಯಲ್ಲಿದೆ. ಹಾಗಾದಾಗ, ಸರ್ಕಾರಕ್ಕೆ ಇಕ್ಕಟ್ಟು ಸಹಜ. ಮೊದಲ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಜಿಡಿಪಿ ಅಭಿವೃದ್ಧಿ ದಾಖಲಿಸಿರುವ ಕೇಂದ್ರ ಸರ್ಕಾರ, ಒಂದು ವೇಳೆ ಆರ್‌ಬಿಐ ಮತ್ತೆ ಬಡ್ಡಿದರ ಏರಿಕೆ ಮಾಡಿದರೆ ಒಟ್ಟಾರೆ ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಅಭಿವೃದ್ಧಿ ಶೇ.7.5ಕ್ಕೆ ಸ್ಥಿರಗೊಳ್ಳುವ ಅಂದಾಜು ಇದೆ.

ಸತತ ಬಡ್ಡಿದರ ಏರಿಕೆಯನ್ನು ಯಾವ ಸರ್ಕಾರವೂ ಬಯಸದು. ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ಬಡ್ಡಿದರ ಏರಿಕೆ ಮಾಡುತ್ತದೆ. ಹಣದುಬ್ಬರ ಪ್ರಮಾಣವನ್ನು ಶೇ.4 (ಪ್ಲಸ್ ಶೇ.2ರಷ್ಟು ಹೆಚ್ಚು ಅಥವಾ ಕಡಿಮೆ) ಕಾಯ್ದುಕೊಳ್ಳುವುದು ಆರ್‌ಬಿಐ ಹೊಣೆ. ಆದರೆ, ಹಣಕಾಸು ನೀತಿಯಲ್ಲದೆ, ಕೇಂದ್ರ ಸರ್ಕಾರದ ವಿವಿಧ ಆರ್ಥಿಕ ನೀತಿಗಳಿಂದಾಗಿಯೂ ಹಣದುಬ್ಬರ ಏರುತ್ತದೆ. ತಕ್ಷಣದ ಹಣದುಬ್ಬರಕ್ಕೆ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವುದು. ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಜ್ ಸುಂಕ ಕಡಿತ ಮಾಡಿದರೆ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಯಬಹುದು. ಆದರೆ, ಕೇಂದ್ರ ಈಗಾಗಲೇ ಚಾಲ್ತಿ ಖಾತೆ ಕೊರತೆ ಎದುರಿಸುತ್ತಿರುವುದರಿಂದ ಸುಂಕ ಕಡಿತ ಮಾಡುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ : ಪಿಎನ್‌ಬಿ ಹಗರಣದಲ್ಲಿ ಆರ್‌ಬಿಐ ಲೋಪ ಇಲ್ಲ; ಗವರ್ನರ್ ಊರ್ಜಿತ್ ಪಟೇಲ್

ಈ ಹಂತದಲ್ಲಿ ಆರ್‌ಬಿಐ ಬಡ್ಡಿದರ ಏರಿಕೆ ಮಾಡುವುದು, ಅದನ್ನು ಸರ್ಕಾರ ವಿರೋಧಿಸುವುದು ಅಥವಾ ಬಡ್ಡಿದರ ಏರಿಕೆ ಮಾಡದಂತೆ ಒತ್ತಡ ಹೇರುವುದು ನಡೆದೇ ಇರುತ್ತದೆ. ಈ ಒತ್ತಡಗಳನ್ನು ಊರ್ಜಿತ್ ಪಟೇಲ್ ಹೇಗೆ ನಿಭಾಯಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

2018ರಲ್ಲಿ ಊರ್ಜಿತ್ ಪಟೇಲ್ ರಘುರಾಂ ರಾಜನ್ ಹಾದಿಯಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಆರ್ಥಿಕತೆಗೆ ಪೂರಕವಲ್ಲದ ಸರ್ಕಾರದ ಸಲಹೆಗಳನ್ನು ತಿರಸ್ಕರಿಸುವಷ್ಟು ಕಠಿಣ ನಿಲುವು ತೆಗೆದುಕೊಳ್ಳುತ್ತಿದ್ದಾರೆ ಊರ್ಜಿತ್. ಅಕ್ಟೋಬರ್ ತಿಂಗಳಲ್ಲಿ ಬಡ್ಡಿದರ ಏರಿಕೆ ಮಾಡಿದರೆ ಮತ್ತೊಂದು ಸುತ್ತು ವಿತ್ತ ಸಚಿವರ ಜೊತೆಗೆ ಶೀತಲ ಸಮರಕ್ಕೆ ಸಿದ್ಧರಾಗಬೇಕಾಗುತ್ತದೆ.

ಅದೇನೇ ಇರಲಿ, ಕೇಂದ್ರ ಸರ್ಕಾರದ ಕೆಲವು ತಪ್ಪು ನಿರ್ಧಾರಗಳ ನಡುವೆಯೂ ದೇಶದ ಆರ್ಥಿಕತೆ ಸುಸ್ಥಿರ ಆಗಿರುವಂತೆ ನೋಡಿಕೊಳ್ಳುವಲ್ಲಿ ಆರ್‌ಬಿಐ ಸಫಲವಾಗಿದೆ. ರುಪಾಯಿ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಾಗ ಅತ್ಯಲ್ಪ ಪ್ರಮಾಣದಲ್ಲಿ ಮಧ್ಯಪ್ರವೇಶ ಮಾಡಿ ಸಂಯಮ ತೋರಿದೆ. ಇದೇ ಮೊದಲ ಬಾರಿಗೆ ಚಿನ್ನ ಖರೀದಿ ಮಾಡಿದೆ.

ಡಾಲರ್ ಏರಿಕೆಯಿಂದಾಗುವ ಅಸ್ಥಿರತೆ ನಿಭಾಯಿಸಿ ಸಮತೋಲನ ಕಾಯ್ದುಕೊಳ್ಳುವ ತಂತ್ರದ ಭಾಗವಾಗಿ ಚಿನ್ನ ಖರೀದಿ ಮಾಡಲಾಗಿದೆ. ದೀರ್ಘಕಾಲದಲ್ಲಿ ಈ ಎಲ್ಲ ನಿರ್ಣಯಗಳ ಸಾಫಲ್ಯತೆ ಪ್ರತಿಫಲಿಸುತ್ತದೆ. ಇನ್ನೊಂದು ವರ್ಷ ಊರ್ಜಿತ್ ಪಟೇಲ್ ಇಷ್ಟೇ ಕಠಿಣ ನಿಲವು ತಳೆದು ಕಾರ್ಯನಿರ್ವಹಿಸಿದರೆ ಬಹುಶಃ ಅವರಿಗೆ ಎರಡನೇ ಅವಧಿ ತಪ್ಪಬಹುದು. ಆದರೆ, 2019ರ ಸೆಪ್ಟಂಬರ್‌ನಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರ ಇರುತ್ತದೆ ಎಂಬುದರ ಮೇಲೆ ಅವರ ಎರಡನೇ ಅವಧಿಯ ಭವಿಷ್ಯ ನಿರ್ಧಾರವಾಗಲಿದೆ.

Demonetisation ಅರುಣ್ ಜೇಟ್ಲಿ Raghuram Rajan ರಘುರಾಮ್ ರಾಜನ್ Arun Jaitley ಊರ್ಜಿತ್ ಪಟೇಲ್ RBI Governor Urjith Patel ಆರ್ಬಿಐ ಗವರ್ನರ್ ಉಪನಗದೀಕರಣ
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?