ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಕೆಪಿಎಸ್ಸಿ ಅಕ್ರಮ: ತೀರ್ಪು ಪಾಲಿಸದ ರಾಜ್ಯ ಸರ್ಕಾರದಿಂದ ಮುಂದೂಡಿಕೆ ತಂತ್ರ?

ಕೆಎಎಸ್‌ ಅಧಿಕಾರಿಗಳ ಅಕ್ರಮ ನೇಮಕಾತಿ ಕುರಿತ ಹೈಕೋರ್ಟ್‌ ತೀರ್ಪಿಗೆ ರಾಜ್ಯ ಸರ್ಕಾರ ಕಿಮ್ಮತ್ತು ನೀಡಿಲ್ಲ. ತೀರ್ಪು ಜಾರಿ ಸಂಬಂಧ ಅಡ್ವೊಕೇಟ್‌ ಜನರಲ್‌ ನೀಡಿರುವ ಅಭಿಪ್ರಾಯಕ್ಕೆ ಅಪಸ್ವರ ಕೇಳಿಬಂದಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾದರೆ ಅಚ್ಚರಿಯೇನಿಲ್ಲ

ಮಹಾಂತೇಶ್ ಜಿ

ಕರ್ನಾಟಕ ಲೋಕಸೇವಾ ಆಯೋಗ ೧೯೯೮, ೯೯ ಮತ್ತು ೨೦೦೪ನೇ ಸಾಲಿನಲ್ಲಿ ನಡೆಸಿದ್ದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪಾಲಿಸುವ ಸಂಬಂಧ ಉದಾಸಿನತೆ ಪ್ರದರ್ಶಿಸಿರುವ ರಾಜ್ಯ ಸರ್ಕಾರ ‘ಕಾಲಹರಣ’ ತಂತ್ರ ಅನುಸರಿಸಿದೆ.

ಈ ಮೂಲಕ, ರಾಜ್ಯ ಸರ್ಕಾರ ‘ಅಕ್ರಮ ಫಲಾನುಭವಿಗಳ’ ಪರ ವಕಾಲತ್ತು ವಹಿಸಿದೆ ಎಂಬ ಆರೋಪ ಕೇಳಿಬಂದಿದೆಯಲ್ಲದೆ, ನೇಮಕಗೊಂಡು ಐಎಎಸ್‌ಗೆ ಬಡ್ತಿ ಪಡೆದಿರುವ ೩೫ ಮತ್ತು ಐಪಿಎಸ್‌ಗೆ ಬಡ್ತಿ ಪಡೆದ ೨೬ ಮಂದಿ ಅಧಿಕಾರಿಗಳು ಈಗಿರುವ ಹುದ್ದೆಯಲ್ಲಿಯೇ ಅಬಾಧಿತವಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ೨೦೧೮ರ ಸೆ.೬ರಂದು ಸಲ್ಲಿಸಿರುವ ಪ್ರಮಾಣಪತ್ರದಿಂದ ಈ ಸಂಗತಿ ತಿಳಿದು ಬಂದಿದೆಯಲ್ಲದೆ, ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸಲು ಸರ್ಕಾರ ಹಿಂದೇಟು ಹಾಕಿರುವುದು ಗೊತ್ತಾಗಿದೆ. ಹೀಗಾಗಿ, ೧೯೯೮, ೯೯ ಮತ್ತು ೨೦೦೪ನೇ ಸಾಲಿನ ನೇಮಕಾತಿ ಪಟ್ಟಿ ಪರಿಷ್ಕೃತಗೊಳಿಸುವ ಪ್ರಕ್ರಿಯೆಯನ್ನು ಮುಂದೂಡಿದಂತಾಗಿದೆ.

ಈ ನಡುವೆ, ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಅಡ್ವೊಕೇಟ್ ಜನರಲ್ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯ ನೀಡಿದ್ದಾರೆ. ತೀರ್ಪನ್ನು ಜಾರಿಗೊಳಿಸಿದರೆ ಅಧಿಕಾರಶಾಹಿ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಗೊತ್ತಾಗಿದೆ. ಸಿಐಡಿ ತನಿಖಾ ತಂಡ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನಾ ಸಮಿತಿ ಗುರುತಿಸಿದ್ದ ೪೦೦ಕ್ಕೂ ಹೆಚ್ಚು ಅಕ್ರಮ ಫಲಾನುಭವಿಗಳಿಗೆ ಇದು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಅಡ್ವೊಕೇಟ್‌ ಜನರಲ್‌ ಅವರು ನೀಡಿರುವ ಅಭಿಪ್ರಾಯವನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ರಾಜ್ಯ ಸರ್ಕಾರ, ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಒಲವು ವ್ಯಕ್ತಪಡಿಸಿಲ್ಲ. “ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಮುಂದಾದರೆ ಕಳೆದ ೧೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಸೇವೆಯಿಂದಲೇ ಬಿಡುಗಡೆಗೊಳಿಸಬೇಕು. ಇದರಿಂದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆಗಳಾಗಲಿವೆ. ಇದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ,” ಎಂದು ಅಡ್ವೊಕೇಟ್‌ ಜನರಲ್‌ ಅವರು ಅಭಿಪ್ರಾಯ ನೀಡಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಅಲ್ಲದೆ, ತೀರ್ಪನ್ನು ಅನುಷ್ಠಾನಗೊಳಿಸಿದಲ್ಲಿ ೧೯೯೮, ೯೯ ಮತ್ತು ೨೦೦೪ರ ನಂತರ ಕೆಪಿಎಸ್ಸಿ ನಡೆಸಿರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿಗಳ (೨೦೦೬, ೨೦೦೮, ೨೦೧೦, ೨೦೧೧, ೨೦೧೪, ೨೦೧೫) ಮೇಲೂ ಇದು ಪರಿಣಾಮ ಬೀರಲಿದೆ. ೧:೫ರ ಅನುಪಾತದಂತೆ ಸಂದರ್ಶನ ನಡೆಸಿದಲ್ಲಿ ಸೇವೆಯಲ್ಲಿರುವ ಅಧಿಕಾರಿ, ನೌಕರರು ಹೊಂದಿರುವ ಹಾಲಿ ಹುದ್ದೆಗಳ ಸ್ಥಳಾಂತರವಾಗಲಿದೆ ಎಂಬ ಅಭಿಪ್ರಾಯವನ್ನೂ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಹಾಗೆಯೇ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿಯನ್ನು ಪುರಸ್ಕರಿಸುವ ಸಾಧ್ಯತೆ ಅತ್ಯಂತ ವಿರಳವಾಗಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದು ಗೊತ್ತಾಗಿದೆ.

ಆದರೆ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗ ಸುಪ್ರೀಂ ಕೋರ್ಟ್‌ನ ಮುಂದೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಏಕೆಂದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಯಾವುದೇ ತೀರ್ಪು ನೀಡಿಲ್ಲ. ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿತ್ತಷ್ಟೇ. ಅಲ್ಲದೆ, ಈ ತೀರ್ಪನ್ನು ಪ್ರಶ್ನಿಸಿ ಎಚ್‌ ಎನ್ ಗೋಪಾಲಕೃಷ್ಣ ಮತ್ತು ಇತರರು ಸಲ್ಲಿಸಿದ್ದ ಎಲ್ಲ ಮೇಲ್ಮನವಿಗಳನ್ನೂ ವಜಾಗೊಳಿಸಿತ್ತಲ್ಲದೆ, ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು. ತೀರ್ಪು ಜಾರಿಗೊಳಿಸುವ ಸಂಬಂಧ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ನೀಡಲೂ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಇನ್ನು, ೧೯೯೮ನೇ ಸಾಲಿನ ನೇಮಕಾತಿ ಸಂಬಂಧ ಹೈಕೋರ್ಟ್‌ ೨೦೦೨ರಲ್ಲಿ ನೀಡಿದ್ದ ತೀರ್ಪನ್ನು ಪಾಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ ಒಟ್ಟು ೫ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿತ್ತಲ್ಲದೆ, ಸ್ಪಷ್ಟೀಕರಣವನ್ನೂ ಕೇಳಿತ್ತು. ಆ ಸಂದರ್ಭದಲ್ಲಿ ನೇಮಕಾತಿ ಪಟ್ಟಿಯನ್ನು ಕಾನೂನು ಪ್ರಕಾರ ತಯಾರಿಸಲಾಗುವುದು ಎಂದು ಹೇಳಿತ್ತು. ಈ ಪ್ರಮಾಣಪತ್ರವನ್ನು ಆಧರಿಸಿ ಹೈಕೋರ್ಟ್ ೨೦೦೫ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಹೀಗಾಗಿ, ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರಗಳಂತೆಯೇ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ, ಉದಾಸೀನ ಮುಂದುವರಿಸಿದೆ.

ಇದನ್ನೂ ಓದಿ : ಸಂಕಲನ | ಕೆಪಿಎಸ್‌ಸಿ ಅಕ್ರಮಗಳ ಸುತ್ತ ‘ದಿ ಸ್ಟೇಟ್’ ಪ್ರಕಟಿಸಿದ ವರದಿಗಳು

ಅದೇ ರೀತಿ, ೨೦೦೫ರಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪ ಎತ್ತಿದ್ದ ಕೆ ಆರ್‌ ಖಲೀಲ್‌ ಅಹ್ಮದ್‌ ಮತ್ತಿತರರು ೨೦೦೬ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆಯಲ್ಲಿ ಕೆಪಿಎಸ್ಸಿ ೨೦೦೨ರ ಕೋರ್ಟ್ ನಿರ್ದೇಶನ ಪ್ರಕಾರ ತಯಾರಿಸಿದ್ದ ಪರಿಷ್ಕೃತ ಪಟ್ಟಿಯನ್ನು ೨೦೧೪ರ ನವೆಂಬರ್‌ ೧೧ರಂದು ಸಲ್ಲಿಸಿತ್ತು. ಈ ಪಟ್ಟಿಯನ್ನು ಜಾರಿಗೊಳಿಸಿ ಎಂದು ಹೈಕೋರ್ಟ್‌ ೨೦೧೬ರ ಜೂನ್ ೨೧ರಂದು ನಿರ್ದೇಶಿಸಿತ್ತು.

ಈ ಮೂರು ಸಾಲಿನಲ್ಲಿ ನಡೆದಿದ್ದ ನೇಮಕಾತಿ ಪ್ರಕ್ರಿಯೆ ಅಸಾಂವಿಧಾನಿಕ ಎಂದು ತಿಳಿಸಿತ್ತಲ್ಲದೆ, ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಕೆ ಆರ್‌ ಖಲೀಲ್‌ ಅಹ್ಮದ್‌ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಮೇಲ್ಮನವಿಗಳನ್ನೂ ೨೦೧೮ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

೧೯೯೮ರ ಆಯ್ಕೆಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದ ಕೆಪಿಎಸ್‌ಸಿ, ನೇಮಕಗೊಂಡಿದ್ದವರ ಪೈಕಿ ೩೪ ಅಭ್ಯರ್ಥಿಗಳನ್ನು ನೇಮಕ ಪಟ್ಟಿಯಿಂದಲೇ ಹೊರಗಿಟ್ಟಿತ್ತು. ೧೯೯೯ರಲ್ಲಿ ಒಬ್ಬ ಅಭ್ಯರ್ಥಿ, ೨೦೦೪ರಲ್ಲಿ ೧೨ ಮಂದಿ ಅಭ್ಯರ್ಥಿಗಳನ್ನು ಪಟ್ಟಿಯಿಂದಲೇ ತೆಗೆದುಹಾಕಿತ್ತಲ್ಲದೆ, ಹಲವು ಅಭ್ಯರ್ಥಿಗಳ ಹುದ್ದೆಗಳ ಸ್ಥಾನ ಪಲ್ಲಟಗೊಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಚಿತ್ರ: ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್

ಆರ್ ವಿ ದೇಶಪಾಂಡೆ ಡಿ ವಿ ಸದಾನಂದಗೌಡ B S Yeddyurappa R Ashok Chief Secretary ಮುಖ್ಯ ಕಾರ್ಯದರ್ಶಿ Jagadeesh Shettar KPSC ಬಿಎಸ್‌ ಯಡಿಯೂರಪ್ಪ ಟಿ ಎಂ ವಿಜಯಭಾಸ್ಕರ್ T M Vijaya Bhaskar D V Sadananda Gowda R V Deshpande G Parameshwara ಜಿ ಪರಮೇಶ್ವರ ಕೆಪಿಎಸ್‌ಸಿ ನೇಮಕಾತಿ ಜಗದೀಶ ಶೆಟ್ಟರ್ Suresh Kumar ಸುರೇಶ್‌ ಕುಮಾರ್‌ ಆರ್‌ ಅಶೋಕ್ Chief Minister H D Kumaraswamy ಜೆಡಿಎಸ್‌ ರಾಜ್ಯಾಧ್ಯಕ್ಷ JDS State President ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು