ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ

ಐತಿಹಾಸಿಕ ಸೋಮನಾಥಪುರ ಜನಕ್ಕೆ ಜನಪ್ರಿಯ ದೇಗುಲವೇ ತಲೆನೋವಾದ ಸೋಜಿಗ

ಮೈಸೂರು ಜಿಲ್ಲೆಯ ಸೋಮನಾಥಪುರದ ಚೆನ್ನಕೇಶವ ದೇವಾಲಯವು ರಾಷ್ಟ್ರಕವಿ ಕುವೆಂಪು ಬಣ್ಣಿಸುವಂತೆ ಶಿಲೆಯಲ್ಲ, ಕಲೆಯ ಬಲೆ. ಈ ಪಾರಂಪರಿಕ ಸೌಂದರ್ಯದ ಸುತ್ತ ದಶಕಗಳಿಂದ ನೆಲೆಸಿರುವ ಕುಟುಂಬಗಳು ಪುರಾತತ್ವ ಸಂರಕ್ಷಣಾ ಕಾಯ್ದೆಗಳ ಬಲೆಯಲ್ಲಿ ನಲುಗುವಂತಾಗಿರುವುದು ವಿಪರ್ಯಾಸ

ಓಂಕಾರ್ ಪಿ

ಯಾವುದೇ ಪಾರಂಪರಿಕ ಸ್ಮಾರಕಗಳು ಒಂದು ಊರಿನ, ನಾಡಿನ ಹೆಮ್ಮೆ. ಶತಮಾನಗಳ ಹಿಂದೆ ನಿರ್ಮಾಣಗೊಂಡು, ದಶಕಗಳ ಹಿಂದೆ ಸಂರಕ್ಷಿಸಲ್ಪಟ್ಟು, ಪ್ರವಾಸಿಗರ ಕಣ್ಮನ ಸೆಳೆಯುವ ಸ್ಮಾರಕಗಳನ್ನು ಪ್ರವಾಸೋದಮ್ಯದ ನೆಲೆಯಲ್ಲಿ ನೋಡಿದರೆ ಆ ಊರಿನ ಜನ ಬದುಕನ್ನು ಆರ್ಥಿಕವಾಗಿ ಹಸನುಗೊಳಿಸುವ ಕೇಂದ್ರಗಳಂತೆಯೂ ಕಾಣುತ್ತವೆ. ಆದರೆ, ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಸೋಮನಾಥಪುರದ ಚೆನ್ನಕೇಶವ ದೇಗುಲದ ವಿಷಯದಲ್ಲಿ ಈ ಮಾತು ಪೂರ್ತಿ ಅನ್ವಯಿಸದು.

ರಾಜ್ಯ, ದೇಶ ವಿದೇಶದ ಸಾವಿರಾರು ಪ್ರವಾಸಿಗರು, ಕಲಾಸಕ್ತರು, ಇತಿಹಾಸ ಸಂಶೋಧಕರು ಇಲ್ಲಿನ ಶಿಲ್ಪಕಲಾ ಸೌಂದರ್ಯವನ್ನು ಕಂಡು ಬೆರಗಾಗಿ, ಮೂಗಿನ ಮೇಲೆ ಬೆರಳಿಡುತ್ತಾರೆ. “ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು,’’ ಎಂದು ರಾಷ್ಟ್ರಕವಿ ಕುವೆಂಪು ಭಾವಪರವಶರಾಗಿ ಉದ್ಗರಿಸಲು ಇಲ್ಲಿನ ಕಲಾವೈಭವವೇ ಪ್ರೇರಣೆ. ಆದರೆ, ಈ ಕಲೆಯ ಬಲೆಯ ಆಜುಬಾಜಿನಲ್ಲಿ ದಶಕಗಳಿಂದ ಬದುಕು ಕಟ್ಟಿಕೊಂಡಿರುವ ನಿವಾಸಿಗಳು ಇತ್ತೀಚಿನ ವರ್ಷಗಳಲ್ಲಿ ಹಲವು ಕಷ್ಟಕೋಟಲೆಯ ಬಲೆಯಲ್ಲಿ ಸಿಲುಕಿ ನಲಗುವಂತಾಗಿದೆ. ದೇವಾಲಯ ಸಂರಕ್ಷಣೆಯ ನೆಲೆಯಲ್ಲಿ ಪುರಾತತ್ವ ಇಲಾಖೆ ವಿಧಿಸಿರುವ ಕಠಿಣ ನಿಮಯಗಳು ಇದಕ್ಕೆ ಕಾರಣ.

ಪ್ರಾಚೀನ ಸ್ಮಾರಕ ಪುರಾತತ್ವ ಸ್ಥಳ ಅವಶೇಷಗಳ ಸಂರಕ್ಷಣಾ ಅಧಿನಿಯಮಕ್ಕೆ ೨೦೧೦ರಲ್ಲಿ ತಂದಿರುವ ತಿದ್ದುಪಡಿ ಪ್ರಕಾರ, ದೇವಾಲಯದ ೧೦೦ ಮೀಟರ್‌ ಸುತ್ತಳತೆಯ ನಿಷೇಧಿತ ಪ್ರದೇಶದಲ್ಲಿರುವ ಯಾವುದೇ ಕಟ್ಟಡ ಪುನರ್‌ ನಿರ್ಮಾಣ ನಿಷಿದ್ಧ. ಅನುಮತಿ ಪಡೆದು ದುರಸ್ತಿಯನ್ನಷ್ಟೆ ಮಾಡಿಕೊಳ್ಳಬಹುದು. ೨೦೦ ಮೀಟರ್‌ ಸುತ್ತಳತೆಯ ನಿಯಂತ್ರಿತ ಪ್ರದೇಶದಲ್ಲಿ ಪುನರ್ ನಿರ್ಮಾಣ ಮಾಡಬಹುದು. ೩೦೦ ಮೀಟರ್‌ ಒಳಗೆ ಯಾವುದೇ ಕಟ್ಟಡ ನಿರ್ಮಾಣ ನಿಷಿದ್ಧ. ಈ ನಿಮಯಗಳನ್ನು ಉಲ್ಲಂಘಿಸಿದರೆ ಪುರಾತತ್ತ್ವ ಇಲಾಖೆ ಅಧಿನಿಯಮಗಳ ಅಡಿ ೧ ಲಕ್ಷ ರೂ. ದಂಡ ಮತ್ತು ೨ ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು.

ಭವ್ಯ ಇತಿಹಾಸವಿರುವ ಯಾವುದೇ ಪಾರಂಪರಿಕ ಸ್ಥಳ, ಸ್ಮಾರಕಗಳ ಸಂರಕ್ಷಣೆ ವಿಷಯದಲ್ಲಿ ಇಂಥ ಕಠಿಣ ನಿಯಮಗಳು ಅವಶ್ಯ. ಆದರೆ, ಈ ನಿಯಮಗಳು ತಲೆಮಾರುಗಳಿಂದ ಅಲ್ಲೇ ಬದುಕು ಕಟ್ಟಿಕೊಂಡಿರುವ ಜನರಿಗೆ ಸಂಕೋಲೆಯಂತಾಗುವುದು ಎಷ್ಟು ಸರಿ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಯಾವುದೇ ಸ್ಮಾರಕ, ಪಾರಂಪರಿಕ ತಾಣಗಳ ಜೊತೆಗೆ ಜನರ ಬದುಕು ಬೆಸೆದುಕೊಂಡಿರುತ್ತದೆ. ಅಂದರೆ, ಪಾರಂಪರಿಕ ಕಟ್ಟಡ ಅಥವಾ ಸ್ಮಾರಕದ ಜೊತೆ ಜನ-ಸಾಂಸ್ಕೃತಿಕ ಪರಂಪರೆಯೂ ನೆಲೆಗೊಂಡಿರುತ್ತದೆ. ಕಟ್ಟಡ ರೂಪದ ಸ್ಮಾರಕದೊಂದಿಗೆ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯೂ ಅವಶ್ಯ ಎನ್ನುವ ವಾದವೊಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಲ್ಲಿದೆ. ಸೋಮನಾಥಪುರ ಗ್ರಾಮದ ನಿವಾಸಿಗಳು ಕೆಲವು ವರ್ಷದಿಂದ ಪ್ರತಿಭಟನೆ ನಡೆಸಿಯೂ ಅವರ ಸಮಸ್ಯೆಗೆ ಪರಿಹಾರ ದೊರೆಯದಿರುವುದು ಇಂಥ ಪ್ರಶ್ನೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.

ದೇಗುಲದ ಐತಿಹಾಸಿಕ ಮಹತ್ವ

ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ ೧೨೫೮-೮೬ರ ಸುಮಾರಿಗೆ ಕಟ್ಟಿಸಿದ ಚೆನ್ನಕೇಶವ ದೇವಾಲಯ ಈಗ ಪ್ರವಾಸೋದ್ಯಮ ನಕಾಶೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದೆ. ದೇಗಲ ಕಟ್ಟಿಸಿದವನು ಸೋಮನಾಥನಾದ ಕಾರಣಕ್ಕೆ ಈ ಊರಿಗೆ ಸೋಮನಾಥಪುರ ಎನ್ನುವ ಹೆಸರು ಬಂದಿದೆ. ದೇವಾಲಯ ಮತ್ತು ಇಲ್ಲಿನ ಐತಿಹ್ಯದ ಬಗ್ಗೆ ಮಾಹಿತಿ ನೀಡುವ ಏಳು ಶಾಸನಗಳು ಇಲ್ಲಿವೆ. ಮೂರು ಶಿಖರಗಳು ದೇಗುಲ ಸೌಂದರ್ಯಕ್ಕೆ ಶಿಖರಪ್ರಾಯವಾಗಿವೆ. ಹಾಗೆಂದೇ, ಇದನ್ನು ತ್ರಿಕೂಟಾಚಲ ಎನ್ನಲಾಗುತ್ತದೆ. ೧೯ನೇ ಶತಮಾನದಲ್ಲಿ ಆಂಗ್ಲ ವಿದ್ವಾಂಸರು ಇದರ ಶಿಲ್ಪವೈಭವವನ್ನು ಕಂಡು ಬೆರಗಾದರು. ಆಗ ಮೈಸೂರು ಅರಸರು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದ್ದರು. ೧೯೨೪ರ ಸುಮಾರಿಗೆ ಬಿದ್ದುಹೋಗಿದ್ದ ಗೋಡೆ, ಗೋಪುರಗಳನ್ನು ದುರಸ್ತಿ ಮಾಡಿ ಸಂರಕ್ಷಿಸಲಾಯಿತು. ಇತ್ತೀಚಿನ ದಶಕಗಳಲ್ಲಿದು ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಬಿಗಿ ಕಾಯ್ದೆಯ ಕಾರಣಕ್ಕೆ ದೇಗುಲ ವ್ಯವಸ್ಥಿತವಾಗಿ ಸಂರಕ್ಷಿತವಾಗಿದೆ. ಅದಕ್ಕೆ ಮೊದಲೇ ಇಲ್ಲಿ ನೆಲೆ ಕಂಡುಕೊಂಡಿದ್ದ ಕುಟುಂಬಗಳು ಅದೇ ಕಾಯ್ದೆಯ ಕಾರಣಕ್ಕೆ ಅಸುರಕ್ಷಿತ ಭಾವ ಅನುಭವಿಸುತ್ತಿವೆ.

ನಿವಾಸಿಗಳ ಸಮಸ್ಯೆಗಳೇನಿವೆ?

  • ಕಾಯ್ದೆ ಪ್ರಕಾರ ನಿಷೇಧಿತ ಅಥವಾ ನಿಯಂತ್ರಿತ ಪ್ರದೇಶದ ಸುತ್ತಳತೆಯಲ್ಲಿರುವ ಇಲ್ಲಿನ ಬಹುತೇಕ ಮನೆಗಳು ಶಿಥಿಲವಾಗಿವೆ. ಬಿರುಕು ಬಿಟ್ಟ ಗೋಡೆಗಳು, ಈಗಲೋ ಆಗಲೋ ಕುಸಿದುಬೀಳುವ ಸ್ಥಿತಿಯಲ್ಲಿರುವ ಮನೆಗಳು ಕಾಣುವುದು ಇಲ್ಲಿ ಸಾಮಾನ್ಯ. ಕೆಲವು ಭಾಗಶಃ ಕುಸಿದಿವೆ ಕೂಡ.
  • ಪ್ರತಿ ಮಳೆಗಾಲದಲ್ಲಿ ಜನ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ. ಶಾಲೆ, ಆರೋಗ್ಯ ಕೇಂದ್ರ, ಗ್ರಂಥಾಲಯ ಸಹಿತ ಕೆಲವು ಸರ್ಕಾರಿ ಕಟ್ಟಡಗಳದ್ದೂ ಇದೇ ಸ್ಥಿತಿ. ಅನುಮತಿಯ ಬಳಿಕ ಶಾಲೆಯನ್ನು ತುಸು ದುರಸ್ತಿ ಮಾಡಿದ್ದರೂ ಸಮಸ್ಯೆ ಪೂರ್ತಿ ಬಗೆಹರಿದಿಲ್ಲ.
  • ಮನೆಗಳ ಪುನರ್‌ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ಕಳೆದ ೩ ವರ್ಷದಲ್ಲಿ ೯೦ ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಅನುಮತಿ ಸಿಕ್ಕಿರುವುದು ೨೬ಕ್ಕೆ ಮಾತ್ರ. ೩೦ಕ್ಕೂ ಹೆಚ್ಚು ಮನೆಗಳ ದುರಸ್ತಿಗೆ ಅನುಮತಿ ನೀಡಲಾಗಿದ್ದರೂ, ಆ ಮನೆಗಳು ಯಾವುದೇ ರೀತಿ ದುರಸ್ತಿಗೆ ಸ್ಪಂದಿಸದಷ್ಟು ಶಿಥಿಲಗೊಂಡಿವೆ.
  • ಹಲವು ದಶಕಗಳ ಹಿಂದೆ ಮಣ್ಣು ಇತ್ಯಾದಿ ಲಭ್ಯ ಪರಿಕರ ಬಳಸಿ ಕಟ್ಟಿದ ಮನೆಗಳು ಮುಟ್ಟಿದರೆ ಮೈಮೇಲೆ ಬೀಳುವ ಸ್ಥಿತಿಯಲ್ಲಿವೆ. ಶತಮಾನ ದಾಟಿದ ಕೆಲವು ಮನೆಗಳು ಗಂಡಾಂತರದ ಸ್ಥಿತಿಯಲ್ಲಿವೆ. ವಿಸ್ತರಿಸಲಾಗದೆ ಪುಟ್ಟ ಮನೆಯಲ್ಲೇ ಮೂರ್ನಾಲ್ಕು ಸಂಸಾರಗಳು ವಾಸಿಸಬೇಕಾದ ಅನಿವಾರ್ಯ ಸ್ಥಿತಿಯೂ ಇದೆ.

ಪ್ರತಿಭಟನೆಗೆ ಪರಿಣಾಮಕಾರಿ ಸ್ಪಂದನೆ ಇಲ್ಲ

“ದುರಸ್ಥಿ ಮಾಡಿ ಮನೆಗಳನ್ನು ಉಳಿಸಿಕೊಳ್ಳಲಾಗದು. ಶಿಥಿಲ ಮನೆಗಳ ಪುನರ್‌ ನಿರ್ಮಾಣಕ್ಕೆ ಅನುಮತಿ ನೀಡಿ,’’ ಎಂದು ಆಗ್ರಹಿಸಿ ಸ್ಥಳೀಯರು ಭಾರತೀಯ ಪುರಾತತ್ವ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆಗಳನ್ನು ನಡೆಸಿದ್ದಾರೆ. ಮೊನ್ನೆಯೂ ಮತ್ತೊಮ್ಮೆ ಪ್ರತಿಭಟನೆ ನಡೆಸಿ ಅಹವಾಲು ಸಲ್ಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತೊಮ್ಮೆ ಸರ್ವೆ ಆರಂಭಿಸಿದ್ದು, ಐದಾರು ಮನೆಗಳ ಪುನರ್‌ ನಿರ್ಮಾಣಕ್ಕೆ ಅನುಮತಿ ಕೊಡಿಸುವ ಮೌಖಿಕ ಭರವಸೆ ನೀಡಿದ್ದಾರೆ.

ಆದರೆ, ಹಲವು ವರ್ಷಗಳಿಂದ ಇಂಥದು ಪುನರಾವರ್ತನೆ ಆಗುತ್ತಿರುವುದರಿಂದ ಭರವಸೆಗಳ ಮೇಲೆ ಜನ ವಿಶ್ವಾಸ ಹೊಂದಿಲ್ಲ. “ನಾವು ಪ್ರತಿಭಟನೆ ನಡೆಸಿದಾಗ ಇಲಾಖೆ ಅಧಿಕಾರಿಗಳು ಬರುವುದು, ಏನೋ ಹೇಳಿ ಹೋಗುವುದು ಮಾಮೂಲಾಗಿದೆ. ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ,’’ ಎನ್ನುವುದು ಸ್ಥಳೀಯರ ಆಕ್ಷೇಪ. “ರಾಷ್ಟ್ರೀಯ ಸ್ಮಾರಕದ ಸಂರಕ್ಷಣೆ ವಿಷಯದಲ್ಲಿ ನಮಗೂ ಬದ್ಧತೆ ಇದೆ. ಜನವಸತಿ ಪ್ರದೇಶದಲ್ಲಿ ಕಾಯ್ದೆಯನ್ನು ತುಸು ಸಡಿಲಗೊಳಿಸಿ, ಸ್ಥಳೀಯರಿಗೆ ಬದುಕುವ ಹಕ್ಕನ್ನು ನೀಡಬೇಕು,’’ ಎನ್ನುವುದು ಅವರ ಆಗ್ರಹ.

ಮಾತ್ರವಲ್ಲ, ನಿಷೇಧಿತ-ನಿಯಂತ್ರಿತ ಪ್ರದೇಶದ ಅಳತೆಯ ವಿಷಯದಲ್ಲೂ ಜನರ ತಕರಾರಿದೆ. “ದೇವಾಲಯದ ವ್ಯಾಪ್ತಿ ಇರುವುದು ೪.೧೪ ಎಕರೆ. ಇಲ್ಲಿ ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸಲಿ, ನಮ್ಮ ಆಕ್ಷೇಪವಿಲ್ಲ. ಆದರೆ, ಇಲಾಖೆ ಇನ್ನೂ ಹೆಚ್ಚುವರಿ ಆರು ಎಕರೆ ಪ್ರದೇಶವನ್ನು ಅತಿಕ್ರಮವಾಗಿ ಕಾಯ್ದೆ ವ್ಯಾಪ್ತಿಗೆ ತೆಗೆದುಕೊಂಡಿದೆ. ಇದೇ ಸಮಸ್ಯೆಯ ಮೂಲ,’’ ಎನ್ನುವುದು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್‌ ಆಕ್ಷೇಪ. ಇಂಥ ಆರೋಪಗಳಿಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪುರಾತತ್ವ ಇಲಾಖೆಯ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತೇವಷ್ಟೆ ಎನ್ನುವುದು ಅವರ ಪ್ರತಿಕ್ರಿಯೆ.

ಪರ್ಯಾಯ ದಾರಿಗಳೇನಿವೆ?

ಜನ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆನ್ನುವ ಕಾರಣಕ್ಕೆ ಕಾಯ್ದೆ ಸಡಿಲಗೊಳಿಸಿದರೆ ಅದರ ದುರ್ಬಳಕೆಯ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹದ್ದು ಮೀರಿದ ವರ್ತನೆಗಳ ಕಾರಣಕ್ಕೇ ಅನೇಕ ಐತಿಹಾಸಕ ಸ್ಮಾರಕಗಳು ಗಂಡಾಂತರಕಾರಿ ಸ್ಥಿತಿ ಎದುರಿಸುತ್ತಿರುವುದೂ ಸುಳ್ಳಲ್ಲ. ಹಾಗಂತ, ತಲೆಮಾರುಗಳಿಂದ ಇಲ್ಲಿ ಬದುಕು ಕಟ್ಟಿಕೊಂಡ ಕುಟುಂಬಗಳ ಹಿತವನ್ನು ಮತ್ತು ಅವರ ಬದುಕುವ ಹಕ್ಕನ್ನು ಕಡೆಗಣಿಸುವುದೂ ತರವಲ್ಲ.

ಶಿಥಿಲವಾಗಿರುವ ಇಲ್ಲಿನ ಹಲವು ಮನೆಗಳಿಗೆ ದುರಸ್ತಿಗಷ್ಟೆ ಅನುಮತಿ ನೀಡಿದರೆ ಪ್ರಯೋಜನವಿಲ್ಲ. ಈಗ ಒಂದಷ್ಟು ಹಣ ಖರ್ಚು ಮಾಡಿ ತೇಪೆ ಹಚ್ಚಿದರೆ ಅದು ಹೆಚ್ಚು ಕಾಲ ಬಾಳಿಕೆ ಬಾರದು. ಒಂದೆರಡು ವರ್ಷದ ನಂತರ ಅದೇ ಸಮಸ್ಯೆ ಮರುಕಳಿಸುತ್ತದೆ. ಮೇಲೆ ಉಲ್ಲೇಖಿಸಿದಂತೆ, ಹಲವು ಮನೆಗಳು ದುರಸ್ತಿಗೆ ಸ್ಪಂದಿಸುವ ಸ್ಥಿತಿಯಲ್ಲೂ ಇಲ್ಲ. ಆದ್ದರಿಂದ, ಪುನರ್‌ ನಿರ್ಮಾಣಕ್ಕೆ ಅನುಮತಿ ನೀಡುವುದೇ ಸೂಕ್ತ. ಆದರೆ, ಕಾಯ್ದೆಯಲ್ಲಿ ಅದಕ್ಕೆ ಆಸ್ಪದವಿಲ್ಲ.

ಇಲ್ಲಿರುವ ಬಹುತೇಕ ಕುಟುಂಬಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವು. ಮನೆ ಪುನರ್‌ ನಿರ್ಮಾಣಕ್ಕೆ ಅನುಮತಿ ನೀಡಿದರೆ, ಶಿಥಿಲ ಮನೆಗಳನ್ನು ಒಡೆದು ಸರ್ಕಾರದ ವಿವಿಧ ವಸತಿ ಯೋಜನೆಗಳ ಫಲ ಪಡೆದು ಗಟ್ಟಿಮುಟ್ಟಾದ ಹೊಸ ಮನೆ ಕಟ್ಟಿಕೊಳ್ಳಬಹುದೆನ್ನುವುದು ಅವರ ನಿರೀಕ್ಷೆ. ಹಳೆ ಮನೆ ದುರಸ್ತಿಗೆ ಸರ್ಕಾರದ ಯಾವುದೇ ಯೋಜನೆಯಲ್ಲಿ ನೆರವು ಸಿಗದು ಕೂಡ. ಇಂಥ ಸಂದಿಗ್ಧತೆ ಎದುರಾದ ಸಂದರ್ಭಗಳಲ್ಲಿ ಪ್ರಾಚ್ಯವಸ್ತು ಇಲಾಖೆ ಸಹಿತ ಸರ್ಕಾರದ ಎಲ್ಲ ಇಲಾಖೆಗಳು ಕಲೆತು, ಯೋಗ್ಯ ಮಾದರಿ ಹುಡುಕಿಕೊಳ್ಳುವುದು ಸೂಕ್ತ.

ಅಧಿಕಾರಸ್ಥರು ಮನಸ್ಸು ಮಾಡಿದರೆ ಈ ಸಮಸ್ಯೆಗೆ ಪರ್ಯಾಯ ದಾರಿ ಹುಡುಕಿಕೊಳ್ಳುವುದು ಕಷ್ಟವೇನಲ್ಲ. ದೇವಾಲಯದ ನಿರ್ದಿಷ್ಟ ಸುತ್ತಳತೆಯಲ್ಲಿರುವ ಮನೆಗಳನ್ನು ಪಟ್ಟಿ ಮಾಡಿ, ದೇವಾಲಯದ ಐತಿಹಾಸಿಕ ಮಹತ್ವಕ್ಕೆ ಯಾವುದೇ ಬಗೆಯಲ್ಲಿ ಧಕ್ಕೆ ಬಾರದಂತೆ ಮತ್ತು ಪಾರಂಪರಿಕ ಘನತೆಗೆ ಪೂರಕವಾದ ಸರಳ ವಾಸ್ತು ವಿನ್ಯಾಸದ ಒಂದೇ ಮಾದರಿ ಮನೆಗಳನ್ನು ಸರ್ಕಾರದ ವಸತಿ ಯೋಜನೆಗಳಡಿ ಕಟ್ಟಿಸಿಕೊಡಲು 'ಮಾಸ್ಟರ್ ಪ್ಲ್ಯಾನ್‌' ರೂಪಿಸಬಹುದು. ದೇಗುಲದ ಸುತ್ತ ಪಾರಂಪರಿಕ ಸೊಗಡಿನ ‘ಮಾದರಿ ಹಳ್ಳಿ’ಯ ವ್ಯವಸ್ಥಿತ ಕಟ್ಟುವಿಕೆ ಸಾಧ್ಯವಾದರೆ, ಅದು ದೇಗುಲದ ಸೌಂದರ್ಯ ಮತ್ತು ಮೆರುಗನ್ನು ಹೆಚ್ಚಿಸಿದಂತಾಗುತ್ತದೆ ಕೂಡ. ಜೊತೆಗೆ, ಇಲ್ಲಿನ ಜನರ ಬದುಕು ಕೂಡ ಸುಂದರವಾದೀತು. ಕಾಯ್ದೆ ಹೇರುವಿಕೆಯೇ ಮುಖ್ಯ ಎಂದಾದರೆ ಇವರಿಗೆ ಯೋಗ್ಯ ನೆಲೆಯಲ್ಲಿ ಪುನರ್ವಸತಿ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು.

ಈ ನಿಟ್ಟಿನಲ್ಲಿ ಕೇಂದ್ರದ ಪುರಾತತ್ವ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒಗ್ಗೂಡಿ ಕೆಲಸ ಮಾಡುವುದು ಸೂಕ್ತ. ಐತಿಹಾಸಿಕ ಸ್ಮಾರಕವನ್ನು ಜತನ ಮಾಡಿಕೊಳ್ಳುವುದರ ಜೊತೆಗೆ ಇತ್ತೀಚಿನ ಕೆಲ ತಲೆಮಾರುಗಳಿಂದ ಇಲ್ಲೇ ಬದುಕು ಕಟ್ಟಿಕೊಂಡ ಕುಟುಂಬಗಳಲ್ಲಿ ಮೂಡಿರುವ ಆತಂಕವನ್ನು, ಮನೆಗಳಲ್ಲಿನ ಬಿರುಕುಗಳನ್ನು ನಿವಾರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿ. ಎಂಟು ಶತಮಾನದಷ್ಟು ಹಳೆಯ ಕಟ್ಟಡ ರೂಪದ ‘ಪರಂಪರೆ’ಯ ಜೊತೆಗೆ, ಶತಮಾನದಷ್ಟು ಹಳೆಯ ಜನ-ಸಾಂಸ್ಕೃತಿಕ ಪರಂಪರೆಯೂ ಉಳಿಯಲಿ.

ಸೋಮನಾಥಪುರ Somanathapura Heritage Site Hoysala King Narasimha III Reign of Hoysala Protected Monument Somanathapura Temple Archaeological Survey of India ಪಾರಂಪರಿಕ ಕಾಯ್ದೆ ತಿ.ನರಸೀಪುರ ತಾಲೂಕು ಸೋಮನಾಥಪುರ ಚೆನ್ನಕೇಶವ ದೇಗುಲ ಶಿಲ್ಪಕಲಾ ಸೌಂದರ್ಯ ಪ್ರಾಚೀನ ಸ್ಮಾರಕ ಪುರಾತತ್ವ ಸ್ಥಳ ಹೊಯ್ಸಳ ಸಾಮ್ರಾಜ್ಯ ಮುಮ್ಮಡಿ ನರಸಿಂಹ ತ್ರಿಕುಟಾಚಲ
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?