ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಇನ್ಫೋಸಿಸ್‌ಗೆ ಗೋಮಾಳ ಮಂಜೂರು ಮಾಡಲು ಸರ್ಕಾರ ನಡೆಸಿದೆಯೇ ಹೊಸ ಕಸರತ್ತು ?

ಇನ್ಫೋಸಿಸ್ ಸಂಸ್ಥೆಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಕಸರತ್ತುಗಳ ಕುರಿತು ‘ದಿ ಸ್ಟೇಟ್‌’ ೨ ವರದಿಗಳನ್ನು ಪ್ರಕಟಿಸಿದೆ. ಈ ನಡುವೆ ಕಂದಾಯ ದಾಖಲಾತಿಗಳಲ್ಲೇ ತಿದ್ದುಪಡಿ ಮಾಡುವ ಬೆಳವಣಿಗೆಗಳು ನಡೆದಿವೆ ಎಂಬ ಸುದ್ದಿ ಹೊರಬಿದ್ದಿದೆ. 

ಮಹಾಂತೇಶ್ ಜಿ

ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥೆಗೆ ಆನೇಕಲ್ ತಾಲೂಕಿನ ವಿವಿಧೆಡೆ ಇರುವ ಗೋಮಾಳ ಮಂಜೂರು ಮಾಡುವ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಇದೆ. ಇದರಿಂದ ಬಿಡಿಸಿಕೊಳ್ಳಲು ರಾಜ್ಯ ಸರ್ಕಾರ ಹಲವು ರೀತಿಯ ಕಸರತ್ತುಗಳನ್ನು ಮತ್ತಷ್ಟು ಬಿರುಸಿನಿಂದ ಮುಂದುವರೆಸಿದೆ. ಗೋಮಾಳ ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಮಂಜೂರಿಗೆ ಸಕಾರಣಗಳು ಮತ್ತು ಸರ್ಕಾರಕ್ಕೆ ಆಗುವ ಆರ್ಥಿಕ ಲಾಭದ ಕುರಿತು ಸಮರ್ಥನೀಯ ಅಂಶಗಳು ಇಲ್ಲದಿರುವುದೇ ಕಗ್ಗಂಟಿಗೆ ಕಾರಣ.

ಸರ್ಕಾರಿ ಕುಂಟೆ, ಹದ್ದುಗಿಡದ ಹಳ್ಳವೂ ಸೇರಿದಂತೆ ಖರಾಬು ಹಾಗೂ ಸರ್ಕಾರಿ ಜಮೀನು ಮಂಜೂರಿಗೆ ಎದುರಾಗಿದ್ದ ತೊಡಕುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಬಗ್ಗೆ ಕಂದಾಯ ಅಧಿಕಾರಿಗಳು ಸಭೆಗಳಲ್ಲಿ ಮುಳುಗಿದ್ದಾರೆ. ಈ ಹೊತ್ತಿನಲ್ಲೇ ಕಂದಾಯ ದಾಖಲಾತಿಗಳಲ್ಲಿ ಈಗಾಗಲೇ ಗೋಮಾಳ ಎಂದು ನಮೂದಾಗಿದ್ದರೂ ‘ಗೋಮಾಳ ಶೀರ್ಷಿಕೆ’ಯಿಂದಲೇ ತೆಗೆಸುವ ತಂತ್ರ ಹೆಣೆದಿದ್ದಾರೆ! ಆದರೆ ಈ ತಂತ್ರದ ಕುರಿತು ಕಂದಾಯ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆಯಲ್ಲದೆ, ಹಲವು ರೀತಿಯ ಆಕ್ಷೇಪಗಳು ವ್ಯಕ್ತವಾಗಿವೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ೨೦೧೭ರ ಡಿಸೆಂಬರ್‌ ೧೮ ಮತ್ತು ೨೦೧೮ರ ಆಗಸ್ಟ್ ೨೪ ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಮುನ್ನೆಲೆಗೆ ಬಂದಿವೆ.

“ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೭೩ ಮತು ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್‌ ೨೬ರಲ್ಲಿ ಒಟ್ಟು ೮ ಎಕರೆ ೩೩ ಗುಂಟೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ರ ನಿಯಮ ೯೭(೪)ರ ಅಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತೆಗೆಸಿ, ಸರ್ಜಾಪುರ ಗ್ರಾಮ ಸರ್ವೆ ನಂಬರ್‌ ೨೬ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಈ ಹಿಂದೆ ೦-೩೦ ಗುಂಟೆ ಸಾರ್ವಜನಿಕ ಉದ್ದೇಶದ ರಸ್ತೆಗಾಗಿ ಕಾಯ್ದಿರಿಸಿರುವ ೨೦೦೯-೧೦ರ ಆದೇಶವನ್ನು ಹಿಂಪಡೆದು ಭೂ ಮಂಜೂರಾತಿ ನಿಯಮಗಳನ್ವಯ ಪೂರ್ಣ ಮಾರುಕಟ್ಟೆ ವಿಧಿಸಿ ಇನ್ಫೋಸಿಸ್‌ ಸಂಸ್ಥೆಗೆ ಮಂಜೂರು ಮಾಡಲು ವಿಶಿಷ್ಟ ಕಡತವನ್ನು ಸಲ್ಲಿಸಿ ಮುಂದಿನ ಆದೇಶಕ್ಕಾಗಿ ಮಂಡಿಸಿದೆ,” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ಕಾರ್ಯಸಾಧುವೇ ಎಂಬ ಬಗೆಗೂ ಚರ್ಚೆ ನಡೆದಿವೆ ಎಂದು ತಿಳಿದು ಬಂದಿದೆ.

೨೦೧೭ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ಪ್ರತಿ

ಅಲ್ಲದೇ ಕಳೆದ ವರ್ಷ ಸಲ್ಲಿಸಿದ್ದ ಪ್ರಸ್ತಾವನೆಗೆ ಇನ್ನಷ್ಟು ಅಂಶಗಳನ್ನು ಸೇರಿಸಿ ೨೦೧೮ರ ಆಗಸ್ಟ್‌ ೨೪ರಂದು ಸಲ್ಲಿಸಿರುವ ಮಾರ್ಪಡಿತ ಪ್ರಸ್ತಾವನೆ ಕುರಿತೂ ಇಲಾಖೆಯೊಳಗೇ ಆಕ್ಷೇಪಗಳು ವ್ಯಕ್ತವಾಗಿವೆ. “ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೭೩ ಮತ್ತು ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್‌ ೨೬ರಲ್ಲಿರುವ ೮ ಎಕರೆ ೩೩ ಗುಂಟೆ ಸೇರಿದಂತೆ ಒಟ್ಟು ೧೧ ಎಕರೆ ೦೪ ಗುಂಟೆ ಜಮೀನನ್ನು ಅದಲು ಬದಲು ಮಾಡುವ ಸಂಬಂಧ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ರ ನಿಯಮ ೨೮(ಎ)(೨)-(೫)ರ ಅಡಿ ಕ್ರಮ ವಹಿಸಬೇಕು. ಸಂಸ್ಥೆಯು ಬಿಟ್ಟುಕೊಡಲು ಒಪ್ಪಿರುವ ೧೧ ಎಕರೆ ೦೪ ಗುಂಟೆ ಜಮೀನು ಮುಂಬರುವ ದಿನಗಳಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು ಕೈಗೊಳ್ಳಬಹುದಾದ ಯಾವುದೇ ಸಾರ್ವಜನಿಕ ಯೋಜನೆಗಾಗಿ ಉಪಯೋಗಿಸಿಕೊಳ್ಳಬಹುದಾಗಿರುತ್ತದೆ. ಅಲ್ಲದೆ, ಜಮೀನು ಇನ್ಫೋಸಿಸ್‌ ಸಂಸ್ಥೆಯ ಆವರಣಕ್ಕೆ ಹೊಂದಿಕೊಂಡಂತೆ ಇದ್ದು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿರುವುದರಿಂದ ಈ ಜಮೀನುಗಳು ಮುಂಬರುವ ದಿನಗಳಲ್ಲಿ ಉಪಯುಕ್ತವಾಗಿರುತ್ತದೆ,” ಎಂಬ ಅಂಶಗಳು ಉಲ್ಲೇಖಗೊಂಡಿರುವ ಪ್ರಸ್ತಾವನೆಯಲ್ಲಿ ಯಾವುದೇ ಸಮರ್ಥನೀಯ ಅಂಶಗಳಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

೨೦೧೮ ಆಗಸ್ಟ್‌ ೨೪ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ಪ್ರತಿ

ಅದಲು ಬದಲು ಅಥವಾ ಪರ್ಯಾಯ ಜಮೀನು ಬೆಂಗಳೂರಿನ ಯಾವ ಭಾಗದಲ್ಲಿ ನೀಡಲಿದೆ? ಮಾರುಕಟ್ಟೆ ದರವೇನು? ಇದು ಎಷ್ಟು ಮುಖ್ಯ? ನಿಯಮಗಳನ್ನು ಸಡಿಲಿಸಿಯೂ ಇನ್ಫೋಸಿಸ್‌ ಗೆ ಮಂಜೂರು ಮಾಡಿದರೆ ಸರ್ಕಾರಕ್ಕೆ ಆಗುವ ಆರ್ಥಿಕ ಲಾಭವೇನು? ಭೂ ಪರಿವರ್ತನೆಯಾಗಿರುವ ಜಮೀನಿನ ಮಾರುಕಟ್ಟೆ ಮೌಲ್ಯವನ್ನೇಕೆ ಪ್ರಸ್ತಾವನೆಯಲ್ಲಿ ನಮೂದಿಸಿಲ್ಲ? ಇದು ಸರ್ಕಾರಕ್ಕೆ ಯಾಕೆ ಮುಖ್ಯ? ಇದಲ್ಲದೆ ಪರ್ಯಾಯ ಜಮೀನುಗಳಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು ಯಾವ ಯೋಜನೆ ಕೈಗೊಳ್ಳಬಹುದು? ಹೀಗೆ ಹತ್ತಾರು ಅಂಶಗಳ ಕುರಿತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗಿವೆ ಎಂದು ಗೊತ್ತಾಗಿವೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಈ ಪ್ರಸ್ತಾವನೆಗಳಲ್ಲಿ ಈ ಯಾವ ಅಂಶಗಳ ಕುರಿತು ಸೂಕ್ತ ಸಮರ್ಥನೆ ಒದಗಿಸದೇ ಇರುವುದು ಕೂಡ ಪ್ರಕರಣ ಕಗ್ಗಂಟಾಗಲು ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ಇನ್ಫೋಸಿಸ್‌ಗೆ ಗೋಮಾಳ, ಸರ್ಕಾರಿ ಜಮೀನು; 12 ವರ್ಷ ಹಿಂದಿನ ಪ್ರಸ್ತಾವನೆಗೆ ಕ್ಷಿಪ್ರವೇಗ!

ಇನ್ಫೋಸಿಸ್‌ ಲಿಮಿಟೆಡ್,‌ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ, ಬಿಲ್ಲಾಪುರ, ಬೂರುಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ ಗಳಲ್ಲಿನ ಒಟ್ಟು ೩೫೦ ಎಕರೆಯನ್ನು ೨೦೦೩-೦೪, ೨೦೦೪-೦೫ರಲ್ಲಿ ವಿವಿಧ ದಿನಾಂಕಗಳಂದು ಖರೀದಿಸಿತ್ತು. ಈ ಜಮೀನುಗಳ ಮಧ್ಯದಲ್ಲಿ ಸರ್ಕಾರಿ ಕುಂಟೆ, ಹಳ್ಳ ಮತ್ತು ಹದ್ದುಗಿಡದ ಹಳ್ಳದ ವಿಸ್ತೀರ್ಣ ೬ ಎಕರೆ ೨೯ ಗುಂಟೆ ಪ್ರದೇಶವೂ ಸೇರಿತ್ತಲ್ಲದೆ, ೮ ಎಕರೆ ೩೩ ಗುಂಟೆ ಸರ್ಕಾರಿ ಗೋಮಾಳವೂ ಇತ್ತು.

“ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ ೬೮(೧)ರಲ್ಲಿ ಸರ್ಕಾರಿ ಕಟ್ಟೆ, ಕುಂಟೆ ಮತ್ತು ಹದ್ದಿಗಿಡದ ಹಳ್ಳಗಳಂತಹ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಜಲಮೂಲ ಪ್ರದೇಶಗಳನ್ನು ಒಳಗೊಂಡ ಪ್ರಸ್ತಾವನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಬಾರದು” ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಇ ವಿ ರಮಣರೆಡ್ಡಿ ಅವರು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ ಗಳಿಗೆ ಹೊರಡಿಸಿದ್ದ ಸುತ್ತೋಲೆಯನ್ನು ಸ್ಮರಿಸಿಕೊಳ್ಳಬಹುದು.

ಮಂಜೂರಾತಿಗೆ ಸಂಬಂಧಿಸಿದಂತೆ ಎದುರಾಗಿರುವ ಎಲ್ಲಾ ರೀತಿಯ ತೊಡಕುಗಳನ್ನು ನಿವಾರಿಸಿಕೊಂಡು ಸಚಿವ ಸಂಪುಟ ಮಂಜೂರು ಮಾಡಿದರೂ, ಇದೇ ಪ್ರಕರಣವನ್ನು ಮಾದರಿಯಾಗಿಸಿಕೊಂಡು ಖಾಸಗಿ ಕಂಪನಿ, ಉದ್ದಿಮೆಗಳು, ಸಂಘ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಸಲ್ಲಿಸಬಹುದಾದ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಹೇಗೆ ನಿಭಾಯಿಸಬಲ್ಲದು ಎಂಬುದರ ಕುರಿತು ಕುತೂಹಲ ಮೂಡಿಸಿದೆ.

infosys ಗೋಮಾಳ ಬಿ ಎಸ್ ಯಡಿಯೂರಪ್ಪ ಡಿ ವಿ ಸದಾನಂದಗೌಡ JDS ಜೆಡಿಎಸ್ R Ashok ಎಚ್‌ ಡಿ ದೇವೇಗೌಡ Sudhamurthy ಸುಧಾಮೂರ್ತಿ ಇನ್ಫೋಸಿಸ್ Jagadeesh Shettar ಟಿ ಎಂ ವಿಜಯಭಾಸ್ಕರ್ T M Vijaya Bhaskar D V Sadananda Gowda G Parameshwara ಜಿ ಪರಮೇಶ್ವರ Gomala Land ಜಗದೀಶ ಶೆಟ್ಟರ್ Suresh Kumar ಸುರೇಶ್‌ ಕುಮಾರ್‌ ಆರ್‌ ಅಶೋಕ್ B S Yediyurappa ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ Former CM Siddaramaiah Narayana Murthy ಎನ್ ಆರ್ ನಾರಾಯಣಮೂರ್ತಿ Chief Minister H D Kumaraswamy JDS State President H D Devegowda ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು