ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
#MeToo | ಲೈಂಗಿಕ ದೌರ್ಜನ್ಯ ಆರೋಪಗಳು ಆಧಾರರಹಿತ ಎಂದ ಸಚಿವ ಎಂ ಜೆ ಅಕ್ಬರ್
ಐಎಎಸ್‌ ಅಧಿಕಾರಿ ಮಗುವಿಗೆ ನಿಷೇಧಿತ ಪೊಲಿಯೋ ಲಸಿಕೆ ಆರೋಪ; ಇಬ್ಬರ ವಿರುದ್ಧ ಎಫ್‌ಐಆರ್‌

ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?

ಕೇಂದ್ರ ಸಚಿವ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಹಾಗೂ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ನಡುವಿನ ಹಣಕಾಸು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿವೈಎಸ್‌ಪಿ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದ್ದು, ಸಂಕಷ್ಟ ಎದುರಾಗಿದೆ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌, ಬಾಗಲಕೋಟೆ ಬಿಜೆಪಿ ಶಾಸಕ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್‌ ವೀರಣ್ಣ ಚರಂತಿಮಠ ಸೇರಿದಂತೆ ಆರು ಮಂದಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿವೈಎಸ್‌ಪಿ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯವು ಸತತ ಎರಡನೇ ಬಾರಿಗೆ ವಜಾಗೊಳಿಸಿದೆ. ಇದರಿಂದ ಆರೋಪಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅಕ್ಟೋಬರ್‌ ೨೦ರಂದು, ಅರ್ಜಿದಾರರಾದ ಬಾಗಲಕೋಟೆಯ ನಿವಾಸಿ ಮತ್ತು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯ ಮಲ್ಲಣ್ಣ ಜಿಗಳೂರ ಅವರ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಕೋರ್ಟ್‌‌ ಶನಿವಾರ ತನ್ನ ಆದೇಶದಲ್ಲಿ ಹೇಳಿದೆ.

೨೦೧೪ರಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಕೋರ್ಟ್‌ಗೆ‌ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ, ಅದನ್ನು ಮಾನ್ಯ ಮಾಡದ ನ್ಯಾಯಲಯವು, ಪೊಲೀಸರಿಗೆ ಛೀಮಾರಿ ಹಾಕಿ, ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಸುಮಾರು ನಾಲ್ಕು ವರ್ಷ ತನಿಖೆ ನಡೆಸಿದ್ದ ಬಾಗಲಕೋಟೆ ಪೊಲೀಸರು, ಎರಡನೇ ಬಾರಿಯೂ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಇದನ್ನು ವಜಾಗೊಳಿಸಿರುವ ನ್ಯಾಯಾಲಯವು‌, ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ೨೦೧೪ರಲ್ಲಿ ಕೋರ್ಟ್‌ ಆದೇಶದ ಮೇರೆಗೆ ತೇಜಸ್ವಿನಿ ಅನಂತ್‌ ಕುಮಾರ್‌, ವೀರಣ್ಣ ಚರಂತಿಮಠ, ವೀರಣ್ಣ ಹಲಕುರ್ಕಿ, ಮಹೇಶ್‌ ಅಥಣಿ, ಜಿ ಆರ್‌ ನಾರಾಯಣ್‌ ಮತ್ತು ಕೆ ಹರೀಶ್‌ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

“ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ಸತತ ಎರಡನೇ ಬಾರಿ ವಜಾಗೊಳಿಸುವ ಮೂಲಕ ನ್ಯಾಯಾಲಯವು ನಮ್ಮ ವಾದದಲ್ಲಿ ಸತ್ಯವಿದೆ ಎಂದು ಒಪ್ಪಿದೆ. ಅಕ್ಟೋಬರ್ ೨೦ರಂದು ನಮ್ಮ ಹೇಳಿಕೆ ದಾಖಲಿಸಿಕೊಂಡು, ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡುವ ಸಾಧ್ಯತೆ ಇದೆ. ಆರೋಪಿಗಳ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳು ಜಾಮೀನುರಹಿತ ಪ್ರಕರಣಗಳಾಗಿವೆ. ಕೋರ್ಟ್‌ ಸೂಚನೆಯಂತೆ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದೇವೆ,” ಎಂದು ಅರ್ಜಿದಾರರ ಪರ ವಕೀಲ ಎಸ್‌ ಕೆ ಮಗಜಿ ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅರ್ಜಿದಾರ ಮಲ್ಲಣ್ಣ ಜಿಗಳೂರ, “ಹೇಳಿಕೆ ದಾಖಲಿಸಿಕೊಳ್ಳಲು ಆದೇಶಿಸುವ ಮೂಲಕ ಕೋರ್ಟ್‌ ಪ್ರಕರಣವನ್ನು ಪ್ರಮುಖ ಘಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಾಕಷ್ಟು ಕಾಲಹರಣ ಮಾಡಿದ್ದಾರೆ. ಕೆಲವರು ತಮ್ಮ ಸ್ಥಾನಮಾನ ದುರ್ಬಳಕೆ ಮಾಡಿಕೊಳ್ಳುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ವಾದದಲ್ಲಿ ಸತ್ಯಾಂಶವಿದೆ ಎಂಬುದು ಕೋರ್ಟ್‌ಗೆ ಮನವರಿಕೆಯಾಗಿದೆ. ನ್ಯಾಯಾಲಯಕ್ಕೆ ಅಗತ್ಯ ದಾಖಲೆ ಒದಗಿಸಲಾಗುವುದು,” ಎಂದಿದ್ದಾರೆ.

ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರು ಅನಾರೋಗ್ಯದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವು ದಿನ ಅವರು ಅಲ್ಲಿಯೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಪತಿಯ ಜೊತೆಯೇ ತೇಜಸ್ವಿನಿ ಅವರೂ ಇದ್ದಾರೆ. ಪ್ರಕರಣದ ಸಂಬಂಧ ಪ್ರತಿಕ್ರಿಯೆ ಪಡೆಯಲು ‘ದಿ ಸ್ಟೇಟ್‌’ ವೀರಣ್ಣ ಚರಂತಿಮಠ ಅವರನ್ನು ಸಂಪರ್ಕಿಸಲು ಯತ್ನಿಸಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಕಳೆದ ವರ್ಷದ ಡಿಸೆಂಬರ್‌ ೩೦ರಂದು ರಾಮನಗರ ಜಿಲ್ಲೆಗೆ ಸೇರಿದ ಬಿಡದಿ ಸಮೀಪದಲ್ಲಿ ಅಮೃತ ಎಂಜಿನಿಯರಿಂಗ್‌ ಕಾಲೇಜು ಮರು ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಆಗಮಿಸಿದ್ದರು. ಇದಕ್ಕೂ ಮುನ್ನ, ಡಿಸೆಂಬರ್‌ ೨೨ರಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದ ಮಲ್ಲಣ್ಣ ಜಿಗಳೂರ ಅವರು, ತೇಜಸ್ವಿನಿ ಅನಂತ್‌ ಕುಮಾರ್ ಮತ್ತು ವೀರಣ್ಣ ಚರಂತಿಮಠ ಅವರ ಮೇಲೆ ಕ್ರಿಮಿನಲ್‌ ದೂರುಗಳು ದಾಖಲಾಗಿವೆ. ಹೀಗಾಗಿ, ಆರೋಪಿಗಳ ಒಡೆತನದ ಕಾಲೇಜು ಪುನರ್‌ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸಬಾರದು ಎಂದು ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರಪತಿ ಕಾರ್ಯಾಲಯವು, ಚರಂತಿಮಠ ಮತ್ತು ತೇಜಸ್ವಿನಿ ಅವರು ಕೋವಿಂದ್‌ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಇದನ್ನೂ ಓದಿ : ರಾಷ್ಟ್ರಪತಿ ಭವನ ತಲುಪಿದ ಸಚಿವ ಅನಂತ್‌ ಕುಮಾರ್‌ ಪತ್ನಿಯ ಮೇಲಿದ್ದ ಆರೋಪ

ಪ್ರಕರಣದ ಹಿನ್ನೆಲೆ ಏನು?

“ತೇಜಸ್ವಿನಿ ಅನಂತ್‌ ಕುಮಾರ್‌ ಅವರು ನಿರ್ದೇಶಕರಾಗಿರುವ ನಾಲೆಡ್ಜ್‌ ಪಾರ್ಕ್‌ ಆಫ್‌ ಇಂಡಿಯಾ ಟ್ರಸ್ಟಿನಡಿಯಲ್ಲಿ ದಶಕದ ಹಿಂದೆ ಅಮೃತ ಎಂಜಿನಿಯರಿಂಗ್‌ ಕಾಲೇಜು ತೆರೆಯಲಾಗಿದೆ. ಆದರೆ, ಹೆಚ್ಚು ವಿದ್ಯಾರ್ಥಿಗಳು ದಾಖಲಾಗದ ಹಿನ್ನೆಲೆಯಲ್ಲಿ ಕಾಲೇಜನ್ನು ಮಾರಾಟ ಮಾಡಲು ತೇಜಸ್ವಿನಿ ಅವರು ಮುಂದಾಗಿದ್ದರು. ಟ್ರಸ್ಟ್ ಸಂಪೂರ್ಣ ನಷ್ಟದಲ್ಲಿ ಮಾತ್ರ ಮಾರಾಟ ಮಾಡಬಹುದಾಗಿದೆ. ನಾಲೆಡ್ಜ್‌ ಪಾರ್ಕ್‌ ಆಫ್‌ ಇಂಡಿಯಾ ಟ್ರಸ್ಟ್‌ ಸಾರ್ವಜನಿಕ ಆಸ್ತಿಯಾಗಿದ್ದು, ಮಾರಾಟ ಅಥವಾ ಭೋಗ್ಯದ ಕರಾರು ಮಾಡುವ ಮುನ್ನ ಸಹಾಯಕ ದತ್ತಿ ಆಯುಕ್ತರ ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಅನುಮತಿ ಪಡೆಯದೆ ವ್ಯವಹರಿಸಲಾಗಿದೆ. ಇತ್ತ ಬಸವೇಶ್ವರ ವಿದ್ಯಾವರ್ಧಕ ಸಂಘದ (ಸದ್ಯದ ಮಾರುಕಟ್ಟೆ ಮೌಲ್ಯ ಅಂದಾಜು ೨ ಸಾವಿರ ಕೋಟಿ ರುಪಾಯಿ) ಚೇರ್ಮನ್‌ ವೀರಣ್ಣ ಚರಂತಿಮಠ ಅಮೃತ ಎಂಜಿನಿಯರಿಂಗ್‌ ಕಾಲೇಜು ಖರೀದಿಸಲು ಮುಂದಾಗಿದ್ದು, ಕಾಲೇಜು ಮತ್ತು ಅಲ್ಲಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡಿದಾಗ ಸುಮಾರು ೨೬ ಕೋಟಿ ರುಪಾಯಿ ಬೆಲೆಬಾಳುತ್ತದೆ ಎಂದು ತಜ್ಞರ ಸಮಿತಿ ಅಂದಾಜಿಸಿತ್ತು. ಇದಕ್ಕಾಗಿ ಅವರು ಮತ್ತೊಂದು ಆಸ್ತಿಯನ್ನು ಒತ್ತೆ ಇಟ್ಟು ೫೦ ಕೋಟಿ ರುಪಾಯಿ ಸಾಲ ಪಡೆದಿದ್ದಾರೆ. ಆದರೆ, ಅಮೃತ ಎಂಜಿನಿಯರಿಂಗ್ ಕಾಲೇಜಿಗೆ ಪಾವತಿಸಿರುವುದು ಕೇವಲ ೨೬ ಕೋಟಿ ರುಪಾಯಿ. ಈ ಹಣವನ್ನೂ ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂಬುದಕ್ಕೆ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ನಲ್ಲೇ ದಾಖಲೆಗಳಿವೆ‌,” ಎಂದು ಮಲ್ಲಣ್ಣ ಜಿಗಳೂರು ಕೋರ್ಟ್‌ ಗಮನ ಸೆಳೆದಿದ್ದಾರೆ.

ಬಿಜೆಪಿ BJP Amrutha Engineering College Tejaswini Ananth Kumar ತೇಜಸ್ವಿನಿ ಅನಂತ್‌ ಕುಮಾರ್‌ Basaveshwar Vidyavardhaka Sangh Veeranna Charantimath B Report Bagalkot DySP ಬಸವೇಶ್ವರ ವಿದ್ಯಾವರ್ಧಕ ಸಂಘ ವೀರಣ್ಣ ಚರಂತಿಮಠ ಅಮೃತ ಇಂಜಿನಿಯರಿಂಗ್ ಕಾಲೇಜು ಬಿ ರಿಪೋರ್ಟ್‌ ಬಾಗಲಕೋಟೆ ಡಿವೈಎಸ್‌ಪಿ
ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!
#MeToo | ಲೈಂಗಿಕ ದೌರ್ಜನ್ಯ ಆರೋಪಗಳು ಆಧಾರರಹಿತ ಎಂದ ಸಚಿವ ಎಂ ಜೆ ಅಕ್ಬರ್
ಐಎಎಸ್‌ ಅಧಿಕಾರಿ ಮಗುವಿಗೆ ನಿಷೇಧಿತ ಪೊಲಿಯೋ ಲಸಿಕೆ ಆರೋಪ; ಇಬ್ಬರ ವಿರುದ್ಧ ಎಫ್‌ಐಆರ್‌
Editor’s Pick More

ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌ ಮತ್ತು ಚರಂತಿಮಠಗೆ ಸಂಕಷ್ಟ?

ರಫೇಲ್‌ ವಿವಾದ | ಮೋದಿ ಪರ ಭೈರಪ್ಪ ವಕಾಲತ್ತು ಏನನ್ನು ಬಿಂಬಿಸುತ್ತದೆ?

ಗಾಂಧಿ ಹತ್ಯೆ ಸಂಚು| ಗುಂಡಿಕ್ಕುವ ಮುನ್ನ ಸಾವರ್ಕರ್ ಭೇಟಿ ಮಾಡಿದ್ದ ಗೋಡ್ಸೆ!

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

‘ನಾನೂ ಹಿಂದೂ’ ಎನ್ನುವ ಸಿದ್ದರಾಮಯ್ಯ ಸ್ವಮರುಕದಿಂದ ಆಚೆ ಬರುತ್ತಿಲ್ಲವೇಕೆ?

ಈ ಬಾರಿಯ ಚುನಾವಣೆಯಲ್ಲಿ ದೇಶದ ಫ್ಯಾಸಿಸಂ ಶಕ್ತಿಯನ್ನು ಮಣಿಸುವುದು ಹೇಗೆ?

ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌

ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದ ಜನಸಾಮಾನ್ಯನಿಗೆ ದಕ್ಕಿದ್ದೇನು?