ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ರುಪಾಯಿ ಕುಸಿತ ತಡೆಗೆ ರಘುರಾಂ ರಾಜನ್ ದಾರಿ ಹಿಡಿದ ನರೇಂದ್ರ ಮೋದಿ ಸರ್ಕಾರ

ಸೋಮವಾರದ (ಸೆ.10) ವಹಿವಾಟಿನಲ್ಲಿ ರುಪಾಯಿ ಐತಿಹಾಸಿಕ ಕನಿಷ್ಠ ಮಟ್ಟ 72.67ಕ್ಕೆ ಕುಸಿದ ನಂತರ ಪ್ರಧಾನಿ ಮೋದಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಅನಿವಾಸಿ ಭಾರತೀಯರಿಂದ ಡಾಲರ್ ಸಂಗ್ರಹಿಸಲು ಮುಂದಾಗಿದೆ. ಹಿಂದೆಯೇ ಈ ಕೆಲಸ ಮಾಡಿದ್ದರೆ ರುಪಾಯಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ

ರೇಣುಕಾಪ್ರಸಾದ್ ಹಾಡ್ಯ

ಪೆಟ್ರೋಲ್ ಮತ್ತು ಡಿಸೇಲ್ ದರ ಮಿತಿ ಮೀರಿ ಏರಿ, ಚಾಲ್ತಿ ಖಾತೆ ಕೊರತೆ ಐದು ವರ್ಷದಲ್ಲೇ ಗರಿಷ್ಠ ಮಟ್ಟ ಮುಟ್ಟಿದೆ. ಹಾಗಾಗಿ, ಆರ್ಥಿಕ ಬಿಕ್ಕಟ್ಟು ಎದುರಾಗುವ ಆತಂಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಸೋಮವಾರದ ವಹಿವಾಟಿನಲ್ಲಿ ರುಪಾಯಿ 72.67ರ ಮಟ್ಟಕ್ಕೆ ಕುಸಿದ ನಂತರ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರುಪಾಯಿ ಕುಸಿತದ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಅಲ್ಲದೆ, ಅನಿವಾಸಿ ಭಾರತೀಯರಿಂದ ಡಾಲರ್ ಸಂಗ್ರಹದ ನೆರವು ಪಡೆಯುವ ಬಗ್ಗೆಯೂ ಗಂಭೀರವಾಗಿ ಚಿಂತಿಸಿದೆ.

ರುಪಾಯಿ ಕುಸಿಯುವ ಹಂತದಲ್ಲಿದ್ದಾಗ 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅನಿವಾಸಿ ಭಾರತೀಯರಿಂದ 36 ಬಿಲಿಯನ್ ಡಾಲರ್ ಸಂಗ್ರಹ ಮಾಡಿತ್ತು. ರುಪಾಯಿ 68ರ ಮಟ್ಟಕ್ಕೆ ಕುಸಿದಾಗಲೇ ಕೇಂದ್ರ ಸರ್ಕಾರ ಈ ಯೋಜನೆ ಮಾಡಿದ್ದರೆ, 72.67ರ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ.

ರುಪಾಯಿ 72ರ ಮಟ್ಟಕ್ಕೆ ಕುಸಿದಾಗಲೂ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, “ರುಪಾಯಿ ಕುಸಿತಕ್ಕೆ ಜಾಗತಿಕ ವಿದ್ಯಮಾನಗಳು ಕಾರಣ, ದೇಶೀಯ ಕಾರಣಗಳೇನು ಇಲ್ಲ. ಆತಂಕಪಡುವ ಅಗತ್ಯ ಇಲ್ಲ,” ಎಂದಿದ್ದರು. ಒಂದು ಹಂತದಲ್ಲಿ ಗರ್ಗ್ ಅವರು, “ರುಪಾಯಿ 80ರ ಮಟ್ಟಕ್ಕೆ ಕುಸಿದರೂ ನಾವು ಆತಂಕಪಡುವ ಅವಶ್ಯಕತೆ ಇಲ್ಲ,” ಎಂದಿದ್ದರು.

ಏಷ್ಯಾ ಕರೆನ್ಸಿಗಳ ಪೈಕಿ ಅತಿ ಗರಿಷ್ಠ ಪ್ರಮಾಣದಲ್ಲಿ ಕುಸಿತ ದಾಖಲಿಸಿರುವ ರುಪಾಯಿ, ಸೋಮವಾರ (ಸೆ.10) ದಿನದ ವಹಿವಾಟಿನಲ್ಲಿ ಶೇ.1.3ರಷ್ಟು ಕುಸಿದಿತ್ತು. ಕೇಂದ್ರ ಸರ್ಕಾರವು ಅನಿವಾಸಿ ಭಾರತೀಯರ ನೆರವು ಪಡೆಯುವ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ರುಪಾಯಿ ಕೊಂಚ ಚೇತರಿಸಿಕೊಂಡಿತು. ಈ ಚೇತರಿಕೆಯು ತಾತ್ಕಾಲಿಕವಾಗಿದ್ದು, ಹಿಗ್ಗುತ್ತಿರುವ ಚಾಲ್ತಿ ಖಾತೆ ಕೊರತೆ ಮತ್ತು ರಫ್ತು-ಆಮದುಗಳ ನಡುವಿನ ಅಸಮತೋಲನವು ರುಪಾಯಿ ಮತ್ತಷ್ಟು ಕುಸಿಯಲು ಕಾರಣವಾಗಬಹುದು.

ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರುಪಾಯಿ ಕುಸಿತ ಕುರಿತಂತೆ ಸತತ ಸಂಪರ್ಕದಲ್ಲಿವೆ. ರಿಸರ್ವ್ ಬ್ಯಾಂಕ್ ಅಗತ್ಯ ಬಿದ್ದಾಗಲೆಲ್ಲ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ, ರುಪಾಯಿ ಕುಸಿತವನ್ನು ಕೊಂಚ ಮಟ್ಟಿಗೆ ತಡೆಯುತ್ತಿದೆ. ಆರ್‌ಬಿಐ ತನ್ನ ದಾಸ್ತಾನಿನಲ್ಲಿರುವ ಡಾಲರ್‌ಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ಮಾರಾಟ ಮಾಡಿ ರುಪಾಯಿ ಕುಸಿತ ತಡೆಗೆ ಯತ್ನಿಸುತ್ತಿದೆ. ಏಪ್ರಿಲ್-ಮೇ ನಡುವೆ 436 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಮೀಸಲು ಈಗ 400 ಬಿಲಿಯನ್ ಡಾಲರ್‌ಗೆ ಇಳಿದಿದೆ.

400 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಸದ್ಯಕ್ಕೆ ಸುರಕ್ಷಿತ ಮಟ್ಟದಲ್ಲಿಯೇ ಇದೆ. ಆದರೆ, ರುಪಾಯಿ ಕುಸಿತ ಮತ್ತು ರಫ್ತು ಪ್ರಮಾಣ ತಗ್ಗಿ, ಆಮದು ಪ್ರಮಾಣ ಹಿಗ್ಗುತ್ತಿರುವುದರಿಂದ ರುಪಾಯಿ ಮತ್ತಷ್ಟು ಕುಸಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರಿಂದ ಡಾಲರ್ ಸಂಗ್ರಹಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಅಂದಿನ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ರಘುರಾಂ ರಾಜನ್ ಅವರ ಸಲಹೆಯಂತೆ 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಇದೇ ಉಪಾಯ ಬಳಸಿ ರುಪಾಯಿ ಕುಸಿತ ತಡೆದಿತ್ತು. ಆಗ 36 ಬಿಲಿಯನ್ ಡಾಲರ್ ಸಂಗ್ರಹ ಮಾಡಲಾಗಿತ್ತು. ನಂತರ ರಾಜನ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಂಡರು. ನಂತರವೂ ಅನಿವಾಸಿ ಭಾರತೀಯರಿಂದ ಡಾಲರ್ ಸಂಗ್ರಹ ಮುಂದುವರಿಸಿದರು. ಪರಿಣಾಮವಾಗಿ, ರುಪಾಯಿ ಕುಸಿತ ನಿಯಂತ್ರಣಕ್ಕೆ ಬಂದಿತ್ತು.

ನರೇಂದ್ರ ಮೋದಿ ಸರ್ಕಾರ ತಡವಾಗಿ ಎಚ್ಚೆತ್ತುಕೊಳ್ಳಲು ಮುಖ್ಯ ಕಾರಣ ಎಂದರೆ, ಪ್ರಸ್ತುತ ಭಾರತದ ಚಾಲ್ತಿ ಖಾತೆ ಕೊರತೆಯು ಐದು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿರುವುದು. ಕಚ್ಚಾ ತೈಲ ದರ ಏರಿಕೆ ಮತ್ತು ಹೆಚ್ಚುತ್ತಿರುವ ಆಮದು ಪ್ರಮಾಣದಿಂದಾಗಿ ಚಾಲ್ತಿ ಖಾತೆ ಕೊರತೆ ವರ್ಷಾಂತ್ಯಕ್ಕೆ ಮತ್ತಷ್ಟು ಹಿಗ್ಗುವ ಸಾಧ್ಯತೆ ಇದೆ. ಇದು ಆರ್ಥಿಕ ಬಿಕ್ಕಟ್ಟಿಗೂ ಕಾರಣವಾಗಬಹುದು ಎಂಬ ಆತಂಕ ಆರ್ಥಿಕ ತಜ್ಞರದ್ದಾಗಿದೆ.

‘ಬ್ಲೂಮ್‌ಬರ್ಗ್’ ಸಮೀಕ್ಷೆ ಪ್ರಕಾರ, ಆಗಸ್ಟ್ ತಿಂಗಳ ವ್ಯಾಪಾರ ಕೊರತೆ (ರಫ್ತು-ಆಮದುಗಳ ನಡುವಿನ ಅಂತರ) 17.45 ಬಿಲಿಯನ್ ಡಾಲರ್ ಅಂದರೆ, ಈಗಿನ ವಿನಿಮಯ ದರದ ರುಪಾಯಿ ಲೆಕ್ಕದಲ್ಲಿ 1,25,640 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಜುಲೈ ತಿಂಗಳಲ್ಲಿ ಈ ಪ್ರಮಾಣ ಅತಿ ಹೆಚ್ಚು ಅಂದರೆ, 18 ಬಿಲಿಯನ್ ಡಾಲರ್‌ಗೆ ಏರಿತ್ತು. ಏಪ್ರಿಲ್- ಜೂನ್ ತಿಂಗಳ ನಡುವೆ ವ್ಯಾಪಾರ ಕೊರತೆ ಪ್ರಮಾಣವು ಸರಾಸರಿ 15 ಬಿಲಿಯನ್ ಡಾಲರ್‌ಗಳಷ್ಟಿತ್ತು. ಜುಲೈ ತಿಂಗಳಲ್ಲಿ ಭಾರತದ ಕಚ್ಚಾ ತೈಲದ ಬಿಲ್ ಶೇ.76ರಷ್ಟು ಹೆಚ್ಚಳವಾಗಿತ್ತು.

ಇದನ್ನೂ ಓದಿ : ಮೋದಿ ಪ್ರಧಾನಿ ಗದ್ದುಗೇರಿದ ನಂತರ ಶೇ.21.03ರಷ್ಟು ರುಪಾಯಿ ಅಪಮೌಲ್ಯ!

ಡಾಲರ್ ಸಂಗ್ರಹ ಹೇಗೆ?: ಭಾರತ ಸರ್ಕಾರವು ನಿಯೋಜಿತ ಬ್ಯಾಂಕುಗಳ ಮೂಲಕ ಅನಿವಾಸಿ ಭಾರತೀಯರಿಗೆ ಬಾಂಡ್‌ಗಳನ್ನು ಮಾರಾಟ ಮಾಡಿ ಡಾಲರ್ ಸಂಗ್ರಹಿಸುತ್ತದೆ. ಬಾಂಡ್ ಮೆಚ್ಯುರಿಟಿ ಆದಾಗ ಅನಿವಾಸಿ ಭಾರತೀಯರು ಅದನ್ನು ರುಪಾಯಿ ರೂಪದಲ್ಲಾದರೂ ಅಥವಾ ಡಾಲರ್ ರೂಪದಲ್ಲಾದರೂ ಹಿಂಪಡೆಯಬಹುದಾಗಿರುತ್ತದೆ. ಈ ಬಾಂಡ್‌ಗಳಿಗೆ ಹಣಕಾಸು ಮಾರುಕಟ್ಟೆಯಲ್ಲಿರುವ ಬಡ್ಡಿದರಕ್ಕಿಂತ ಕೊಂಚ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ.

ಅನಿವಾಸಿ ಭಾರತೀಯರು ಖರೀದಿಸಿದ ಬಾಂಡ್‌ಗಳು ಮೆಚ್ಯುರಾದಾಗ ರುಪಾಯಿ ರೂಪದಲ್ಲಿ ನಗದೀಕರಿಸಿಕೊಂಡರೆ ಮೊತ್ತ ಎಷ್ಟಾದರೂ ಕಾನೂನು ತೊಡಕುಗಳಿರುವುದಿಲ್ಲ. ಬಾಂಡ್ ಖರೀದಿಸಿದವರಿಗೆ ನಿಗದಿತ ಪ್ರಮಾಣದಲ್ಲಿ ಬಡ್ಡಿ ಬರುತ್ತದೆ. ರುಪಾಯಿಯು ಡಾಲರ್ ವಿರುದ್ಧ ಅಪಮೌಲ್ಯಗೊಂಡಂತೆಲ್ಲ ನಗದೀಕರಿಸಿಕೊಂಡಾಗ ಅನಿವಾಸಿ ಭಾರತೀಯರಿಗೆ ಹೆಚ್ಚಿನ ಲಾಭವಾಗುತ್ತದೆ. ಸರ್ಕಾರಕ್ಕೆ ತೀವ್ರ ಪ್ರಮಾಣದಲ್ಲಿ ರುಪಾಯಿ ಕುಸಿಯುವುದನ್ನು ತಡೆಯಲು ಮತ್ತು ತನ್ನ ವಿದೇಶಿ ವಿನಿಮಯ ಮೀಸಲು ಪ್ರಮಾಣ ಸುರಕ್ಷತಾ ಮಟ್ಟಕ್ಕಿಂತ ಕೆಳಕ್ಕಿಳಿಯುವುದನ್ನು ತಡೆಗಟ್ಟಲು ಇದು ನೆರವಾಗುತ್ತದೆ. ಅಂದರೆ, ಇದು ಭಾರತ ಸರ್ಕಾರದ ಜೊತೆಗೆ ಮತ್ತು ಅನಿವಾಸಿ ಭಾರತೀಯರಿಗೂ ಲಾಭದಾಯಕ.

ನರೇಂದ್ರ ಮೋದಿ Narendra Modi Raghuram Rajan ರಘುರಾಮ್ ರಾಜನ್ Dollar ಡಾಲರ್ NRI Rupee ರುಪಾಯಿ ಅನಿವಾಸಿ ಭಾರತೀಯರು
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?