ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ

ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ

“ಇಲ್ಲದ ಗೌರಿಯನ್ನು ಬಂಡವಾಳ ಮಾಡಿಕೊಂಡು ಬದುಕುತ್ತಿರುವ ಕೆಲವು ಕೈಗೂಲಿ ಚಳುವಳಿಗಾರರ ಬಗ್ಗೆ ಕನಿಕರವಿದೆ. ಗೌರಿಯ ಬಗ್ಗೆ ಗೌರವವಿದ್ದವರು ಗೌರಿಯನ್ನು ಕೆಲಸ ಕೊಡಿಸುವ ಏಜೆಂಟಳಂತೆ ಬಿಂಬಿಸುತ್ತಿರಲಿಲ್ಲ,” ಎಂದಿದ್ದಾರೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಎಸ್ ಘಂಟಿ

ಸುಮಾರು ಮೂವತ್ತು ವರ್ಷಗಳಿಂದ ಕರ್ನಾಟಕದ ಎಲ್ಲ ಜನಪರ ಹೋರಾಟಗಳಲ್ಲಿ, ಸಂಘಟನೆಗಳಲ್ಲಿ ದುಡಿದವಳು ನಾನು. ನನ್ನ ಅರಿವಿನ ಗುರು ಬಿ ಆರ್ ಅಂಬೇಡ್ಕರ್. ನನ್ನನ್ನು ಸಾಹಿತ್ಯಿಕವಾಗಿ ಬದ್ಧತೆಯಿಂದ ಬೆಳೆಸಿದವರು ಬಸವರಾಜ ಕಟ್ಟೀಮನಿ. ಸಂಘಟನೆ, ಚಳವಳಿಗೆ ತಂದವರು ಸಿದ್ದನಗೌಡ ಪಾಟೀಲ. ಗೊ ರು ಚನ್ನಬಸಪ್ಪನವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ, ಬೆಂಗಳೂರಿನಲ್ಲಿ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದಲಿತ ಬಂಡಾಯ ಸಾಹಿತ್ಯ ಸಂಘಟನೆಗೆ ಹತ್ತು ವರ್ಷ ತುಂಬಿದ ಕುರಿತು ಸಮ್ಮೇಳನ ನಡೆದಿತ್ತು. ಆ ಹೊತ್ತಿನಲ್ಲಿ, “ಯಾವುದೇ ಸಂಘಟನೆ, ವೇದಿಕೆಗಳು ಕರೆದರೂ ಬಂಡಾಯದ ಮಿತ್ರರು ಹೋಗಬೇಕು; ಅಲ್ಲಿ ನಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು,” ಎಂಬ ನಿರ್ಣಯ ಕೈಗೊಂಡ ನೆನಪಿದೆ. ಇಲ್ಲಿಂದ ದಲಿತ-ಬಂಡಾಯ ಸಾಹಿತ್ಯ ಸಂಘಟನೆ ತಾನೇ ಹಾಕಿಕೊಂಡಿದ್ದ ಮಡಿವಂತಿಕೆಯ ಚೌಕಟ್ಟನ್ನು ತಾನೇ ಮುರಿದಿತ್ತು. ಆ ಕಾರಣದಿಂದಲೇ ಈ ಹಿಂದೆ ಆಳ್ವಾಸ್ ನುಡಿಸಿರಿಗೆ ಹಿರಿಯರಾದ ಬರಗೂರ ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಚಂಪಾ, ಕಂಬಾರ, ಎಂ ಎಂ ಕಲಬುರ್ಗಿ, ರಂಜಾನ್ ದರ್ಗಾ, ಗಿರಡ್ಡಿ ಗೋವಿಂದರಾಜು, ಪುರುಷೋತ್ತಮ ಬಿಳಿಮಲೆಯವರಂತಹ ಮತ್ತು ಶ್ರೀಮತಿ ವೈದೇಹಿಯಂತಹ ಹಿರಿಯ ಲೇಖಕ, ಲೇಖಕಿಯರು ಇದೇ ವೇದಿಕೆಯ ಮೇಲೆ ಮಾತನಾಡಿರುವುದನ್ನು ಜಗತ್ತು ಮರೆತಿಲ್ಲ. ಹಿರಿಯರು ಈಗಾಗಲೇ ಹಂಚಿಕೊಂಡಿರುವ ವೇದಿಕೆಯನ್ನು ಬಳಸಿಕೊಳ್ಳುವುದರ ಬಗ್ಗೆ ನನಗೆ ಸ್ಪಷ್ಟತೆಯಿದೆ. ನನ್ನ ಬದುಕಿನುದ್ದಕ್ಕೂ ನಾನಿದ್ದ ಜಾಗದಲ್ಲಿ ಯಾರ್ಯಾರೋ ಸಹಾಯ ಮಾಡುತ್ತಾರೆಂದು ನಾನು ಕೆಲಸ ಮಾಡಿದವಳಲ್ಲ. ಸಂಡೂರಿನ ಕುಮಾರಸ್ವಾಮಿ ದೇವಾಲಯಕ್ಕೆ ಮಹಿಳೆಯ ಪ್ರವೇಶ ನಿಷೇಧಿಸಿದ್ದ ರಾಜಕಾರಣಕ್ಕೆ ಎದುರಾಗಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿಕೊಂಡಾಗ ಯಾರನ್ನೂ ನನ್ನ ಸಹಾಯಕ್ಕೆ ಕರೆದಿರುವುದಿಲ್ಲ. ಜೀವಬೆದರಿಕೆಯನ್ನು ಮೆಟ್ಟಿ ಸಂಡೂರಿನಲ್ಲಿ ಊರಮ್ಮನ ಜಾತ್ರೆಯಲ್ಲಿ ಕೋಣ ಬಲಿಯನ್ನು ತಡೆದಿರುವೆ. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಹಗಲು, ರಾತ್ರಿಯನ್ನದೆ ಗಣಿ ಲಾರಿಗಳಲ್ಲಿ ಓಡಾಡುವಾಗ, ವಿದ್ಯಾರ್ಥಿಗಳನ್ನು ಬಾಬಾಬುಡನ್‍ಗಿರಿ ಹೋರಾಟಕ್ಕೆ ಕರೆದುಕೊಂಡು ಹೋಗಿದ್ದು ನನ್ನ ಬದ್ಧತೆಯ ಕಾರಣಕ್ಕೆ ಹೊರತಾಗಿ ಏನನ್ನೋ ಪಡೆಯಲು ಅಲ್ಲ. ಹಳ್ಳಿಯಿಂದ, ರೈತ ಕುಟುಂಬದಿಂದ ಹೇಗೆ ಹೇಗೋ ಅಕ್ಷರ ಲೋಕಕ್ಕೆ ತೆರೆದುಕೊಂಡಿರುವ ನಾನು, ಕಳೆದುಕೊಳ್ಳಲು ಪಡೆದುಕೊಂಡದ್ದು ಇದ್ದರೆ ತಾನೇ?

ಕಳೆದ ಮೂವತ್ತು ವರ್ಷಗಳಿಂದ ನಾನು ನಂಬಿರುವ ಸಿದ್ಧಾಂತಕ್ಕೆ ಬದ್ಧಳಾಗಿಯೇ ಇರುವೆ. ಆದರೆ, ಕುಲಪತಿಯಾದ ಮೇಲಿಂದ ಸೋ ಕಾಲ್ಡ್ ಹೋರಾಟಗಾರರು ನಿದ್ದೆ ಕೆಡಿಸಿಕೊಂಡು ಹಗಲಿನಲ್ಲಿಯೂ ಕಂದೀಲು ಹಿಡಿದು ನನ್ನ ಬೆನ್ನು ಬಿದ್ದಿರುವುದು ನನಗೆ ಗೊತ್ತಿದೆ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಎಲ್ಲದರ ಬಗ್ಗೆಯೂ ನನಗೆ ಗೌರವವಿದೆ. ಕೆಲವರು ಆತಂಕದಿಂದ ಬರೆದಿರುವರು, ಆತಂಕಪಡುವ ಅಗತ್ಯವಿಲ್ಲ. ಆಳ್ವಾಸ್ ನುಡಿಸಿರಿ ವೇದಿಕೆ ಯಾರದ್ದು ಎಂಬುದು ನನಗೆ ಗೊತ್ತಿದೆ. ನಾನು ಮಾತನಾಡಿದ ಮೇಲೆ ಚರ್ಚೆಗಳು ನಡೆದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಯಲು ಕುಳಿತು ಅವಸರಕ್ಕೆ ಬಿದ್ದವರು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಬರೆಯುವ ಮುಂಚೆ ತಾಳ್ಮೆ ಇರಲಿ ಎಂದಷ್ಟೇ ಕೇಳುವೆ; ಯಾಕೆಂದರೆ, ನಾನು ಸಂಘಟನೆ, ಚಳವಳಿ ಪ್ರಾರಂಭಿಸಿದ ಹೊತ್ತಿನಲ್ಲಿ ನೀವ್ಯಾರೂ ಇನ್ನೂ ಹುಟ್ಟಿರಲಿಲ್ಲ. ಹಾಗಾಗಿ, ಈ ಕುರಿತು ಮಾತನಾಡಬೇಕಾದವರು ಅಂದಿನ ಹಿರಿಯರು ಮತ್ತು ನನ್ನ ತಲೆಮಾರಿನವರು.

ಪ್ರಗತಿಪರರು, ಚಳವಳಿಗಾರರೆಂದು ನಡುರಸ್ತೆಯಲ್ಲಿ ನಿಂತು ಬಾಯಿ ಬಡಿದುಕೊಳ್ಳುತ್ತಿರುವವರನ್ನು ತೀರಾ ಹತ್ತಿರದಿಂದ ಬಲ್ಲೆ. ಹಿಂದುಳಿದ ಜಾತಿಯಿಂದ ಬಂದ ನನ್ನ ಕುರಿತು ಈ ಜಾತಿವಾದಿಗಳು ಎಂತೆಂಥ ಪಿತೂರಿ ಮಾಡಿರುವರು, ಮಾಡುತ್ತಿರುವರು ಎಂಬುದು ನನಗೆ ದಾಖಲೆ ಸಹಿತ ಮಾಹಿತಿ ಇದೆ. ಅದನ್ನು ಬಿಚ್ಚಿಟ್ಟರೆ ಬೆರಳೆಣಿಕೆಯಷ್ಟಿರುವ ಪ್ರಗತಿಪರ ಶಕ್ತಿಯನ್ನು ವಿರೋಧಿಗಳು ಹಣಿಯಬಹುದು ಎಂಬ ಕಾರಣದಿಂದ ನನ್ನೊಳಗೆ ಕೊನೆಯವರೆಗೂ ಇಟ್ಟುಕೊಳ್ಳುವೆ; ಇದು ಚರಿತ್ರೆ ನನಗೆ ಹೇಳಿಕೊಟ್ಟ ಪಾಠ. ಇಡೀ ಚರ್ಚೆಯ ಪ್ರಾರಂಭದಲ್ಲಿ ಇಲ್ಲದ ಗೌರಿಯನ್ನು ಎಳೆದುತಂದದ್ದರ ಬಗ್ಗೆ ನನಗೆ ಆಕ್ಷೇಪಣೆಗಳಿವೆ. ಗೌರಿಗೂ ನನಗೂ ಇರುವ ಸ್ನೇಹ ಒಂದು ದಿನ, ವರ್ಷದ್ದಲ್ಲ; ಅಖಂಡ ಇಪ್ಪತ್ತು ವರ್ಷದ್ದು. ಇಲ್ಲದ ಗೌರಿಯನ್ನು ಬಂಡವಾಳ ಮಾಡಿಕೊಂಡು ಬದುಕುತ್ತಿರುವ ಕೆಲವು ಕೈಗೂಲಿ ಚಳವಳಿಗಾರರ ಬಗ್ಗೆ ಕನಿಕರವಿದೆ. ಗೌರಿಯ ಬಗ್ಗೆ ಗೌರವವಿದ್ದವರು ಗೌರಿಯನ್ನು ಕೆಲಸ ಕೊಡಿಸುವ ಏಜೆಂಟಳಂತೆ ಬಿಂಬಿಸುತ್ತಿರಲಿಲ್ಲ. ನಾನೆಂದೂ ಗೌರಿಯನ್ನು ನನ್ನ ಖಾಸಗಿ ಕೆಲಸಕ್ಕಾಗಿ ಬಳಸಿಕೊಂಡಿಲ್ಲ. ನಮ್ಮಿಬ್ಬರ ಸ್ನೇಹ ಬರಹಗಾರರದ್ದು ಮತ್ತು ಚಳವಳಿಗಾರರದ್ದು. ಗೌರಿ ಬದುಕಿದ್ದಿದ್ದರೆ ಇಂಥದ್ದಕ್ಕೆ ಖಂಡಿತವಾಗಿಯೂ ಏರುದನಿಯಲ್ಲಿಯೇ ಪ್ರತಿಭಟಿಸುತ್ತಿದ್ದಳು. ನಾನು ಕುಲಪತಿಯಾಗಲೆಂದು ಪ್ರೀತಿಯಿಂದ ಒತ್ತಾಯಿಸಿ ಓಡಾಡಿದ ಗೆಳತಿ ಮಂಜುಳಾ ಮಾನಸ ಅವರಿಗೆ ಅಂದಿನ ನಮ್ಮ ಕಷ್ಟಗಳು ಗೊತ್ತಿವೆ.

ಚಳವಳಿ, ಹೋರಾಟ, ಸಂಘಟನೆ ಕಟ್ಟಿದ ಹಲವಾರು ಹಿರಿಯರು ಒಳ ಕಿರುಕುಳಕ್ಕೆ ಬೇಸತ್ತು ಹೊರಗೆ ಹೋಗಿರುವರು. ಹಾಗಂತ ಅವರ ಶಕ್ತಿಯಾಗಲೀ, ಅವರ ಬಗ್ಗೆ ಲೋಕಕ್ಕೆ ಇರುವ ಅಭಿಪ್ರಾಯವಾಗಲೀ ಬದಲಾಗಿಲ್ಲ. ಆದರೆ, ನಷ್ಟ ಆಗಿರುವುದು ಸಂಘಟನೆಗೆ. ಮನುಷ್ಯ ಸಮಾಜದಲ್ಲಿ ಬದುಕುತ್ತಿರುವ ನಾವು, ‘ಎಲ್ಲ ದೌರ್ಬಲ್ಯಗಳೊಂದಿಗೂ ಮನುಷ್ಯನನ್ನು ಪ್ರೀತಿಸು’ ಎಂಬ ಮಾತನ್ನು ಮರೆತು, “ಅಲ್ಲೇಕೆ ಹೋಗುತ್ತೀರಿ?” “ಅವರನ್ನೇಕೆ ಮಾತನಾಡಿಸುತ್ತೀರಿ?” “ಅಲ್ಲೇನು ನಿಮ್ಮ ಕೆಲಸ?” ಎಂದು ದಾದಾಗಿರಿ ಮಾಡಿದರೆ, ದಾದಾಗಿರಿ ಮಾಡಿಸಿಕೊಂಡವರಿಗೆ ನಷ್ಟವಿಲ್ಲ; ಬದಲಿಗೆ, ದಾದಾಗಿರಿ ಮಾಡಿದವರಿಗೆ ನಷ್ಟ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನಗೆ ಬದ್ಧತೆಯನ್ನು ಕಲಿಸಿದವರು ನನ್ನೊಂದಿಗೆ ಇಂದಿಗೂ ಇರುವುದರಿಂದ ಅವರನ್ನು ಉಳಿಸಿಕೊಳ್ಳುವುದಕ್ಕೆ ನನ್ನ ವಿವೇಕ, ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವೆ. ಇದರಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ವೇದಿಕೆ ನೋಡಿ, ಲೆಕ್ಕಾಚಾರ ಹಾಕಿ ಮಾತನಾಡುವ, ಕೆಲಸ ಮಾಡುವ ಜಾಯಮಾನ ನನ್ನದಲ್ಲ. ದಾಸರು ನೆನಪಾಗುತ್ತಾರೆ: 'ನಿಂದಕರು ಇರಬೇಕು ಹಂದಿಯ ತೆರದಿ.’ ನೀವು ನಿಂದಿಸಿದಷ್ಟೂ ನಾನು ಎಚ್ಚರವಾಗಿರಲು ಸಾಧ್ಯವಾಗುತ್ತದೆ. ಅದಕ್ಕೇ ನೀವು ನನಗೆ ಬಂಧುಗಳು. ನಿಮಗೆ ಧನ್ಯವಾದಗಳು.

ಇದು ಲೇಖಕರ ಅಭಿಪ್ರಾಯ, ಸಂಸ್ಥೆಯದಲ್ಲ

Prof. Giraddi Govindaraj University ವಿಶ್ವವಿದ್ಯಾಲಯ ಗೌರಿ ಲಂಕೇಶ್‌ ಬಳಗ Alvas Nudisiri ಆಳ್ವಾಸ್ ನುಡಿಸಿರಿ Alva's Education Foundation B R Ambedkar ಬಿ ಆರ್ ಅಂಬೇಡ್ಕರ್ ದಿನೇಶ್‌ ಅಮೀನ್‌ಮಟ್ಟು Dinesh Aminmattu M M Kalburgi ಎಂ ಎಂ ಕಲಬುರ್ಗಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಗಿರಡ್ಡಿ ಗೋವಿಂದರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ Kannada University Hampi ಹಂಪಿ ಕನ್ನಡ ವಿಶ್ವವಿದ್ಯಾಲಯ Former CM Siddaramaiah Gauri Lankesh Assassination ಮಲ್ಲಿಕಾ ಎಸ್ ಘಂಟಿ Mallika S Ghanti
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More

ಕೇರಳದಲ್ಲಿ ನಡೆದದ್ದು ಲವ್ ಜಿಹಾದ್ ಅಲ್ಲ, ಪ್ರೇಮ ಪ್ರಕರಣಗಳಷ್ಟೆ ಎಂದ ಎನ್‌ಐಎ

ನಿಷೇಧಿತ ಪೊಲಿಯೋ ಲಸಿಕೆ ಬೆಂಗಳೂರಿನಲ್ಲಿ ಬಳಕೆ? ಕಾಡಲಿದೆಯೇ ಪೊಲಿಯೋ ವೈರಸ್‌

ತಮ್ಮ ರಾಜ್ಯದವರ ಮೇಲಿನ ದಾಳಿ ಬಗ್ಗೆ ಬಿಹಾರ ರಾಜಕಾರಣಿಗಳೇಕೆ ಮಾತನಾಡಿಲ್ಲ?

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪಸರಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?

ರೆಹಾನಾ ಫಾತಿಮಾ ಎಂಬ ನುಂಗಲಾಗದ, ಉಗುಳಲೂ ಆಗದ ಬಿಸಿತುಪ್ಪ!

ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದ ಜನಸಾಮಾನ್ಯನಿಗೆ ದಕ್ಕಿದ್ದೇನು?

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು