ಟ್ವಿಟರ್‌ ಸ್ಟೇಟ್‌ | ಶಾರುಖ್‌ ಖಾನ್ ಗಣೇಶನ ಹಬ್ಬ ಆಚರಿಸಿದರೆ ತಪ್ಪಿಲ್ಲ 
ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
‘ಸ್ವಚ್ಚತಾ ಹೀ ಸೇವಾ’ ಅಭಿಯಾನದಿಂದ ಹಸುಗಳ ಸಾವು; ಗೋ ಪ್ರೀತಿ ಮರೆತರೇ ಮೋದಿ!

ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ನ್ಯಾ.ಶ್ರೀಕೃಷ್ಣ ಸಮಿತಿಯು ೬೭ ಪುಟಗಳ ಖಾಸಗಿ ಮಾಹಿತಿ ಸಂರಕ್ಷಣೆ ಮಸೂದೆಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಕುರಿತು ತಕರಾರುಗಳು ಕೇಳಿಬರುತ್ತಿವೆ. ಮಸೂದೆಯಲ್ಲಿ ಹಲವು ಲೋಪಗಳಿವೆ, ಇದರಿಂದ ಉದ್ಯಮಗಳಿಗೂ ಹಾನಿಯಾಗುತ್ತದೆ ಎಂಬ ಟೀಕೆಯೂ ಕೇಳಿಬಂದಿದೆ

ಕುಮಾರ್ ಎಸ್

ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಸಮಿತಿ ಖಾಸಗಿ ಮಾಹಿತಿ ಸಂರಕ್ಷಣೆ ಮಸೂದೆಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಿ ಎರಡು ತಿಂಗಳಾಗುತ್ತಿವೆ. ಸರ್ಕಾರ ಈಗ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಕರಡನ್ನು ಮುಕ್ತವಾಗಿಸಿದೆ. ಇದೀಗ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಮಸೂದೆಯಿಂದ ಖಾಸಗಿತನಕ್ಕೆ ಮತ್ತು ನವೋದ್ಯಮಗಳಿಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಈ ಬಗ್ಗೆ ತಕರಾರು ಎತ್ತಿರುವ ಮೊದಲ ರಾಜ್ಯ ತೆಲಂಗಾಣ. ಆ ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ರಾಮ ರಾವ್‌, ಮಸೂದೆಯಿಂದ ನವೋದ್ಯಮ ಹಾಗೂ ಹೂಡಿಕೆಗೆ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, “ಮಸೂದೆಯಲ್ಲಿರುವ ಮಾಹಿತಿ ಸಂಗ್ರಹ ಕುರಿತ ನಿಯಮಗಳಿಂದಾಗಿ ಟೆಕ್‌ ಕಂಪನಿಗಳು ಅಪಾರ ಪ್ರಮಾಣದ ಆರ್ಥಿಕ ಹೊರೆಯನ್ನು ಎದುರಿಸಬೇಕಾಗುತ್ತದೆ,'' ಎಂದು ರಾವ್‌ ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ತೆಲಂಗಾಣ ರಾಜ್ಯ ಪ್ರಸ್ತುತ ದೇಶದ ೨ನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸೇವೆ ರಫ್ತು ಮಾಡುತ್ತಿದೆ. ದಕ್ಷಿಣ ಭಾರತದ ಮತ್ತೊಂದು ಐಟಿ ಸಿಟಿಯಾಗಿರುವ ಹೈದರಾಬಾದ್‌ ತೆಲಂಗಾಣದ ರಾಜಧಾನಿಯಾಗಿದ್ದು, ಫೇಸ್‌ಬುಕ್‌, ಮೈಕ್ರೋಸಾಫ್ಟ್‌, ಗೂಗಲ್‌ ಕಚೇರಿಗಳನ್ನು ಹೊಂದಿದೆ.

ಪ್ರಸ್ತುತ ಖಾಸಗಿತನ ಮಾಹಿತಿ ದುರ್ಬಳಕೆಗೆ ಸಂಬಂಧಿಸಿದಂತೆ ೨೦೧೧ರ ಸೂಕ್ಷ್ಮ ದಾಖಲೆ ಮತ್ತು ಮಾಹಿತಿ ನಿಯಮಗಳನ್ನು ಅನುಸರಿಸಲಾಗುತ್ತಿದ್ದು, ಇವು ಅಸಮರ್ಪಕವಾಗಿವೆ ಎಂಬ ಕೂಗು ಎದ್ದ ಹಿನ್ನೆಲೆಯಲ್ಲಿ, ಕೃಷ್ಣ ನೇತೃತ್ವದ ತಜ್ಞರ ಸಮಿತಿ ರಚನೆಯಾಯಿತು. ಮಾಹಿತಿ ರಕ್ಷಣೆ ಮತ್ತು ಖಾಸಗಿತನವನ್ನು ಎತ್ತಿ ಹಿಡಿಯುವುದಕ್ಕೆ ಮಸೂದೆ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದಕ್ಕೆ ವ್ಯತಿರಿಕ್ತವಾದ ನಿಲುವುಗಳಿವೆ ಎಂಬ ಟೀಕೆ ಕೇಳಿಬರಲಾರಂಭಿಸಿದೆ.

ಮಸೂದೆಯಲ್ಲಿ ಮಾಹಿತಿ ಭಾರತದಾಚೆಗೆ ವಿನಿಮಯವಾಗುವುದರ ಕುರಿತು ತಳೆದಿರುವ ನಿಲುವಿನಿಂದ ನವೋದ್ಯಮಕ್ಕೆ ತೊಡಕಾಗಿ ಪರಿಣಾಮಿಸುವ ಸಾಧ್ಯತೆಯನ್ನು ತಜ್ಞರು ಗುರುತಿಸುತ್ತಾರೆ. ಕಳೆದ ವಾರ ಇದೇ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್‌ ಅವರಿಗೆ ಪತ್ರ ಬರೆದಿರುವ ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ, "ಗಡಿಗಳಾಚೆಗೆ ಮಾಹಿತಿ ಮುಕ್ತವಾಗಿ ವಿನಿಮಯವಾಗಲು ಸಾಧ್ಯವಾದರೆ ಮಾತ್ರ ಖಾಸಗಿತನ ಮತ್ತು ಸುರಕ್ಷತೆಯ ಚೌಕಟ್ಟು ಮೀರದೆ ಸ್ಟಾರ್ಟಪ್‌ ಬೆಳೆಯಲು, ಜಾಗತಿಕವಾಗಿ ವಿಸ್ತರಿಸಲು ನೆರವಾಗುತ್ತದೆ,'' ಎಂದು ಅಭಿಪ್ರಾಯಪಟ್ಟಿದ್ದರು.

ವಿಪರ್ಯಾಸವೆಂದರೆ, ಬಿ ಎನ್‌ ಕೃಷ್ಣ ಅವರ ನೇತೃತ್ವದ ತಜ್ಞರ ಸಮಿತಿಯ ಸದಸ್ಯರೊಬ್ಬರು ಕೂಡ ಮಸೂದೆಯ ಕರಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ! ನಾಸ್‌ಕಾಂ ಸಿಇಒ, ಸಮಿತಿಯ ತಜ್ಞ ಸದಸ್ಯರಲ್ಲಿ ಒಬ್ಬರಾದ ರಮಾ ವೇದಶ್ರೀ ಅವರು ‘ಇಂಕ್‌೪೨’ ಜಾಲತಾಣದೊಂದಿಗೆ ಮಾತನಾಡುತ್ತ, ಮಸೂದೆಯು ಪ್ರತಿಗಾಮಿಯಾದದ್ದು ಎಂದಿದ್ದಾರೆ. “ಮಾಹಿತಿ ಸಂಗ್ರಹವನ್ನು ಸ್ಥಳೀಯಗೊಳಿಸಬೇಕೆಂಬ ಮಸೂದೆಯ ನಿಯಮವು ಪ್ರತಿಗಾಮಿಯಾಗಿದ್ದು, ಉದಾರವಾದಿ ಆರ್ಥಿಕತೆಗೆ ವಿರುದ್ಧವಾದುದಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ಮಸೂದೆಯು ಮಾಹಿತಿಯನ್ನು ಖಾಸಗಿ ಮಾಹಿತಿ ಮತ್ತು ಸೂಕ್ಷ್ಮವಾದ ಖಾಸಗಿ ಮಾಹಿತಿ ಎಂದು ಶ್ರೇಣೀಕರಿಸಿರುವುದು ವಿರೋಧಕ್ಕೆ ಕಾರಣವಾಗಿದೆ. ಅತಿ ಸೂಕ್ಷ್ಮವಾದ ಖಾಸಗಿ ಮಾಹಿತಿಯಡಿ, ಬಯೋಮೆಟ್ರಿಕ್‌ ವಿವರಗಳು, ಹಣಕಾಸು ವಹಿವಾಟು, ಆನ್‌ಲೈನ್‌ ಪಾಸ್‌ವರ್ಡ್‌ಗಳು, ಜೊತೆಗೆ ಧರ್ಮ, ರಾಜಕೀಯ ನಿಲುವು, ಜಾತಿ, ಲಿಂಗ ಮತ್ತು ಪ್ಯಾನ್‌ ಕಾರ್ಡ್‌ನಂಥ ಸರ್ಕಾರಿ ದಾಖಲೆಗಳ ಮಾಹಿತಿಗಳನ್ನು ಸಂಗ್ರಹಿಸಬಹುದು ಎನ್ನುತ್ತದೆ. ಆದರೆ, ಈ ರೀತಿಯಾಗಿ ಯಾವುದೇ ದೇಶದಲ್ಲೂ ಸೂಕ್ಷ್ಮ ಮಾಹಿತಿ ಮಾಹಿತಿ ಎಂದು ವಿಗಂಡಿಸಿ ಸಂಗ್ರಹಿಸುತ್ತಿರುವ ಉದಾಹರಣೆ ಇಲ್ಲ ಎಂಬುದನ್ನು ಗಮನಿಸಬೇಕು.

ಈ ಸಮಿತಿಯಲ್ಲಿದ್ದ ಮತ್ತೊಬ್ಬ ತಜ್ಞ ಸದಸ್ಯರಾದ ಐಐಎಂ ಇಂದೋರ್‌ನ ಪ್ರಾಧ್ಯಾಪಕ ಋಷಿಕೇಷ ಟಿ ಕೃಷ್ಣನ್‌ ಕೂಡ ಅಸಮಾಧಾನ ಹೊರಹಾಕಿದ್ದಾರೆ. “ಮಾಹಿತಿ ವಿಶ್ವಾಸಾರ್ಹತೆಗಾಗಿ ವಿದೇಶದ ಸರ್ವರ್‌ಗಳಲ್ಲಿ ಸಂಗ್ರಹವಾಗುವ ಮಾಹಿತಿಯ ಒಂದು ನಕಲು ಪ್ರತಿಯನ್ನು ಭಾರತದಲ್ಲಿ ಸಂಗ್ರಹಿಸುವಂತಾಗಬೇಕು ಎಂದು ಸಮಿತಿ ಶಿಫಾರಸು ಮಾಡಿರುವುದು 'ಇಂಟರ್ನೆಟ್‌' ಕಲ್ಪನೆಗೇ ವಿರುದ್ಧವಾದುದು. ಇದು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸುತ್ತದೆ,” ಎಂದು ಎಚ್ಚರಿಸಿದ್ದಾರೆ.

ಖಾಸಗಿತನ ಮತ್ತು ಸುರಕ್ಷತೆ ಇಡೀ ಮಸೂದೆಯ ಹೃದಯ ಎಂದು ಸಮಿತಿ ಹೇಳುತ್ತ ಬಂದಿದೆಯಾದರೂ, ಖಾಸಗಿತನದ ಹಕ್ಕನ್ನೇ ಪ್ರಶ್ನಿಸುವ ನಿಲುವುಗಳು ಮಸೂದೆಯಲ್ಲಿವೆ ಎಂಬುದು ಅಚ್ಚರಿ ಮೂಡಿಸುತ್ತದೆ. ಉದಾಹರಣೆಗೆ, ಮಾಹಿತಿ ಹಕ್ಕು ಕಾಯ್ದೆಯಡಿ ಖಾಸಗಿತನದ ಹಕ್ಕನ್ನು ಪ್ರತಿಪಾದಿಸುವ ಸೆಕ್ಷನ್‌ ೮ (೧)(ಜೆ) ಅನ್ನು ತೆಗೆದುಹಾಕಬೇಕೆನ್ನುತ್ತದೆ. ಖಾಸಗಿ ಮಾಹಿತಿ ಮತ್ತು ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆ ಇವರೆಡನ್ನೂ ಸುಧಾರಿಸುವ ಪ್ರಯತ್ನ ಎಂದಿದೆ. ಆದರೆ, ಇಲ್ಲಿ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸುವಂತಿಲ್ಲ ಎನ್ನುತ್ತದೆ. ಇದನ್ನು ತೆಗೆದುಹಾಕಲು ಶಿಫಾರಸು ಮಾಡುವ ಹಿಂದಿನ ಉದ್ದೇಶವೇನು?

ಇದನ್ನೂ ಓದಿ : ದೇಶದ ಮೊದಲ ಮಾಹಿತಿ ಸಂರಕ್ಷಣೆ ಮಸೂದೆಯ ಕರಡಿನಲ್ಲೇನಿದೆ? ಇದರಿಂದ ಯಾರಿಗೆ ಲಾಭ?

ಯಾವುದೇ ಮಾಹಿತಿಯ ಬಳಕೆಗೆ ಮಾಹಿತಿಯ ಹಕ್ಕುದಾರನಿಂದ ಅನುಮತಿ ಪಡೆಯಬೇಕೆಂದು ಮೂಲಭೂತ ನಿಯಮ. ಆದರೆ, ಮಸೂದೆಯ ಕರಡು, 'ಹಾಗೆ ಅನುಮತಿ ನೀಡದಿದ್ದರೆ ಅಥವಾ ಅನುಮತಿಯನ್ನು ಹಿಂದೆ ಪಡೆದರೆ ನಂತರದ ಕಾನೂನಾತ್ಮಕ ಪರಿಣಾಮಗಳಿಗೆ ಅವರೇ ಹೊಣೆ' ಎಂದು ಬೆದರಿಸುತ್ತದೆ.

ಮುಖ್ಯವಾಗಿ, ಮಾಹಿತಿಯ ಹಕ್ಕುದಾರಿಕೆಯ ಬಗ್ಗೆಯೇ ಮಸೂದೆಯು ಸ್ಪಷ್ಟತೆ ಹೊಂದಿಲ್ಲ ಎಂಬ ತಕರಾರು ತೀವ್ರವಾಗಿದೆ. ಬಳಕೆದಾರರೇ ಮಾಹಿತಿಯ ಹಕ್ಕುದಾರರು, ಅವುಗಳನ್ನು ಸಂಸ್ಕರಿಸುವ ಸಂಸ್ಥೆಗಳು ಕೇವಲ ಅದರ ರಕ್ಷಕರಾಗಿರುತ್ತಾರೆ. ಟ್ರಾಯ್‌ ಕೂಡ ಇದೇ ನಿಲುವನ್ನು ಹೊಂದಿದೆ. ಆದರೆ, ಮಸೂದೆಯು ದಾಖಲೆ ಅಥವಾ ಮಾಹಿತಿಯನ್ನು ವಿಶ್ವಾಸದ ಸಂಗತಿಯನ್ನಾಗಿಯಷ್ಟೇ ನೋಡುತ್ತದೆ, ಅದನ್ನು ಆಸ್ತಿಯಾಗಿ ಅಥವಾ ಹಕ್ಕಾಗಿ ಅಲ್ಲ.

ಪ್ರಸ್ತುತ ಯುರೋಪ್‌ನಲ್ಲಿ ಇಂಟರ್ನೆಟ್‌ ಹಾಗೂ ಮಾಹಿತಿ ರಕ್ಷಣೆಯ ದೃಷ್ಟಿಯಿಂದ ಕಟ್ಟುನಿಟ್ಟಾದ ಜನರಲ್‌ ಡಾಟಾ ಪ್ರೊಟೆಕ್ಷನ್‌ ರೆಗ್ಯುಲೇಷನ್‌ ಜಾರಿಗೆ ತರಲಾಗಿದೆ. ಇದು ಹೆಚ್ಚು ಮುಕ್ತವೂ ಪ್ರಜಾಸತ್ತಾತ್ಮಕವೂ ಹಾಗೂ ಬಳಕೆದಾರನ ಹಕ್ಕುಗಳನ್ನು ರಕ್ಷಿಸುವಂತೆ ಇದೆ. ಇದನ್ನೇ ಆಧರಿಸಿದ್ದರೂ ಖಾಸಗಿ ಮಾಹಿತಿ ಸಂರಕ್ಷಣಾ ಮಸೂದೆ ಹೆಚ್ಚು ಸಮರ್ಪಕ ಆಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಸ್ತುತ ಮಸೂದೆ ಕುರಿತು ವ್ಯಕ್ತವಾಗುತ್ತಿರುವ ಟೀಕೆ, ವಿಮರ್ಶೆಗಳ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಈ ಮಸೂದೆಯಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ನಿರೀಕ್ಷಿಸಲಾಗಿದೆ.

ಚಿತ್ರ: ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ

Data Privacy Internet ಖಾಸಗಿತನ Privacy ಇಂಟರ್ನೆಟ್‌ Personal Data Protection Bill Experts Committee ಮಾಹಿತಿ ಖಾಸಗಿತನ ಮಾಹಿತಿ ಸಂರಕ್ಷಣೆ Justice B N Srikrishna ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ
ಟ್ವಿಟರ್‌ ಸ್ಟೇಟ್‌ | ಶಾರುಖ್‌ ಖಾನ್ ಗಣೇಶನ ಹಬ್ಬ ಆಚರಿಸಿದರೆ ತಪ್ಪಿಲ್ಲ 
ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
‘ಸ್ವಚ್ಚತಾ ಹೀ ಸೇವಾ’ ಅಭಿಯಾನದಿಂದ ಹಸುಗಳ ಸಾವು; ಗೋ ಪ್ರೀತಿ ಮರೆತರೇ ಮೋದಿ!
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು