ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಮೋದಿ ರೇಟ್ ಕಾರ್ಡ್| ಡಿಸೇಲ್ 21%, ಪೆಟ್ರೋಲ್ 15.24% ಏರಿಕೆ, ರುಪಾಯಿ 12.06% ಇಳಿಕೆ

2018ನೇ ಸಾಲಿನಲ್ಲಿ ಪ್ರಧಾನಿ ಮೋದಿ ಸರ್ಕಾರದ ಆಡಳಿತ ಅತ್ಯಂತ ಕಳಪೆ ಸಾಧನೆ ಮಾಡಿದೆ. ಕಳೆದ ಎಂಟು ತಿಂಗಳಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದರೆ, ರುಪಾಯಿ ಕುಸಿತದಿಂದಾಗಿ ದೇಶದ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ. ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳ ಬಗ್ಗೆ ಅನುಮಾನ ಮೂಡಿಸುತ್ತಿದೆ

ರೇಣುಕಾಪ್ರಸಾದ್ ಹಾಡ್ಯ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ 2018ನೇ ಸಾಲಿನಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ಈಮಟ್ಟವನ್ನು ಅಳೆಯುವುದಾದರೂ ಹೇಗೆ? ಅದಕ್ಕಿರುವ ಮಾನದಂಡ ಏನು? ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರಗಳು ಮಿತಿ ಮೀರಿ ಏರಿವೆ. ರುಪಾಯಿ ಮಿತಿ ಮೀರಿ ಅಪಮೌಲ್ಯಗೊಂಡಿದೆ. ಬ್ಯಾಂಕ್ ಬಡ್ಡಿದರಗಳು ಏರುತ್ತಲೇ ಇವೆ. ಅಗತ್ಯವಸ್ತುಗಳ ದರಗಳೂ ಏರುಹಾದಿಯಲ್ಲಿವೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ.

ಒಂದು ಸರ್ಕಾರ ಅತ್ಯಂತ ಕಳಪೆ ಸಾಧನೆ ಮಾಡಿದೆ ಎಂಬುದಕ್ಕೆ ಇದಕ್ಕಿಂತಲೂ ಬೇರೆ ಮಾನದಂಡಗಳು ಬೇಕಿಲ್ಲ. ಇದು ಅತ್ಯಂತ ಸರಳ ಮತ್ತು ವಾಸ್ತವಿಕ ಮಾನದಂಡ!

2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.2ರಷ್ಟು ದಾಖಲಾಗಿದೆ. ಅದೂ ಕಳೆದ ಆರು ತ್ರೈಮಾಸಿಕಗಳಲ್ಲೇ ಗರಿಷ್ಠ ಮಟ್ಟ. ಹೀಗಿದ್ದು ಮೋದಿ ಸರ್ಕಾರದ ಸಾಧನೆ ಕಳಪೆ ಎಂದು ಹೇಳುವುದು ಸರಿಯೇ?

ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿ ಅಂಶಗಳು ದೇಶದ ಆರ್ಥಿಕ ತತಜ್ಞರಲ್ಲಿ ಅಚ್ಚರಿ ಮೂಡಿಸಿದ್ದವು. ಏಕೆಂದರೆ ರಾಯ್ಟರ್ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಆರ್ಥಿಕ ತಜ್ಞರು ಶೇ.7.4-7.6ರ ಆಜುಬಾಜಿನಲ್ಲಿರುತ್ತದೆ ಎಂದು ಅಂದಾಜು ಮಾಡಿದ್ದರು. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶದ ಪ್ರಕಾರ ಜಿಡಿಪಿ ಅಭಿವೃದ್ಧಿ ಶೇ.8.2ರಷ್ಟಾಗಿದೆ.

ಈ ಹಿಂದೆ ಜಿಡಿಪಿ ಅಂಕಿ ಅಂಶಗಳ ಬಗ್ಗೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಅಪನಗದೀಕರಣ ಜಾರಿಯಾದ ತ್ರೈಮಾಸಿಕದಲ್ಲಿ ಜಿಡಿಪಿ ಅಂಕಿ ಅಂಶಗಳಲ್ಲಿ ಯಾವ ಏರುಪೇರು ಇಲ್ಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರೀಯ ಸಾಂಖ್ಯಿಕ ಕಚೇರಿ ಉನ್ನತಾಧಿರಾಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಾಗ, ಹಿಂದಿನ ಆಯ್ದ ವಲಯಗಳಲ್ಲಿ ಹಿಂದಿನ ವರ್ಷದ ಸರಾಸರಿ ಅಂಕಿ ಅಂಶಗಳನ್ನು ಬಳಸಿಕೊಂಡಿದ್ದಾಗಿ ಹೇಳಿದ್ದರಂತೆ. ಅದನ್ನು ಸುಬ್ರಮಣಿಯನ್ ಸ್ವಾಮಿ ಅವರೇ ಬಹಿರಂಗ ಪಡಿಸಿದ್ದರು. ಅದಾದ ನಂತರ ಕೈಗಾರಿಕ ಉತ್ಪನ್ನ ಸೂಚ್ಯಂಕ ಕುರಿತ ಅಂಕಿ ಅಂಶಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಂಗರಾಜನ್ ಅವರೂ ಅನುಮಾನ ವ್ಯಕ್ತಪಡಿಸಿದ್ದರು.

2017 ನವೆಂಬರ್ ನಲ್ಲಿ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಭಾರತದ ಸಾವರಿನ್ ರೇಟಿಂಗ್ ಏರಿಸಿದ್ದರ ಬಗ್ಗೆಯೂ ಬಹುತೇಕ ಆರ್ಥಿಕ ತಜ್ಞರು ಅನುಮಾನ ವ್ಯಕ್ತಪಡಿಸಿದ್ದರು. ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ತರಾತುರಿ ಜಾರಿ ಮಾಡಿದ್ದರ ಪರಿಣಾಮ ಇಡೀ ದೇಶದ ಆರ್ಥಿಕತೆಯೇ ಕುಸಿದು ಹೋಗಿದ್ದ ಸಮಯದಲ್ಲಿ ಮೂಡಿ ಸಾವರಿನ್ ರೇಟಿಂಗ್ ಹೆಚ್ಚಿಸಿತ್ತು. ಅದು 13 ವರ್ಷಗಳ ನಂತರ. ಅಪನಗದೀಕರಣದಿಂದ ನಿರೀಕ್ಷಿತ ಮಟ್ಟಕ್ಕಿಂತ ಆರ್ಥಿಕ ಸ್ಥಿತಿ ಹದಗೆಟ್ಟು ಜಾಗತಿಕವಾಗಿ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ನಡೆಸಿದ ಲಾಬಿಯಿಂದಾಗಿ ಮೂಡಿ ಸಾವರಿನ್ ರೇಟಿಂಗ್ ಹೆಚ್ಚಿಸಿತ್ತು ಎಂಬ ಟೀಕೆಗಳು ಬಂದಿದ್ದವು.

ಈಗ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ನಡುವೆ ಏರುತ್ತಿರುವ ಪೆಟ್ರೋಲ್, ಡಿಸೇಲ್ ದರಗಳಿಂದಾಗಿ ಹಣದುಬ್ಬರ ಏರುಹಾದಿಯಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಮತ್ತೆ ರೆಪೊ ದರ ಏರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಒಟ್ಟಾರೆ ಜಿಡಿಪಿಯು ಶೇ.7.5ರ ಮಟ್ಟದಲ್ಲಿರುತ್ತದೆ ಎಂದು ವಿವಿಧ ಬ್ಯಾಂಕುಗಳ ಮುಖ್ಯ ಆರ್ಥಿಕ ತಜ್ಞರ ವರದಿಗಳು ತಿಳಿಸಿವೆ.

ಮೊದಲ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಜಿಡಿಪಿ ಅಭಿವೃದ್ಧಿ ಆಗಿದ್ದರೆ, ಅದಕ್ಕೆ ಕಾರಣ ಕಾರ್ಪೊರೆಟ್ ಗಳು ಗಳಿಸಿದ ಆದಾಯ ಪ್ರಮಾಣದ ಮೇಲೆ ಲೆಕ್ಕಹಾಕಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಬಹುತೇಕ ಕಾರ್ಪೊರೆಟ್ ಗಳ ಸಾಧನೆ ಉತ್ತಮವಾಗಿದೆ. ಸಣ್ಣ, ಮಧ್ಯಮ ಉದ್ಯಮಗಳ ಮಾಹಿತಿ ಬಂದಾಗ ಒಟ್ಟಾರೆ ಸರಾಸರಿ ಅಭಿವೃದ್ಧಿ ಪ್ರಮಾಣ ತಗ್ಗುತ್ತದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಜನವರಿ 1ರಿಂದೀಚೆಗೆ ಪೆಟ್ರೋಲ್ ದರ ಶೇ.15.24ರಷ್ಟು ಏರಿಕೆಯಾಗಿದೆ. ಜನವರಿ 1ರಂದು 71.60 ರುಪಾಯಿ ಇದ್ದದ್ದು ಸೆಪ್ಟೆಂಬರ್ 4 ರಂದು 81.89 ರುಪಾಯಿಗೆ ಏರಿದೆ. ಡಿಸೇಲ್ ಅತಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ಶೇ.21.5ರಷ್ಟು ಏರಿದೆ. ಜನವರಿ 1 ರಂದು 60.70 ರುಪಾಯಿ ಇದ್ದದ್ದು ಸೆಪ್ಪೆಂಬರ್ 4ರಂದು 73.63ರಷ್ಟು ಏರಿಕೆಯಾಗಿದೆ.

ಸಾಮಾನ್ಯಜನರಿಗೆ ಆತಂಕ ತರುವ ಸಂಗತಿಯೊಂದಿದೆ. ಜನವರಿಯಿಂದೀಚೆಗೆ ಡಿಸೇಲ್ ದರ ಶೇ.21.5ರಷ್ಟು ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣದರ ಏರಿಕೆ ಆಗಲಿದೆ. ಬಿಎಂಟಿಸಿ ಶೇ.18.50ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಿದೆ. ಕೆಎಸ್ಆರ್ಟಿಸಿ ಸಹ ಪ್ರಯಾಣ ದರ ಏರಿಸಲು ಸಜ್ಜಾಗಿದೆ. ಕೆಎಸ್ಆರ್‌ಟಿಸಿ ದರ ಏರಿಸಿದ ತಕ್ಷಣವೇ ಖಾಸಗಿ ಬಸ್ ಗಳ ಪ್ರಯಾಣದರವೂ ಏರುತ್ತದೆ.

ವಿಧಾನಸಭಾ ಚುನಾವಣೆ, ನಂತರ ಸಮ್ಮಿಶ್ರ ಸರ್ಕಾರ ರಚನೆಯಲ್ಲಾದ ವಿಳಂಬ ಮತ್ತಿತರ ಕಾರಣಗಳಿಂದಾಗಿ ದರ ಏರಿಕೆ ಪ್ರಸ್ತಾಪ ಹಾಗೆ ಉಳಿದಿತ್ತು. ಪೂರ್ಣಪ್ರಮಾಣದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿರುವುದರಿಂದ ದರ ಏರಿಕೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಬಹುದು. ಪ್ರಯಾಣದರ ಏರಿಕೆಯ ಜತೆಗೆ ವಿವಿಧ ಸರಕು ಸಾಗಣೆ ದರವೂ ಏರುತ್ತದೆ. ಅಂತಿಮವಾಗಿ ಅದು ಗ್ರಾಹಕರು ನಿತ್ಯ ಬಳಕೆಯ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತದೆ. ಜನಸಾಮಾನ್ಯರು ತತ್ತರಿಸುತ್ತಾರೆ.

ರುಪಾಯಿ ಮೌಲ್ಯ ಡಾಲರ್ ಎದುರು ಸತತ ಕುಸಿಯುತ್ತಿದೆ. ನಿತ್ಯವೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಳಿಯುತ್ತಿದೆ. ಸೆಪ್ಟೆಂಬರ್ 4ರಂದು ಸಹ 35 ಪೈಸೆ ಕುಸಿದು 71.57ಮಟ್ಟಕ್ಕೆ ಇಳಿದಿದೆ. 2018ರಲ್ಲಿ ರುಪಾಯಿ ಮೌಲ್ಯ ಕುಸಿತ ಶೇ.12.05ರಷ್ಟು. ಆರ್ಥಿಕ ತಜ್ಞರು ರುಪಾಯಿ 73ರ ಮಟ್ಟಕ್ಕೆ ಕುಸಿಯುವ ಅಂದಾಜಿನಲ್ಲಿದ್ದಾರೆ. ಆದರೆ, ಕುಸಿತದ ತೀವ್ರತೆ ಗಮನಿಸಿದರೆ ವರ್ಷಾಂತ್ಯಕ್ಕೆ 75ರ ಮಟ್ಟಕ್ಕೆ ಕುಸಿದರೂ ಅಚ್ಚರಿ ಇಲ್ಲ.

2008ರಲ್ಲಿ ಜಾಗತಿಕ ಆರ್ಥಿಕ ಕುಸಿತವಾದಾಗಲೂ ಪರಿಸ್ಥಿತಿ ಇಷ್ಟು ಬಿಗಡಾಯಿಸಿರಲಿಲ್ಲ. 2008 ಸೆಪ್ಟೆಂಬರ್ 15ರಂದು ಪ್ರಮುಖ ಇನ್ವೆಸ್ಟ್ಮೆಂಟ್ ಬ್ಯಾಂಕ್ ಲೆಹ್ಮನ್ ಬ್ರದರ್ಸ್ ಕುಸಿದು ಜಾಗತಿಕ ಆರ್ಥಿಕ ಬಿಕ್ಕಟ್ಟು ಆರಂಭವಾದಾಗ ಡಾಲರ್ ವಿರುದ್ಧ ರುಪಾಯಿ ಮೌಲ್ಯ 45.96 ಇತ್ತು. ಡಿಸೆಂಬರ್ 5ರ ವೇಳೆ 50 ಡಾಲರ್ ಗೆ ಕುಸಿದ ರುಪಾಯಿ ನಂತರ ಡಿಸೆಂಬರ್ ಅಂತ್ಯಕ್ಕೆ 48.42ಕ್ಕೆ ಚೇತರಿಸಿಕೊಂಡಿತ್ತು. ನಂತರ 2009ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಗಂಭೀರ ಪರಿಣಾಮ ದೇಶದ ಆರ್ಥಿಕತೆ ಮೇಲಾಗುವ ಹೊತ್ತಿಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯ 47- 51ರ ನಡುವೆ ಏರಿಳಿದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ರುಪಾಯಿ ಡಾಲರ್ ವಿರುದ್ಧ ಏರಿಳಿಯುತ್ತಿಲ್ಲ. ಏಕಮುಖವಾಗಿ ಕುಸಿಯುತ್ತಲೇ ಇದೆ. ಏರಿಳಿತದ ನಡುವೆ ಕುಸಿಯುವುದಕ್ಕಿಂತಲೂ ಏಕಮುಖವಾಗಿ ಕುಸಿಯುವುದರಿಂದ ಆಗುವ ಹಾನಿ ಹೆಚ್ಚಿರುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ರುಪಾಯಿ ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇಲ್ಲ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿಕೆಯನ್ನು ಗಮನಿಸಿದರೆ ರುಪಾಯಿ ಕುಸಿತದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೆನಿಸುತ್ತದೆ. ರುಪಾಯಿ ಕುಸಿತಕ್ಕೆ ಹೊರಗಿನ ವಿದ್ಯಮಾನಗಳು ಕಾರಣ. ಬೇರೆ ದೇಶದ ಕರೆನ್ಸಿಗಳು ಕುಸಿದಿವೆ. ಬೇರೆ ಕರೆನ್ಸಿಗಳೂ ಕುಸಿಯುವಾಗ ರುಪಾಯಿ ಡಾಲರ್ ವಿರುದ್ಧ 80ಕ್ಕೆ ಕುಸಿದರೂ ಆತಂಕ ಪಡಬೇಕಿಲ್ಲ ಎನ್ನುತ್ತಾರೆ ಸುಭಾಷ್ ಚಂದ್ರ ಗರ್ಗ್. ರುಪಾಯಿ ಮೌಲ್ಯದಂತಹ ಸೂಕ್ಷ್ಮ ವಿಚಾರಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಈ ರೀತಿ ಹೇಳಿಕೆ ನೀಡುವುದು ತೀರಾ ಅಪ್ರಬುದ್ಧತನ.

ಇದನ್ನೂ ಓದಿ : ಮೋದಿ ಪ್ರಧಾನಿ ಗದ್ದುಗೇರಿದ ನಂತರ ಶೇ.21.03ರಷ್ಟು ರುಪಾಯಿ ಅಪಮೌಲ್ಯ!

ಭಾರತ ಸರ್ಕಾರವೇ ತನ್ನ ರುಪಾಯಿ ಡಾಲರ್ ಗೆ 80ರ ಮಟ್ಟಕ್ಕೆ ಕುಸಿಯುವುದನ್ನು ನಿರೀಕ್ಷಿಸುತ್ತಿದೆ ಎಂಬ ಸಂದೇಶವನ್ನು ನೀಡಿದಂತಾಗುತ್ತದೆ. ಇದು ರುಪಾಯಿ ಮತ್ತಷ್ಟು ಅಪಮೌಲ್ಯಗೊಳ್ಳಲು ಕಾರಣವಾಗುತ್ತದೆ. ಸರ್ಕಾರವೇ ತನ್ನ ರುಪಾಯಿ ಅಪಮೌಲ್ಯವನ್ನು ಮುಂಗಡವಾಗಿ ಒಪ್ಪಿಕೊಂಡರೆ ಬೇರೆಯವರು ಅದನ್ನೇ ಆರ್ಥಿಕತೆಯ ದೌರ್ಬಲ್ಯವೆಂದು ಭಾವಿಸಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಸುಭಾಷ್ ಚಂದ್ರ ಗರ್ಗ್ ಅವರಿಗೆ ರುಪಾಯಿ ಮೌಲ್ಯದ ಸೂಕ್ಷ್ಮತೆಗಳು ಅರ್ಥವಾಗದೇ ಇರಬಹುದು. ಆದರೆ, ಒಂದು ವೇಳೆ 80ರ ಮಟ್ಟಕ್ಕೆ ರುಪಾಯಿ ಕುಸಿದರೆ ನಮ್ಮ ಚಾಲ್ತಿ ಖಾತೆ ಕೊರತೆ ಮತ್ತಷ್ಟು ಹಿಗ್ಗುತ್ತದೆ. ವಿತ್ತೀಯ ಕೊರತೆಯೂ ಶೇ.3.5ರ ಮಿತಿಯನ್ನು ದಾಟುತ್ತದೆ. ಇದು ಒಟ್ಟಾರೆ ದೇಶದ ಆರ್ಥಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದುರಾದೃಷ್ಟವಶಾತ್ ಸುಭಾಷ್ ಚಂದ್ರ ಗಾರ್ಗ್ ರುಪಾಯಿ 80ಕ್ಕೆ ಕುಸಿದರೂ ಪರವಾಗಿಲ್ಲ ಎಂದು ಹೇಳಿಕೆ ನೀಡಿದಾಗ ಅದಕ್ಕೆ ಸ್ಪಷ್ಟನೆ ನೀಡುವ, ಅಥವಾ ರುಪಾಯಿ ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಸಮರ್ಥಿಸಿಕೊಳ್ಳುವ ಯಾವ ಹೇಳಿಕೆಯೂ ವಿತ್ತ ಸಚಿವರಿಂದಾಗಲೀ, ವಿತ್ತ ಸಚಿವಾಲಯದಿಂದಾಗಲೀ ಬರಲಿಲ್ಲ.

ನರೇಂದ್ರ ಮೋದಿ Narendra Modi Economy ಆರ್ಥಿಕತೆ ಜಿಡಿಪಿ GDP Dollar ಡಾಲರ್ Rupee ರುಪಾಯಿ ಪೆಟ್ರೋಲ್‌ ಡಿಸೇಲ್‌
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?