ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!
ವಿಡಿಯೋ | ಯಾರ ಕೈಗೂ ಸಿಗದ ತನ್ನದೇ ದಿಕ್ಕನ್ನು ಹಿಡಿಯುತ್ತಿರುವ ಗ್ರಾಮೀಣ ಬದುಕು
ಪಾತರಗಿತ್ತಿಗಳ ‘ಕತೆ’ ಹೇಳಲೇಬೇಕೆಂದು ಸಮ್ಮಿಲನ್ ಶೆಟ್ಟಿ ಹೊರಟಿರುವುದೇಕೆ?

ಗ್ರಾಮ ವಾಸ್ತವ್ಯ | ಪ್ರಧಾನಿ ಮೋದಿಗೆ ಪತ್ರ ಬರೆದರೂ ಬದಲಾಗದ ಮೇಘಾನೆ ಬದುಕು

ದ್ವಿಚಕ್ರ ವಾಹನವೂ ಸಾಗಲಾರದ ಕಡಿದಾದ ದುರ್ಗಮ ದಾರಿಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗುಡ್ಡಗಾಡು ಬುಡಕಟ್ಟು ಕುಣಬಿ ಸಮುದಾಯದ ಊರು ಮೇಘಾನೆ. ಹೊರಜಗತ್ತಿನ ಸಂಪರ್ಕವೇ ಇರದ ಈ ಕರ್ನಾಟಕದ ಊಟಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ‘ದಿ ಸ್ಟೇಟ್’ ಪ್ರತ್ಯಕ್ಷ ವರದಿ ಇದು

ಶಶಿ ಸಂಪಳ್ಳಿ

ದಟ್ಟ ಕಾಡಿನ ನಡುವೆ ಕಡಿದಾದ ಬೆಟ್ಟದ ತುತ್ತತುದಿಯಲ್ಲಿರುವ ಆ ಊರಿನ ಹೆಸರು ಮೇಘಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಟ್ಕಳ ಗಡಿಯ ಈ ಹಳ್ಳಿಯ ಹೆಸರಿನಂತೆಯೇ ಇದು ಮೇಘಗಳ ಊರು. ಕರ್ನಾಟಕದ ಊಟಿಯಂತಿರುವ ಈ ಊರಿನಲ್ಲಿ ಮಳೆಗಾಲದ ಆರು ತಿಂಗಳ ಕಾಲ ಸೂರ್ಯನ ದರ್ಶನವೇ ಅಪರೂಪ. ಮೋಡ, ಹಿತ ಮಂಜು ಮತ್ತು ಬಿರುಸು ಮಳೆಯೇ ಇಲ್ಲಿನ ದಿನರಾತ್ರಿಯ ವಾತಾವರಣ. ಹಾಗಾಗಿ, ಈ ಊರನ್ನು ಕಂಡ ಪಟ್ಟಣಗಳ ವಿರಳ ಜನರ ಪಾಲಿಗೆ ಇದು ಎಂದೆಂದಿಗೂ ಸೆಳೆಯುವ ಮೋಹಕ ಲೋಕ!

ಆದರೆ, ಅಲ್ಲಿನ ವಾಸ್ತವ ಬದುಕಿನ ಸಂಕಷ್ಟಗಳ ಸರಮಾಲೆಯೇ ನಮ್ಮ ಕಣ್ಣಮುಂದೆ ಬಿಚ್ಚಿಕೊಳ್ಳುವುದು ಆ ಊರಿನ ಜನರ ನಡುವೆ ಕೆಲವು ತಾಸುಗಳನ್ನಾದರೂ ಕಳೆದಾಗಲೇ. ಸುಮಾರು ೬೦ ಮನೆಗಳ, ೩೦೦ ಜನಸಂಖ್ಯೆಯ ಈ ಊರಿನ ವಾಸಿಗಳೆಲ್ಲ ಕುಣಬಿ ಮರಾಠಿ ಜನಾಂಗಕ್ಕೆ ಸೇರಿದ ಬುಡಕಟ್ಟು ಜನರು. ತಮ್ಮದೇ ವಿಶಿಷ್ಟ ಜನಪದ ರಾಮಾಯಣ (ಬುಡಕಟ್ಟು ಮರಾಠಿ ಭಾಷೆ), ಕೋಲಾಟ ಮುಂತಾದ ಶ್ರೀಮಂತ ಬುಡಕಟ್ಟು ಜನಪದ ಸಂಸ್ಕೃತಿಯನ್ನೂ ಹೊಂದಿರುವ ಈ ಸಮುದಾಯ, ಅತ್ಯಂತ ಕಷ್ಟಜೀವಿಗಳ ಒಂದು ಸಮೂಹ. ಜಾನಪದ ತಜ್ಞ ಎಸ್ ಕೆ ಕರೀಂ ಖಾನ್‌ ಅವರಂತಹ ವ್ಯಕ್ತಿಗಳ ಅಧ್ಯಯಕ್ಕೆ ಆಕರವಾದ ಊರು ಇದು.

ಕೃಷಿಯೇ ಇವರ ಜೀವನಾಧಾರ. ಮೇಘಾನೆ ಬೆಟ್ಟದ ತುದಿಯ ಬಟ್ಟಲಿನಾಕಾರದ ಕಣಿವೆಯಲ್ಲಿ ಮೊದಲು ಲಾವಂಚ, ಭತ್ತ, ಕಬ್ಬು ಬೆಳೆಯುತ್ತಿದ್ದ ಈ ಜನ, ಇದೀಗ ಹೆಚ್ಚಾಗಿ ಅಡಿಕೆ, ಗೇರು, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳತ್ತ ಹೊರಳಿದ್ದಾರೆ. ಈ ಹಿಂದೆ ಬೆತ್ತದ ಬುಟ್ಟಿ, ಕಲ್ಲಿ, ಪೀಠೋಪಕರಣ ಮಾಡುವುದರಲ್ಲಿ ಪರಿಣತರಾಗಿದ್ದ ಇವರು, ಇದೀಗ ಅರಣ್ಯ ಕಾಯ್ದೆಗಳ ಕಾರಣಕ್ಕೆ ಪಾರಂಪರಿಕ ನೈಪುಣ್ಯದಿಂದ ವಿಮುಖರಾಗಿದ್ದಾರೆ.

೧೯೬೦ರ ಸುಮಾರಿಗೆ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಗಿ ಜಮೀನು, ಮನೆ ಕಳೆದುಕೊಂಡು ಎತ್ತಂಗಡಿಯಾಗಿ ಬಂದ ಮರಾಠಿ ಕುಣಬಿ ಕುಟುಂಬಗಳು ಈ ದುರ್ಗಮ ಕಾಡಿನ ನಡುವಿನ ಕಡಿದಾದ ಬೆಟ್ಟದ ನೆತ್ತಿಯ ಮೇಲಿನ ಪುಟ್ಟ ಬಯಲಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಂದು ಸರ್ಕಾರ ಮಂಜೂರು ಮಾಡಿಕೊಟ್ಟ ಒಂದು, ಎರಡು ಎಕರೆ ಜಮೀನು ಹೊರತುಪಡಿಸಿ ಈ ಜನಗಳಿಗೆ ಈಗ ಬದುಕಿಗೆ ಬೇರೆ ಆಸರೆ ಇಲ್ಲ.

ಕೋಗಾರ್-ಭಟ್ಕಳ ಹೆದ್ದಾರಿಯಿಂದ ಸುಮಾರು ೭ ಕಿಮೀ ದೂರದ ಕಡಿದಾದ ದಾರಿಯನ್ನು ನಡೆದೇ ಕ್ರಮಿಸಬೇಕು. ಇಲ್ಲಿನ ಕಾಲುದಾರಿಯನ್ನೇ ಒಂದಿಷ್ಟು ವಿಸ್ತರಿಸಿರುವ ಮಣ್ಣಿನ ರಸ್ತೆ ಎಷ್ಟು ಕಡಿದಾಗಿದೆ ಮತ್ತು ಪ್ರಾಯಾಸದಾಯಕವಾಗಿದೆ ಎಂದರೆ, ನೀವು ಕಾಲುನಡಿಗೆಯಲ್ಲಿ ಏದುಸಿರು ಬಿಡುತ್ತ ಹತ್ತಿದರೂ, ಗುಡ್ಡದ ನೆತ್ತಿಯ ಊರು ತಲುಪಲು ಕನಿಷ್ಠ ಎರಡೂವರೆಯಿಂದ ಮೂರು ತಾಸು ಬೇಕು. ಬೈಕ್ ಏರಿ ಸಾಹಸ ಮಾಡಿ ಪ್ರಯಾಣಿಸಬಹುದಾದರೂ, ಕಲ್ಲು-ಬೇರು-ಬೊಡ್ಡೆ-ಕೊರಕಲಿನ ಜಾರಿಕೆಯ ಕೆಸರಿನ ರಸ್ತೆಯಲ್ಲಿ ಅಲ್ಲಿನ ಸ್ಥಳೀಯರು ಹೊರತುಪಡಿಸಿ ಉಳಿದವರು ಚಾಲನೆ ಮಾಡುವುದು ಸಾಧ್ಯವೇ ಇಲ್ಲ! ಇನ್ನು, ಜೀಪನ್ನು ಹೊರತುಪಡಿಸಿ ಬೇರಾವ ನಾಲ್ಕು ಚಕ್ರದ ವಾಹನಗಳೂ ಆ ದಾರಿಯಲ್ಲಿ ಹೋಗುವ ಸಾಧ್ಯತೆಯೇ ಇಲ್ಲ.

ಮೇಘಾನೆಯ ೬೦ ಮನೆ ಮತ್ತು ಅದರ ಆಚೆಯ ಬಾಳಿಗೆ ಎಂಬ ಊರಿನ ೧೧ ಕುಟುಂಬಗಳ ಜನರಿಗೆ ಹೊರಜಗತ್ತಿನ ಸಂಪರ್ಕಕ್ಕೆ ಇರುವುದು ಇದೊಂದೇ ದಾರಿ. ದಟ್ಟ ಕಾಡಿನ ಶರಾವತಿ ಅಭಯಾರಣ್ಯದಿಂದ ಸುತ್ತುವರಿದಿರುವ ಈ ಊರಿಗೆ ಹೊರದಾರಿ ಎಂದರೆ, ಈ ದುರ್ಗಮ ದಾರಿಯೊಂದೇ.

“ಬೈಕನ್ನು ಕೂಡ ಹೊರಗಿನವರು ಚಲಾಯಿಸಲಾಗದ ಸ್ಥಿತಿಯಲ್ಲಿರುವ ಈ ರಸ್ತೆಯ ಕಾರಣಕ್ಕೆ ಇಲ್ಲಿನ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಕೂಡ ತಲುಪುವುದಿಲ್ಲ. ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡು ಗ್ರಾಮದ ಒಬ್ಬರ ಶವವನ್ನು, ಆಂಬ್ಯುಲೆನ್ಸ್‌ನವರು ಕೋಗಾರ-ಭಟ್ಕಳ ಹೆದ್ದಾರಿಯಲ್ಲೇ ಇಳಿಸಿಹೋಗಿದ್ದರಿಂದ ಊರಿನ ಜನರೇ ಆಹೋರಾತ್ರಿ ಶವ ಹೊತ್ತು ಬೆಟ್ಟ ಹತ್ತಿ ಊರು ಸೇರಿದ್ದರು. ಅದಕ್ಕೂ ಒಂದೆರಡು ತಿಂಗಳ ಹಿಂದೆಯೂ ಹೀಗೆಯೇ ರಸ್ತೆಯ ಅವ್ಯವಸ್ಥೆಯ ಕಾರಣಕ್ಕೆ ಸಕಾಲಕ್ಕೆ ಮೂವತ್ತು ಕಿಮೀ ದೂರದ ಭಟ್ಕಳ ಆಸ್ಪತ್ರೆಗೆ ತಲುಪಲಾಗದೆ, ಗರ್ಭಿಣಿಯೊಬ್ಬರು ಹೆರಿಗೆ ವೇಳೆ ಜೀವ ಕಳೆದುಕೊಂಡರು. ಅವರ ಶವವನ್ನು ಕೂಡ ನಾವೇ ಜನಗಳೇ ಹೊತ್ತು ತಂದಿದ್ದೆವು. ಆ ಶವ ತರುವುದನ್ನು ವಿಡಿಯೋ ಮಾಡಿ ನಮ್ಮ ಊರಿನ ಪರಿಸ್ಥಿತಿಯನ್ನು ಅಧಿಕಾರಿಗಳು, ರಾಜಕೀಯ ನಾಯಕರಿಗೆ ತೋರಿಸುವ ಪ್ರಯತ್ನ ಮಾಡಿದ್ದೆವು. ಸ್ವತಃ ಪ್ರಧಾನಿ ಮೋದಿಯವರಿಗೂ ಆ ವಿಡಿಯೋ ಸಿ.ಡಿ ಕಳಿಸಿ ಪತ್ರ ಬರೆದಿದ್ದೆವು. ಆದರೂ ಯಾವ ಪ್ರಯೋಜನವಾಗಿಲ್ಲ,” ಎಂಬುದು ಗ್ರಾಮದ ಮುಖಂಡ ರಾಜು ಅವರು ತಮ್ಮ ಸಂಕಷ್ಟ ವಿವರಿಸುವ ಪರಿ.

ತಾಲೂಕು ಕೇಂದ್ರ ಸಾಗರದಿಂದ ಸುಮಾರು ೯೦ ಕಿಮೀ ದೂರದಲ್ಲಿರುವ ಈ ಹಳ್ಳಿಯ ಜನರ ಮುಖ್ಯ ಬೇಡಿಕೆ ರಸ್ತೆಯದ್ದು. ಕಳೆದ ೨೫ ವರ್ಷಗಳಿಂದ ಅದಕ್ಕಾಗಿ ಅವರು ಅಲೆಯದ ಶಾಸಕರ ಮನೆಯಗಳಿಲ್ಲ, ಸುತ್ತದ ಕಚೇರಿಗಳ ಕಂಬಗಳಿಲ್ಲ. ಆದರೆ, ಈವರೆಗೂ ಕೋಗಾರ ರಸ್ತೆಯ ತುದಿಯ ನೂರು ಅಡಿಗೆ ಸಿಮೆಂಟ್ ಕಂಡದ್ದು ಬಿಟ್ಟರೆ ಉಳಿದಂತೆ ೭ ಕಿಮೀ ಉದ್ದಕ್ಕೆ ಯಾವ ಬದಲಾವಣೆಯನ್ನೂ ರಸ್ತೆ ಕಂಡಿಲ್ಲ. ೪೦೦ ಅಡಿ ಪ್ರಪಾತದ ಅಂಚಿನ ಕಾಲುದಾರಿಯಲ್ಲಿ ಸಾಗುವುದು ಎಂಥವರನ್ನು ಜೀವ ಝಲ್ಲನ್ನಿಸದೆ ಇರದು.

“ಈ ಮೊದಲು ಕತ್ತಲ ಊರಾಗಿದ್ದ ಇಲ್ಲಿಗೆ ೧೯೯೮-೯೯ರ ಸುಮಾರಿಗೆ ಅಂದಿನ ಸಂಸದರಾಗಿದ್ದ ಬಂಗಾರಪ್ಪ ಅವರ ಕಾಳಜಿಯಿಂದಾಗಿ ಸೋಲಾರ್ ದೀಪಗಳನ್ನು ಹಾಕಲಾಯಿತು. ಆದರೆ, ಅವು ಕೆಲವು ವರ್ಷಗಳ ನಂತರ ನಿರ್ವಹಣೆ ಇಲ್ಲದೆ ಹಾಳಾದವು. ಬಳಿಕ ೨೦೦೬-೦೭ರಲ್ಲಿ ವಿದ್ಯುತ್ ಸಂಪರ್ಕ ನೀಡಲಾಯಿತು. ಹಾಗಾಗಿ ಈಗ ಬೆಳಕಿನ ಸಮಸ್ಯೆಯಿಲ್ಲ. ಊರಿನಲ್ಲಿ ಸದ್ಯ ಐದನೇ ತರಗತಿಯವರೆಗೆ ಶಾಲೆ ಇದ್ದು, ಕನಿಷ್ಠ ೭ನೇ ತರಗತಿಯವರೆಗೆ ವಿಸ್ತರಿಸಿದರೆ, ಚಿಕ್ಕ ಮಕ್ಕಳು ನಿತ್ಯ ೧೫ ಕಿ.ಮೀ ಕಾಡಿನ ದಾರಿಯಲ್ಲಿ ಗೋಳಾಡುವುದು ತಪ್ಪುತ್ತದೆ,” ಎಂಬುದು ಗ್ರಾಮದ ಯುವ ನಾಯಕ ಲೂಮಾ ಗಿಣಿಯಾ ಅಹವಾಲು. ಊರಿನ ದುರ್ಗಮ ದಾರಿಯ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣ ಮುಂದುವರಿಸುವುದೇ ವಿರಳ. ೬೦ ಮನೆಗಳ ಪೈಕಿ ಸದ್ಯ ಏಕೈಕ ವ್ಯಕ್ತಿ ಸರ್ಕಾರಿ ನೌಕರಿಗೆ ಸೇರಿದ್ದು, ಆ ಯುವತಿ ಕೂಡ ಸಮೀಪದ ಬಚ್ಚೋಡಿಯ ಖಾಸಗೀ ಆಶ್ರಮ ಶಾಲೆಯಲ್ಲಿ ಕಲಿತು ಮುಂದೆ ಬಂದಿದ್ದು, ಸದ್ಯ ಮುರುಡೇಶ್ವರದಲ್ಲಿ ಆರೋಗ್ಯ ಸಹಾಯಕಿಯಾಗಿದ್ದಾರೆ. ಗ್ರಾಮದ ಶಾಲೆಯ ಮಾಸ್ತರು ಕೂಡ ದುರ್ಗಮ ದಾರಿಯಲ್ಲಿ ಓಡಾಡುವುದು ದುಸ್ತರವೆಂದು, ಶಾಲೆಯ ಬಳಿವೇ ಶೆಡ್ಡಿನಲ್ಲಿ ವಾಸವಿದ್ದಾರೆ!

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ಸಂಕದ ಮೇಲೆ ಓಡಾಡುವ ಸಿದ್ದಿ ಜನರ ಡೋಲಾಯಮಾನ ಬದುಕು

ಹೊರಜಗತ್ತಿನೊಂದಿಗೆ ಸಂಪರ್ಕದ ದೊಡ್ಡ ಸವಾಲು ಎದುರಿಸುತ್ತಿರುವ ಈ ಗುಡ್ಡಗಾಡು ಬುಡಕಟ್ಟು ಜನರು ಸದ್ಯದ ಮತ್ತೊಂದು ಆತಂಕ, ಅಭಯಾರಣ್ಯದ ಭೂತ. ಬುಡಕಟ್ಟು ಸಮುದಾಯವಾದರೂ ಇಲ್ಲಿನ ಜನರ ಮನೆ-ಕೊಟ್ಟಿಗೆ, ತೋಟದ ಜಮೀನಿನ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅಡ್ಡಗಾಲಾಗಿದೆ. “ಅರಣ್ಯ ಕಾಯ್ದೆಯಡಿ ಅವಕಾಶವಿದ್ದರೂ, ಅಧಿಕಾರಿಗಳ ದಬ್ಬಾಳಿಕೆಯಿಂದ ನಾವು ಭೂಮಿಯ ಹಕ್ಕಿನಿಂದ ವಂಚಿತವಾಗಿದ್ದೇವೆ. ೬೦ ವರ್ಷದ ಹಿಂದೆ ನಮ್ಮ ಅಜ್ಜ-ಅಪ್ಪ ಈ ಊರಿಗೆ ಬಂದಾಗ ಒಂದೆರಡು ಎಕರೆ ಜಮೀನು ಮಾಡಿಕೊಂಡಿದ್ದರು. ಆದರೆ, ಕಾಲಕ್ರಮೇಣ ಕುಟುಂಬ ಬೆಳೆದಂತೆ ನಮಗೆ ವ್ಯವಸಾಯವಲ್ಲದೆ ಬೇರೆ ಬದುಕಲು ಬೇರೆ ಆಸರೆ ಇಲ್ಲ. ಈಗ ಕಾಡಿನ ಕಾನೂನೇ ನಮಗೆ ಶತ್ರುವಾಗಿದೆ,” ಎಂಬುದು ಲೂಮಾ ಅಳಲು.

ಅಧಿಕಾರದ ಚುಕ್ಕಾಣಿ ಹಿಡಿದವರು ಬುಲೆಟ್ ಟ್ರೈನು, ಸೂಪರ್ ಫಾಸ್ಟ್ ಹೈವೇಗಳೇ ತಮ್ಮ ಸಾಧನೆಯ ಹೆಗ್ಗಳಿಕೆಗಳೆಂದು ಬೀಗುತ್ತಿರುವ ಹೊತ್ತಿಗೆ, ಹೀಗೆ ಕಿಮೀಗಟ್ಟಲೆ ಕಡಿದಾದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ನಿತ್ಯ ಏರಿಳಿಯಬೇಕಾದ ‘ಗ್ರಾಮ ಭಾರತ’ ಇನ್ನೂ ಅಭಿವೃದ್ಧಿಯ ಹೆದ್ದಾರಿಯಿಂದ ದೂರವೇ ಉಳಿದಿದೆ ಎಂಬುದಕ್ಕೆ ಮೇಘಾನೆಯೇ ಜೀವಂತ ಸಾಕ್ಷಿ.

ಶಿವಮೊಗ್ಗ ಜಿಲ್ಲೆ Grama Vastavya Shimoga District ಸಾಗರ ತಾಲೂಕು Sagar Taluk ಕುಣಬಿ ಸಮುದಾಯ ಮೇಘಾನೆ ಕರ್ನಾಟಕದ ಊಟಿ Megane Kunbi Communities
ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!
ವಿಡಿಯೋ | ಯಾರ ಕೈಗೂ ಸಿಗದ ತನ್ನದೇ ದಿಕ್ಕನ್ನು ಹಿಡಿಯುತ್ತಿರುವ ಗ್ರಾಮೀಣ ಬದುಕು
ಪಾತರಗಿತ್ತಿಗಳ ‘ಕತೆ’ ಹೇಳಲೇಬೇಕೆಂದು ಸಮ್ಮಿಲನ್ ಶೆಟ್ಟಿ ಹೊರಟಿರುವುದೇಕೆ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು