ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು
ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?
ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!

ಪೇಟೆಯಲ್ಲಿ ತಲ್ಲಣ ಮೂಡಿಸಿರುವ ಐಎಲ್ & ಎಫ್ಎಸ್ ಬಿಕ್ಕಟ್ಟಿಗೆ ಕಾರಣಗಳೇನು?

ಐಎಲ್ & ಎಫ್ಎಸ್ ಸೆಪ್ಟೆಂಬರ್ ತಿಂಗಳಲ್ಲಿ ಬಾಕಿ ಪಾವತಿ ಮಾಡುವಲ್ಲಿ ವಿಫಲವಾದ ನಂತರ ಷೇರುಪೇಟೆಯಲ್ಲಿ ತಲ್ಲಣ ಮೂಡಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಲಯದ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಈ ಬಿಕ್ಕಟ್ಟಿಗೆ ಕಾರಣಗಳೇನು?

ರೇಣುಕಾಪ್ರಸಾದ್ ಹಾಡ್ಯ

ಇನ್ಫ್ರಾಸ್ಟಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ (ಐಎಲ್ & ಎಫ್ಎಸ್) ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಪಾವತಿಸಿ ಬೇಕಾದ ಸಾಲದ ಮೊತ್ತವನ್ನು ಪಾತಿಸಲು ವಿಫಲವಾಗಿದೆ. ಅರ್ಥಾತ್, ಸುಸ್ತಿಯಾಗಿದೆ. ತತ್ಪರಿಣಾಮ, ಅತ್ಯಂತ ಸುರಕ್ಷಿತ ಎಂಬ ಕಾರಣಕ್ಕೆ ‘ಎಎಎ+’ ರೇಟಿಂಗ್ ಹೊಂದಿದ್ದ ಐಎಲ್ & ಎಫ್ಎಸ್ ಅನ್ನು ರೇಟಿಂಗ್ ಏಜೆನ್ಸಿಗಳು ಎಂಟು ಹಂತಗಳಷ್ಟು ಪಾತಾಳಕ್ಕೆ ತಳ್ಳಿ ‘ಡಿ’ ರೇಟಿಂಗ್ ನೀಡಿವೆ. ‘ಡಿ’ ರೇಟಿಂಗ್ ಎಂದರೆ, ಡಿಫಾಲ್ಟ್ ಅಥವಾ ಸುಸ್ತಿದಾರ ಎಂದರ್ಥ. ಬಂಡವಾಳ ಮಾರುಕಟ್ಟೆಯಲ್ಲಿ ‘ಡಿ’ ರೇಟಿಂಗ್ ಇದ್ದರೆ ಆ ಕಂಪನಿ ಕತೆ ಮುಗಿದಂತೆ!

ಹಾಗಾದರೆ ಐಎಲ್ & ಎಫ್ಎಸ್ ಕತೆ ಮುಗಿಯಿತೇ? ಖಂಡಿತ ಇಲ್ಲ. ಆದರೆ, ತೀವ್ರವಾದ ನಗದು ಬಿಕ್ಕಟ್ಟು ಎದುರಿಸುತ್ತಿದೆ. ಈ ಹಂತದಲ್ಲಿ ಬಂಡವಾಳ ಹೂಡಿಕೆ ಮಾಡಿ ಚೇತರಿಕೆ ನೀಡಬೇಕು. ಈ ಚೇತರಿಕೆಯು ಮುಂಬರುವ ವರ್ಷಗಳಲ್ಲಿ ಐಎಲ್ & ಎಫ್ಎಸ್ ಹೆಚ್ಚು ಸುಸ್ಥಿರ ಮತ್ತು ಸಮರ್ಥವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಇನ್ಫ್ರಾಸ್ಟಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ವಿಶೇಷವಾದ ಹಣಕಾಸು ಸಂಸ್ಥೆ. ಇದು ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತದೆ. ಆದರೆ, ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ವಿತರಿಸಿದರೆ, ಐಎಲ್ & ಎಫ್ಎಸ್ ದೀರ್ಘಾವಧಿ ಮತ್ತು ಬಹು ದೀರ್ಘಾವಧಿ ಸಾಲ ವಿತರಿಸುತ್ತದೆ.

ಐಎಲ್ & ಎಫ್ಎಸ್ 10-15 ವರ್ಷಗಳಿಂದ 30 ವರ್ಷಗಳವರೆಗೂ ಸಾಲ ವಿತರಿಸುತ್ತದೆ. ಮುಖ್ಯವಾಗಿ, ಮೂಲಭೂತ ಸೌಕರ್ಯ ವಲಯದ ಯೋಜನೆಗಳಿಗೆ ಸಾಲ ಒದಗಿಸುತ್ತದೆ. ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಈ ವಲಯಕ್ಕೆ ಸಾಲ ನೀಡಿದರೂ ಸಾಲ ಮರುಪಾವತಿ ಅವಧಿ ಹತ್ತು ವರ್ಷ ಮೀರುವುದಿಲ್ಲ. ಮೂಲಭೂತ ವಲಯದ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುವುದರಿಂದ ಸುಧೀರ್ಘ ಅವಧಿಯ ಸಾಲ ವಿತರಣೆಗಾಗಿಯೇ ರೂಪುಕೊಂಡಿದ್ದು ಐಎಲ್ & ಎಫ್ಎಸ್. ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವ್ಯಾಪ್ತಿಗೆ ಬರುತ್ತದೆ.

ಆರಂಭದಲ್ಲಿ ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೆಷನ್ (ಎಚ್ಡಿಎಫ್ಸಿ), ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗಳು ಐಎಲ್ & ಎಫ್ಎಸ್ ನಲ್ಲಿ ಹೂಡಿಕೆ ಮಾಡಿದ್ದವು. ನಂತರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್, ಓರಿಕ್ಸ್ ಕಾರ್ಪೊರೇಷನ್ ಜಪಾನ್, ಅಬುದಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ಎಡಿಐಎ) ಷೇರು ಖರೀದಿಸಿ ಪಾಲುದಾರಿಕೆ ಹೊಂದಿವೆ.

ಐಎಲ್ & ಎಫ್ಎಸ್ ಕಾರ್ಯವಿಧಾನವು ಬ್ಯಾಂಕುಗಳಿಗಿಂತ ಭಿನ್ನವಾಗಿರುತ್ತದೆ. ಬ್ಯಾಂಕುಗಳು ನೇರವಾಗಿ ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಐಎಲ್ & ಎಫ್ಎಸ್ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಮ್ಯೂಚುವಲ್ ಫಂಡ್ ಹೌಸ್ ಗಳು, ಎಲ್ಐಸಿಯಂತಹ ನಗದು ಶ್ರೀಮಂತ ಕಂಪನಿಗಳಿಂದ ಸಾಲ ಪಡೆಯುತ್ತದೆ. ಈ ಸಾಲವು ಅಲ್ಪಾವಧಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸ್ವರೂಪದಲ್ಲಿರುತ್ತದೆ. ಹೀಗೆ ಪಡೆದ ಸಾಲವನ್ನು ಮೂಲಭೂತ ಸೌಲಭ್ಯ ವಲಯದ ಯೋಜನೆಗಳನ್ನು ಜಾರಿ ಮಾಡುವ ಕಂಪನಿಗಳಿಗೆ ದೀರ್ಘಾವಧಿಗೆ ಸಾಲ ನೀಡುತ್ತದೆ. ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ಮತ್ತು ನೀಡುವ ಸಾಲಕ್ಕೆ ಪಡೆಯುವ ಬಡ್ಡಿ ನಡುವಿನ ಅಂತರವು ಐಎಲ್ & ಎಫ್ಎಸ್‌ ಲಾಭದ ಮೂಲ.

ಸದ್ಯ ಐಎಲ್ & ಎಫ್ಎಸ್ ತನ್ನ ಕಾರ್ಯವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. 16 ಉಪಸಂಸ್ಥೆಗಳ ಮೂಲಕ ವಿವಿಧ ಸೇವೆಗಳನ್ನು ಒದಗಿಸುತ್ತಿದೆ. ಈ ಉಪಸಂಸ್ಥೆಗಳೂ ಮೂಲ ಸಂಸ್ಥೆಯ ಕಾರ್ಯಾಚರಣೆಗೆ ಪೂರಕವಾಗಿ ಸೇವೆಗಳನ್ನು ಒದಗಿಸುತ್ತವೆ.

ಸಮಸ್ಯೆ ಉದ್ಭವಿಸಿದ್ದೆಲ್ಲಿ?: ವಿವಿಧ ಯೋಜನೆಗಳಿಗೆ ಸಾಲ ನೀಡಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಅಲ್ಪಾವಧಿ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವಲ್ಲಿ ಐಎಲ್ & ಎಫ್ಎಸ್ ವಿಫಲವಾಗಿದೆ. ಹೀಗೆ ಮೂರು-ನಾಲ್ಕು ಪ್ರಕರಣಗಳು ಮರುಕಳಿಸಿದ್ದರಿಂದಾಗಿ ರೇಟಿಂಗ್ ಏಜೆನ್ಸಿಗಳು ತಕ್ಷಣವೇ ಎಎಎ+ ರೇಟಿಂಗ್‌ನಿಂದ ಡಿ ರೇಟಿಂಗ್‌ಗೆ ಇಳಿಸಿದವು. ಈ ಬೆಳವಣಿಗೆಗಳ ನಡುವೆಯೇ ಸಿಇಒ ಮತ್ತು ಎಂಡಿ ರಮೇಶ್ ಭಾವ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ.

ಐಎಲ್ & ಎಫ್ಎಸ್ ಮರುಪಾವತಿ ಮಾಡಲು ವಿಫಲವಾಗಿದ್ದೇಕೆ? ಐಎಲ್ & ಎಫ್ಎಸ್ ನಗದು ಕೊರತೆ ಎದುರಿಸುತ್ತಿದೆ. ನಗದು ಕೊರತೆ ಎಂದರೆ, ಐಎಲ್ & ಎಫ್ಎಸ್ ವಿವಿಧ ಕಂಪನಿಗೆ ನೀಡಿರುವ ಸಾಲಗಳು ಸಕಾಲದಲ್ಲಿ ಮರುಪಾವತಿ ಆಗಿಲ್ಲ. ಹೀಗಾಗಿ, ನಗದು ಕೊರತೆ ಎದುರಾಗಿದೆ. ಐಎಲ್ & ಎಫ್ಎಸ್ ನೀಡಿರುವ ಸಾಲಗಳು ಸಕಾಲದಲ್ಲಿ ಪಾವತಿಯಾಗಿದ್ದರೆ ನಗದು ಕೊರತೆ ಸೃಷ್ಟಿಯಾಗುತ್ತಿರಲಿಲ್ಲ. ಇದೊಂದು ವಿಷವೃತ್ತದಂತಿದೆ. ಸಾಲ ಪಡೆದ ಕಂಪನಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡದೆ ಇದ್ದಾಗ ಐಎಲ್ & ಎಫ್ಎಸ್ ಕೂಡ ತಾನು ಪಡೆದ ಸಾಲ ಬಾಧ್ಯತೆಗಳನ್ನು ಸಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇಡೀ ಸಮಸ್ಯೆ ಮೂಲ ಇಲ್ಲಿದೆ.

ಸಾಲಗಳು ಸಕಾಲದಲ್ಲಿ ಪಾವತಿಯಾಗದ ಹಂತದಲ್ಲಿ ನಗದು ಕೊರತೆ ಉದ್ಭವಿಸುತ್ತದೆ. ನಗದು ಕೊರತೆಯಿಂದಾಗಿ ಸಾಲ ಮರುಪಾವತಿ ಸಾಧ್ಯವಾಗದೆ ಸುಸ್ತಿಯಾಗುತ್ತದೆ. ಈಗ ಬ್ಯಾಂಕುಗಳು ಎದುರಿಸುತ್ತಿರುವ ನಿಷ್ಕ್ರಿಯ ಸಾಲದ ಮೂಲವೂ ಇದೇ.

90,000 ಕೋಟಿಗಿಂತಲೂ ಹೆಚ್ಚು ಸಾಲ ವಿತರಿಸಿರುವ ಐಎಲ್ & ಎಫ್ಎಸ್ ಮತ್ತು ಅದರ ಸಹಸಂಸ್ಥೆಗಳು ಬರುವ ದಿನಗಳಲ್ಲಿ ಮತ್ತಷ್ಟು ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲ ಮರುಪಾವತಿ ಮಾಡಬೇಕಿದೆ. ಡಿಎಚ್ಎಫ್ಎಲ್, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಸೇರಿದಂತೆ ಹಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಐಎಲ್ & ಎಫ್ಎಸ್‌ಗೆ ದೊಡ್ಡ ಮೊತ್ತದಲ್ಲಿ ಸಾಲ ನೀಡಿವೆ. ರೇಟಿಂಗ್ ಏಜೆನ್ಸಿಗಳು ಐಎಲ್ & ಎಫ್ಎಸ್ ನೀಡಿದ್ದ ರೇಟಿಂಗ್ ಹಿಂಪಡೆದು ಡಿ ರೇಟಿಂಗ್ ನೀಡಿದ ಪರಿಣಾಮ ಡಿಎಚ್ಎಫ್ಎಲ್, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಎಲ್ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ಬಹುತೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳು ತ್ವರಿತವಾಗಿ ಕುಸಿಯುತ್ತಿವೆ.

ಐಎಲ್ & ಎಫ್ಎಸ್ ಈ ಕಂಪನಿಗಳಿಗೆ ಸಕಾಲದಲ್ಲಿ ಪಾವತಿ ಮಾಡದೆ ಇದ್ದರೆ, ಈ ಕಂಪನಿಗಳು ತಾವು ಪಾವತಿಸಬೇಕಾದ ಸಾಲಗಳನ್ನು ಸಕಾಲದಲ್ಲಿ ಪಾವತಿಸದೆ ಸುಸ್ತಿ ಆಗಬೇಕಾಗುತ್ತದೆ. ಆಗ ಇಡೀ ಹಣಕಾಸು ಸಂಸ್ಥೆಗಳ ವ್ಯವಸ್ಥೆ ಹದಗೆಡುತ್ತದೆ. ಅದು ಷೇರುಪೇಟೆ ಮತ್ತು ಬಂಡವಾಳ ಮಾರುಕಟ್ಟೆ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸದ್ಯಕ್ಕೆ ಅತಿ ಹೆಚ್ಚಿನ ಪಾಲು ಹೊಂದಿರುವ ಎಲ್ಐಸಿಯು ಐಎಲ್ & ಎಫ್ಎಸ್ ಕಂಪನಿ ನಶಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಈ ಹಂತದಲ್ಲಿ ಬಂಡವಾಳ ಹೂಡಿಕೆ ಮಾಡುವುದೋ ಬೇಡವೋ ಎಂಬುದನ್ನು ನಿರ್ಧರಿಸಿಲ್ಲ. ಒಂದು ವೇಳೆ, ಐಎಲ್ & ಎಫ್ಎಸ್ ಕಂಪನಿ ದಿವಾಳಿಯಾದರೆ ಎಲ್ಐಸಿ ಕೂಡ ನಷ್ಟ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಶೇ.23.5ರಷ್ಟು ಪಾಲು ಹೊಂದಿರುವ ಓರಿಕ್ಸ್, ಶೇ.12.6ರಷ್ಟು ಪಾಲು ಹೊಂದಿರುವ ಎಡಿಐಎ, ಶೇ.9ರಷ್ಟು ಪಾಲು ಹೊಂದಿರುವ ಎಚ್ಡಿಎಫ್ಸಿ ಮತ್ತು ಶೇ.6.4ರಷ್ಟು ಪಾಲು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ನಷ್ಟ ಅನುಭವಿಸುವುದು ಅನಿವಾರ್ಯವಾಗುತ್ತದೆ.

ಐಎಲ್ & ಎಫ್ಎಸ್ ಬಿಕ್ಕಟ್ಟಿಗೆ ಪರಿಹಾರವೇನು?: ವಾಸ್ತವವಾಗಿ ಐಎಲ್ & ಎಫ್ಎಸ್ ನಗದು ಕೊರತೆಯ ಬಿಕ್ಕಟ್ಟು ಎದುರಿಸುತ್ತಿದೆಯೇ ಹೊರತು ನಷ್ಟಕ್ಕೀಡಾಗಿ ದಿವಾಳಿಯಾಗುವ ಹಂತ ತಲುಪಿಲ್ಲ. ಅಂದರೆ, ತನ್ನ ಸಾಲ ಬಾಧ್ಯತೆಗಳನ್ನು ಸಕಾಲದಲ್ಲಿ ನಿರ್ವಹಿಸಲು ವಿಫಲವಾಗಿದೆ. ಅದಕ್ಕೆ ಮುಖ್ಯ ಕಾರಣ, ವಿವಿಧ ಕಂಪನಿಗಳು ಐಎಲ್ & ಎಫ್ಎಸ್‌ಗೆ ನೀಡಬೇಕಾದ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡಿಲ್ಲ.

ಇದನ್ನೂ ಓದಿ : ನಗದು ಕೊರತೆ ಬಿಕ್ಕಟ್ಟು; ಷೇರುಪೇಟೆಯಲ್ಲಿ ಮುಂದುವರಿದ ರಕ್ತದೋಕುಳಿ

ಬಂಡವಾಳ ಮಾರುಕಟ್ಟೆಯಲ್ಲಿ ಸಕಾಲದಲ್ಲಿ ಸಾಲ ಪಾವತಿ ಮಾಡುವುದೇ ಮುಖ್ಯ ಅರ್ಹತೆ. ಸಾಲ ಪಾವತಿಸದೆ ಸುಸ್ತಿಯಾದರೆ ಅದೊಂದು ದೊಡ್ಡ ಅಪಕೀರ್ತಿ. ರೇಟಿಂಗ್ ಏಜೆನ್ಸಿಗಳು ತಕ್ಷಣವೇ ಡಿರೇಟ್ ಮಾಡುತ್ತವೆ. ಐಎಲ್ & ಎಫ್ಎಸ್ ಎದುರಿಸುತ್ತಿರುವ ಸಮಸ್ಯೆ ಇದೇ. ತಕ್ಷಣಕ್ಕೆ ಪ್ರವರ್ತಕ ಪಾಲುದಾರರು ಬಂಡವಾಳ ಹೂಡಿಕೆ ಮಾಡಿ, ತಕ್ಷಣದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಒಂದು ಹಂತದ ಸಮಸ್ಯೆ ಮುಗಿಯುತ್ತದೆ. ವಿವಿಧ ಕಂಪನಿಗಳಿಂದ ಸಾಲ ವಾಪಸಾದಂತೆ ಮರುಪಾವತಿಯೂ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಆದರೆ, ಪ್ರವರ್ತಕ ಪಾಲುದಾರರು ಬಂಡವಾಳ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆಯೇ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ. ಅತಿ ಹೆಚ್ಚು ಪಾಲು ಹೊಂದಿರುವ ಎಲ್ಐಸಿ ಮಾತ್ರವೇ ಐಎಲ್ & ಎಫ್ಎಸ್‌ನ ಬಿಕ್ಕಟ್ಟು ಪರಿಹಾರಕ್ಕೆ ಬಂಡವಾಳವೆಂಬ ಸಂಜೀವಿನಿ ನೀಡಬಹುದು. ಉಳಿದವರಿಂದ ಇದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

SBI ಎಸ್ಬಿಐ LIC ಎಲ್ಐಸಿ Cash Crunch ನಗದು ಕೊರತೆ IL&FS ADIA ಐಎಲ್ &ಎಫ್ಎಸ್ ಎಡಿಐಎ
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು
ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?
ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!
Editor’s Pick More

ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು

ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

ಟ್ವಿಟರ್ ಸ್ಟೇಟ್| ಋತುಸ್ರಾವದ ಮಾನಸಿಕ ತಲ್ಲಣದತ್ತ ಗಮನ ಸೆಳೆದ ಶೆಹ್ಲಾ ರಶೀದ್

ಅಧ್ಯಾತ್ಮದ ಬೇಡಿಕೆಯ ಬ್ರ್ಯಾಂಡ್‌ ‘ಗಾಸಿಪ್‌’ ಗುರು ಜಗ್ಗಿ ವಾಸುದೇವ್‌

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ದೇಶದ ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ಮನಮೋಹನ್ ಸಿಂಗ್ ನೆನಪಾಗುತ್ತಾರೇಕೆ?

ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಕೆಂಬಸ್‌ ಕಲ್ಯಾ | ರಸ್ತೆ ಗುಂಡಿಗಳಲ್ಲಿ ಉಪ್ಪಿ ಪಾರ್ಟಿಯ ಎಂಪಿ ಸೀಟು ಕೂತದ!