ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಭೂಮಿ ಸಾಫ್ಟ್‌ವೇರ್‌ ದುರ್ಬಳಕೆ; ಅಕ್ರಮ ಖಾತೆ ರದ್ದುಪಡಿಸಿದ ಜಿಲ್ಲಾಡಳಿತ

‘ದಿ ಸ್ಟೇಟ್’ ಹೊರಗೆಡವಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಬೀಳು ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಹಕ್ಕು ಬದಲಾವಣೆ ಮಾಡಿದ್ದ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ದೇವನಹಳ್ಳಿಯ ಗೊಬ್ಬರಗುಂಟೆ ಸರ್ಕಾರಿ ಬೀಳು ಜಮೀನಿನ ಪ್ರಕರಣದಲ್ಲಿ ತಿದ್ದುಪಡಿ ಆದೇಶ ಹೊರಡಿಸಿದೆ. 

ಮಹಾಂತೇಶ್ ಜಿ

ಸರ್ಕಾರಿ ಬೀಳು ಭೂಮಿಗಳನ್ನು ಕಬಳಿಸುವ ಉದ್ದೇಶದಿಂದ ನೇರವಾಗಿ ಭೂಮಿ ಸಾಫ್ಟ್‌ ವೇರ್‌ ಗೆ ಬಳಸಿ ಖಾಸಗಿ ವ್ಯಕ್ತಿಗೆ ಜಮೀನಿನ ಹಕ್ಕು ಬದಲಾವಣೆ ಮಾಡಿಸಿದ್ದ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ತಿದ್ದುಪಡಿ ಆದೇಶ ಹೊರಬಿದ್ದಿದೆ.

ಪ್ರಕರಣ ಕುರಿತು ‘ದಿ ಸ್ಟೇಟ್‌’ ೨೦೧೮ರ ಸೆಪ್ಟಂಬರ್‌ ೫ ಮತ್ತು ೬ರಂದು ವಿಶೇಷ ಸರಣಿ ವರದಿ ಪ್ರಕಟಿಸಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದ ಸರ್ಕಾರಿ ಬೀಳು ಭೂಮಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತಲ್ಲದೆ, ಸ್ಥಳೀಯ ವಿಜಯಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ ಐ ಆರ್‌ ದಾಖಲಿಸಿತ್ತು. ವಿಪರ್ಯಾಸವೆಂದರೆ ಪ್ರಕರಣ ಬೆಳಕಿಗೆ ಬಂದು ಇಷ್ಟು ದಿನವಾದರೂ ಭೂಮಿ ಸಾಫ್ಟ್‌ವೇರ್‌ ನಿರ್ವಹಣಾ ಕೇಂದ್ರದ ಯಾವ ಸಿಬ್ಬಂದಿಯನ್ನೂ ವಿಚಾರಣೆಗೆ ಗುರಿಪಡಿಸಿಲ್ಲ ಎಂದು ಕೇಂದ್ರ ಕಚೇರಿಯ ಉನ್ನತ ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ನಡುವೆ ಗೊಬ್ಬರಗುಂಟೆ ಸರ್ವೇ ನಂಬರ್‌ ೬೪ರಲ್ಲಿದ್ದ ೧೯ ಎಕರೆ ೧೪ ಗುಂಟೆ ವಿಸ್ತೀರ್ಣದ ಸರ್ಕಾರಿ ಬೀಳು ಜಮೀನನ್ನು ಹುಚ್ಚಪ್ಪ ಬಿನ್ ನಂಜಪ್ಪ ಎಂಬ ವ್ಯಕ್ತಿ ಹೆಸರಿಗೆ ಹಕ್ಕು ಬದಲಾವಣೆ ಮೂಲಕ ಸೃಷ್ಟಿಸಿದ್ದ ಅಕ್ರಮ ಖಾತೆ ರದ್ದುಗೊಂಡಿದೆ. ಅಲ್ಲದೆ, ಜಮೀನಿನ ಪಹಣಿಯಲ್ಲಿ ಈ ಹಿಂದೆ ದಾಖಲಾಗಿದ್ದಂತೆ ಸರ್ಕಾರಿ ಬೀಳು ಎಂದು ನಮೂದಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಸಂಬಂಧ ೨೦೧೮ರ ಸೆ.೧೧ರಂದು ಈ ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಇದರ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

“ಗೊಬ್ಬರಗುಂಟೆ ಗ್ರಾಮದ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೧ ಗುಂಟೆ ಜಮೀನಿನ ಗಣಕೀಕೃತ ಪಹಣಿ ಕಾಲಂ (೯)ರಲ್ಲಿ ಅಕ್ರಮವಾಗಿ ನಮೂದಾಗಿದ್ದ ಹುಚ್ಚಪ್ಪ ಬಿನ್‌ ನಂಜಪ್ಪ ಅವರ ಹೆಸರನ್ನು ತೆಗೆದು, ಈ ಹಿಂದೆ ಇದ್ದಂತೆ ಸರ್ಕಾರಿ ಬೀಳು ಎಂದು ಹಾಗೂ ಪಹಣಿ ಕಾಲಂ(೧೧)ರಲ್ಲಿ ಎಫ್‌ ಐ ಆರ್‌ ಪ್ರಕರಣ ಸಂಖ್ಯೆ ವಿಚಾರಣೆಗೆ ಬಾಕಿ ಇರುತ್ತದೆ,” ಎಂದು ಉಪ ವಿಭಾಗಾಧಿಕಾರಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಅತ್ಯಲ್ಪ ಅವಧಿಯಲ್ಲಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಇಂತಹ ಪ್ರಕರಣಗಳ ಹಿಂದಿರುವ ಸಂಘಟಿತ ಜಾಲವನ್ನು ಸದ್ಯದ ಮಟ್ಟಿಗೆ ಹಿಮ್ಮೆಟ್ಟಿಸಿದಂತಾಗಿದೆ.

ಪ್ರಕರಣದ ಹಿನ್ನೆಲೆ; ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಜಮೀನು ಸರ್ಕಾರಿ ಬೀಳು ಎಂದು ವರ್ಗೀಕೃತವಾಗಿತ್ತು. ೧೯೬೮-೬೯ರಿಂದ ೨೦೦೧-೦೨ನೇ ಸಾಲಿನ ಕೈ ಬರಹದ ಪಹಣಿ ಮತ್ತು ಆರ್‌ ಟಿ ಸಿ ಕಾಲಂ(೯)ರಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಅಲ್ಲದೆ, ಕಾಲಂ ೧೨(೨)ರಲ್ಲಿ ವಿ ಪಿ ಫಾರೆಸ್ಟ್‌ ಎಂದು ದಾಖಲಾಗಿತ್ತು. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮ ಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ದಾಖಲಾಗಿತ್ತು.

ಇದನ್ನೂ ಓದಿ : ಸರ್ಕಾರಿ ಭೂಕಬಳಿಕೆ: ‘ಭೂಮಿ’ ನಿರ್ವಹಣೆ ಕೇಂದ್ರ ಕಚೇರಿಯಲ್ಲೇ ಒಳಸಂಚು?

ಇನ್ನು, ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೪ ಸಿ ಅಡಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆ ಕಟ್ಟಿರುವ ವ್ಯಕ್ತಿಗಳಿಗೆ ಖಾಯಂ ಹಕ್ಕು ಪತ್ರ ನೀಡುವ ಸಂದರ್ಭದಲ್ಲಿಯೂ ಜನರಿಗೆ ಸ್ಕೆಚ್‌ ಮತ್ತು ಕಡತಗಳನ್ನು ತಯಾರಿಸುವ ಸಂದರ್ಭದಲ್ಲಿಯೂ ಪಡೆದಿರುವ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಹಲವು ವರ್ಷಗಳಿಂದಲೂ ಸರ್ಕಾರಿ ಬೀಳು ಎಂದು ದಾಖಲಾಗಿದ್ದರೂ ಗಣಕೀಕೃತ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರು ಸೇರ್ಪಡೆಯಾಗಿದೆಲ್ಲದೆ, ಇವರ ಹೆಸರಿಗೇ ೧೯ ಎಕರೆ ೧೪ ಗುಂಟೆ ಹಕ್ಕು ಬದಲಾವಣೆ ಆಗಿತ್ತು.

ಈ ಪ್ರಕರಣದ ಹಿಂದೆ ಆಂಧ್ರ ಸೇರಿದಂತೆ ಹೊರ ರಾಜ್ಯದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಭಾಗಿ ಆಗಿದ್ದಾರೆ ಎನ್ನಲಾಗಿತ್ತು. “ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಒಳಸಂಚು ಮಾಡಿ ಗಣಕ ಯಂತ್ರದಲ್ಲಿ ಫೋರ್ಜರಿ ಮಾಡಿ ಪಹಣಿ ಬದಲಾವಣೆ ಮಾಡಲಾಗಿದೆ,” ಎಂದು ತಹಶೀಲ್ದಾರ್ ವರದಿ ನೀಡಿದ್ದರು.

“ಗಣಕೀಕೃತ ಪಹಣಿಯಲ್ಲಿ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಹೆಸರು ದಾಖಲು ಮಾಡಿರುವುದು ಕ್ರಿಮಿನಲ್‌ ಪ್ರಕರಣವಾಗಿದ್ದು, ಸರ್ಕಾರಿ ಆಸ್ತಿಯನ್ನು ದೋಚಲು ಪ್ರಯತ್ನಿಸಿರುವ ಕ್ರಮವಾಗಿರುವುದರಿಂದ ಎಫ್‌ ಐ ಆರ್‌ ದಾಖಲಿಸುವುದು ಅವಶ್ಯವಾಗಿದೆ. ಆದುದರಿಂದ ಸರ್ಕಾರಿ ಆಸ್ತಿಯನ್ನು ದೋಚಲು ಗಣಕೀಕೃತ ದಾಖಲೆಗಳನ್ನು ತಿದ್ದಲು ಪ್ರಯತ್ನಿಸಿದವರನ್ನು ಪತ್ತೆ ಹಚ್ಚಲು ಪ್ರಕರಣ ದಾಖಲಿಸಲು ಸೂಚಿಸಿದೆ,” ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು.

ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ೨೦೧೮ರ ಆಗಸ್ಟ್‌ ೩೦ರಂದು ಭೂಮಿ ಕೇಂದ್ರದ ಪಹಣಿಗಳನ್ನು ಪರಿಶೀಲನೆ ಮಾಡಿದ್ದರು. ೨೦೦೨ನೇ ಸಾಲಿನಿಂದ ಈವರೆವಿಗೆ ಪಹಣಿ ಬದಲಾವಣೆ ಆಗಿದೆ ಎಂಬುದು ಕಂಡು ಬಂದಿತ್ತು. “ಸರ್ವೇ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಸರ್ಕಾರಿ ಬೀಳು ಎಂಬುದು ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರಿಗೆ ಪಹಣಿ ಕಾಲಂ(೯)ರಲ್ಲಿ ದಾಖಲಾಗಿದೆ. ಆದರೆ, ದೇವನಹಳ್ಳಿ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಪಹಣಿ ತಿದ್ದುಪಡಿ ಮತ್ತು ಮ್ಯುಟೇಷನ್‌ ಆಗಿರುವ ಬಗ್ಗೆ ಯಾವುದೇ ವಹಿವಾಟುಗಳು ನಡೆದಿರುವುದು ಕಂಡು ಬರುವುದಿಲ್ಲ. ಆದರೆ ಪಹಣಿ ಕಾಲಂ(೯)ರಲ್ಲಿ ಹುಚ್ಚಪ್ಪ ಬಿನ್ ನಂಜಪ್ಪ ಅವರ ಹೆಸರಿಗೆ ಖಾತೆ ಎಲ್ಲಿ ಹೇಗೆ ನಮೂದಾಗಿರುತ್ತದೆ ಎಂಬದು ತಿಳಿದು ಬಂದಿಲ್ಲ,” ಎಂದು ತಿಳಿಸಿರುವುದು ಗ್ರಾಮ ಲೆಕ್ಕಿಗರಾದ ಎಂ ಪಿ ರಮ್ಯ ಅವರು ಸ್ಥಳೀಯ ತಹಶೀಲ್ದಾರ್‌ ಅವರಿಗೆ ನೀಡಿರುವ ಹೇಳಿಕೆಯಿಂದ ತಿಳಿದು ಬಂದಿತ್ತು.

ಆರ್ ವಿ ದೇಶಪಾಂಡೆ ಡಿ ವಿ ಸದಾನಂದಗೌಡ B S Yeddyurappa R Ashok Chief Secretary ಮುಖ್ಯ ಕಾರ್ಯದರ್ಶಿ ಜಗದೀಶ್ ಶೆಟ್ಟರ್ Jagadeesh Shettar ಬಿಎಸ್ ಯಡಿಯೂರಪ್ಪ ಟಿ ಎಂ ವಿಜಯಭಾಸ್ಕರ್ T M Vijaya Bhaskar D V Sadananda Gowda R V Deshpande G Parameshwara ಜಿ ಪರಮೇಶ್ವರ ಆರ್‌ ಅಶೋಕ್ Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು