ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ

ವಿಡಿಯೋ | ಹಳ್ಳಿಗರ ಎದೆ ನಡುಗಿಸಿದ ನಿಗೂಢ ಸದ್ದು, ಸಮಾಧಾನ ಹೇಳದ ತಜ್ಞರ ವರದಿ!

ಕಳೆದ ಐದು ತಿಂಗಳಿಂದ ನಿಗೂಢ ಸದ್ದು, ಭೂಕಂಪನದ ಅನುಭವದಿಂದ ಬೆಚ್ಚಿಬಿದ್ದಿರುವ ಚಿಕ್ಕಮಗಳೂರು ಜಿಲ್ಲೆಯ ಕೊಗ್ರೆ ಸುತ್ತಮುತ್ತಲ ಹಳ್ಳಿಗರಿಗೆ ಈಗ ತಜ್ಞರ ವರದಿಯಿಂದ ಆತಂಕ ಇನ್ನೂ ಹೆಚ್ಚಿದೆ. ಹಾಗಾದರೆ, ನಿಜವಾಗಿಯೂ ಅಲ್ಲಿನ ಸಮಸ್ಯೆ ಏನು? ಈ ಕುರಿತ ‘ದಿ ಸ್ಟೇಟ್’ ಪ್ರತ್ಯಕ್ಷ ವರದಿ ಇಲ್ಲಿದೆ

ಶಶಿ ಸಂಪಳ್ಳಿ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮೇರುತಿ ಪರ್ವತ ತಪ್ಪಲಿನ ಅತ್ತಿಕೊಡಿಗೆ ಮತ್ತು ಗುಡ್ಡೆತೋಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಐದು ತಿಂಗಳಿಂದ ಕೇಳಿಬರುತ್ತಿರುವ ಭೂಮಿಯಾಳದ ನಿಗೂಢ ಸದ್ದು ಮತ್ತು ಕಂಪನದ ತೀವ್ರತೆ ಕಳೆದ ಒಂದು ವಾರದಿಂದ ತೀವ್ರವಾಗಿದೆ.

ಈ ನಡುವೆ, ಸದ್ದು ಮತ್ತು ಕಂಪನದ ಕುರಿತು ಅಧ್ಯಯನ ನಡೆಸಿದ ಭೂವಿಜ್ಞಾನ ಮತ್ತು ನೈಸರ್ಗಿಕ ವಿಕೋಪ ನಿರ್ವಹಣಾ ಸಮಿತಿಯ ತಜ್ಞರನ್ನೊಳಗೊಂಡ ತಂಡ, ಬುಧವಾರ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತನ್ನ ವರದಿ ಸಲ್ಲಿಸಿದ್ದು, ಈ ನೈಸರ್ಗಿಕ ಪ್ರಕ್ರಿಯೆ ಸಂಪೂರ್ಣ ಮಳೆಗೆ ಸಂಬಂಧಪಟ್ಟ ವಿದ್ಯಮಾನ ಎಂದು ಅಭಿಪ್ರಾಯಪಟ್ಟಿದೆ. ಅಧಿಕ ಮಳೆಯ ಕಾರಣದಿಂದಾಗಿ, ಧಾರವಾಡ ಬೃಹತ್ ಶಿಲಾ ವಲಯ, ಚಿತ್ರದುರ್ಗ ಶಿಲಾ ವಲಯ ಹಾಗೂ ಪರ್ಯಾಯದ್ವೀಪ ಶಿಲಾ ವಲಯಗಳು ಸಂಧಿಸುವ ಈ ಪ್ರದೇಶದಲ್ಲಿನ ಭೂಮಿಯಾಳದಲ್ಲಿ ಶಿಲಾ ಪದರಗಳಲ್ಲಿ ಉಂಟಾಗಿರುವ ಚಲನೆಯ ಕಾರಣದಿಂದಲೂ ಈ ಸದ್ದು ಕೇಳಿಸುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕೊಗ್ರೆ, ಶಾಂತಿಗ್ರಾಮ, ಅಬ್ಬಿಕಲ್ಲು, ಅಣಕಲಮಕ್ಕಿ, ನಾಯ್ಕರಕಟ್ಟೆ, ಗುಡ್ಡೆಬರಗೋಡು, ಹೊಸನೆಲ ಮುಂತಾದ ಆ ಪ್ರದೇಶಗಳಿಗೆ ‘ದಿ ಸ್ಟೇಟ್’ ಭೇಟಿ ಕೊಟ್ಟಾಗ ಅಲ್ಲಿನ ಸಾರ್ವಜನಿಕರು ವ್ಯಕ್ತಪಡಿಸಿದ ಆತಂಕ ಬೇರೆಯೇ ಆಗಿತ್ತು. "ಅಬ್ಬಿಕಲ್ಲು ಗುಡ್ಡದ ಸುತ್ತಮುತ್ತಲ ಹಳ್ಳಿಗಳಲ್ಲಿ ಭೂಮಿಯಾಳದಲ್ಲಿ ಕೇಳುತ್ತಿರುವ ಸದ್ದು ಮತ್ತು ಕಂಪನಕ್ಕೆ ಸುಮಾರು ಐದು ತಿಂಗಳ ಇತಿಹಾಸವಿದೆ. ಬಿರುಬೇಸಿಗೆಯಲ್ಲಿ ಮಾರ್ಚ್‌ ತಿಂಗಳ ಅಂತ್ಯದ ಹೊತ್ತಿಗೆ ಈ ಸದ್ದು ಮತ್ತು ಕಂಪನದ ಅನುಭವ ಆಗತೊಡಗಿತ್ತು. ಮಳೆಗಾಲ ಆರಂಭಕ್ಕೆ ಎರಡು ತಿಂಗಳ ಹಿಂದೆಯೇ ಈಗಿನಂತೆಯೇ ಆಗಾಗ ಸದ್ದು ಮತ್ತು ಕಂಪನ ಕೇಳುತ್ತಿತ್ತು. ಹಾಗಿರುವಾಗ, ಗ್ರಾಮಕ್ಕೆ ಆಗಸ್ಟ್ ೧೩ರಂದು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿರುವ ತಜ್ಞರು ಹೇಳುವಂತೆ, ಗ್ರಾಮದ ಈ ವಿದ್ಯಮಾನಕ್ಕೂ ಮಳೆಯ ಹೆಚ್ಚಳಕ್ಕೂ ಏನು ನಂಟು?” ಎಂಬುದು ಗ್ರಾಮಸ್ಥರ ಪ್ರಶ್ನೆ.

ಅಬ್ಬಿಕಲ್ಲು ಬೆಟ್ಟದ ತಪ್ಪಲಿನಲ್ಲಿರುವ ಸುಧಾಕರ ಅವರು ಮಾತನಾಡಿ, “ಈ ಜಾಗದಲ್ಲಿ ನಮಗೆ ಕಂಪನದ ಅನುಭವ ಆಗತೊಡಗಿ ಐದು ತಿಂಗಳಾಯಿತು. ಕೆಲವೊಮ್ಮೆ ರಾತ್ರಿ ನಿದ್ರೆಯಲ್ಲಿದ್ದವರು ಎದ್ದು ಕೂರುವಷ್ಟು ಭೀಕರ ಸದ್ದು ಆಗುತ್ತದೆ. ದಡಾಲ್ ಎಂದು ಕಲ್ಲು ಕ್ವಾರಿಗಳ ಬಾಂಬ್ ಸ್ಪೋಟದಂತೆ ಸದ್ದು ಕೇಳುತ್ತದೆ. ಸದ್ದಿನೊಂದಿಗೆ ಕೈಕಾಲು ನಡುಗುವಷ್ಟು ಭೂಮಿ ಕಂಪಿಸುತ್ತದೆ. ಆದರೆ, ಈ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೂ ಯಾವ ಕ್ವಾರಿಯಾಗಲೀ, ಸ್ಫೋಟಕ ಬಳಕೆಯ ಯಾವ ಕೆಲಸಗಳಾಗಲೀ ನಡೆಯುತ್ತಿಲ್ಲ. ಈ ಸದ್ದು ಎಲ್ಲಿಂದ ಕೇಳುತ್ತದೆ ಎಂದು ಹೇಳಲಾಗುತ್ತಿಲ್ಲ. ನಾವು ಎಲ್ಲಿರುತ್ತೇವೆಯೋ ಅಲ್ಲಿಯೇ ಭೂಮಿಯೊಳಗೆ ಏನೋ ದೊಡ್ಡ ಸ್ಫೋಟ ಆದಂತೆ ಸದ್ದು ಬರುತ್ತದೆ. ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿ ಹೋದರೂ ಅವರವರಿಗೆ ಅವರದೇ ಕಾಲ ಕೆಳಗೇ ಸ್ಫೋಟ ಆದಂತೆ ಕೇಳುತ್ತದೆ. ಅದೇ ನಮಗೆ ಭೀತಿ ಹುಟ್ಟಿಸಿರುವುದು,” ಎಂದು ವಿವರಿಸಿದರು.

ಆ ಮೂಲಕ, ತಜ್ಞರು ಹೇಳಿದಂತೆ ಮಳೆ ನೀರಿಗೂ ಆ ನಿಗೂಢ ಸದ್ದಿಗೂ ನಂಟಿದೆ ಎಂಬ ಅಂಶದ ಬಗ್ಗೆ ಸುಧಾಕರ ಅವರ ಅನುಭವದ ಮಾತುಗಳು ಅನುಮಾನ ಹುಟ್ಟಿಸುತ್ತಿವೆ. ಅಲ್ಲದೆ, ಸುಮಾರು ಎರಡು ಕಿಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಎಲ್ಲಿ ಹೋದರೂ ಅಲ್ಲಿಯೇ ಸದ್ದು ಕೇಳುವ ಅನುಭವವಾಗುವುದು ಕೂಡ ತಜ್ಞರ ಲೆಕ್ಕಾಚಾರದ ಸತ್ಯಾಸತ್ಯತೆಯ ಬಗ್ಗೆ ಶಂಕೆ ಹುಟ್ಟಿಸುತ್ತಿದೆ.

ಈ ನಡುವೆ, ಮಳೆಗಾಲ ಆರಂಭದಲ್ಲಿ ವಾರಕ್ಕೊಮ್ಮೆ ಅಥವಾ ಹತ್ತು-ಹನ್ನೆರಡು ದಿನಕ್ಕೊಮ್ಮೆ ಕೇಳುತ್ತಿದ್ದ ನಿಗೂಢ ಸದ್ದು, ಕಳೆದ ಒಂದು ತಿಂಗಳಲ್ಲಿ ಮಳೆಗಾಲ ತೀವ್ರವಾದ ಬಳಿಕ ವಾರದಲ್ಲಿ ಎರಡು-ಮೂರು ದಿನ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಿತ್ತು. ಇದೀಗ ಕಳೆದ ಒಂದು ವಾರದಲ್ಲಿ ಪ್ರತಿನಿತ್ಯವೂ ದಿನಕ್ಕೆ ಎರಡು-ಮೂರು ಬಾರಿ ಸದ್ದು ಕೇಳತೊಡಗಿದೆ. ಕೆಲವೊಮ್ಮೆ ಮನೆಯ ಪಾತ್ರೆಪಡಗ ಸದ್ದು ಮಾಡುವಷ್ಟು ತೀವ್ರವಾಗಿ ಸದ್ದು ಕೇಳಿದರೆ, ಮತ್ತೆ ಕೆಲವೊಮ್ಮೆ ಸಣ್ಣಗೆ ಕೇವಲ ನಿಶಬ್ಧದ ವಾತಾವರಣದಲ್ಲಿ ಮಾತ್ರ ಕೇಳಬಹುದಾದಷ್ಟು ಸದ್ದು ಬರುತ್ತದೆ. ಪ್ರತಿ ಬಾರಿಯೂ ಸದ್ದಿನೊಂದಿಗೆ ಉಂಟಾಗುವ ಕಂಪನ ಕಾಲು, ಮೈನಲ್ಲಿ ಹುಟ್ಟಿಸುವ ನಡುಕದಿಂದಲೇ ಅದರ ತೀವ್ರತೆ ಅನುಭವಕ್ಕೆ ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದ ಯುವಕ ತೀರ್ಥಂಕರ ಅವರ ಪ್ರಕಾರ, “ಸುತ್ತಮುತ್ತಲ ಪ್ರದೇಶದಲ್ಲಿ ನಿಗೂಢ ಸದ್ದು ಕೇಳತೊಡಗಿದ್ದು ಮಾರ್ಚ್ ಕೊನೆಯ ವಾರದ ಹೊತ್ತಿಗೆ. ಆಗ ಮಳೆಗಾಲವೂ ಇರಲಿಲ್ಲ. ಅಲ್ಲದೆ, ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷ ಕೂಡ ಆ ಭಾಗದಲ್ಲಿ ತೀರಾ ಕಡಿಮೆ ಮಳೆಯಾಗಿತ್ತು. ಹಾಗಿರುವಾಗ ಅಧಿಕ ಮಳೆಯಿಂದ ಭೂಮಿಯಾಳದಿಂದ ಇಂತಹ ಸದ್ದು ಮತ್ತು ಕಂಪನ ಕೇಳಿಬರುತ್ತಿದೆ ಎಂಬುದನ್ನು ಹೇಗೆ ನಂಬುವುದು? ಮಳೆಯಿಂದಲೇ ಇದು ಆಗುವುದೇ ಆಗಿದ್ದರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕೇಳಬೇಕಿತ್ತು. ಇಲ್ಲಿ ಮಳೆ ಆರಂಭವಾಗಿದ್ದೇ ಮೇ ಅಂತ್ಯದ ಹೊತ್ತಿಗೆ. ಅದಕ್ಕೂ ಮುನ್ನ ಎರಡು ತಿಂಗಳ ಬಿರುಬೇಸಿಗೆಯಲ್ಲೂ ಇದೇ ರೀತಿಯ ಸದ್ದು ಕೇಳುತ್ತಿತ್ತು. ಹಾಗಾದರೆ, ಅದಕ್ಕೆ ಕಾರಣವೇನು?”

ತಜ್ಞರು ತಮ್ಮ ವರದಿಯಲ್ಲಿ ಪ್ರಮುಖವಾಗಿ, ಈ ಭಾಗದಲ್ಲಿ ವಾಡಿಕೆಯ ಮಳೆಗಿಂತ ಅಧಿಕ ಪ್ರಮಾಣದ ಮಳೆಯಾಗಿರುವುದನ್ನೇ ಉಲ್ಲೇಖಿಸಿದ್ದು, ಆಗಸ್ಟ್ ಎರಡನೇ ವಾರದ ವರೆಗೆ ವಾಡಿಕೆಯ ೧೦೨೫ ಮಿ.ಮೀ ಬದಲಿಗೆ ಈ ಬಾರಿ ೧೩೩೯ ಮಿ.ಮೀ ಮಳೆಯಾಗಿದೆ. ಸುಮಾರು ಶೇ.೩೧ರಷ್ಟು ಪ್ರಮಾಣದ ಅಧಿಕ ಮಳೆ ಈ ಭಾಗದ ಭೂ ಪದರದಲ್ಲಿ ಉಂಟುಮಾಡಿರುವ ಸಂಚಲನವೇ ಸದ್ದಿಗೆ ಕಾರಣವಿರಬಹುದು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ಅಲ್ಲದೆ, ಈ ನಡುವೆ ಅಬ್ಬಿಕಲ್ಲು ಗುಡ್ಡದ ಮೇಲಿನ ಗಣಪತಿ ದೇವಸ್ಥಾನ ಜೀರ್ಣೋದ್ಧಾರದ ವೇಳೆ ಎರಡು ವರ್ಷದ ಹಿಂದೆ ಪತ್ತೆಯಾಗಿದ್ದ ಸುರಂಗಕ್ಕೂ ಈ ನಿಗೂಢ ಸದ್ದಿಗೂ ಸಂಬಂಧ ಕಲ್ಪಿಸಿ ಕೆಲವರು ಗ್ರಾಮದಲ್ಲಿ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಆ ಸುರಂಗ ಗುಡ್ಡದ ಮೇಲ್ಭಾಗದಲ್ಲಿ ಇದ್ದು, ಚಿಕ್ಕದಾಗಿದೆ. ಹಾಗಾಗಿ, ಅದರ ಒಳಗೆ ಕಲ್ಲು ಕುಸಿಯುವ ಸದ್ದು ಇಷ್ಟೊಂದು ವ್ಯಾಪಕವಾಗಿ ಮತ್ತು ತೀವ್ರವಾಗಿ ಇರಲು ಸಾಧ್ಯವಿಲ್ಲ ಎಂಬ ತಜ್ಞರ ತಂಡದ ಅಭಿಪ್ರಾಯವನ್ನು ಗ್ರಾಮಸ್ಥರು ತಳ್ಳಿಹಾಕುವುದಿಲ್ಲ. ಏಕೆಂದರೆ, ಗ್ರಾಮಸ್ಥರ ಪ್ರಕಾರ, “ದೇವಸ್ಥಾನ ನಿರ್ಮಾಣದ ಕೆಲಸದ ವೇಳೆ ಆ ಸುರಂಗ ಪತ್ತೆಯಾಗಿ ಎರಡು ವರ್ಷವಾಯಿತು. ಆದರೆ, ಈ ನಿಗೂಢ ಸದ್ದು ಕೇಳುತ್ತಿರುವುದು ಈಗ ಐದು ತಿಂಗಳಿಂದ ಮಾತ್ರ!” ಹಾಗಾಗಿ ಈ ವಿಷಯದಲ್ಲಿ ತಜ್ಞರ ಅಭಿಪ್ರಾಯವನ್ನು ಗ್ರಾಮಸ್ಥರು ಅನುಮೋದಿಸುತ್ತಾರೆ.

ಸದ್ಯ ಜಿಲ್ಲಾಡಳಿತ ಮತ್ತು ತಜ್ಞರ ತಂಡದ ಮುಂದಿರುವ ಸವಾಲು ನಿಜವಾಗಿಯೂ ಆ ನಿಗೂಢ ಸದ್ದು ಮತ್ತು ಕಂಪನಕ್ಕೆ ಇರುವ ಕಾರಣವೇನು ಎಂಬುದನ್ನು ಪತ್ತೆಮಾಡುವುದು ಮತ್ತು ಅಪಾಯ ಸಂಭವಿಸುವ ಮುನ್ನ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ಆದರೆ, ಕೊಡಗು ಜಿಲ್ಲೆಯ ಇತ್ತೀಚಿನ ಭೂಕುಸಿತ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಈ ಭಾಗದ ಜನರಲ್ಲೂ ಆತಂಕ ಮೂಡಿದೆ. ಆ ಆತಂಕದ ಹಿನ್ನೆಲೆಯಲ್ಲೇ ಜಿಲ್ಲಾಡಳಿತ ತಮ್ಮ ಭಾಗದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಅಸಮಾಧಾನ ಕೂಡ ಅವರಲ್ಲಿದೆ. ಈಗಾಗಲೇ ಸಮೀಪದ ಬಸರೀಕಟ್ಟೆ ಬಳಿಯ ಸೋಮೇಶ್ವರ ಕಾನ್ ಎಂಬಲ್ಲಿ ಕೆಲವು ಮನೆ ಮತ್ತು ಪಕ್ಕದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆಯೂ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಾಗಿ, ಇದೀಗ ತಜ್ಞರ ವರದಿಯಲ್ಲಿ ಪ್ರಸ್ತಾಪಿಸಿರುವ ಶಿಲಾ ವಲಯಗಳು ಸಂಧಿಸುವ ಈ ಪ್ರದೇಶದಲ್ಲಿ ಆ ವಲಯಗಳ ಚಲನೆಯಿಂದಾಗಿ ಆಗಿರಬಹುದಾದ ಸಂಚಲನದ ಬಗ್ಗೆ ಮಾತ್ರ ಕುತೂಹಲ ಉಳಿದಿದೆ. ಧಾರವಾಡ ಶಿಲಾವಲಯ, ಚಿತ್ರದುರ್ಗ ಶಿಲಾವಲಯ ಮತ್ತು ಪರ್ಯಾಯ ದ್ವೀಪ ಶಿಲಾವಲಯಗಳು ಸಂಧಿಸುವ ಪ್ರದೇಶ ಇದಾಗಿದ್ದು, ಆ ಭಾಗದಲ್ಲಿ ಮ್ಯಾಂಗನೀಸ್ ಅಂಶವಿರುವ ಪದರು ಭೂರಚನೆ ಸಾಮಾನ್ಯವಾಗಿದೆ. ಜಂಬಿಟ್ಟಿಗೆಯೂ ಅಲ್ಲದ, ಅತ್ತ ಕಗ್ಗಲ್ಲು ಶಿಲೆಯೂ ಅಲ್ಲದ ಸ್ಥಳೀಯವಾಗಿ ಕಾಗಂದಳಿ ಪದರು ಎಂದು ಕರೆಯುವ ಮಣ್ಣಿನ ರಚನೆ ಇರುವುದರಿಂದ ಭೂಮಿಯಾಳದಲ್ಲಿ ಪದರುಪದರಾಗಿ ಕುಸಿತ ಸಂಭವಿಸುತ್ತಿರುವ ಸಾಧ್ಯತೆ ಕೂಡ ತಳ್ಳಿಹಾಕಲಾಗದು ಎಂಬುದು ಕೆಲವು ಸ್ಥಳೀಯರಾದ ಅರುಣ್ ಅವರ ಆತಂಕ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಭೂಕುಸಿತ, ಸಕಲೇಶಪುರದಲ್ಲಿ ಊರಿಗೆ ಊರೇ ಸ್ಥಳಾಂತರ!

ಜೊತೆಗೆ ಸಮೀಪದಲ್ಲೇ ಇರುವ ಭದ್ರಾ ಮತ್ತು ತುಂಗಾ ಜಲಾಶಯಗಳು ಸೇರಿದಂತೆ ಮಲೆನಾಡಿನಲ್ಲಿ ಇರುವ ಸಾಲು-ಸಾಲು ಜಲಾಶಯಗಳು ಈ ಭಾಗದ ಭೂಮಿಯ ಮೇಲೆ ಉಂಟುಮಾಡಿರುವ ಒತ್ತಡ ಮತ್ತು ಅದರ ಪರಿಣಾಮವಾಗಿ ಭೂಪದರಗಳಲ್ಲಿ ಉಂಟಾಗಿರಬಹುದಾದ ಬದಲಾವಣೆಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹಾಗೇ, ಇತ್ತೀಚಿನ ಎರಡು ವರ್ಷದ ಬರದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಯಥೇಚ್ಛವಾಗಿ ಕೊಳವೆಬಾವಿ ಕೊರೆದಿರುವುದರಿಂದಾಗಿ ಭೂಮಿಯ ಪದರದ ಮೇಲೆ ಅದು ಬೀರಿರುವ ಪರಿಣಾಮದ ಬಗ್ಗೆಯೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ತಜ್ಞರ ವರದಿ ಬರುವವರೆಗೆ ಗ್ರಾಮಸ್ಥರಲ್ಲಿ ಈ ಬಗ್ಗೆ ಇದ್ದ ಗೊಂದಲ ಮತ್ತು ಭೀತಿ ಇದೀಗ ಮತ್ತಷ್ಟು ಹೆಚ್ಚಿದ್ದು, ವಾಸ್ತವಾಂಶಗಳಿಗೂ ತಜ್ಞರ ವರದಿಗೂ ತಾಳೆಯಾಗದಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ, ಬುಧವಾರ ತಜ್ಞರ ವರದಿಯ ಮಾಹಿತಿ ಸಿಗುತ್ತಿದ್ದಂತೆ ಕೊಗ್ರೆ ಗ್ರಾಮದಲ್ಲಿ ಸಭೆ ಸೇರಿದ್ದ ಸ್ಥಳೀಯ ಮುಖಂಡರು ಮತ್ತು ಯುವಕರು, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಈ ಕುರಿತು ಕೂಡಲೇ ಗಂಭೀರ ಕ್ರಮ ಕೈಗೊಳ್ಳುವಂತೆ ಮತ್ತು ಅವಶ್ಯವಿದ್ದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ಒಟ್ಟಾರೆ, ನಿಗೂಢ ಪ್ರಾಕೃತಿಕ ಅವಘಡಗಳು ಈ ಭಾಗದ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತ ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜೊತೆಗೆ, ಈ ವಿದ್ಯಮಾನದ ಹಿನ್ನೆಲೆಯಲ್ಲಿ ಮಲೆನಾಡಿನ ಭೂವಲಯದಲ್ಲಿ ಆಗಿರುವ ಬದಲಾವಣೆಗಳು ಮತ್ತು ಭವಿಷ್ಯದ ಅಪಾಯದ ಬಗ್ಗೆಯೂ ಆಳ ಅಧ್ಯಯನಗಳ ಅಗತ್ಯವನ್ನು ಕೂಡ ಈ ನಿಗೂಢ ಸದ್ದು ಸಾರಿ ಹೇಳುತ್ತಿದೆ.

Western Ghats Earthquake Environmental Impacts ಪ್ರವಾಹ ಚಿಕ್ಕಮಗಳೂರು ಜಿಲ್ಲೆ ಭೂಕಂಪ Chikkamagalore District ಪಶ್ಚಿಮ ಘಟ್ಟ Rainy Season ಮಳೆಗಾಲ Earth Cracks Landslide ಭೂ ಕುಸಿತ
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?