ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್
ಮುತ್ತಿನ ಹಾರ | ನೀವು ಕಂಡಿರದ ವಿಷ್ಣುವರ್ಧನ್‌ ಅವರ ಆಕರ್ಷಕ ಫೋಟೋಗಳು
ಜನುಮದಿನ | ನಟ ವಿಷ್ಣುವರ್ಧನ್‌ ವೃತ್ತಿಬದುಕಿನ ಮಹತ್ವದ ಹತ್ತು ಸಿನಿಮಾ

ನಟ ಅಚ್ಯುತ್‌ಕುಮಾರ್ ಮನದ ಮಾತು | ಪಿಸ್ತೂಲು ಕಾಣೆಯಾಗಿದ್ದೇ ಸ್ವಾರಸ್ಯಕರ ಘಟನೆ

ಪ್ರತಿಭಾವಂತ ನಟ ಅಚ್ಯುತ್‌ ಕುಮಾರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರ ತೆರೆಕಂಡ ‘ಚೂರಿಕಟ್ಟೆ’ ಚಿತ್ರದಲ್ಲಿನ ಅವರ ಇನ್ಸ್‌ಪೆಕ್ಟರ್ ಪಾತ್ರದ ಬಗ್ಗೆ ಜನರು ಖುಷಿಯಿಂದ ಮಾತನಾಡುತ್ತಿದ್ದಾರೆ. ‘ಚೂರಿಕಟ್ಟೆ’ ಸಿನಿಮಾ, ರಂಗಭೂಮಿ ಮತ್ತಿತರ ಸಂಗತಿಗಳ ಬಗ್ಗೆ ‘ದಿ ಸ್ಟೇಟ್’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ

‘ಚೂರಿಕಟ್ಟೆ’ ಸಿನಿಮಾದಲ್ಲಿನ ನಿಮ್ಮ ಇನ್ಸ್‌ಪೆಕ್ಟರ್ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ...

ಸಿನಿಮಾದ ಕತೆ ಕೈಲಾಶ್ ಅವರದು. ಒಳ್ಳೆಯ ಕತೆ ಮಾಡಿದ್ದರು. ನಿರ್ದೇಶಕ ರಾಘು ಶಿವಮೊಗ್ಗ ಮತ್ತು ಅರವಿಂದ ಕುಪ್ಳೀಕರ್ ಬಿಗಿಯಾದ ಚಿತ್ರಕತೆ ಮಾಡಿಕೊಂಡಿದ್ದರು. ಮೊದಲ ಬಾರಿ ಕತೆ ಕೇಳಿದಾಗಲೇ ಆಕರ್ಷಕವಾಗಿ ಕಂಡಿತ್ತು. ಕತೆ ಹೇಳಿದಂತೆಯೇ ಪಾತ್ರವನ್ನು ಚಿತ್ರಿಸಿದ್ದಾರೆ. ಕತೆ, ಚಿತ್ರಕತೆ ಚೆನ್ನಾಗಿದ್ದಾಗ ಪಾತ್ರಗಳೂ ಪ್ರೇಕ್ಷಕರನ್ನು ಪ್ರಭಾವಿಸುತ್ತವೆ. ನನ್ನ ಪಾತ್ರ ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು.

ನೀವು ಕಂಡಂತೆ ನಿಮ್ಮ ಪಾತ್ರದ ವಿಶೇಷತೆಯೇನು?

ಈ ಹಿಂದೆ ‘ಸಿದ್ಲಿಂಗು’, ‘ಹೊಡಿಮಗ’, ‘ದೃಶ್ಯ’ ಚಿತ್ರಗಳಲ್ಲಿ ಪೊಲೀಸ್‌ ಪಾತ್ರಗಳಲ್ಲಿ ನಟಿಸಿದ್ದೆ. ‘ಚೂರಿಕಟ್ಟೆ’ಯಲ್ಲಿನ ಇನ್ಸ್‌ಪೆಕ್ಟರ್‌ ‘ರವಿಕಾಂತ್‌’ ಪಾತ್ರ ವಿಶೇಷವಾಗಿತ್ತು. ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬ ವ್ಯವಸ್ಥೆಯಲ್ಲಿ ಏನೆಲ್ಲ ಕಷ್ಟ ಎದುರಿಸಬೇಕು, ಸವಾಲುಗಳಿದ್ದೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡುವ ರೀತಿ, ಯುವ ಪ್ರೇಮಿಗಳ ಹುಡುಗಾಟದಿಂದ ಆತನ ವೃತ್ತಿಬದುಕಿಗೆ ತೊಡಕಾಗುವುದು… ಹೀಗೆ ಪಾತ್ರಕ್ಕೆ ಹಲವು ಆಯಾಮಗಳಿವೆ. ಸಹಜ ಅಭಿವ್ಯಕ್ತಿಯಲ್ಲಿ ಪಾತ್ರ ನಿರ್ವಹಿಸಿದೆ. ಪಾತ್ರ ಕನ್ವಿನ್ಸಿಂಗ್ ಆಗಿದ್ದುದರಿಂದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎನಿಸುತ್ತದೆ.

ನೀವೊಬ್ಬ ಪ್ರೇಕ್ಷಕನಾಗಿ ನೋಡಿದಾಗ ‘ಚೂರಿಕಟ್ಟೆ’ಯನ್ನು ಹೇಗೆ ವಿಶ್ಲೇಷಿಸುತ್ತೀರಿ?

ಇದು ಕನ್ನಡ ನೇಟಿವಿಟಿಯ ಸಿನಿಮಾ ಎನ್ನುವುದು ನನ್ನ ಅಭಿಪ್ರಾಯ. ತಂತ್ರಜ್ಞರು ಹಾಗೂ ಕಲಾವಿದರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಪೌಲ್‌ ಮತ್ತು ವಾಸುಕಿ ವೈಭವ್‌ ಸಂಗೀತ ಹಾಗೂ ಅದ್ವೈತ ಕ್ಯಾಮೆರಾ ಚೆನ್ನಾಗಿ ವರ್ಕ್‌ ಆಗಿದೆ. ಜನರನ್ನು ಕೊನೆಯ ಕ್ಷಣದವರೆಗೂ ಹಿಡಿದಿಡುವ ಚಿತ್ರಕತೆ ಇದೆ. ಸಿನಿಮಾ ನೋಡಿದ ಜನರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹ ಚಿತ್ರಗಳನ್ನು ಹೆಚ್ಚೆಚ್ಚು ಜನರು ಥಿಯೇಟರ್‌ಗೆ ಬಂದು ನೋಡುವಂತಾಗಬೇಕು. ಆಗ ನಿರ್ಮಾಪಕರು ಉತ್ಸಾಹದಿಂದ ಯುವ ಕ್ರಿಯಾಶೀಲ ತಂತ್ರಜ್ಞರನ್ನು ನಂಬಿ ಹಣ ಹೂಡುತ್ತಾರೆ.

ಕಲಾವಿದರ ಬಳಗದಲ್ಲಿ ರಂಗಭೂಮಿ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದೀರಿ ಅಲ್ಲವೇ?

ಹೌದು, ಚಿತ್ರದಲ್ಲಿನ ಬಹಳಷ್ಟು ಕಲಾವಿದರು ಹಿಂದೆ ರಂಗಭೂಮಿಯಲ್ಲಿ ಕೆಲಸ ಮಾಡಿದ್ದವರೇ ಇದ್ದೇವೆ. ಹಾಗಾಗಿ ಯಾರೂ ಹೊಸಬರು ಎನಿಸಲಿಲ್ಲ. ಇದು ಒಂದು ರೀತಿ ನಮಗೆಲ್ಲ ಅನುಕೂಲವಾಯಿತು.

ಇದನ್ನೂ ಓದಿ : ಚಿತ್ರವಿಮರ್ಶೆ | ಕನ್ನಡ ನೆಲದ ಗುಣವುಳ್ಳ ಆಕರ್ಷಕ ‘ಚೂರಿಕಟ್ಟೆ’ ಅಂಗಳ

ಚಿತ್ರೀಕರಣ ಸಂದರ್ಭದಲ್ಲಿನ ಒಂದು ಮರೆಯಲಾರದ ಸಂದರ್ಭ ನೆನಪು ಮಾಡಿಕೊಳ್ಳಬಹುದೇ?

ನಟಿ ಪ್ರೇರಣಾ ಮತ್ತು ಇತರರ ಜೊತೆಗಿನ ಒಂದು ಸನ್ನಿವೇಶ ನೆನಪಾಗುತ್ತದೆ. ಸನ್ನಿವೇಶವೊಂದರಲ್ಲಿ ಆಕೆಯ ಕೈಲಿದ್ದ ನನ್ನ ಪೊಲೀಸ್‌ ಪಿಸ್ತೂಲನ್ನು ಪಡೆಯಬೇಕಿರುತ್ತದೆ. ಆಕೆ ಅದನ್ನು ಬಲವಾಗಿ ಹಿಡಿದಿದ್ದಳು. ನಾನು ಕೂಡ ವೇಗವಾಗಿ ಧಾವಿಸಿ ಕಿತ್ತುಕೊಂಡೆ. ಕ್ಷಣಾರ್ಧದಲ್ಲಿ ಪಿಸ್ತೂಲೇ ಮಾಯವಾಗಿತ್ತು! ಎಲ್ಲಿ ಹೋಯಿತು ಎಂದು ನಾವಿಬ್ಬರೂ ಆಚೀಚೆ ನೋಡುತ್ತಿದ್ದೆವು. ಮೇಲೆ ಹಾರಿದ್ದ ಪಿಸ್ತೂಲ್, ಪ್ರೇರಣಾ ಹಣೆಗೆ ಬಡಿಯಿತು! ಆಕೆಗೆ ಗಾಯವಾಗಿ ರಕ್ತ ಸುರಿಯಿತು. ಸದ್ಯ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ. ನಾನು ಆಕೆಗೆ, “ಎಲ್ಲರೂ ಬೆವರು ಸುರಿಸಿ ನಟಿಸುತ್ತಾರೆ. ನೀನು ರಕ್ತ ಸುರಿಸಿ ನಟಿಸಿದ್ದೀಯ,” ಎಂದು ತಮಾಷೆ ಮಾಡುತ್ತಿದ್ದೆ.

ಪ್ರಸ್ತುತ ಚಿತ್ರೀಕರಣದಲ್ಲಿರುವ ನಿಮ್ಮ ಸಿನಿಮಾ, ರಂಗಭೂಮಿ ಬಗ್ಗೆ?

ಪ್ರಸ್ತುತ ಹೇಮಂತ ರಾವ್ ನಿರ್ದೇಶನದ ‘ಕವಲುದಾರಿ’ ಚಿತ್ರೀಕರಣದಲ್ಲಿದ್ದೇನೆ. ನನ್ನ ನಿರ್ದೇಶನದ ‘ಕೊಳ’ ನಾಟಕವನ್ನು ಮತ್ತೆ ಕೆಲವೆಡೆ ಪ್ರದರ್ಶಿಸಬೇಕು. ಕಲಾವಿದರು ಲಭ್ಯವಿರುವ ದಿನಗಳನ್ನು ನೋಡಿಕೊಂಡು ಮುಂದಿನ ಶೋಗೆ ಸಿದ್ಧವಾಗಬೇಕು.

Kannada ಸ್ಯಾಂಡಲ್‌ವುಡ್‌ Kannada Film Industry ಕನ್ನಡ ಸಿನಿಮಾ ChooriKatte ರಾಘು ಶಿವಮೊಗ್ಗ Raghu Shivamogga ಚೂರಿಕಟ್ಟೆ ಅಚ್ಯುತ್‌ ಕುಮಾರ್‌ Achyuthkumar
ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್
ಮುತ್ತಿನ ಹಾರ | ನೀವು ಕಂಡಿರದ ವಿಷ್ಣುವರ್ಧನ್‌ ಅವರ ಆಕರ್ಷಕ ಫೋಟೋಗಳು
ಜನುಮದಿನ | ನಟ ವಿಷ್ಣುವರ್ಧನ್‌ ವೃತ್ತಿಬದುಕಿನ ಮಹತ್ವದ ಹತ್ತು ಸಿನಿಮಾ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು